ಪುತ್ತೂರು: ಪುತ್ತೂರು ಅಪೋಲೋ ಸ್ಕ್ಯಾನ್ ಸೆಂಟರ್‌ನ ಮಾಲಕ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರಾಗಿರುವ ಡಾ. ವಿಠಲ್ ನಾಯರ್‌ಕೆರೆ (78ವ)ರವರು ಮಾ.6ರಂದು ರಾತ್ರಿ ಕಲ್ಲಾರೆ ವೆಂಕಟ್ ರಾವ್ ಲೇ ಔಟ್‌ನ ನಿವಾಸದಲ್ಲಿ ನಿಧನರಾದರು.
ಡಾ. ವಿಠಲ್ ಜಿ.ಯನ್ ಎಂದೇ ಚಿರಪರಿಚಿತರಾಗಿದ್ದ ಪುತ್ತೂರು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯಾಗಿದ್ದ ಅವರು ಪುತ್ತೂರು ಬೆಳ್ತಂಗಡಿ, ಸುಳ್ಯ, ವಿಟ್ಲ , ಕಡಬದಲ್ಲಿ ವೈದ್ಯರುಗಳನ್ನು ಸೇರಿಸಿಕೊಂಡು ಡಾಕ್ಟರ್‍ಸ್ ಫೋರಮ್ ಎಂಬ ನೂತನ ಸಂಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಇವರದ್ದು, 1945ರಲ್ಲಿ ಪಂಜದಲ್ಲಿ ಜನಿಸಿದ ಅವರು ತಮ್ಮ ಪದವಿ ಶಿಕ್ಷಣವನ್ನು ಪುತ್ತೂರಿನಲ್ಲಿ ಮಾಡಿ ಬಿ.ಎಸ್ಸಿ ಪದವಿಯನ್ನು ಮಂಗಳೂರಿನಲ್ಲಿ ಮಾಡಿದರು. ಪುತ್ತೂರು ಬೋರ್ಡ್ ಹೈಸ್ಕೂಲ್ ಎಂದೇ ಹೆಸರಿನಲ್ಲಿದ್ದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ ಇವರು ಮೈಸೂರಿನಲ್ಲಿ ಎಂ.ಬಿ.ಎಸ್ ಮಾಡಿದರು. ದೇಶ ವಿದೇಶದಲ್ಲಿ ಹಲವಾರು ವರ್ಷ ವೈದ್ಯಕೀಯ ಸೇವೆ ಸಲ್ಲಿಸಿದ ಅವರು ಪುತ್ತೂರು ಕಲ್ಲಾರೆಯಲ್ಲಿ ಅಪೋಲೋ ಸ್ಕ್ಯಾನ್ ಸೆಂಟರ್ ಆರಂಭಿಸಿದ್ದರು. ಮೃತರು ಪ್ರಸ್ತುತ ಅಪೊಲೋ ಸ್ಕ್ಯಾನಿಂಗ್ ಸೆಂಟರ್ ನಡೆಸುತ್ತಿರುವ ಡಾ. ಮಹಂತ್, ಪುತ್ರಿಯರಾದ ರಶ್ಮಿ ಮತ್ತು ಚೇತನಾ ಅವರನ್ನು ಅಗಲಿದ್ದಾರೆ.
ದೇಶ ವಿದೇಶದಲ್ಲಿ ಹಲವು ಸೇವೆ:
1971ರಲ್ಲಿ ಬಾಂಗ್ಲಾ ವಿಮೋಚನೆಯಿಂದಾಗಿ ಬಂದ ನಿರಾಶ್ರಿತರಿಗೆ ಕ್ಯಾಂಪಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ಎಂಬಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇರಾನ್‌ನಲ್ಲೂ 13 ವರ್ಷ ವೈದ್ಯರಾಗಿ ಕಾರ್ಯನಿರ್ವಹಿಸಿದ ಇವರು ಅಲ್ಲಿ ಪ್ರಥಮವಾಗಿ ಅಲ್‌ಬೋರ್ಜ್ ಪವರ್ತ ಶ್ರೇಣಿಯ ಬುಡದಲಿದ್ದ ಬುಡಕಟ್ಟು ಜನಾಂಗದವರ ಊರಲ್ಲಿ ಎರಡು ವರ್ಷ ಕೆಲಸ ಮಾಡಿದರು. ಇರಾನ್ ಮತ್ತು ಇರಾಕ್ ನಡುವೆ ಯುದ್ಧದ ಸಂದರ್ಭ ಇರಾಕಿನ ಯುದ್ದ ಖೈದಿಗಳ ಕ್ಯಾಂಪಿನಲ್ಲಿ 2ವರ್ಷ ಕೆಲಸ ಮಾಡಿದರು. ಯುದ್ದ ಮುಗಿದ ಬಳಿಕ ಇರಾನಿನಲ್ಲಿ 13 ವರ್ಷ ಕಾಲ ಕೆಲಸ ಮಾಡಿ ಸ್ವದೇಶಕ್ಕೆ ಮರಳಿದರು. ಬಳಿಕ ಅವರು ಪುತ್ತೂರಿನ ದರ್ಬೆಯಲ್ಲಿ ಅಪೋಲೋ ಸ್ಕ್ಯಾನ್ ಸೆಂಟರ್ ಆರಂಭಿಸಿದ್ದರು.
ಇಂದು(ಮಾ.7ಕ್ಕೆ) ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯಾ ಕಾರ್ಯಕ್ರಮ ಮಾ.7 ರಂದು ಬೆಳಿಗ್ಗೆ ಗಂಟೆ 11ಕ್ಕೆ ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ನೆರವೇರಲಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.