ನಾಪತ್ತೆಯಾಗಿದ್ದ ಕೌಕ್ರಾಡಿಯ ವೃದ್ಧೆ ಅರಣ್ಯದಲ್ಲಿ ಪತ್ತೆ ; 3 ದಿನ ರಾತ್ರಿ, ಹಗಲು ಅರಣ್ಯದಲ್ಲೇ ವಾಸ; ಎಲೆಗಳೇ ಆಹಾರ

0

ನೆಲ್ಯಾಡಿ: ಫೆ.28ರಂದು ಸಂಜೆ ವೇಳೆ ನಾಪತ್ತೆಯಾಗಿದ್ದ ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ(80ವ.)ರವರು ಮಾ.3ರಂದು ಬೆಳಿಗ್ಗೆ ಮನೆಯಿಂದ ಸುಮಾರು 4 ಕಿ.ಮೀ.ದೂರದ ಅರಣ್ಯಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಅರಣ್ಯದಲ್ಲೇ ಮೂರು ರಾತ್ರಿ ಹಾಗೂ ಎರಡು ಹಗಲು ಕಳೆದಿರುವ ಐಸಮ್ಮರವರು ಕಾಡಿನಲ್ಲಿದ್ದ ಎಲೆಗಳನ್ನೇ ತಿಂದು ಬದುಕಿ ಜೀವಂತವಾಗಿ ಮನೆ ಸೇರಿದ್ದು ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಐಸಮ್ಮ ಅವರು ತುಸು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ವಯೋ ಸಹಜವಾಗಿ ಮಾತನಾಡುವುದು ಕಡಿಮೆಯಾಗಿತ್ತು. ಆದರೆ ತಮ್ಮ ನೆರೆಯ ಮನೆಗಳಿಗೆ ದಿನಾಲೂ ಭೇಟಿ ನೀಡಿ ಅವರೊಂದಿಗೆ ಬೆರೆತು ರಾತ್ರಿಯಾಗುತ್ತಲೇ ತಮ್ಮ ಮನೆ ಸೇರುತ್ತಿದ್ದರು. ಎಂದಿನಂತೆ ಫೆ.28ರಂದು ಸಂಜೆ ಮನೆಯಿಂದ ಹೊರಟವರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಐಸಮ್ಮ ಅವರು ಮನೆಗೆ ಹಿಂತಿರುಗದೇ ಇದ್ದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್ ಹಾಗೂ ಸ್ಥಳೀಯ ಯುವಕರು ನೆರೆಮನೆಗಳಲ್ಲಿ, ಹೊಸಮಜಲು ಪೇಟೆಯ ಅಂಗಡಿಗಳಲ್ಲಿ ವಿಚಾರಿಸಿದರು. ಹೊಸಮಜಲು ಮಸೀದಿಯ ಸಿಸಿಟಿವಿಯಲ್ಲೂ ಪರಿಶೀಲನೆ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ತಡರಾತ್ರಿ ತನಕ ಟಾರ್ಚ್ ಹಿಡಿದುಕೊಂಡು ಮನೆ ಸಮೀಪದ ಕಾಡಿನಲ್ಲೂ ಹುಡುಕಾಡಿದರೂ ಐಸಮ್ಮರವರು ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಾ.1ರಂದು ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೂ ಹುಡುಕಾಟ ನಿಲ್ಲಿಸಲಿಲ್ಲ. ತಾಯಿ ಕ್ಷೇಮವಾಗಿ ಹಿಂತಿರುಗಿ ಬರಲೆಂದು ಕಾಜೂರು ದರ್ಗಾ ಸೇರಿದಂತೆ ಹಲವು ಕಡೆಗಳಿಗೆ ಹರಕೆಯೂ ಹೇಳಿದರು. ಪ್ರಶ್ನೆಗೂ ಮೊರೆ ಹೋದರು. ಎಲ್ಲರಿಂದಲೂ ತಾಯಿ ಹಿಂತಿರುಗಿ ಬರುವ ಭರವಸೆಯೂ ದೊರೆಯಿತು.

ಏರ್ತಿಲ ಅರಣ್ಯದಲ್ಲಿ ಪತ್ತೆ: ಮಾ.3ರಂದು ಬೆಳಿಗ್ಗೆ ಹೊಸಮಜಲು ಹಾಲಿನ ಸೊಸೈಟಿಗೆ ಹಾಲು ತರುತ್ತಿದ್ದ ಶಿಜು ಎಂಬವರಿಗೆ ಮಣ್ಣಗುಂಡಿ ಸಮೀಪದ ಏರ್ತಿಲ ಎಂಬಲ್ಲಿ ರಕ್ಷಿತಾರಣ್ಯದಲ್ಲಿ ವೃದ್ಧೆಯೋರ್ವರು ಇರುವುದು ಕಂಡುಬಂದಿದೆ. ಈ ಬಗ್ಗೆ ಅವರು ಹಾಲಿನ ಸೊಸೈಟಿಯಲ್ಲಿ ಮಾಹಿತಿ ನೀಡಿದರು. ಸ್ಥಳೀಯ ಯುವಕರು ರಿಕ್ಷಾ ಮಾಡಿಕೊಂಡು ಏರ್ತಿಲಕ್ಕೆ ತೆರಳಿ ಅರಣ್ಯದಲ್ಲಿದ್ದ ಐಸಮ್ಮರವರನ್ನು ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಬಂದರು. ಕೊನೆಗೂ ಆರೋಗ್ಯವಾಗಿ ಐಸಮ್ಮರವರು ಮನೆಗೆ ಬಂದಿರುವುದರಿಂದ ಮನೆಯವರು ನಿಟ್ಟುಸಿರು ಬಿಡುವಂತೆ ಆಯಿತು.

ಎಲೆಗಳೇ ಆಹಾರ: ಫೆ.28ರಂದು ಸಂಜೆ ಮನೆಯಿಂದ ಹೊರಬಂದ ಐಸಮ್ಮರವರು ದಾರಿತಪ್ಪಿ ತನಗೇ ಅರಿವಿಲ್ಲದಂತೆ ತಮ್ಮ ಮನೆಯಿಂದ ಸುಮಾರು 4 ಕಿ.ಮೀ.ದೂರದ ರಕ್ಷಿತಾರಣ್ಯ ಪ್ರದೇಶ ಸೇರಿಕೊಂಡು ಮತ್ತೆ ಮನೆಗೆ ಬರಲು ಸಾಧ್ಯವಾಗದೇ ಸರಿಯಾದ ಆಹಾರ, ನಿದ್ರೆಯಿಲ್ಲದೆ 3 ರಾತ್ರಿ ಹಾಗೂ 2 ಹಗಲು ಕಳೆದು ಜೀವಂತವಾಗಿ ಮನೆಗೆ ಬಂದಿರುವುದೇ ರೋಚಕವಾಗಿದೆ. ಹಸಿವು ಆದಾಗ ಅರಣ್ಯದಲ್ಲಿನ ಎಲೆಗಳನ್ನೇ ತಿಂದಿರುವುದಕ್ಕೆ ಐಸಮ್ಮರವರ ಬಾಯಿ, ನಾಲಗೆ ಹಸಿರು ಬಣ್ಣ ಪಡೆದುಕೊಂಡಿರುವುದೇ ಸಾಕ್ಷಿಯಾಗಿದೆ. ಅವರು ಪತ್ತೆಯಾಗಿರುವ ಏರ್ತಿಲದಲ್ಲಿ ಸಣ್ಣ ತೋಡೊಂದು ಇದ್ದು ಅದರಲ್ಲಿ ಹರಿಯುವ ನೀರೇ ಐಸಮ್ಮರವರ ಬಾಯಾರಿಕೆ ನೀಗಿಸಿದೆ. ಅಂತೂ 3 ದಿನ ಹಗಲು, ರಾತ್ರಿ ಕಾಡಿನಲ್ಲಿ ಕಳೆದು ಕ್ಷೇಮವಾಗಿ ಮನೆಗೆ ಬಂದಿರುವ ಐಸಮ್ಮರವರು ’ ಆಯಸ್ಸು ಗಟ್ಟಿಯಿದ್ದರೆ ಬದುಕುತ್ತಾರೆ, ಆಯಸ್ಸು ಗಟ್ಟಿಯಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ ಆಗಿದ್ದಾರೆ.

ತಾಯಿಗಾಗಿ ಮೂರು ದಿನ ನಾವು ಹುಡುಕಾಟ ನಡೆಸದ ಜಾಗವಿಲ್ಲ. ಅವರು ನಾಪತ್ತೆಯಾಗಿದ್ದ ಮೊದಲ ದಿನ ಕಾಡಿನಲ್ಲಿ ತಡರಾತ್ರಿ 2 ಗಂಟೆ ತನಕವೂ ಹುಡುಕಾಟ ನಡೆಸಿದ್ದೇವೆ. ಸ್ಥಳೀಯ ಯುವಕರ ತಂಡವೂ ಹುಡುಕಾಟದಲ್ಲಿ ಸಾಥ್ ನೀಡಿದ್ದರು. ಆದರೂ ನಮಗೆ ಯಾವುದೇ ಸುಳಿವು ಸಿಗಲಿಲ್ಲ. ತಾಯಿ ಕ್ಷೇಮವಾಗಿ ಬರಲೆಂದು ಹರಕೆಯೂ ಹೇಳಿದ್ದೇವೆ. ಇದೀಗ ತಾಯಿ ಕ್ಷೇಮವಾಗಿ ಬಂದಿರುವುದು ನಮಗೆ ಸಂತಸ ತಂದಿದೆ.
-ಮಹಮ್ಮದ್, ಐಸಮ್ಮರವರ ಮಗ

LEAVE A REPLY

Please enter your comment!
Please enter your name here