ದಾನ ಧರ್ಮ ಜೀವನದಲ್ಲಿ ಪುಣ್ಯ ಸಂಪಾದನೆಯ ರಹದಾರಿ: ಕಣಿಯೂರು ಶ್ರೀ
ಭಜನೆಯ ಮೂಲಕ ಪರಿವರ್ತನೆ ಸಾಧ್ಯ : ಶ್ರೀ ಉಮೇಶ್ವರ ಕಾಳೀ ತೀರ್ಥ ಸ್ವಾಮೀಜಿ
ಧರ್ಮ ನಿಷ್ಠೆಯ ಮೂಲಕ ಬದುಕು ಕಟ್ಟೋಣ: ಜಯಂತ ನಡುಬೈಲು
ವಿಟ್ಲ: ಮಾನವ ಜನ್ಮ ಶ್ರೇಷ್ಟವಾದುದು. ಒಳಿತು ಕೆಡುಕಿನ ಮಧ್ಯೆ ಉತ್ತಮ ಜೀವನ ನಡೆಸುವಂತಾಗಬೇಕು. ದಾನ ಧರ್ಮ ಜೀವನದಲ್ಲಿ ಪುಣ್ಯ ಸಂಪಾದನೆಯ ರಹದಾರಿ, ದೈವ ದೇವರ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಕ್ಷೇತ್ರ ಕುಕ್ಕಾಜೆಯಲ್ಲಿ ಮಾ.೯ರ ವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮಾ.೭ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಬಾಯಾರು ಚಿತ್ರಮೂಲ ಮಠದ ಶ್ರೀ ಉಮೇಶ್ವರ ಕಾಳೀ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಹಾತ್ಮರ ಮಾರ್ಗದರ್ಶನ ಅಗತ್ಯ. ಭಗವಂತ ಧರ್ಮದ ಸಾಕ್ಷಾತ್ ಮೂರ್ತಿ. ಒಳ್ಳೆಯ ಆಚಾರ ವಿಚಾರವೇ ಧರ್ಮ. ಗುರುಗಳ ತಪಸ್ಸಿನ ಫಲದಿಂದ ಕುಕ್ಕಾಜೆ ಕ್ಷೇತ್ರ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ಎಳೆಯ ಮಕ್ಕಳನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು. ಭಜನೆಯ ಮೂಲಕ ಪರಿವರ್ತನೆ ಸಾಧ್ಯ. ಧರ್ಮವಿದ್ದೆಡೆ ಜಯವಿದೆ ಎಂದರು.
ಪುತ್ತೂರಿನ ಅಕ್ಷಯ ಕಾಲೇಜಿನ ಅಧ್ಯಕ್ಷ ಉದ್ಯಮಿ ಜಯಂತ ನಡುಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಕ್ಕಾಜೆ ಕ್ಷೇತ್ರ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಕ್ಷೇತ್ರದಲ್ಲಿ ಹಲವರ ಶ್ರಮ ಸೇವೆ ನಡೆದಿದೆ ಎನ್ನುವುದು ತಿಳಿದು ಸಂತಸವಾಗಿದೆ. ನಮ್ಮ ಶ್ರದ್ಧಾ ಕೇಂದ್ರಗಳ ಬಗ್ಗೆ ನಮಗೆ ಗೌರವವಿರಬೇಕು. ನಮ್ಮ ಮಕ್ಕಳು ಶ್ರದ್ದಾಕೇಂದ್ರಗಳತ್ತ ಒಲವು ತೋರುವಂತಾಗಬೇಕು. ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಧರ್ಮ ನಿಷ್ಠೆಯ ಮೂಲಕ ಬದುಕು ಕಟ್ಟೋಣ. ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ವಿಟ್ಲ ಅರಮನೆಯ ಪ್ರತಿನಿಧಿ ಕೃಷ್ಣಯ್ಯ ಕೆ., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಮುರಳಿಕೃಷ್ಣ ಹಸಂತಡ್ಕ, ರಾಜೇಂದ್ರ ರೈ ಪೆರುವಾಯಿ, ಪೌರಾಡಳಿತ ಇಲಾಖೆಯ ನಿವೃತ್ತ ಕಂದಾಯ ಅಧಿಕಾರಿ ಚೆನ್ನಪ್ಪ ಗೌಡ ಬೊಡ್ಡೀನಿ, ಧರ್ಮಸ್ಥಳ ಜನಜಾಗೃತಿ ವೇದಿಕೆ ಕಾಸರಗೋಡು ವಲಯ ಅಧ್ಯಕ್ಷರಾದ ಅಶ್ವತ್ ಸಿ.ಕೆ., ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಳಿಕೆ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯ, ವಕೀಲರಾದ ಹರ್ಷಿತಾ, ಕ್ಷೇತ್ರದ ಮೊಕ್ತೇಸರರಾದ ಎಂ.ಕೆ.ಕುಕ್ಕಾಜೆ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದೇಜಪ್ಪ ಪೂಜಾರಿ ನಿಡ್ಯ, ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ದಾಸಪ್ಪ ಪೂಜಾರಿ ನೆಕ್ಕಿಲಾರುರವರನ್ನು ಸನ್ಮಾನಿಸಲಾಯಿತು.
ಮಾಣಿಲ ಪೆರುವಾಯಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಸುಶ್ಮಿತಾ ಹಾಗೂ ಸ್ವಾತಿ ಸನ್ಮಾನಪತ್ರ ವಾಚಿಸಿದರು.
ಭವಿತಾ, ಬಿಂದು ಪ್ರಾರ್ಥಿಸಿದರು. ಭಾಸ್ಕರ ಕಾಸರಗೋಡು ಸ್ವಾಗತಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು ವಂದಿಸಿದರು. ಎಸ್. ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.
ವೈದಿಕ ಕಾರ್ಯಕ್ರಮ:
ವೈದಿಕ ಕಾರ್ಯಕ್ರಮದ ಅಂಗವಾಗಿ ಮಾ.೭ರಂದು ಬೆಳಗ್ಗೆ ಗಣಪತಿಹೋಮ, ಭಜನೆ ಆರಂಭಗೊಂಡು ಬಳಿಕ ನಿತ್ಯಪೂಜೆ, ಪ್ರಸಾದ ವಿತರಣೆ ನಡೆಯಿತು. ಬೆಳಗ್ಗೆ ೯ಗಂಟೆಯಿಂದ ಚಂಡಿಕಾಯಾಗ ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ, ಚಂಡಿಕಾಯಾಗದ ಪೂರ್ಣಾಹುತಿ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಾಯಂಕಾಲ ದೀಪಾರಾಧನೆ, ಭಜನೆ ಮಂಗಳ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ೧೧ರಿಂದ ಶ್ರೀ ಭದ್ರಗಿರಿ ಅಚ್ಚುತದಾಸರ ಶಿಷ್ಯರಾದ ರವೀಶ್ ರವರಿಂದ ಹರಿಕಥಾಕಲಾಕ್ಷೇಪ ನಡೆಯಿತು. ಸಾಯಂಕಾಲ ೪ಗಂಟೆಯಿಂದ ವಿವಿಧ ನೃತ್ಯ ವೈವಿಧ್ಯ ನಡೆಯಿತು. ಸಾಯಂಕಾಲ ೮ಗಂಟೆಯಿಂದ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ -೨೦೨೩ ನಡೆಯಿತು. ರಾತ್ರಿ ಶ್ರೀ ದುರ್ಗಾ ಕಲಾತಂಡದ ಪುಗರ್ತೆದ ಕಲಾವಿದೆರ್ ಮೈರ ಕೇಪು ಇವರಿಂದ ಕಲ್ಜಿಗದ ಕಾಳಿ ಮಂತ್ರದೇವತೆ ಭಕ್ತಿ ಪ್ರಧಾನ ನಾಟಕ ನಡೆಯಿತು.
ಇಂದು ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ
ಮಾ.೮ರಂದು ಕ್ಷೇತ್ರದಲ್ಲಿ ಬೆಳಗ್ಗೆ ಶ್ರೀದೇವಿಗೆ ಹಾಗೂ ಪರಿವಾರ ದೈವದೇವರಿಗೆ ಬ್ರಹ್ಮಕಲಶಾಭಿಷೇಕ ನಡೆದು, ಮಹಾಪೂಜೆ, ಶಿಖರ ಕಲಶಾಭಿಷೇಕ ನಡೆಯಲಿದೆ. ಬಳಿಕ ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ ಶ್ರೀ ನಾಗದೇವರ ಮಹಾಪೂಜೆ, ನಾಗದರ್ಶನ, ನಾಗತಂಬಿಲ, ಪ್ರಸಾದ ವಿತರಣೆ ನಡೆಯಲಿದೆ. ಶ್ರೀ ದೇವಿಯ ಮಹಾಪೂಜೆ, ಬಲಿಉತ್ಸವ, ಪಲ್ಲಕಿ ಉತ್ಸವ ನಡೆದು ಪ್ರಥಮ ರಥೋತ್ಸವ, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಬಳಿಕ ಸಿರಿಕುಮಾರ ಸ್ವಾಮೀಜಿಯ ಮಹಾಪೂಜೆ, ಕುಮಾರ ಸೇವೆ, ಪ್ರಸಾದ ವಿತರಣೆ. ರಕ್ತೇಶ್ವರೀ ದೈವದ ನೇಮೋತ್ಸವ ನಡೆಯಲಿದೆ. ಸಾಯಂಕಾಲ ನಡೆಯುವ ಧರ್ಮ ಸಭೆಯಲ್ಲಿ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ, ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಆಶೀರ್ವಚನ ನೀಡಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಾಯಂಕಾಲ ಭರತ ನೃತ್ಯ ವೈಭವ, ರಾತ್ರಿ ಕಲಾಶ್ರೀ ಕುಸಲ್ದ ಕಲಾವಿದೆರ್ ಬೆದ್ರ ಇವರಿಂದ `ನಾಲಾಯಿ ಮಗುರುಜಿ’ ಎಂಬ ತುಳುಬಸಾಮಾಜಿಕ ನಾಟಕ ನಡೆಯಲಿದೆ. ಬಳಿಕ ಕಾಮಿಡಿ ಕಿಲಾಡಿ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.