ಪುಣಚ: ಇಲ್ಲಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ಮಾ. 8 ರಂದು ಚಾಲನೆ ದೊರೆಯಲಿದೆ. ಬೆಳಿಗ್ಗೆ ಅಜೇರು ಪುರುಷೋತ್ತಮ ನಾಯಕ್ ರವರು ದೀಪ ಪ್ರಜ್ವಲಿಸಿ ಉಗ್ರಾಣ ಮುಹೂರ್ತ ಮಾಡಲಿದ್ದಾರೆ.
ಸಂಜೆ ೩ ಗಂಟೆಯಿಂದ ಪುಣಚ ಪರಿಯಾಲ್ತಡ್ಕ ಅಶ್ವಥಕಟ್ಟೆ ವಠಾರದಿಂದ ದೇವಸ್ಥಾನದವರೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆ ನಡೆಯಲಿದೆ. ನಿವೃತ್ತ ಮುಖ್ಯಗುರು ರಾಮಚಂದ್ರ ಭಟ್ ಕುಪ್ಳುಚ್ಚಾರು ರವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಕೊಂಬು ವಾದ್ಯ, ಬ್ಯಾಂಡ್ ಸೆಟ್, ನೃತ್ಯಭಜನೆ ಮೂಲಕ ನಾನಾ ಕಡೆಗಳಿಂದ ಬರುವ ಹೊರೆಕಾಣಿಕೆ ಒಟ್ಟಾಗಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ತಲುಪಲಿದೆ.
ಸಂಜೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ಬಳಿಕ ವಿವಿಧ ವೈದಿಕ ತಾಂತ್ರಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಇಂಧನ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್‌ರವರು ದೇವಸ್ಥಾನದಲ್ಲಿ ಸುಮಾರು ೮೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ‘ಅನ್ನಪೂರ್ಣ’ ಅನ್ನಛತ್ರ ಉದ್ಘಾಟಿಸಲಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಅಳವಡಿಸಲಾಗಿರುವ ಶಾಶ್ವತ ಚಪ್ಪರವನ್ನು ಚಿಕ್ಕಮಗಳೂರು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಉದ್ಘಾಟಿಸಲಿದ್ದಾರೆ. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳು ಗೌರವ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಎಸ್. ಅಂಗಾರ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವಿವೇಕ್ ಶೆಟ್ಟಿ ನಗ್ರಿಗುತ್ತು, ಕೇಶವಪ್ರಸಾದ್ ಮುಳಿಯ, ರಾಮಕೃಷ್ಣ ಮೂಡಂಬೈಲು, ಜನಾರ್ದನ ಭಟ್ ರವರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ‘ಗಾನಾಮೃತ ಮಂಜರಿ’ ನಡೆಯಲಿದೆ.