ಪ್ರಗತಿಪರ ಕೃಷಿಕ ನಾಕೂರು ರಘುನಾಥ ರೈಯವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಬೆಟ್ಟಂಪಾಡಿ ಗ್ರಾಮದ ಕೂವೆಂಜ ಎನ್.ಆರ್.ಆರ್ ಫಾಮ್ಸ್೯ ನಿವಾಸಿ, ಪ್ರಗತಿಪರ ಕೃಷಿಕ ನಾಕೂರು ರಘುನಾಥ ರೈರವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯ ಹಾಗೂ ಶ್ರದ್ಧಾಂಜಲಿ ಸಭೆಯು ಮಾ.8 ರಂದು ಮಧ್ಯಾಹ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾ ಭವನದಲ್ಲಿ ಜರಗಿತು.


ಅಗಲಿದ ನಾಕೂರು ರಘುನಾಥ ರೈಯವರ ಕುಟುಂಬದ ಆತ್ಮೀಯರೂ, ನಿವೃತ್ತ ಶಿಕ್ಷಕರಾಗಿರುವ ರಘುನಾಥ್ ರೈ ನುಳಿಯಾಲುರವರು ಮಾತನಾಡಿ, ಪ್ರಗತಿಪರ ಕೃಷಿಕರಾಗಿರುವ ನಾಕೂರು ರಘುನಾಥ ರೈಯವರು ಕುಟುಂಬದಲ್ಲಾಗಲಿ, ಸಮಾಜದಲ್ಲಾಗಲಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವರಾಗಿರುತ್ತಾರೆ. ಬಂಟ ಸಮುದಾಯದಲ್ಲಿ ಓರ್ವ ಯೋಧನಂತೆ ಬಂಟರಲ್ಲಿ ಬಂಟತಿಗೆ ಹೊಂದಿದವರಾಗಿದ್ದರು. ನೇರ ನಡೆ-ನುಡಿ, ಧೈರ್ಯಶಾಲಿ ಹಾಗೂ ಏನೇ ಆದರೂ ಅದನ್ನು ಎದುರಿಸುವಂತಹ ಸಾಮರ್ಥ್ಯವುಳ್ಳವರಾಗಿದ್ದರು ನಾಕೂರು ರಘುನಾಥ್ ರೈಯವರು. ಹಲವಾರು ದೇವಸ್ಥಾನಗಳಿಗೆ ದಾನ ನೀಡುವ ಮೂಲಕ ಕೊಡುಗೈ ದಾನಿಯಾಗಿ, ತಾನು ನೆನೆಸಿದ ಕಾರ್ಯ ಸಿದ್ಧಿಯಾಗುವವರೆಗೆ ಹೋರಾಡುವ ಛಲದಂಕ ಮಲ್ಲನಾಗಿ ಅವರದು ಗುರುತಿಸಿಕೊಳ್ಳುವ ವ್ಯಕ್ತಿತ್ವವಾಗಿದೆ. ಆಯಾಸವಿಲ್ಲದ, ಧನ್ಯತಾ ಭಾವನೆ ಹೊಂದಿದ ಜೀವನ ರಘುನಾಥ ರೈಯವರದಾಗಿದ್ದು ಅವರ ಅನಿರೀಕ್ಷಿತ ಅಗಲಿಕೆ ಅವರ ಕುಟುಂಬಕ್ಕೆ ತುಂಬಾ ಆಘಾತವನ್ನುಂಟು ಮಾಡಿದೆ. ರಘುನಾಥ ರೈಯವರ ಅಗಲಿಕೆಯ ನೋವನ್ನು ಭರಿಸುವಂತಹ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.


ಈ ಸಂದರ್ಭದಲ್ಲಿ ಅಗಲಿದ ನಾಕೂರು ರಘುನಾಥ ರೈಯವರ ಪತ್ನಿ ವಿಮಲ ರೈ, ಪುತ್ರರಾದ ಮಣಿಕಂಠ ಗ್ಯಾಸ್ ಏಜೆನ್ಸಿ ಮಾಲಕ ಅರುಣ್ ಕುಮಾರ್ ರೈ ಆನಾಜೆ, ಅನಿಲ್ ಕುಮಾರ್ ರೈ ಬೆಂಗಳೂರು, ಪುತ್ರಿ ಅನಿತಾ ಕುಮಾರಿ ರೈ, ಅಳಿಯ ರವೀಂದ್ರ ರೈ, ಸೊಸೆಯಂದಿರಾದ ಉಷಾಕಿರಣ್ ರೈ, ಶಿಲ್ಪಾ ರೈ, ಮೊಮ್ಮಕ್ಕಳು, ಕುಟುಂಬಿಕರು ಉಪಸ್ಥಿತರಿದ್ದರು.


ಮೌನ ಪ್ರಾರ್ಥನೆ…
ಅಗಲಿದ ನಾಕೂರು ರಘುನಾಥ ರೈಯವರ ಆತ್ಮಕ್ಕೆ ಚಿರಶಾಂತಿ ಲಭಿಸಲು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಬಂಧುಮಿತ್ರರು, ಹಿತೈಷಿಗಳು ಅಗಲಿದ ನಾಕೂರು ರಘುನಾಥ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here