ಕಡಬ: ಐ20 ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಕ್ಕದ ಚರಂಡಿಗೆ ಬಿದ್ದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ದಾಳ ಸಮೀಪದ ನೆಕ್ಕಿತ್ತಡ್ಕದಲ್ಲಿ ಮಾ.7ರಂದು ತಡ ರಾತ್ರಿ ನಡೆದಿದೆ.
ಬೆಂಗಳೂರು ಮೂಲದವರು ಕಟೀಲು ದೇವಸ್ಥಾನ ಸಂದರ್ಶಿಸಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಐ20 ಕಾರಿನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮರ್ದಾಳ ನೆಕ್ಕಿತ್ತಡ್ಕ ಸಮೀಪ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ವಿದ್ಯುತ್ ಕಂಬ ಸಮೇತ ಪಕ್ಕದ ಚರಂಡಿಗೆ ಬಿದ್ದಿದೆ. ಕಾರಿನಲ್ಲಿ ಚಾಲಕ ಸೇರಿ ನಾಲ್ವರು ಪ್ರಯಾಣಿಕರಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದಾಗಿ ಪರಿಸರದಲ್ಲಿ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗಿತ್ತು. ಮಾ.8ರಂದು ಬೆಳಿಗ್ಗೆಯೇ ಇಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಸರಬರಾಜಿನಲ್ಲಿ ಆಗಿದ್ದ ಅಡಚಣೆ ಸರಿಪಡಿಸಲಾಗಿದೆ ಎಂದು ವರದಿಯಾಗಿದೆ.