ರೂ.80 ಲಕ್ಷ ಮತ್ತು ಶಾಸಕರ ರೂ.20 ಲಕ್ಷ, ಒಟ್ಟು ರೂ.1 ಕೋಟಿಯಲ್ಲಿ ಪ್ರಥಮ ಹಂತದ ಕಟ್ಟಡದ ಕಾಮಗಾರಿ
6 ತಿಂಗಳಲ್ಲಿ ಹೊಸ ಕಟ್ಟಡ ಲೋಕಾರ್ಪಣೆ – ಸಂಜೀವ ಮಠಂದೂರು
ಸರಕಾರಿ ಶಾಲೆಯನ್ನು ಉಳಿಸಿ ಉತ್ತಮ ಶಿಕ್ಷಣದ ಗುರಿ – ಚನಿಲ ತಿಮ್ಮಪ್ಪ ಶೆಟ್ಟಿ
ಪುತ್ತೂರು: ನೆಲ್ಲಿಕಟ್ಟೆಯಲ್ಲಿ ರೂ. 80 ಲಕ್ಷ ಮತ್ತು ಶಾಸಕರ ಅನುದಾನದಲ್ಲಿ ರೂ.20 ಲಕ್ಷ ಸೇರಿ ಒಟ್ಟು ರೂ. 1 ಕೋಟಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿ ಕಟ್ಟಡ ನಿರ್ಮಾಣದ ಪ್ರಥಮ ಹಂತದ ಕೆಳ ಅಂತಸ್ಥಿನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಮಾ.10ರಂದು ಬೆಳಿಗ್ಗೆ ನಡೆಯಿತು. ಶಾಸಕ ಸಂಜೀವ ಮಠಂದೂರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಶಂಕು ಸ್ಥಾಪನೆ ನೆರವೇರಿಸಿದರು.
6 ತಿಂಗಳಲ್ಲಿ ಹೊಸ ಕಟ್ಟಡ ಲೋಕಾರ್ಪಣೆ :
ಶಿಕ್ಷಣ ಸಂಪನ್ಮೂಲ ಕೇಂದ್ರದದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರತಿ ಶಾಲೆಯಲ್ಲಿ ರೊಲ್ ಮೊಡೆಲ್ ಶಾಲೆ ಇರಬೇಕು. ಅಲ್ಲಿನ ಕೊಠಡಿಗಳು ಇದ್ದ ಹಾಗೆ ಅಧ್ಯಾಪಕರೂ ಇರಬೇಕು. ಆಗ ಜನರಿಗೆ ಶಾಲೆಯ ಬಗ್ಗೆ ವಿಶ್ವಾಸ ಮೂಡುತ್ತದೆ. ಇವೆಲ್ಲದರ ಜೊತೆಗೆ ತಂತ್ರಜ್ಞಾನದ ಶಿಕ್ಷಣ ಕೊಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉತ್ತಮವಾಗಿರಬೇಕು. ಅದಕ್ಕಾಗಿ ಹೊಸಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ರೂ. 1 ಕೋಟಿಯಲ್ಲಿ ಆರಂಭದ ಹಂತದ ನೂತನ ಕಟ್ಟಡದಲ್ಲಿ ಕೆಳ ಅಂತಸ್ತು ಆಗಲಿದೆ. ಒಟ್ಟು ಮೂರು ಅಂತಸ್ತಿನ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿ ಕಚೇರಿ ಎರಡನೇ ಅಂತಸ್ತಿನಲ್ಲಿ ಶಿಕ್ಷಕರಿಗೆ ತರಬೇತಿ ಸಭಾಂಗಣ, ಮೂರನೇ ಅಂತಸ್ತಿನಲ್ಲಿ ಸಭೆ ಸಮಾರಂಭಕ್ಕೆ ಮೀಸಲು. ಮುಂದಿನ ದಿನ ತಾಲೂಕಿನ ಶೈಕ್ಷಣಿಕ ವಿಚಾರದ ಚಟುವಟಿಕೆಗಳಿಗೆ ಪೂರಕವಾಗಿರುವ ಕಟ್ಟಡ ಇದಾಗಬೇಕು ಮತ್ತು ಈ ಕಟ್ಟಡ ಶಿಕ್ಷಣ ಸೌಧವಾಗಿ ರೂಪುಗೊಳ್ಳಬೇಕು ಎಂದ ಅವರು ಒಟ್ಟಿನಲ್ಲಿ 25 ವರ್ಷದ ಹಿಂದೆ ಶೈಕ್ಷಣಿಕ ವರ್ಷದಲ್ಲಿ ಚಿಂತನೆ ಮಾಡಿದಂತೆ ಮತ್ತೆ 25 ವರ್ಷದ ಬಳಿಕ ಅದು ಅನುಷ್ಠಾನ ಆಗಿರುವುದು ಸಂತೃಪ್ತಿ ತಂದಿದೆ ಎಂದರು.
ಸರಕಾರಿ ಶಾಲೆಯನ್ನು ಉಳಿಸಿ ಉತ್ತಮ ಶಿಕ್ಷಣದ ಗುರಿ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಮಾತನಾಡಿ ಖಾಸಗಿ ಶಾಲೆಯಲ್ಲಿ ಯಾವೆಲ್ಲ ಸೌಲಭ್ಯ ಸಿಗುತ್ತವೆಯೋ ಅದೆಲ್ಲ ಸರಕಾರಿ ಶಾಲೆಯಲ್ಲೂ ಸಿಗಬೇಕೆಂಬು ನಮ್ಮ ಶಾಸಕರ ಪ್ರಯತ್ನ. ಅದಕ್ಕೆ ತಕ್ಕಂತೆ ಪುತ್ತೂರಿಗೆ ಎರಡು ಪಬ್ಲಿಕ್ ಸ್ಕೂಲ್, ಎಲ್ಲಾ ಶಾಲೆಗಳಿಗೆ ಮೂಲಭೂತ ಸೌಕರ್ಯವನ್ನು ಅವರು ಒದಗಿಸಿಕೊಟ್ಟಿದ್ದಾರೆ. ಸರಕಾರಿ ಶಾಲೆಯನ್ನು ಉಳಿಸಿ ಉತ್ತಮ ಶಿಕ್ಷಣದ ಗುರಿ ಅವರದ್ದು ಅದಕ್ಕೆ ಪೂರಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸವು ಆಗಿದೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸ್ಥಾನ ಮಾನ ಪಡೆದ ಚನಿಲ ತಿಮ್ಮಪ್ಪ ಶೆಟ್ಟಿಯವರನ್ನು ಶಿಕ್ಷಕ ಸಂಘದಿಂದ ಗೌರವಿಸಲಾಯಿತು.
ಸನ್ಮಾನ: ಶಾಸಕ ಸಂಜೀವ ಮಠಂದೂರು ಅವರು ಸರಕಾರಿ ಶಾಲೆಗೆ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ಹಲವು ಸೌಲಭ್ಯ ವಿದ್ಯಾರ್ಥಿಗಳಿಗೆ ನೀಡಿದ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಅವರನ್ನು ಶಿಕ್ಷಕರ ಸಂಘ ಮತ್ತು ಇಲಾಖೆಯಿಂದ ಸನ್ಮಾನಿಸಲಾಯಿತು. ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುಡಾ ಮಾಜಿ ಅಧ್ಯಕ್ಷ ಎಸ್ ಅಪ್ಪಯ್ಯ ಮಣಿಯಾಣಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕ್ಷೇತ್ರ ಸಂಪನ್ಮೂಲಕೇಂದ್ರ ಸಮನ್ವಯ ಅಧಿಕಾರಿ ನವೀನ್ ವೇಗಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನವೀನ್ ಕುಮಾರ್ ರೈ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮೋನಪ್ಪ ಪಟ್ಟೆ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಮಕೃಷ್ಣ ಮಲ್ಲಾರ್, ತಾರನಾಥ ಸವಣೂರು, ಸಹಾಯಕ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಂ, ಶಾಂತರಾಮ ಒಡ್ಲಾ, ಕಡಬ ಮುಖ್ಯಕ್ಷಕರ ಸಂಘದ ಅಧ್ಯಕ್ಷ ಲಿಂಗರಾಜು, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಇಂಜಿನಿಯರ್ ಸಂದಿಪ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಸಿ ಆರ್ ಪಿ ಶಶಿಕಲಾ, ಪಮೇಶ್ವರಿ, ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.