ಸಾಲ್ಮರ ಮೌಂಟನ್ ವ್ಯೂ, ಅಸ್ವಾಲಿಹಾ-ಫಾಳಿಲಾ ಶರೀಅತ್, ಪಿ.ಯು.ಕಾಲೇಜ್‌ನ ಶೈಕ್ಷಣಿಕ ಮಾಹಿತಿ ಪತ್ರಿಕೆ ಬಿಡುಗಡೆ

0

ಪುತ್ತೂರು : ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಮುಂದಿನ ಶೈಕ್ಷಣಿಕ ವರ್ಷದ ಶೈಕ್ಷಣಿಕ ಮಾಹಿತಿ ಪತ್ರಿಕೆಯನ್ನು ಸಂಸ್ಥೆಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.

ಮೌಂಟನ್ ವ್ಯೂ ಶಾಲಾ ಸಂಚಾಲಕ ಮುಹಮ್ಮದ್ ಸಾಬ್ ಹಾಜಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಎಸ್.ಎಸ್.ಎಲ್.ಸಿ.ವರೆಗೆ ಇಂಗ್ಲೀಷ್ ಮೀಡಿಯಂ, ಕನ್ನಡ ಪ್ರೌಢಶಾಲೆ, ದಾರುಲ್ ಫಲಾಹ್ ಮದ್ರಸ, ಅಸ್ವಾಲಿಹಾ ಮಹಿಳಾ ಶರೀಅತ್ ಮತ್ತು ಪಿ.ಯು.ಕಾಲೇಜ್ ಸೇರಿದಂತೆ ಹಲವಾರು ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಶರೀಅತ್‌ನೊಂದಿಗೆ ಪಿಯುಸಿ ಮುಗಿಸಿದ ವಿದ್ಯಾರ್ಥಿನಿಯರು ಸತತ ನಾಲ್ಕು ಬಾರಿಯೂ ಶೇ.100 ಫಲಿತಾಂಶ ಪಡೆದಿದ್ದು, ಪ್ರತಿಷ್ಠಿತ ’ಮೀಫ್’ ಸಂಸ್ಥೆಯು ಬೆಸ್ಟ್ ಕಾಲೇಜ್ ಅವಾರ್ಡ್’ ನೀಡಿ ಗೌರವಿಸಿದೆ. ಧರ್ಮದ ಚೌಕಟ್ಟಿನಡಿ ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಪಡೆಯುವ ಇಲ್ಲಿನ ವಿದ್ಯಾರ್ಥಿನಿಯರು ಶಿಕ್ಷಣ ಹಾಗೂ ಕಲಾ ಪ್ರತಿಭೆಯಲ್ಲೂ ಉತ್ತಮ ಸಾಧನೆ ಮಾಡಿದ್ದು, ಮುಂದಿನ ವರ್ಷದಿಂದ ’ಫಾಳಿಲಾ’ ಕೋರ್ಸ್ ಆರಂಭವಾಗಲಿದೆ. ಸಂಸ್ಥೆಯ ಎಲ್ಲಾ ವಿಭಾಗಕ್ಕೂ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಮಾತನಾಡಿ ಮೌಂಟನ್ ವ್ಯೂ ಸಂಸ್ಥೆಯಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಬದುಕಲ್ಲಿ ಮೇಲೇರಿ ಉನ್ನತ ಸ್ಥಾನಕ್ಕೇರಿದ್ದಾರೆ, ಅದೇ ರೀತಿ ಆರು ವರ್ಷಗಳ ಹಿಂದೆ ಸ್ಥಾಪಿಸಲಾದ ಅಸ್ವಾಲಿಹಾ ಮಹಿಳಾ ಶರೀಅತ್, ಪಿ.ಯು.ಕಾಲೇಜ್ ಶೈಕ್ಷಣಿಕವಾಗಿ ಉತ್ತಮ ಸಾಧನೆಗಳನ್ನು ಮಾಡಿದೆ. ಮುಂದಿನ ವರ್ಷದಿಂದ ವಿದ್ಯಾರ್ಥಿನಿಯರಿಗೆ ಅಸ್ವಾಲಿಹಾ ಕೋರ್ಸ್‌ನ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಎಸ್ಸೆಸ್ಸಲ್ಸಿ ನಂತರದ ಎರಡು ವರ್ಷಗಳ ಫಾಳಿಲಾ ಕೋರ್ಸನ್ನು ಆರಂಭಿಸಲಾಗುವುದು. ಅದೇ ರೀತಿ ಪ್ರತಿವರ್ಷದಂತೆ ಮುಂದೆಯೂ ಪ್ರತಿಭಾವಂತ ಹಾಗೂ ಬಡ, ನಿರ್ಗತಿಕ ವಿದ್ಯಾರ್ಥಿನಿಯರಿಗೆ ಕಾಲೇಜ್ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು, ಮೊದಲಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿನಿಯರಿಗೆ ಈ ರಿಯಾಯಿತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಆದ್ದರಿಂದ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದರು.

ಮೌಂಟನ್ ವ್ಯೂ ಶಾಲಾ ಪ್ರಾಂಶುಪಾಲ ಮುಸ್ತಫಾ ಮಾತನಾಡಿ ಮಹಿಳೆ ಕಲಿತಾಗ ಮನೆ ಬೆಳಗುತ್ತದೆ, ಮಹಿಳೆಯರು ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ಪಡೆದಾಗ ಧರ್ಮದ ಚೌಕಟ್ಟಿನಡಿ ಸಂಸ್ಕಾರಯುತ ಬದುಕು ಕಟ್ಟಲು ಸಾಧ್ಯವಾಗುವುದು ಆದ್ದರಿಂದ ಇಲ್ಲಿನ ಮಹಿಳಾ ಶರೀಅತ್ ಕಾಲೇಜ್‌ನಲ್ಲಿ ವಿದ್ಯಾರ್ಥಿನಿಯರು ದಾಖಲಾತಿ ಪಡೆದರೆ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಪಡೆಯಲು ಸಾಧ್ಯವಾಗುವುದು, ವಿದ್ಯಾರ್ಥಿನಿಯರು ಅದರ ಸದುಪಯೋಗ ಪಡೆಯಬೇಕೆಂದರು.

ಅಸ್ವಾಲಿಹಾ ಶರೀಅತ್ ಮತ್ತು ಪಿ.ಯು.ಕಾಲೇಜ್ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ಮಾತನಾಡಿ ಮುಂದಿನ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ಅಸ್ವಾಲಿಹಾ ಮತ್ತು ಫಾಳಿಲಾ ಶರೀಅತ್ ಕೋರ್ಸ್ ಮಾಹಿತಿ ನೀಡಿದರು. ಶಾಲಾ ದೈಹಿಕ ಶಿಕ್ಷಕ ಅಶ್ರಫ್, ಕಾರ್ಯಾಲಯ ನಿರ್ವಾಹಕ ಯೂಸೂಫ್ ಮತ್ತು ಅಬ್ದುಲ್ ಹಮೀದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here