ಯಂಗ್ ಬ್ರಿಗೇಡ್ ಸೇವಾದಳದಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ
`ರಾಜೀವ ಗಾಂಧಿ ಟ್ರೋಫಿ’ ಉದ್ಘಾಟನೆ, ರಿಕ್ಷಾ ಚಾಲಕರಿಗೆ ಸನ್ಮಾನ
ಪುತ್ತೂರು:ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ಆಶ್ರಯದಲ್ಲಿ ಮಾ.10ರಿಂದ 12 ರ ತನಕ ಪುತ್ತೂರು ಕಿಲ್ಲೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ `ರಾಜೀವ ಗಾಂಧಿ ಟ್ರೋಫಿ’ಯ ಉದ್ಘಾಟನೆ, ಇದರ ಪ್ರಯುಕ್ತ ರಿಕ್ಷಾ ಚಾಲಕರಿಗೆ ಸನ್ಮಾನ ಕಾರ್ಯಕ್ರಮವು ಮಾ.10ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ಶ್ರೀನಿವಾಸ್‌ರವರು ಮಾತನಾಡಿ ದ.ಕ.ಜಿಲ್ಲೆ ಅತೀ ಹೆಚ್ಚು ಗಲಾಟೆಗಳಿಗೆ ಹೆಸರುವಾಸಿಯಾಗಿದೆ.ಕೆಲವೊಂದು ಸಂಘಟನೆಗಳು ಸಣ್ಣ ಸಣ್ಣ ಕಾರಣಗಳಿಗೆ ಪ್ರಚೋದನೆ ನೀಡಿ ಇಂತಹ ಕೆಲಸ ಕಾರ್ಯಗಳಿಗೆ ತೊಡಗಿಸಿಕೊಂಡಿದೆ.ಯಾವುದೇ ಒಂದು ವರ್ಗಕ್ಕೂ ನಾವು ಯಾವುದೇ ರೀತಿಯ ದಾಳಿ ಮಾಡದೆ, ಯಾವುದೇ ರೀತಿಯ ಹೀನಾಯ ಹೇಳಿಕೆ ಕೊಡದೆ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು.
ನಾವೆಲ್ಲರೂ ಮೊದಲು ಮನುಷ್ಯರಾಗಿ ರಾಜ್ಯವನ್ನು ಕಟ್ಟಲು ಹಾಗು ದೇಶವನ್ನು ಕಟ್ಟಲು ಎಲ್ಲಾ ಯುವ ಪೀಳಿಗೆಗಳು ಒಗ್ಗಟ್ಟಾಗಿ ದುಡಿದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದ ಅವರು,ಇದೀಗ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಸ್ಕೀಮ್ ತೆಗೆದುಕೊಂಡು ಬಂದಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರೂ ಸೇರಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಮನೆಯ ಒಡತಿ ಗೃಹಿಣಿಗೆ ಪ್ರತಿ ತಿಂಗಳು 2 ಸಾವಿರ ರೂ.ಧನಸಹಾಯ,ಕುಟುಂಬಕ್ಕೆ ತಿಂಗಳಿಗೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಈ ಯೋಜನೆಯ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ದೆಹಲಿಯಿಂದ ಕರ್ನಾಟಕಕ್ಕೆ ಬಂದು ಗ್ಯಾರೆಂಟಿ ಕಾರ್ಡ್ ನೀಡಿದ್ದಾರೆ.ಕಾರ್ಡ್ ಅನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದು ಹೇಳಿದರಲ್ಲದೆ, ಈ ಯೋಜನೆಯನ್ನು ಜನರಿಗೆ ತಲುಪಿಸುವ ಮೂಲಕ ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಲಿದೆ ಎಂದರು.
ಕರ್ನಾಟಕದಲ್ಲಿ 40 ಪರ್ಸೆಂಟ್ ಸರಕಾರ ಆಡಳಿತ ನಡೆಸುತ್ತಿದೆ.ಉದ್ಯೋಗ ಸಿಗಬೇಕಾದರೆ, ಸರಕಾರದ ಕೆಲಸ ಆಗಬೇಕಾಗದರೆ ಹೀಗೆ ಪ್ರತಿಯೊಂದು ವಿಷಯಕ್ಕೂ 40 ಪರ್ಸೆಂಟ್ ನೀಡಲೇಬೇಕಾಗಿದೆ. ಇದು ಕಾಂಗ್ರೆಸಿಗರು ಮಾತ್ರ ಹೇಳುವುದಲ್ಲ.ಕರ್ನಾಟಕದ ಪ್ರತಿಯೊಬ್ಬ ನಾಗರಿಕನ ತಲೆಯಲ್ಲೂ ಈ ವಿಷಯ ತುಂಬಿಕೊಂಡಿದೆ.ಇಷ್ಟೊಂದು ದೊಡ್ಡ ರೀತಿಯಲ್ಲಿ ಭ್ರಷ್ಟಾಚಾರ ಬಿಜೆಪಿ ಸರಕಾರ ಬಂದ ಮೇಲೆ ಆಗಿದೆ ಎಂದು ಅವರು ಹೇಳಿದರು.
ಬಿಜೆಪಿಯವರು ದೊಡ್ಡ ದೊಡ್ಡ ಆಶ್ವಾಸನೆ ಕೊಟ್ಟಿದ್ದಾರೆ.ಅಚ್ಛೇ ದಿನ್ ಬರುತ್ತದೆ ಎಂದು ಹೇಳಿದ್ದ ಅವರ ಅಚ್ಛೇದಿನ್ ಯಾರಿಗೂ ಬಂದಿಲ್ಲ.ನಾವು ಕೂಡಾ ನೋಡಿಲ್ಲ.ರೂ. 400 ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ರೂ.1100 ಆಗಿದೆ.60ರೂ ಇದ್ದ ಪೆಟ್ರೋಲ್ ಬೆಲೆ ರೂ. 110 ಆಗಿದೆ.ಅದೇ ಅಚ್ಚೇ ದಿನ್ ಎಂದರಲ್ಲದೆ ದ್ವೇಷದ ರಾಜಕಾರಣ, ಕ್ಷುಲ್ಲಕ ಕಾರಣಕ್ಕೆ ಹೊಡೆದಾಟವೂ ಅಚ್ಚೇದಿನ್ ಆಗಿದೆ ಎಂದು ಅವರು ವ್ಯಂಗ್ಯವಾಡಿದರು.
ದೇಶದ ಎಲ್ಲಾ ಯುವ ಜನತೆಗೆ ವಿಶ್ವಾಸ ಗಾತುಕವನ್ನು ಯಾರಾದರೂ ಮಾಡಿದ್ದರೆ ಅದು ಬಿಜೆಪಿ ಸರಕಾರ ಮಾತ್ರವಾಗಿದೆ ಎಂದು ಅವರು ಹೇಳಿದರು.ನಾವೆಲ್ಲರು ಸೇರಿ ಕರ್ನಾಟಕ ರಾಜ್ಯವನ್ನು ಕಟ್ಟುವ ಮತ್ತು ಸಂವಿಧಾನವನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ.ಸಂವಿಧಾನ ಇಲ್ಲದಿದ್ದರೆ ಈ ದೇಶವಿಲ್ಲ. ದೇಶ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು ಎಂದ ಅವರು ಯುವ ಜನಾಂಗ ನಶೆಯ ಹಿಂದೆ ಹೋಗದೆ ಅದನ್ನು ವಿರೋಧಿಸುವ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಯಂಗ್ ಬ್ರಿಗೇಡ್‌ನಿಂದ ದೇಶದ ಅಭಿವೃದ್ಧಿ-ಲುಕ್ಮಾನ್:
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಅವರು ಮಾತನಾಡಿ ಶ್ರೀನಿವಾಸ್ ಅವರನ್ನು ಸಭೆಗೆ ಪರಿಚಯಿಸಿ, ಯಂಗ್ ಬ್ರಿಗೇಡ್ ಒಂದು ಸಮಾಜ ಸೇವಾ ಸಂಘಟನೆಯಾಗಿದ್ದು, ಇಂತಹ ಸಂಘಟನೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ರಿಕ್ಷಾ ಚಾಲಕರ ಸೇವೆ ಗುರುತಿಸಿರುವುದು ಶ್ಲಾಘನೀಯ-ಶಕುಂತಳಾ ಶೆಟ್ಟಿ:
ರಿಕ್ಷಾ ಚಾಲಕರ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಯಂಗ್ ಬ್ರಿಗೇಡ್ ಸೇವಾದಳವು ಇಂತಹ ಅಮೂಲ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರಲ್ಲೂ ರಿಕ್ಷಾ ಚಾಲಕರ ಸೇವೆಯನ್ನು ಗುರುತಿಸುವ ಕಾರ್ಯಕ್ರಮ ಶ್ಲಾಘನೀಯವಾಗಿದೆ.ಮುಂದೆ ಇಂತಹ ಹತ್ತು ಹಲವು ಕಾರ್ಯಕ್ರಮ ನಡೆಯಲಿ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು. ಪ್ರಹ್ಲಾದ್ ಬೆಳ್ಳಿಪ್ಪಾಡಿಯವರು ಶುಭಹಾರೈಸಿದರು.
ಕಾಂಗ್ರೆಸ್ ನಾಯಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ ಸುಳ್ಯ, ಕೃಪಾ ಅಮರ್ ಆಳ್ವ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಸೇವಾ ದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ, ರಾಜ್ಯ ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿ ಸಾಯಿರಾ ಜುಬೈರ್, ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಪದಾಧಿಕಾರಿ ಅಸ್ಮಾ ಗಟ್ಟಮನೆ, ಕೆಪಿಸಿಸಿ ಸದಸ್ಯ ಸತೀಶ್ ಕೆಡೆಂಜಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಅಬ್ದುಲ್ ರಜಾಕ್ ಆರ್ .ಪಿ ಪಡೀಲ್, ರೋಶನ್ ರೈ ಬನ್ನೂರು,ಕೃಷ್ಣಪ್ರಸಾದ್ ಆಳ್ವ, ಸಿದ್ದಿಕ್ ಸುಲ್ತಾನ್, ವಿಶ್ವಜಿತ್ ಅಮ್ಮುಂಜ, ಯಂಗ್ ಬ್ರಿಗೇಡ್‌ನ ಪ್ರಧಾನ ಕಾರ್ಯದರ್ಶಿ ಸನತ್ ರೈ ಒಳತ್ತಡ್ಕ, ಕೋಶಾಧಿಕಾರಿ ಷರೀಫ್ ಬಲ್ನಾಡು, ಶರತ್ ಕೇಪುಳು, ಸಿನಾನ್ ಪರ್ಲಡ್ಕ, ಉನೈಸ್ ಗಡಿಯಾರ, ಪ್ರಕಾಶ್ ಪುರುಷರಕಟ್ಟೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಪ್ಪಿನಂಗಡಿ ವಿಟ್ಲ ಯಂಗ್ ಬ್ರಿಗೇಡ್ ಅಧ್ಯಕ್ಷ ಅಭಿಷೇಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಂಗ್ ಬ್ರಿಗೇಡ್ ರಾಜ್ಯ ಅಧ್ಯಕ್ಷ ಜುನೈದ್ ಪಿ.ಕೆ ಸ್ವಾಗತಿಸಿದರು. ಯಂಗ್ ಬ್ರಿಗೇಡ್‌ನ ಪದಾಧಿಕಾರಿಗಳಾದ ಪುತ್ತೂರು ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ ವಂದಿಸಿದರು. ಯಂಗ್ ಬ್ರಿಗೇಡ್‌ನ ಪದಾಧಿಕಾರಿ ಮತ್ತು ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್ ಕಾರ್ಯಕ್ರಮ ನಿರೂಪಿಸಿದರು. ಅನ್ವರ್ ಕಬಕ, ಹಸೈನಾರ್ ಬನಾರಿ, ಫಾರೂಕ್ ಬಾಯಬೆ, ರಶೀದ್ ಮುರ, ದಾಮೋದರ ಭಂಡಾರ್ಕರ್,ಸಲಾಂ ಸಂಪ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
110 ರಿಕ್ಷಾ ಚಾಲಕರಿಗೆ ಸನ್ಮಾನ:
ರಿಕ್ಷಾ ಚಾಲಕರಲ್ಲಿ ಆಪತ್ಬಾಂಧವರಾಗಿ ಸೇವೆ ಸಲ್ಲಿಸುತ್ತಿರುವ 110 ರಿಕ್ಷಾ ಚಾಲಕರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.ಶಾಲು, ಪೇಟ, ಸ್ಮರಣಿಕೆ, ಮಾಲಾರ್ಪಣೆ ಮಾಡಿ ಅವರನ್ನು ಗೌರವಿಸಲಾಯಿತು. ಸನ್ಮಾನವನ್ನು ಕೃತಜ್ಞತಾ ಪೂರ್ವಕವಾಗಿ ರಿಕ್ಷಾ ಚಾಲಕರು ಸ್ವೀಕರಿಸಿದರು.
ಜರ್ಸಿ ಬಿಡುಗಡೆ:
ರಾಜೀವ ಗಾಂಧಿ ಟ್ರೋಫಿ ಕ್ರಿಕೆಟ್ ಪಂದ್ಯಾಟ ಆಟಗಾರರಿಗೆ ನೀಡಲಾಗುವ ಜರ್ಸಿಯನ್ನು ಪಿ.ಬಿ ಶ್ರೀನಿವಾಸ್ ಬಿಡುಗಡೆ ಮಾಡಿದರು.