ಪುತ್ತೂರು: ಒಳಿತನ್ನು ಮೈಗೂಡಿಸಿಕೊಂಡು ಜೀವನ ನಡೆಸಿದರೆ ಮಾತ್ರ ಇಹಪರ ವಿಜಯ ಸಾಧ್ಯ ಎಂದು ಸಾಜ ಮಸೀದಿಯ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಹೇಳಿದರು.
ಸಾಜ ಮಹಿಯುದ್ದೀನ್ ಜುಮಾ ಮಸೀದಿಯಲ್ಲಿ ವಾರ್ಷಿಕ ಖುತುಬಿಯತ್ ನೇರ್ಚೆಯ 38ನೇ ವಾರ್ಷಿಕೋತ್ಸವದ ಅಂಗವಾಗಿ 2 ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾರೋಪ ದಿನವಾದ ಮಾ.10ರಂದು ಅವರು ಮಾತನಾಡಿದರು.
ಕೆಲವೇ ದಿನಗಳಲ್ಲಿ ಪವಿತ್ರ ರಂಝಾನ್ ತಿಂಗಳ ಆಗಮನವಾಗಲಿದ್ದು ಆ ತಿಂಗಳಿನಲ್ಲಿ ಸಂಪೂರ್ಣವಾಗಿ ಬದಲಾಗುವ ಮೂಲಕ ಪರಿಶುದ್ದ ಜೀವನ ನಡೆಸಲು ಪಣ ತೊಡಬೇಕು ಎಂದು ಅವರು ಹೇಳಿದರು.
ಖುರ್ಆನಿನ ಸಂದೇಶ ಅಳವಡಿಸಿದರೆ ಸೋಲಿಲ್ಲ-ಎಂ.ಎಸ್
ಪರಿಯಾಲ್ತಡ್ಕ ಮಸೀದಿಯ ಅಧ್ಯಕ್ಷ ಎಂ.ಎಸ್ ಮುಹಮ್ಮದ್ ಮಾತನಾಡಿ ಪವಿತ್ರ ಖುರ್ಆನಿನ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡದ್ದೇ ಆದಲ್ಲಿ ಜಗತ್ತಿನ ಯಾವ ಶಕ್ತಿಗಳಿಗೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸತ್ಕರ್ಮಗಳು ಮಾತ್ರ ನಮಗೆ ಶಾಶ್ವತ-ನೌಫಲ್ ಸಖಾಫಿ
ಮುಖ್ಯ ಪ್ರಭಾಷಣ ನಡೆಸಿದ ನೌಫಲ್ ಸಖಾಫಿ ಕಳಸರವರು ಹಣ, ಆಸ್ತಿ, ಸಂಪತ್ತು, ಹೆಸರು ಇವೆಲ್ಲವೂ ಕ್ಷಣಿಕವಾಗಿದ್ದು ನಮ್ಮ ಸತ್ಕರ್ಮಗಳು ಮಾತ್ರ ನಮಗೆ ಶಾಶ್ವತವಾಗಿದೆ ಎಂದು ಹೇಳಿದರು. ವಿಶ್ವದ ನಿಯಂತ್ರಣ ಅಲ್ಲಾಹನ ಕೈಯಲ್ಲಾಗಿದ್ದು ಉಳಿದೆಲ್ಲವೂ ಇಲ್ಲಿ ನಿಮಿತ್ತ ಮಾತ್ರ. ಅಲ್ಲಾಹು ಆಜ್ಞಾಪಿಸಿದ ರೀತಿಯಲ್ಲಿ ಜೀವನ ನಡೆಸಿದರೆ ಮಾತ್ರ ನಮ್ಮ ಬದುಕು ಸಾರ್ಥಕ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಬುಳೇರಿಕಟ್ಟೆ ಎಂ.ಜೆ.ಎಂ ಖತೀಬ್ ಸುಲೈಮಾನ್ ದಾರಿಮಿ, ಸಾಜ ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಉಪಾಧ್ಯಕ್ಷ ಇದ್ದಿಕುಂಞಿ ಹಾಜಿ, ಸಾರ್ಯ ಮಸೀದಿ ಉಪಾಧ್ಯಕ್ಷ ಹಾಜಿ ಮಹಮ್ಮದ್ ಕೋಡಿಯಡ್ಕ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಆಸಿಫ್ ಹಾಜಿ ತಂಬುತ್ತಡ್ಕ, ಬುಳೇರಿಕಟ್ಟೆ ಅನ್ಸಾರಿಯಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಶರೀಫ್ ರೋಯಲ್, ಸಾಜ ಮುಹೀನುಲ್ ಇಸ್ಲಾಂ ಯಂಗ್ಮೆನ್ಸ್ ಅಧ್ಯಕ್ಷ ಮಹಮ್ಮದ್ ರಫೀಕ್ ಎಚ್ ಉಪಸ್ಥಿತರಿದ್ದರು. ಸಾಜ ಮಸೀದಿಯ ಖತೀಬ್ ಅಹ್ಮದ್ ರವೂಫ್ ಅಲ್ ಹಾಶಿಮಿ ಸ್ವಾಗತಿಸಿದರು. ಜಮಾಅತರು ಹಾಗೂ ಯಂಗ್ಮೆನ್ಸ್ನವರು ಸಹಕರಿಸಿದರು.
ಮಗ್ರಿಬ್ ನಮಾಜಿನ ಬಳಿಕ ಅಬ್ದುಲ್ಲಾಹಿ ಬಾಖವಿ ಪುದಿಯವಳಪ್ಪು ನೇತೃತ್ವದಲ್ಲಿ ಖುತುಬಿಯತ್ ನೇರ್ಚೆ ನಡೆಯಿತು.
ಮಸೀದಿಯೊಂದಿಗಿನ ಬಂಧ ಕಡಿಮೆಯಾಗುತ್ತಿದೆ-ಕುಕ್ಕಿಲ ದಾರಿಮಿ
ಮೊದಲನೇ ದಿನವಾದ ಮಾ.9ರಂದು ಮುಖ್ಯ ಪ್ರಭಾಷಣ ನಡೆಸಿದ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲರವರು ಯುವ ಸಮೂಹ ಕ್ರೀಡೆ, ಮೋಜು ಮಸ್ತಿನಂತಹ ಕ್ಷೇತ್ರಗಳತ್ತ ಆಕರ್ಷಿತರಾಗುತ್ತಿದ್ದು ಮಸೀದಿಯೊಂದಿಗಿನ ಬಂಧ ಕಡಿಮೆಯಾಗುತ್ತಿದೆ, ಎಲ್ಲ ಕಡೆಗಳಲ್ಲೂ ಬಹುಸಂಖ್ಯಾತರಾಗಿರುವ ನಮ್ಮ ಸಮುದಾಯ ಮಸೀದಿಗೆ ಬರುವುದರಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದಾರೆ, ಇದು ವಿಪರ್ಯಾಸ, ಇದರ ಬದಲಾವಣೆ ಆಗದ ಹೊರತು ನಮಗೆ ವಿಜಯ ದೊರಕಲು ಸಾಧ್ಯವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಮಂಜ ಮುಹ್ಯಿಸ್ಸುನ್ನ ದರ್ಸ್ನ ಮುದರ್ರಿಸ್ ಝಾಯಿದ್ ಫಾಳಿಲಿ, ಸಾಜ ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಉಪಾಧ್ಯಕ್ಷ ಇದ್ದಿಕುಂಞಿ ಹಾಜಿ, ಸಾಜ ಮಸೀದಿಯ ಮಾಜಿ ಖತೀಬ್ ಅಬ್ಬಾಸ್ ಮುಸ್ಲಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಜ ಮಸೀದಿಯ ಮುಅಲ್ಲಿಂ ಅಬ್ದುಲ್ ಹಮೀದ್ ಹಿಶಾಮಿ ಸ್ವಾಗತಿಸಿದರು.