ಉಪ್ಪಿನಂಗಡಿ ಕರಾವಳಿ ಪ್ರಜಾಧ್ವನಿ ಯಾತ್ರೆ

0

ಜನರ ಸಮಸ್ಯೆಗಳೇ ಕಾಂಗ್ರೆಸ್ ಪ್ರಣಾಳಿಕೆ; ಬೆಲೆ ಏರಿಕೆ ವಿರುದ್ಧ ಚಳುವಳಿ ಅಗತ್ಯ; ಸುಧೀರ್ ಕುಮಾರ್‌ ಮರೋಳಿ

ಪುತ್ತೂರು: ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದಲ್ಲಿ ಜನ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರಕಾರದ ನೀತಿಯ ವಿರುದ್ದ ಪ್ರತಿಭಟನೆ ಮಾಡಿದವರನ್ನು ಜೈಲಿಗ ಹಾಕಲಾಗುತ್ತದೆ. ಮಧ್ಯಮ, ಬಡ ವರ್ಗ ದಿಕ್ಕು ತೋಚದಂತಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದು ಇದೀಗ ಬೆಲೆ ಏರಿಕೆಯಿಂದ ಜನ ನಿತ್ಯ ನರಕ ಅನುಭವಿಸುವಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಅವರು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ನಡೆದ ಕರಾವಳಿ ಪ್ರಜಾದ್ವನಿ ಯಾತ್ರೆಯಲ್ಲಿ ಮುಖ್ಯ ಭಾಷಣ ಮಾಡಿದರು. ಪ್ರಜೆಗಳ ಧ್ವನಿಯನ್ನು ಆಲಿಸಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ರಾಜ್ಯಾದ್ಯಂತ ಕೈಗೊಂಡಿದೆ. ಜನರು ಯಾವುದೆಲ್ಲಾ ಸಮಸ್ಯೆಗಳಿಂದ ನಲುಗುತ್ತಿದ್ದಾರೆ, ರಾಜ್ಯದ ಬಿಜೆಪಿ ಸರಕಾರ ಬಂದ ಬಳಿಕ ಜನರಿಗೆ ನೆಮ್ಮದಿಯಿಲ್ಲದಂತಾಗಿದೆ. ಇವೆಲ್ಲವನ್ನು ಅಧ್ಯಯನ ಮಾಡುವ ದೃಷ್ಟಿಯಿಂದ, ಜನರ ಬಳಿ ಕಾಂಗ್ರೆಸ್ ತೆರಳುತ್ತಿದೆ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಕೇಂದ್ರದಿಂದ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಪದೇ ಪದೇ ಭೇಟಿ ಕೊಡುತ್ತಿದ್ದಾರೆ. ಮಂಗಳೂರಿಗೂ ಭೇಟಿ ಕೊಡಬಹುದು. ಕರಾವಳಿ ಅಭಿವೃದ್ದಿಗೆ ಮೋದಿ ಸರಕಾರ ಏನು ಯೋಜನೆಯನ್ನು ರೂಪಿಸಿದೆ ಎಂಬುದನ್ನು ಜನ ಪ್ರಶ್ನಿಸಬೇಕು. ಇಲ್ಲಿರುವ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬೃಹತ್ ಕಂಪೆನಿಗಳು ಕಾಂಗ್ರೆಸ್ ಮಾಡಿದ್ದು ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದನ್ನು ಪ್ರಧಾನಿಗಳು ಕರಾವಳಿ ಜನತೆಗೆ ತಿಳಿಸಬೇಕು. ಬೆಲೆ ಏರಿಕೆ ಕೇಂದ್ರ ಸರಕಾರ ದೇಶಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಅಂದು ಗಾಂಧಿಯವರು ಉಪ್ಪಿಗೆ ತೆರಿಗೆ ಹಾಕಿದ್ದರ ವಿರುದ್ದ ಸತ್ಯಾಗ್ರಹ ಮಾಡಿದ್ದರು. ಇಂದು ಮೋದಿ ಸರಕಾರ ಜನ ಸಾಮಾನ್ಯರ ಬದುಕಿಗೆ ಕೊಳ್ಳಿ ಇಟ್ಟಿದೆ. ಪ್ರತಿಯೊಂದಕ್ಕೂ ಬೆಲೆ ಏರಿಕೆ ಮಾಡಿದೆ. ದೀಪದ ಎಣ್ಣೆಯಿಂದ ಹಿಡಿದು ಉಪ್ಪು ವರೆಗೂ ಬೆಲೆ ಏರಿಕೆ ಮಾಡಿ ಮಧ್ಯಮ ಹಾಗೂ ಬಡ ವರ್ಗದ ಅನ್ನಕ್ಕೂ ಕಲ್ಲು ಹಾಕುವ ಕೆಲಸವನ್ನು ಮಾಡಿದ್ದೇ ಮೋದಿ ಸರಕಾರದ ಸಾಧನೆಯಾಗಿದೆ.

ಲವ್‌ಜಿಹಾದ್ ನಳಿನ್‌ರ ಖಾಸಗಿ ವಿಚಾರ

ಅಭಿವೃದ್ದಿ ಬಗ್ಗೆ ಮಾತನಾಡಬೇಡಿ, ರಸ್ತೆ , ಉದ್ಯೋಗ, ಮನೆ ಕೇಳಬೇಡಿ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದು ಲವ್‌ಜಿಹಾದ್ ಅವರ ಖಾಸಗಿ ವಿಚಾರವಾಗಿದೆ ಎಂದು ವ್ಯಂಗ್ಯವಾಡಿದರು. ಒಡೆದು ಆಳುವ ನೀತಿಯಿಂದಾಗಿ ಜಿಲ್ಲೆಯಲ್ಲಿ ಕೋಮು ಪ್ರಚೋದನೆ ಉಂಟಾಗಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಾಗಿದೆ. ಪ್ರಚೋದನೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿಯವರೇ ಇದಕ್ಕೆ ಕಾರಣ. ಪರಿಹಾರದಲ್ಲೂ ರಾಜಧರ್ಮ ಪಾಲನೆ ಮಾಡದ ದರಿದ್ರ ಸರಕಾರ ನಮಗೆ ಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆ ಅಥವಾ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದ ವ್ಯಂಗ್ಯ ಚಿತ್ರಕಾರರನ್ನು, ಭಾಷಣಗಾರರನ್ನು, ಪತ್ರಕರ್ತರನ್ನು, ಚಿಂತಕರನ್ನು, ರಾಜಕೀಯ ಮುಖಂಡರನ್ನು ಮೋದಿ ಸರಕಾರ ಬಂಧಿಸಿ ಜೈಲಿಗಟ್ಟಿದೆ. ಸರಕಾರದ ವಿರುದ್ದ ಯಾರೂ ಮಾತನಾಡಬಾರದು ಎಂಬ ಧೋರಣೆ ಸಂವಿಧಾನಕ್ಕೆ ವಿರುದ್ದವಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಬಿಜೆಪಿಯಾದರೂ ಸಂವಿಧಾನಕ್ಕೆ ಗೌರವ ಕೊಡುತ್ತಿದ್ದರು ಎಂದು ಹೇಳಿದ ಸುಧೀರ್ ಮರೋಳಿ ಸಂವಿಧಾನವನ್ನೇ ಗೌರವಿಸದ ಮೋದಿ ರಾಜಧರ್ಮ ಪಾಲನೆ ಮಾಡಿಯಾರೆ ಎಂದು ಪ್ರಶ್ನಿಸಿದರು. ಜನ ಸಾಮಾನ್ಯ ತಪ್ಪು ಮಾಡಿದರೆ ಆತನಿಗೆ ಜಾಮೀನು ಸಿಗಬೇಕಾದರೆ ಮೂರರಿಂದ ನಾಲ್ಕು ತಿಂಗಳು ಕೋರ್ಟು ಅಲೆಯಬೇಕು. ಆದರೆ ಕೋಟ್ಯಂತರ ರೂ ಗಳೊಂದಿಗೆ ಬಂಧನವಾದ ಬಿಜೆಪಿ ಶಾಸಕನಿಗೆ ಮೂರೇ ದಿನದಲ್ಲಿ ಜಾಮೀನು ದೊರೆಯುತ್ತದೆ ಎಂದಾದರೆ ನ್ಯಾಯಾಂಗ ವ್ಯವಸ್ಥೆಗೆ ಅಪಮಾನವಲ್ಲವೇ ಎಂದು ಹೇಳಿದರು. ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ದೇಶದಲ್ಲಿ ಜನ ದಂಗೆ ಏಳುವ ಕಾಲ ದೂರವಿಲ್ಲ. ಜನರ ಸಂಕಷ್ವನ್ನು ಮನಗಂಡು ಕಾಂಗ್ರೆಸ್ ಜಾತಿ, ಮತ, ಧರ್ಮ ಬೇದವಿಲ್ಲದೆ ಎಲ್ಲಾ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ ತಲಾ 2೦೦೦ ಗೌರವ ಧನ ಕೊಡುವ ಮತ್ತು 2೦೦ ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವ ಭರವಸೆಯನ್ನು ನೀಡಿದೆ. ಆ ಹಣದಿಂದ ಪ್ರತೀ ಕುಟುಂಬ ಆಹಾರ ಧಾನ್ಯಗಳನ್ನು ಖರೀದಿಸಿ ಅಷ್ಟಾದರೂ ನೆಮ್ಮದಿಯಿಂದ ಇರಲಿ ಎಂಬುದು ಕಾಂಗ್ರೆಸ್ ಆಶಯವಾಗಿದೆ ಎಂದು ಹೇಳಿದರು. ಇದೇ ವೇಳೆ ಮೃತಪಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣ ಅವರಿಗೆ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೃದಯಾಘಾತದಿಂದ ಮೃತಪಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣರವರ ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕೃಪಾ ಅಮರ್‌ಆಳ್ವ, ದಿವ್ಯಪ್ರಭಾ ಚಿಲ್ತಡ್ಕ, ಅಶೋಕ್ ರೈ ಕೋಡಿಂಬಾಡಿ, ಅಶ್ರಫ್ ಬಸ್ತಿಕ್ಕಾರ್, ಜೋಕಿಂ ಡಿಸೋಜಾ, ಕೆ ಕೆ ಸಾಹುಲ್ ಹಮೀದ್, ಅಬ್ದುಲ್ ರಹಿಮಾನ್ ಯುನಿಕ್, ಪ್ರಸಾದ್ ಕೌಶಲ್ ಶೆಟ್ಟಿ, ಮುರಳೀಧರ್ ರೈ ಮಠಂತಬೆಟ್ಟು, ಅರ್ತಿಲ ಕೃಷ್ಣ ರಾವ್, ಮೇಲ್ತೋಡಿ ಈಶ್ವರಭಟ್, ದೇವದಾಸ್ ರೈ, ನಝೀರ್ ಮಠ, ಪ್ರವೀಣ್‌ಚಂದ್ರ ಆಳ್ವ, ಉಮಾನಾಥ ಶೆಟ್ಟಿ, ಜಗನ್ನಾಥ ಶೆಟ್ಟಿ ನಡುಮನೆ, ಲೋಕೇಶ್ ಪೆಲತ್ತಡಿ, ಸುಧೀರ್‌ಕುಮಾರ್ ಕಡಬ, ಗೀತಾ ದಾಸರಮೂಲೆ, ಯತೀಶ್‌ ಗೌಡ ಆನಡ್ಕ, ಪ್ರೆಸಿಲ್ಲಾ ಬಜತ್ತೂರು, ಅನಿತಾಕೇಶವ ಗೌಡ, ಸೋಮನಾಥ, ಭಾಸ್ಕರ ಕೋಡಿಂಬಾಳ, ಸೇಸಪ್ಪ ನೆಕ್ಕಿಲು, ಇಬ್ರಾಹಿಂ ಪೆರಿಯಡ್ಕ, ಫಾರೂಕ್ ಪೆರ್ನೆ, ಅಯ್ಯೂಬ್ ಕರಾಯ, ರವಿ ಪಟ್ಟಾರ್ತಿ, ಸತೀಶ್ ಹೆಬ್ಬಾಳ, ಯೂಸುಫ್ ಪೆದಮೂಲೆ, ಶಿವಚಂದ್ರ ನೆಡ್ಡಂಕಿ, ಅನಿಮಿನೇಜಸ್, ಬೀಪಾತುಮ್ಮ ಗಡಿಯಾರ್, ಉಪ್ಪಿನಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್‌ರಹಿಮಾನ್ ಗ್ರಾಪಂ ಸದಸ್ಯ ಯು ಟಿ ತೌಸೀಫ್, ಇರ್ಷಾದ್ ಯು ಟಿ, ಅನಸ್ ಉಪ್ಪಿನಂಗಡಿ, ಸಿದ್ದಿಕ್ ಕೆಂಪಿ, ಮಿತ್ರದಾಸ್ ರೈ ಪೆರ್ನೆ,ವೆಂಕಪ್ಪ ಪೂಜಾರಿ, ಸುನಿಲ್ ಪೆರ್ನೆ, ಫಯಾಝ್ ಯು ಟಿ, ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here