ವಿಟ್ಲ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನನಿಗದಿಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಇತ್ತ ಪೊಲೀಸ್ ಇಲಾಖೆ ರಾಜ್ಯದ ಗಡಿಪ್ರದೇಶಗಳಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ ಬಿಗು ತಪಾಸಣೆಗೆ ಆದೇಶಹೊರಡಿಸಿದೆ. ಅದರಂತೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾಲ್ಕುಚೆಕ್ ಪೋಸ್ಟ್ ಗಳಲ್ಲಿ ವಿಟ್ಲ ಠಾಣಾ ಇನ್ಸ್‌ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನಿರ್ದೇಶನದಂತೆ ವಾಹನ ತಪಾಸಣೆ ಆರಂಭಿಸಿದ್ದು, ರಾಜ್ಯದಿಂದ ಹೊರಹೋಗುವ ಹಾಗೂ ರಾಜ್ಯದೊಳಗೆ ಬರುವ ವಾಹನಗಳ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ.
ಗಡಿಪ್ರದೇಶದಲ್ಲಿರುವ ಠಾಣೆಗಳ ಪೈಕಿ ಅತೀ ಸೂಕ್ಷ್ಮ ಠಾಣೆಗಳಲ್ಲೊಂದಾಗಿರುವ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳ ಪೈಕಿ ಸಾರಡ್ಕ, ಸಾಲೆತ್ತೂರು ಸಮೀಪದ ಮೆದು, ಕನ್ಯಾನ, ಆನೆಕಲ್ಲಿನಲ್ಲಿ ಈ ಹಿಂದಿನಿಂದಲೂ ಚೆಕ್ ಪೋಸ್ಟ್ ತೆರೆದು ಕಾರ್ಯಾಚರಿಸುತ್ತಿದ್ದು, ಅದರಲ್ಲಿ ತಪಾಸಣೆ ಬಿಗುಗೊಳಿಸಲಾಗುತ್ತಿದೆ. ಈ ಚೆಕ್ ಪೋಸ್ಟ್ ಗಳಲ್ಲಿ ವಿಟ್ಲ ಠಾಣಾ ಸಿಬ್ಬಂದಿಗಳು, ಕೆಎಸ್‌ಆರ್‌ಪಿ ಸಿಬ್ಬಂದಿಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲಿದ್ದಾರೆ. ಉಳಿದಂತೆ ಓರ್ವ ಎಸ್.ಐ. ಈ ಎಲ್ಲಾ ಚೆಕ್‌ಪೋಸ್ಟ್‌ಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಹಣ, ಶಸ್ತ್ರಾಸ್ತ್ರ, ಉಡುಗೊರೆ, ಮದ್ಯ ಸಾಗಾಟ ಸಹಿತ ಅಹಿತಕರ ಘಟನೆಯನ್ನು ತಡೆಯುವ ನಿಟ್ಟಿನಲ್ಲಿ ಈ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸಲಿದೆ ಎಂದು ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್. ಈ. ನಾಗರಾಜ್‌ರವರು ತಿಳಿಸಿದ್ದಾರೆ.