ತನ್ನ ಸ್ವಸಾಮರ್ಥ್ಯವನ್ನು ಅರಿತವನು ಮಾನಸಿಕವಾಗಿ ಆರೋಗ್ಯವಂತ: ಡಾ.ಸುಲೇಖಾ ವರದರಾಜ

0

ಪುತ್ತೂರು: ತನ್ನ ಸ್ವಸಾಮರ್ಥ್ಯವನ್ನು ಅರಿತವನು ಮಾನಸಿಕವಾಗಿ ಆರೋಗ್ಯವಂತ, ಅವನು ತನ್ನ ದಿನನಿತ್ಯದ ಕೆಲಸಗಳನ್ನು ಫಲಪ್ರದವಾಗಿ ಮಾಡುತ್ತಾನೆ. ಅದೇ ರೀತಿ ಅವನು ಒತ್ತಡಗಳನ್ನು ನಿರ್ವಹಣೆ ಮಾಡುತ್ತಾನೆ. ಅವನು ಸಮಾಜಕ್ಕೆ ತನ್ನನ್ನು ತಾನು ವಿನಿಯೋಗಿಸುತ್ತಾನೆ ಎಂದು ಮಕ್ಕಳ ತಜ್ಞರು ಮತ್ತು ಮನೋಚಿಕಿತ್ಸಕರು ಆದ ಡಾ.ಸುಲೇಖಾ ವರದರಾಜ ಹೇಳಿದರು. ನಮ್ಮ ಸುತ್ತಲೂ ಇರುವವರು ಅಸಾಮಾನ್ಯ ವರ್ತನೆಗಳನ್ನು ತೋರಿದಾಗ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸೂಕ್ತ ಆರೈಕೆ ಮಾಡಬೇಕು. ಬೌದ್ಧಿಕವಾಗಿ ಪ್ರಬುದ್ಧತೆ ಮಾತ್ರ ಸಾಲದು, ಭಾವನಾತ್ಮಕವಾಗಿ ಪ್ರಬುದ್ಧತೆ ನಮ್ಮಲ್ಲಿರಬೇಕು. ಇಲ್ಲದಿದ್ದರೆ ಅವರು ಹಲವಾರು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಮಾನವನ ಆಲೋಚನೆಗನುಸಾರವಾಗಿ ಭಾವನೆ ಇರುತ್ತದೆ ಭಾವನೆಗೆ ಅನುಸಾರ ವರ್ತನೆ ಇರುತ್ತದೆ. ಭಗವಂತನ ಪ್ರಾರ್ಥನೆ ಮಾಡುವ ಉದ್ದೇಶ ನಮ್ಮ ಮೆದುಳಿನಲ್ಲಿ ಬರುವ ಆಲೋಚನೆಗಳನ್ನು ಕಡಿಮೆ ಮಾಡುವುದಾಗಿದೆ. ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ. ಯಾವುದೇ ಕೆಲಸವನ್ನು ಪ್ರಯತ್ನಪೂರ್ವಕವಾಗಿ ಮಾಡಿದಾಗ ಯಶಸ್ಸು ಖಂಡಿತ. ಕ್ರಿಯಾತ್ಮಕವಾಗಿ ಚಿಂತಿಸಿದಾಗ ನಮ್ಮ ದೇಹದಲ್ಲಿ ಒಳ್ಳೆಯ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ. ಬುದ್ದಿಯನ್ನು ಉಪಯೋಗಿಸಿ ಭಾವನೆಗಳ ಹಿಂದೆ ಹೋಗುವುದು ಪ್ರಬುದ್ಧ ವ್ಯಕ್ತಿಗಳ ಲಕ್ಷಣ ಎಂದರು.

ಇವರು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಮುಖ್ಯ ಗುರು ರಾಮಯ್ಯ ರೈ, ಭಜನೆ ಎಂಬುವುದು ದೇವರನ್ನು ತಲುಪಲು ಇರುವ ಸರಳವಾದ ಮಾರ್ಗ. ಇದಕ್ಕೆ ನಮ್ಮ ದಿನಚರಿಯಲ್ಲಿ ಸ್ವಲ್ಪ ಸಮಯವನ್ನು ವಿನಿಯೋಗಿಸಬೇಕು. ಯೋಗ ಮತ್ತು ಪ್ರಣಾಯಾಮದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಂಡಾಗ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿರತೆ ಸಾಧ್ಯ ಎಂದರು. ಶಿಬಿರಾರ್ಥಿ ಮಧುಶ್ರೀ ಶಿಬಿರದ ಧ್ಯೇಯ ವಾಕ್ಯವಾಗಿರುವ ‘ಸಾಮಾಜಿಕ ಜಾಲತಾಣದ ಸದ್ಬಳಕೆಯತ್ತ ನಮ್ಮ ಚಿತ್ತ’ ಎಂಬ ಶೀರ್ಷಿಕೆಯಡಿ ಪ್ಲಾಸ್ಟಿಕ್ ಮುಕ್ತ ಸಮಾಜ ವಿಷಯದ ಬಗ್ಗೆ ವಿವರಣೆ ನೀಡಿದರು.

ಆನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸೌಮ್ಯಲತಾ ಹಾಗೂ ಬಾಬು ಕೆ ಮತ್ತು ಸರೋಜಿನಿ, ಶಿಬಿರಾಧಿಕಾರಿ ಹರಿಪ್ರಸಾದ್ ಎಸ್ ಹಾಗೂ ಊರವರು, ಶಾಲಾ ವಿದ್ಯಾರ್ಥಿಗಳು, ಘಟಕ ನಾಯಕರುಗಳು, ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಕಿಶೋರ್ ಎಂ ಸ್ವಾಗತಿಸಿದರು. ಕಾವ್ಯ ಅತಿಥಿಯ ಪರಿಚಯ ಮಾಡಿದರು. ಶ್ರೀಜ ವಂದಿಸಿದರು. ಚಿತ್ರಾ ಎಸ್ ನಿರೂಪಿಸಿದರು.

LEAVE A REPLY

Please enter your comment!
Please enter your name here