ಕಡಬ: ವಿಶ್ವ ಮಹಿಳಾ ದಿನಾಚರಣೆ, ಮೆರವಣಿಗೆ, ಸನ್ಮಾನ

0

ಮಹಿಳೆ ಸ್ವಂತ ಬಲದಿಂದ ಮಾಡುವ ಸಾಧನೆಗೆ ಹೆಚ್ಚು ಮನ್ನಣೆ: ಸುಮನಾ ಪೊಳಲಿ

ಕಡಬ: ಮಹಿಳೆ ಎಂದಿಗೂ ಅನುಕಂಪವನ್ನು ಬಯಸುವುದಿಲ್ಲ. ಸಹಜವಾದ ಪ್ರೋತ್ಸಾಹ ಅಕೆಗೆ ಸಾಧನೆಗಳನ್ನು ಮಾಡಲು ಪ್ರೇರಣೆಯಾಗುತ್ತದೆ. ಮಹಿಳೆ ಸ್ವಂತ ಬಲದಿಂದ ಮಾಡುವ ಸಾಧನೆ ಹೆಚ್ಚಿನ ಮನ್ನಣೆ ಪಡೆಯಲು ಸಾಧ್ಯ ಎಂದು ಜೇಸಿಐ ಭಾರತದ ವಲಯ 15ರ ಮಹಿಳಾ ಜೇಸಿ ವಿಭಾಗದ ವಲಯ ಸಂಯೋಜಕಿ ಸುಮನಾ ಪೊಳಲಿ ಅವರು ನುಡಿದರು.

ಅವರು ರವಿವಾರ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಜೇಸಿಐ ಕಡಬ ಕದಂಬದ ಮಹಿಳಾ ಜೇಸಿ ವಿಭಾಗ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡಾ ಸ್ಪರ್ಧೆಗಳು, ಸಾಧಕರಿಗೆ ಸಮ್ಮಾನ ಹಾಗೂ ಮಹಿಳಾ ಸಬಲೀಕರಣದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನೊಬ್ಬರ ಹಾಗೆ ನಾವಾಗುವ ಬದಲು ನಮ್ಮಲ್ಲಿನ ಸಾಮರ್ಥ್ಯವನ್ನು ಅರಿತು ಮಾಡುವ ಪ್ರಯತ್ನಗಳು ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಅವರು ಮಹಿಳೆಯರಿಗೆ ಕಿವಿಮಾತು ಹೇಳಿದರು.

ಅಹಾರವನ್ನು ಹಾಳು ಮಾಡದೆ ಎಚ್ಚರಿಕೆಯಿಂದ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕ್ಲೀನ್ ಪ್ಲೇಟ್ ಚಾಲೆಂಜ್ ಯೋಜನೆಯ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಜೇಸಿ ವಲಯದ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್ ಐತಾಳ್ ಅವರು ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದಾಗ ಯಶಸ್ಸನ್ನು ಪಡೆಯಲು ಸಾಧ್ಯ. ಜನರು ಪ್ರತಿಯೊಂದು ಕಾರ್ಯದಲ್ಲಿಯೂ ಹುಳುಕನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ನಾವು ಸರಿಯಾದ ದಾರಿಯಲ್ಲಿದ್ದೇವೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕು. ಒಂದು ದಿನ ನಮ್ಮ ಸಾಧನೆಯನ್ನು ಜನರು ಖಂಡಿತವಾಗಿಯೂ ಗುರುತಿಸುತ್ತಾರೆ ಎಂದರು.

ಮೆರವಣಿಗೆಗೆ ಚಾಲನೆ ನೀಡಿದ ಜ್ಞಾನ ವಿಕಾಸ ಕಾರ್ಯಕ್ರಮಗಳ ಕಡಬ ತಾಲೂಕು ಸಮನ್ವಯಾಧಿಕಾರಿ ಚೇತನಾ ಅವರು ಮಾತನಾಡಿ ಮಹಿಳಾ ಸಬಲೀಕರಣ ಎನ್ನುವುದು ನಮ್ಮ ಮನೆಯಿಂದಲೇ ಪ್ರಾರಂಭವಾದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುವುದರ ಹಿಂದೆ ಮನೆಯವರ ಪ್ರೋತ್ಸಾಹ ಮತ್ತು ಸ್ವಾತಂತ್ರ್ಯವಿದೆ. ಆ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಿದಾಗ ನಾವು ಇತರರಿಗೆ ಮಾದರಿಯಾಗಲು ಸಾಧ್ಯ ಎಂದರು. ಎಲೆಮರೆಯ ಕಾಯಿಯಂತೆ ಸಮಾಜಕ್ಕಾಗಿ ದುಡಿಯುವವರನ್ನು ಗುರುತಿಸಿ ಗೌರವಿಸುತ್ತಿರುವ ಜೇಸಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜೇಸಿ ಅಧ್ಯಕ್ಷ ಅಭಿಷೇಕ್ ಜಿ.ಎಂ., ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ವಲಯಾಧಿಕಾರಿ ಕಾಶೀನಾಥ್ ಗೋಗಟೆ, ಕಾರ್ಯದರ್ಶಿ ರಾಜೇಶ್ ಎ.ಕೆ., ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು, ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಮುಂತಾದವರು ಉಪಸ್ಥಿತರಿದ್ದರು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಜೇಸಿ ಸದಸ್ಯರನ್ನು ಗೌರವಿಸಲಾಯಿತು.

ಜೇಸಿಐ ಕಡಬ ಕದಂಬದ ಮಹಿಳಾ ಜೇಸಿ ವಿಭಾಗದ ಅಧ್ಯಕ್ಷೆ ಪ್ರಜ್ಞಾ ಅಭಿಷೇಕ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪದ್ಮಾ ಮಂಜುನಾಥ್ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ಕಾರ್ಯಕ್ರಮ ನಿರ್ದೇಶಕಿ ವಿಶ್ರುತಾ ರಾಜೇಶ್ ವಂದಿಸಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಜಯಂತಿ ರೈ ಪೆರಿಯಡ್ಕ, ಮೆಸ್ಕಾಂ ಪವರ್‌ಮ್ಯಾನ್‌ಗಳಾದ ರವಿಕುಮಾರ್ ಮತ್ತು ರಮ್ಯಾ ದಂಪತಿ, ಗುರುಮೂರ್ತಿ ಟಿ.ಜೆ. ಮತ್ತು ರೋಹಿಣಿ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here