ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅತ್ಯಮೂಲ್ಯ : ಸುಜನಿ ಬೋರ್ಕರ್
ಪುತ್ತೂರು : ನಗರದ ಪುತ್ತೂರು ಅಂಬಿಕಾ ವಿದ್ಯಾಲಯದಲ್ಲಿ (ಸಿ ಬಿಎಸ್ಇ )ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ವಿದ್ಯಾಲಯದ ಹಿರಿಯ ಶಿಕ್ಷಕಿ ಹಾಗೂ ಉಪ ಪ್ರಾoಶುಪಾಲರಾದ ಸುಜನಿ ಬೋರ್ಕರ್ ರವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮಹಿಳಾ ದಿನಾಚರಣೆಯ ದಿನದಂದು ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಅತಿಥಿಗಳು ಭಾರತೀಯ ಪರಂಪರೆಯಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ. ಯತ್ರ ನಾರ್ಯಸ್ತು ಪೂಜ್ಯoತೆ ರಮಂತೆ ತತ್ರ ದೇವತಾ: ಎಂಬ ನುಡಿಯಂತೆ ಎಲ್ಲಿ ಸ್ತ್ರೀಯರನ್ನು ಪೂಜ್ಯ ಭಾವದಿಂದ ನೋಡುತ್ತಾರೋ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಯಾಗುತ್ತಾರೆ ಎಂಬುದು ನಮ್ಮೆಲ್ಲರ ನಂಬಿಕೆ. ಮಹಿಳೆಯೊಬ್ಬಳು ಮಮತಾಮಯಿ, ಕರುಣಾಮಯಿ ಅಂತೆಯೇ ತಾಳ್ಮೆಗೆ ಹೆಸರುವಾಸಿ. ಪ್ರತಿಯೊಂದು ಜೀವಿಯ ಹುಟ್ಟಿನಲ್ಲೂ ತಾಯಿಯ ಪಾತ್ರ ಮಹತ್ತರವಾದುದು. ಆದರೆ ಇತ್ತೀಚಿಗೆ ಸ್ತ್ರೀಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ ಮಾನವೀಯ ಸಬಂಧಗಳು ದೂರವಾಗುತ್ತಿವೆ. ಹಾಗಾಗಿ ಮಹಿಳೆಯೊಬ್ಬಳು ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸಿಕೊಡಬೇಕು. ಬಹಳ ವರ್ಷಗಳ ಹಿಂದಿನಿಂದಲೇ ಕೂಡುಕುಟುಂಬ ಪದ್ಧತಿ ಇತ್ತು. ಎಲ್ಲರೂ ಒಟ್ಟಾಗಿ ಇದ್ದು ಸುಖ ದುಃಖಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಇತ್ತು.
ಒಬ್ಬಾಕೆ ಮಹಿಳೆಗೆ ಎರಡು ಮನೆಯ ದೀಪವನ್ನು ಬೆಳಗುವ ಭಾಗ್ಯವಿದೆ. ತಾನು ಹುಟ್ಟಿ ಬೆಳೆದ ಮನೆ ಹಾಗೂ ಮದುವೆಯಾದ ಬಳಿಕ ಕೈಹಿಡಿದ ಗಂಡನ ಮನೆಯಲ್ಲಿ ದೀಪವನ್ನು ಬೆಳಗುವವಳು. ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರುವು ಎಂಬoತೆ ಮನೆಯ ಜವಾಬ್ದಾರಿಯ ಜೊತೆಗೆ ಸಮಾಜದಲ್ಲಿಯೂ ತಾನು ಕಾಣಿಸಿಕೊಂಡು ಕೀರ್ತಿಯನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸುತ್ತಾಳೆ. ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ. ಭಾರತೀಯ ಸೇನೆ, ವಾಯುಸೇನೆ, ಹಾಗೆ ನೌಕಾಸೇನೆಯಲ್ಲಿಯೂ ತಮ್ಮ ಕರ್ತವ್ಯ ನಿರ್ವಹಿಸಿ ದೇಶಕ್ಕೆ ಕೀರ್ತಿಯನ್ನು ತರುವಲ್ಲಿ ಸಾಧನೆ ಮಾಡಿದ್ದಾರೆ. ನೀರಜಾ ಬಾನೊಟ್, ಕಲ್ಪನಾ ಚಾವ್ಲ, ಝಾನ್ಸಿರಾಣಿ ಲಕ್ಷ್ಮಿಭಾಯಿ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ದ್ರೌಪದಿ ಮುರ್ಮು ಹೀಗೆ ನಮ್ಮ ದೇಶದಲ್ಲಿ ಸಾಧನೆಯನ್ನು ಗೈದ ಮಹಿಳೆಯರು ಅಪಾರ ಸಂಖ್ಯೆಯಲ್ಲಿದ್ದಾರೆ. ಈ ಸಮಾಜದಲ್ಲಿ ಪರಶಿವನ ಜೊತೆಗೆ ಪಾರ್ವತಿ ಇರುವ ಹಾಗೆ ( ಅರ್ಧನಾರೀಶ್ವರರ ಹಾಗೆ )ಸ್ತ್ರೀ ಪುರುಷರ ಸಮಾನ ಶಕ್ತಿ ಒಗ್ಗೂಡಿದಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಒಟ್ಟಿನಲ್ಲಿ ದೇಶ ಪ್ರಗತಿಯನ್ನು ಸಾಧಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಮೂಲ್ಯವಾದುದು. ಹಾಗಾಗಿ ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವುದು ಕೇವಲ ಮಾ.8 ರಂದು ಮಾತ್ರವಲ್ಲ, ಪ್ರತಿ ದಿವಸವೂ ಗೌರವಿಸುವಂತಾಗಬೇಕು. ಮಾ 8 ರಂದು ಇಡೀ ವರ್ಷದಲ್ಲಿ ಸಾಧನೆಗೈದ ಮಹಿಳೆಯರನ್ನು, ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಬೇಕು ಎಂದರು.
ವೇದಿಕೆಯಲ್ಲಿ ವಿದ್ಯಾಲಯದ ಗೈಡ್ಸ್ ವಿಭಾಗದ ಶಿಕ್ಷಕಿ ಚಂದ್ರಕಲಾ ಉಪಸ್ಥಿತರಿದ್ದರು. ವಿದ್ಯಾಲಯದ ಸ್ಕೌಟ್ ವಿಭಾಗದ ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ಕೌಟ್ಸ್ ಮತ್ತು ಮಕ್ಕಳಿಗೆ ವಿಶೇಷವಾಗಿ ” ಮಹಿಳೆ ” ಎಂಬ ವಿಚಾರದಲ್ಲಿ ಬರವಣಿಗೆ ನೀಡಲಾಯಿತು.