ಕಾವು: ನವೋದಯ ಸ್ವಸಹಾಯ ಸಂಘದ ಪುರುಷ ಸದಸ್ಯರಿಗೆ ಸಮವಸ್ತ್ರ ವಿತರಣೆ

0

ಚಿತ್ರ: ಎನ್.ಎಸ್ ಕಾವು

ಕಾವು: ನವೋದಯ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕಾವು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಎಲ್ಲಾ ಗುಂಪುಗಳ ಪುರುಷ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಕಾವು ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.

ಸಮವಸ್ತ್ರ ವಿತರಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ನವೋದಯದ ಎಲ್ಲಾ ಗುಂಪುಗಳು ಪಾರದರ್ಶಕವಾಗಿ ಹಣಕಾಸಿನ ವ್ಯವಹಾರ ಮಾಡಿ ಸ್ವಾವಲಂಬಿ ಜೀವನ ನಡೆಸಬೇಕು, ಒಂದು ಕಲೆಯಿಲ್ಲದ ಬಿಳಿ ವಸ್ತ್ರವೂ ಹೇಗೆ ಶುಭ್ರತೆಯನ್ನು ತೋರಿಸುತ್ತದೆಯೋ ಅದೇ ರೀತಿ ನವೋದಯ ಸದಸ್ಯರ ಆರ್ಥಿಕ ವ್ಯವಹಾರವೂ ಕಪ್ಪು ಚುಕ್ಕೆಯಿಲ್ಲದ ಬಿಳಿ ವಸ್ತ್ರದಂತಿರಬೇಕು ಎಂದು ಹೇಳಿದರು.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವ ಮೂರ್ತಿ ಪಿ.ಜಿಯವರು ಮಾತನಾಡಿ ನವೋದಯ ಸದಸ್ಯರ ಬೇಡಿಕೆಗಳಿಗೆ ನಾವು ಸದಾ ಸ್ಪಂದಿಸುತ್ತಿದ್ದು, ಎಲ್ಲಾ ಸದಸ್ಯರು ಕೂಡ ನಮ್ಮ ಸಂಘದಲ್ಲಿ ಇನ್ನೂ ಹೆಚ್ಚಿನ ವ್ಯವಹಾರದಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು. ನವೋದಯ ಟ್ರಸ್ಟ್‌ನ ತಾಲೂಕು ಮೇಲ್ವಿಚಾರಕ ಚಂದ್ರಶೇಖರ್, ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಪ್ರೇರಕಿ ಮಾಧವಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

104 ಸದಸ್ಯರಿಗೆ ಸಮವಸ್ತ್ರ ವಿತರಣೆ:
ನವೋದಯ ಒಕ್ಕೂಟದ ಗುಂಪುಗಳ ಒಟ್ಟು 104 ಪುರುಷ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು.

ಮಮತಾ ರಾವ್ ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ ಸ್ವಾಗತಿಸಿ, ಪ್ರೇರಕಿ ಮಾಧವಿ ವಂದಿಸಿದರು. ಒಕ್ಕೂಟದ ಮಾಜಿ ಅಧ್ಯಕ್ಷ ಚಿದಾನಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕೂಟದ ಗೌರವಾಧ್ಯಕ್ಷ ಅಮ್ಮು ಪೂಂಜ, ಉಪಾಧ್ಯಕ್ಷೆ ಸುಮತಿ ಆಚಾರಿಮೂಲೆ, ಕೋಶಾಧಿಕಾರಿ ಇಬ್ರಾಹಿಂ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here