ಕಬಕ-ಕಂಬಳಬೆಟ್ಟು ಮಧ್ಯೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಟಾಚಾರಕ್ಕೆ ಮಾಡುವಂತಿದೆ -ರಮಾನಾಥ ವಿಟ್ಲ ಆರೋಪ

0

ವಿಟ್ಲ: ಕಬಕ – ಕಂಬಳಬೆಟ್ಟು ಮಧ್ಯೆ ನಡೆಯುತ್ತಿರುವ ರಸ್ತೆ ಡಾಮರೀಕರಣ ಸಮರ್ಪಕವಾಗಿ ನಡೆಯುತ್ತಿಲ್ಲ. ಮಾಡಿದ ಕಾಮಗಾರಿ ಮಳೆಗಾಲದಲ್ಲಿ ನಿಲ್ಲುವುದೇ ಅನುಮಾನ ಎಂಬಂತಿದೆ. ಅಡಿಪಾಯ ಸರಿಯಾಗದೆ ಮೇಲೆ ಎಷ್ಟು ಪದರ ಹಾಕಿದರೂ ಪ್ರಯೋಜನ ಇಲ್ಲ. ಪಟ್ಟಣ ಪಂಚಾಯತ್ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡುವ ಕಾರ್ಯ ಮಾಡುತ್ತೇವೆ ಎಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಚಂದಳಿಕೆಯ ಮುದೂರು ಭಾಗದಲ್ಲಿ ರಾಜಕಾಲುವೆಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದೆ. ಮಾರ್ಗವನ್ನು ಅತಿಕ್ರಮಣ ಮಾಡುವ ಕಾರ್ಯ ಮಾಡಲಾಗಿದೆ. ಖಾಸಗೀ ಜಾಗಕ್ಕೆ ಸಾರ್ವಜನಿಕ ಹಣದಲ್ಲಿ ಕಾಮಗಾರಿ ನಡೆಸುವ ಕಾರ್ಯ ಕಾನೂನಿಗೆ ವಿರುದ್ಧವಾದ ವಿಚಾರವಾಗಿದೆ ಎಂದು ಅವರು ಹೇಳಿದರು.

ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ. ಅಶ್ರಫ್ ಮಾತನಾಡಿ ನಗರೋತ್ಥಾನ ಯೋಜನೆಯ 5‌ ಕೋಟಿಯಲ್ಲಿ 4.25ಕೋಟಿಯ ಕಾಮಗಾರಿಯನ್ನು ಪಟ್ಟಣ ಪಂಚಾಯತ್ ನ 18 ವಾರ್ಡ್ ಗಳಲ್ಲಿ ಕೆಲವು ವಾರ್ಡ್‌ಗೆ ಮಾತ್ರ ಇಡುವ ಮೂಲಕ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಪುತ್ತೂರು ಶಾಸಕರಿಗೆ ಮನವಿಯನ್ನು ಮಾಡಿದ್ದರೂ, ಕ್ರಿಯಾ ಯೋಜನೆಯಲ್ಲಿ ನಾವು ಸೂಚಿಸಿದ್ದ, ಸಾರ್ವಜನಿಕರಿಗೆ ಅತೀ ಅಗತ್ಯವಿದ್ದ ಒಂದೇ ಒಂದು ಕಾಮಗಾರಿಗೂ ಅನುದಾನ ನೀಡಿಲ್ಲ. ಪಕ್ಷದ ಬೂತ್ ಅಧ್ಯಕ್ಷರ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುತ್ತಿರುವುದು, ಖಾಸಗೀ ಜಾಗಕ್ಕೆ ರಸ್ತೆ ನಿರ್ಮಾಣ ಮಾಡುವ ಕಾರ್ಯ ಮೇಗಿನಪೇಟೆ, ನಿಡ್ಯ, ಮುದೂರು, ಕಲ್ಲಕಟ್ಟ ಸೇರಿ ವಿವಿಧ ಭಾಗದಲ್ಲಿ ಆಗಿದೆ. ಪಂಚಾಯತ್ ಗೆ ಮುಂದೆ ಸ್ವಾಧೀನಕ್ಕೆ ಸಿಗದ ಜಾಗಕ್ಕೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಕಲ್ಲಕಟ್ಟ ಸೇರಿ ವಿವಿಧ ಅಣೆಕಟ್ಟುಗಳನ್ನು ಕಟ್ಟದ ಕಾರಣ ಪಟ್ಟಣ ಪಂಚಾಯತ್ ನ ವಿವಿಧ ಭಾಗದಲ್ಲಿ ನೀರಿನ ಅಭಾವ ತಲೆದೋರಿದೆ. ನೀರಿನ ವ್ಯವಸ್ಥೆಯನ್ನು ಸರಿಪಡಿಸುವ ಪರಿಸ್ಥಿತಿ ಇಲ್ಲದಂತಾಗಿದೆ. ಸರಿ ಮಾಡುವ ಬಗ್ಗೆ ಭರವಸೆಯನ್ನು ನೀಡಲಾಗುತ್ತಿದೆ ಹೊರತು ಯಾವುದೂ ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂದು ಅವರು ಆರೋಪಿಸಿದರು.

ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕುರುಂಬಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here