ಗುತ್ತಿಗೆದಾರರ ನಿರ್ಲಕ್ಷ್ಯ: ಸಮಸ್ಯೆಯ ಆಗರವಾದ ಜಲಜೀವನ್ ಮಿಷನ್ ಕಾಮಗಾರಿ

0

ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಆರೋಪ

ಉಪ್ಪಿನಂಗಡಿ: ಎಲ್ಲರಿಗೂ ಶುದ್ಧವಾದ ಕುಡಿಯುವ ನೀರು ಒದಗಿಸಬೇಕೆಂಬ ತುಡಿತದಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಲಜೀವನ್ ಮಿಷನ್ ಯೋಜನೆಯನ್ನು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಸಮಸ್ಯೆಯ ಆಗರವನ್ನಾಗಿಸಲಾಗಿದೆ ಎಂದು ಪಂಚಾಯತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಮಾ.14ರಂದು ನಡೆದ ಸಭೆಯಲ್ಲಿ, ಸುಡು ಬಿಸಿಲ ಬೇಗೆಯಲ್ಲಿ ನದಿ ದಡದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಸಿಲುಕುವ ಭೀತಿಯನ್ನು ಸದಸ್ಯರು ಪ್ರಸ್ತಾಪಿಸಿದಾಗ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿನ ಅವಾಂತರಗಳು ಪ್ರಸ್ತಾಪಿಸಲ್ಪಟ್ಟವು.

ಈ ವೇಳೆ, ಮೂರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಗೆ ಸಿಲುಕಿದ ಮಠ ಪರಿಸರದ ಜನರ ಬೇಡಿಕೆಯನ್ನು ಪಂಚಾಯತ್ ಗಮನಕ್ಕೆ ತಂದಾಗ ಪಂಚಾಯತ್ ಪಿಡಿಒ ರವರು ಅನುಚಿತವಾಗಿ ವರ್ತಿಸಿದರೆಂದು ಪಂಚಾಯತ್ ಸದಸ್ಯ ರಶೀದ್ ಆರೋಪ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಒ ರವರು, ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಿಸುವ ವೇಳೆ ಅಲ್ಲಿನ ಜನ ಕಾರ್ಮಿಕರ ಜೊತೆ ಸಂಘರ್ಷ ಮಾಡಿದ ಕಾರಣಕ್ಕೆ ಕಾರ್ಮಿಕರು ಕೆಲಸ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಜೆಜೆಎಂ ಯೋಜನೆಯ ಗುತ್ತಿಗೆದಾರ ಅಥವಾ ಅವರ ಅಧಿಕಾರಿಗಳಲ್ಲಿ ಮಾತನಾಡುವುದನ್ನು ಬಿಟ್ಟು ಪಂಚಾಯತ್ ಅಧಿಕಾರಿಗಳಲ್ಲಿ, ಸಿಬ್ಬಂದಿಗಳಲ್ಲಿ ಸಂಘರ್ಷ ಮಾಡಿದರೆ ಯಾವುದೇ ಪ್ರಯೋಜನವಾಗದು. ಸಮಸ್ಯೆ ತಲೆದೋರಿದ ದಿನ ಪಂಚಾಯತ್ ಸಿಬ್ಬಂದಿ ಬೇರೆ ಕಡೆಗಳಲ್ಲಿನ ಸಮಸ್ಯೆ ನಿವಾರಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ಕಾರಣಕ್ಕೆ ಸ್ಥಳಕ್ಕೆ ಭೇಟಿ ನೀಡುವಾಗ ವಿಳಂಬವಾಗಿತ್ತೆಂದು ತಿಳಿಸಿದರು.

ಜೆಜೆಎಂ ಯೋಜನೆಯ ಗುತ್ತಿಗೆದಾರರು ಎಲ್ಲೆಡೆ ಅರ್ಧಂಬರ್ಧ ಕಾಮಗಾರಿ ನಡೆಸಿ ಕಣ್ಮರೆಯಾಗುತ್ತಿರುವುದರಿಂದ ಯೋಜನಾಬದ್ಧವಾಗಿ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣೈಸಲು ಸೂಚನೆ ನೀಡಬೇಕೆಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಸಮಿತಿಯ ಅಧ್ಯಕ್ಷ ಸಂಜೀವ ಮಡಿವಾಳ ಅಗ್ರಹಿಸಿದರು.
ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ವೈಯಕ್ತಿಕ ದ್ವೇಷ ತೋರದೆ ತಕ್ಷಣವೇ ಸ್ಪಂದಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂದೂ ಅಗತ್ಯ ಬಿದ್ದರೆ ನೀರು ಸರಬರಾಜಿನ ಟ್ಯಾಂಕರ್ ಬಳಸಬೇಕೆಂದು ಸದಸ್ಯ ಲೋಕೇಶ್ ಬೆತ್ತೋಡಿ ಸಲಹೆ ನೀಡಿದರು.

ಪಂಚಾಯತ್ ಸದಸ್ಯರೆಂದ ಮಾತ್ರಕ್ಕೆ ಪಂಚಾಯತ್ ಅಧಿಕಾರಿಗಳನ್ನು ಹಾಗೂ ಪಂಚಾಯತ್ ಸಿಬ್ಬಂದಿಯನ್ನು ಸಾರ್ವಜನಿಕವಾಗಿ ಅವಮಾನಿಸಿ ಮಾತನಾಡುವ ನಡೆಯನ್ನು ಪ್ರದರ್ಶಿಸಬಾರದೆಂದು ಪಂಚಾಯತ್ ಸದಸ್ಯ ಧನಂಜಯ ನಟ್ಟಿಬೈಲು ಸಹ ಸದಸ್ಯರಲ್ಲಿ ವಿನಂತಿಸಿದರು.

ಪಂಚಾಯತ್ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಸುರೇಶ್ ಅತ್ರಮಜಲು, ಇಬ್ರಾಹೀಂ ಕೆ., ಅಬ್ದುಲ್ ರಹಿಮಾನ್, ಯು.ಟಿ. ತೌಸೀಫ್, ಇಬ್ರಾಹಿಂ ಮೈಸಿದ್, ವಿದ್ಯಾ ಲಕ್ಷ್ಮಿ ಪ್ರಭು, ಶೋಭಾ ದಯಾನಂದ್, ಜಯಂತಿ ರಂಗಾಜೆ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ಜ್ಯೋತಿ ವಂದಿಸಿದರು.

LEAVE A REPLY

Please enter your comment!
Please enter your name here