ಮೊಟ್ಟೆತ್ತಡ್ಕದಲ್ಲಿ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆ

0

ಬಿಜೆಪಿಗರದ್ದು ಭಾವನಾತ್ಮಕತೆಯ ವಿಷಬೀಜ ಬಿತ್ತುವ ಸಂಸ್ಕೃತಿ-ಡಾ|ಮಂಜುನಾಥ ಭಂಡಾರಿ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ರಾಜಪ್ರಭುತ್ವದಿಂದ ಪ್ರಜೆಗಳ ಪ್ರಭುತ್ವ ಆಗುವಂತೆ ಮಾಡಿದ್ದು ಕಾಂಗ್ರೆಸ್. ಬಿಜೆಪಿಯು ಜನರನ್ನು ವಿಭಾಗ ಮಾಡುವ ಪಕ್ಷವಾಗಿದೆ. ಬಿಜೆಪಿಗೆ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಜನರ ಮನಸ್ಸಿನಲ್ಲಿ ಭಾವಾನಾತ್ಮಕತೆಯ, ಕೋಮು ಪ್ರಚೋದನೆಯ, ಜಾತಿ-ಜಾತಿ ಮಧ್ಯೆ ವೈಷಮ್ಯದ ವಿಷಬೀಜ ಬಿತ್ತುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮುಗ್ಧ ಜನರ ಬಾಳನ್ನು ಹಾಳುಗೆಡಹುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡಿಯೂ ಸೋಲುವಂತಾಯಿತು ಎಂದು ವಿಧಾನ ಪರಿಷತ್ ಶಾಸಕ ಡಾ|ಮಂಜುನಾಥ ಭಂಡಾರಿರವರು ಹೇಳಿದರು.

ಮಾ.15 ರಂದು ಮೊಟ್ಟೆತ್ತಡ್ಕದಲ್ಲಿ ನಡೆದ ಕಾಂಗ್ರೆಸ್‌ನ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮುಖ್ಯ ಪ್ರಭಾಷಣ ಮಾಡಿದರು. ಪ್ರಜಾಧ್ವನಿ ಅಂದರೆ ಅದು ಪ್ರಜೆಗಳ ಧ್ವನಿ. ಜನರ ಸಮಸ್ಯೆಗಳೇನು, ಅದಕ್ಕೆ ಪರಿಹಾರವೇನು ಎಂದು ರಾಜ್ಯದ ನಾಯಕರು ಮೂಲೆ ಮೂಲೆಗೆ ಹೋಗಿ ಜನರ ಸಮಸ್ಯೆ ಆಲಿಸಿ, ಜನರಿಗೆ ಸೂಕ್ತ ಸ್ಪಂದನೆ ಕೊಡುವಲ್ಲಿ ಕಾರ್ಯೋನ್ಮುಖವಾಗಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಪ್ರಶ್ನೆ ಮಾಡುತ್ತಿದ್ದಾರೆ. ಉಳುವವನೇ ಒಡೆಯ, ನರೇಗಾ ಯೋಜನೆಯಲ್ಲಿ ಕೈ ತುಂಬಾ ಕೆಲಸ, ಬಿಜೆಪಿಗರ ತೋಟದಲ್ಲಿ ಉಚಿತ ಸ್ಪಿಂಕ್ಲರ್ ಕರೆಂಟ್ ಕೊಟ್ಟದ್ದು ಕಾಂಗ್ರೆಸ್ ಸ್ವಾಮಿ. ಸರಕಾರಿ ಸ್ವಾಮ್ಯದಲ್ಲಿದ್ದ ಒಂದೊಂದೇ ಸಂಸ್ಥೆಗಳನ್ನು ಮಾರುವ ಮೂಲಕ, ರೈತರ ಸಾಲ ಮನ್ನಾ ಮಾಡುವ ಬದಲು ಅದಾನಿ, ಅಂಬಾನಿ ಮುಂತಾದವರ ಸಾಲ ಮನ್ನಾ ಮಾಡಿರುವುದು ಬಿಜೆಪಿ ಪಕ್ಷವಾಗಿದೆ. ಅವರಿಗೆ ಬಡವರ ನೋವು ಬೇಡವಾಗಿದೆ ಎಂದ ಅವರು ಈ ಸರಕಾರದ ಸಿಎಂ, ಶಾಸಕ, ಮಂತ್ರಿಗಳಿಗೆ ಜನಸಾಮಾನ್ಯರ ಕೆಲಸವಾಗಲು ಕೋಟಿ, ಕೋಟಿ ಸುರಿಯಬೇಕು. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕ ವಿರೂಪಾಕ್ಷ ಮಾಡಾಳ್‌ರವರ ಮನೆಯಲ್ಲಿ ರೂ.8 ಕೋಟಿ ಹಣ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದು ಅಲ್ಲದೆ ಕೋರ್ಟ್‌ನಿಂದ ಶೀಘ್ರವಾಗಿ ಜಾಮೀನು ಕೊಡಿಸಿದ್ದು ಬಿಜೆಪಿಗರ ಅಭಿವೃದ್ಧಿ ಕಾರ್ಯವಾಗಿದೆ. ಆದರೂ ಸಿಎಂ ಕೇಳುತ್ತಿದ್ದಾರೆ, ಭ್ರಷ್ಟಾಚಾರ ಮಾಡಿದ್ದೇವೆ ಎನ್ನುವುದಕ್ಕೆ ಪುರಾವೆ ತನ್ನಿ ಅಂತ. ಇದಕ್ಕಿಂತಲೂ ಹೆಚ್ಚಿನ ಪುರಾವೆ ಬೇಕೇ? ಎಂದರು. 2014ರ ಮೊದಲು ಗ್ಯಾಸ್ ಬೆಲೆ ರೂ.450 ಇತ್ತು. ಪ್ರಧಾನಿ ಮೋದಿ ಬಂದ ಬಳಿಕ ಇಂದು ಗ್ಯಾಸಿಗೆ ರೂ.12೦೦ ಆಗಿದೆ. ಜನರು ಕಣ್ಣೀರು ಅಲ್ಲ ರಕ್ತದ ಕಣ್ಣೀರು ಸುರಿಸುತ್ತಿದ್ದಾರೆ. ಬೆಲೆಯೇರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ನಮಗೆ ಸ್ವಾಗತ, ಹಾರ, ಮಾಲೆ ಬೇಡ. ವರಿಷ್ಠರು ಕೊಟ್ಟ ಜನಪ್ರಿಯ ಕಾರ್ಯಕ್ರಮಗಳನ್ನು ಗ್ರಾಮ ಗ್ರಾಮಗಳಲ್ಲಿ, ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪಿಸುವಂತಹ ಕಾರ್ಯವಾಗಬೇಕಿದೆ. ಆಭ್ಯರ್ಥಿ ಯಾರೇ ಇರಲಿ, ಕಾಂಗ್ರೆಸ್ ಪಕ್ಷದ ‘ಕೈ’ ಚಿಹ್ನೆಗೆ ಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ದೇಶದಲ್ಲಿ, ಹಳ್ಳಿಗಳಲ್ಲಿ, ಊರಿನಲ್ಲಿ ಪ್ರತಿಯೋರ್ವರು ಸಹೋದರತ್ವದಿಂದ, ನೆಮ್ಮದಿಯಿಂದ, ಸುಖ-ಶಾಂತಿಯಿಂದ ಬಾಳುವಂತೆ ಆಗಬಲ್ಲುದು ಎಂದು ಅವರು ಹೇಳಿದರು.

ಯೋಜನೆಗಳು ಮಠಂದೂರುರವರ ಹೆಂಡತಿಗೂ ಸಿಗುತ್ತದೆ-ಶಕುಂತಳಾ ಶೆಟ್ಟಿ:
ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಏನೆಲ್ಲ ಇತ್ತು, ಅಂದು ಬಿಜೆಪಿಯಲ್ಲಿ ನಾನು ಸಮೇತ ಇದ್ದರೂ ಎಲ್ಲವನ್ನೂ ಕಾಂಗ್ರೆಸ್ ಪಕ್ಷವೇ ಮಾಡಿದ್ದು. ಬಿಜೆಪಿಗರದ್ದು ಸಾಧನೆ ಎಲ್ಲವನ್ನು ಮಾರುವುದು ಆಗಿದೆ. ಸಿದ್ಧರಾಮಯ್ಯರವರು ಧರ್ಮದ ಅಕ್ಕಿ ಕೊಟ್ಟರು. ಬಡವರು ಹೊಟ್ಟೆ ತುಂಬಿಸಿಕೊಳ್ಳಲು ಅತ್ಯಂತ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದರು. ಕೊರೋನಾ ಸಮಯದಲ್ಲಿ ಇದೇ ಇಂದಿರಾ ಕ್ಯಾಂಟೀನ್‌ನಿಂದ ಕೇವಲ ಎಂಟು ಊಟ ಪಾರ್ಸೆಲ್ ಹೋದ ಬಗ್ಗೆ ಇದೇ ಬಿಜೆಪಿಗರು ತನಿಖೆಗೆ ಆದೇಶ ಮಾಡಿದರು. ಬಿಜೆಪಿಗರು ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಹೇಳುವವರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಗುತ್ತದೆ. ಪ್ರಸ್ತುತ ಹೊರಡಿಸಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಮೂರು ಯೋಜನೆಗಳು ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರವಲ್ಲ, ಎಲ್ಲರಿಗೂ ಸಿಗಲಿದ್ದು ಮಠಂದೂರುರವರ ಹೆಂಡತಿಗೂ ಸಿಗುತ್ತದೆ. ದೇಶದಲ್ಲಿ, ವಿಶ್ವದಲ್ಲಿ ಶಾಂತಿ-ಸೌಹಾರ್ದತೆಯ ವಾತಾವರಣವಾಗಬೇಕಾದರೆ ಅದು ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯ ಎಂದರು.

ದೇವರ ಶಾಪ ಖಂಡಿತಾ ಈಶ್ವರಪ್ಪರವರಿಗೆ ತಟ್ಟುತ್ತದೆ-ಎಂ.ಎಸ್ ಮಹಮ್ಮದ್:
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಮಾತನಾಡಿ, ರಾಜ್ಯದಲ್ಲಿರುವುದು ಶೇ.40 ಪರ್ಸೆಂಟ್ ಕಮಿಷನ್ ಸರಕಾರ ಎಂಬುದು ಎಲ್ಲರಿಗೂ ತಿಳಿದಿದೆ. ಯಾವುದೇ ಇಲಾಖೆಯಲ್ಲಿನ ವಿಚಾರದಲ್ಲಿ ಕಮಿಷನ್ ತೆಗೆದುಕೊಂಡೇ ಕೆಲಸ ಮಾಡೋದು. ಅದು ನೇಮಕಾತಿ, ವರ್ಗಾವಣೆ, ಕಾಮಗಾರಿ ಇರಲಿ ಎಲ್ಲಾ ಕಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಂತಹ ದುಷ್ಟ, ಭ್ರಷ್ಟ, ಆಡಳಿತ ವೈಫಲ್ಯ ಸರಕಾರ ಬಿಜೆಪಿ ಆಗಿದೆ. ಸಿದ್ಧರಾಮಯ್ಯರವರ ಅಭಿವೃದ್ಧಿಯ ಅನುದಾನ ಕಡಿತ ಮಾಡಿದ ದರಿದ್ರ ಸರಕಾರ ಇದಾಗಿದೆ. ಐಶಾರಾಮಿ ಜೀವನ ನಡೆಸುವ ಈ ಬಿಜೆಪಿಗೆ ಬಡವರ ಬವಣೆ ಹೇಗೆ ಅರ್ಥವಾದೀತು. ಅಜಾನ್ ಹೊರಡಿಸುವ ಮೈಕ್, ಯಾಕೆ ಅಲ್ಲಾಹನಿಗೆ ಕಿವಿ ಕೇಳಿಸುವುದಿಲ್ವೇ ಅಂತ ಈಶ್ವರಪ್ಪರವರು ಹೇಳುತ್ತಾರೆ. ನೋಡಿ ಸ್ವಾಮಿ, ಅಲ್ಲಾಹ ಕೂಡ ದೇವರು. ದೇವರು ಎಲ್ಲರಿಗೂ ಒಂದೇ. ನೀವು ದೇವರಿಗೆ ಕಿವಿ ಕೇಳುವುದಿಲ್ವ ಅಂತ ಹೇಳಿದ್ದೀರಿ, ದೇವರ ಶಾಪ ನಿಮಗೆ ಖಂಡಿತಾ ತಟ್ಟುತ್ತದೆ. ರಸ್ತೆ, ನೀರು ಎಂಬ ಮೂಲಭೂತ ಸೌಕರ್ಯಗಳ ಬಗ್ಗೆ ಯಾಕೆ ಮಾತನಾಡುತ್ತೀರಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಟೀಲ್ ರವರು ಹೇಳುತ್ತಾರೆ. ಜನರು ಭವಿಷ್ಯದಲ್ಲಿ ನೆಮ್ಮದಿಯ, ಅಭಿಮಾನದ, ಸೌಹಾರ್ದತೆಯ ಬದುಕು ಕಾಣಬೇಕಾದರೆ ಕಾಂಗ್ರೆಸ್ ಪಕ್ಷವು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ವಿಷಬೀಜ ಬಿತ್ತುವ ಈ ಬಿಜೆಪಿ ಪಕ್ಷವನ್ನು ಒದ್ದೋಡಿಸಬೇಕು ಎಂದರು.

ಸೀಟು ಯಾರಿಗೂ ನೀಡಲಿ, 14 ಮಂದಿ ಆಕಾಂಕ್ಷಿಗಳು ಪಕ್ಷದ ಗೆಲುವಿಗೆ ದುಡಿಯುತ್ತೇವೆ-ಅಶೋಕ್ ರೈ:
ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಅವರದ್ದೇ ಆದ ಮತದಾರರಿದ್ದಾರೆ. ಕೇವಲ ಶೇ.20 ಮತದಾರರು ಮಾತ್ರ ಯಾವ ಪಕ್ಷ ಒಳಿತು ಮಾಡುತ್ತದೆ ಎಂದು ತಿಳಿದು ವೋಟಿಂಗ್ ಮಾಡುವವರು. ನಾನು ನನ್ನ ಟ್ರಸ್ಟ್ ಮುಖಾಂತರ ಸುಮಾರು 22 ಸಾವಿರ ಮಂದಿ ಫಲಾನುಭವಿಗಳಿಗೆ ಯಾವುದೇ ಜಾತಿ-ಧರ್ಮ ನೋಡದೆ ಸಹಾಯಹಸ್ತ ಚಾಚಿದ್ದೇನೆ. ನಾವು 14 ಮಂದಿ ಶಾಸಕ ಸ್ಥಾನಕ್ಕೆ ಆಕಾಂಕ್ಷಿಗಳಿದ್ದರೂ, ಹೈಕಮಾಂಡ್ ಯಾರಿಗೇ ಸೀಟು ನೀಡಲಿ, ಎಲ್ಲರೂ ಪಕ್ಷದ ಗೆಲುವಿಗೆ ದುಡಿಯುತ್ತೇವೆ. ಟಿಕೆಟ್ ಸಿಗದಿದ್ದವರಲ್ಲಿ ಅದು ಅಶೋಕ್ ರೈ ಕೂಡ ಆಗಲಿ, ಯಾರೇ ಆಗಲಿ, ಉಲ್ಟಾ ಹೊಡೆದರೆ ಕಾರ್ಯಕರ್ತರು ಧಿಕ್ಕಾರ ಕೂಗಬಹುದು. ಕಾಂಗ್ರೆಸ್ ಪಕ್ಷ ಅಧಿಕಾರ ಬಂದ್ರೆ ಅದು 94ಸಿ ಆಗಲಿ ಅಥವಾ ಇನ್ನಿತರ ಕೆಲಸಗಳಿರಲಿ ಚಿಕ್ಕಾಸೂ ತಗೋಳದೆ ನ್ಯಾಯ, ಧರ್ಮ, ನೀತಿಯಿಂದ ಕೆಲಸ ಮಾಡಿ ತೋರಿಸುತ್ತೇವೆ. ಬಿಜೆಪಿ ಪಕ್ಷದವರು ಮಾಡದ್ದನ್ನು ನಾವು ಮಾಡಿ ತೋರಿಸುತ್ತೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ ವಂದೇಮಾತರಂ ಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದಾಲಿ ಸ್ವಾಗತಿಸಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ವಂದಿಸಿದರು.

ಕೆಪಿಸಿಸಿ ಸದಸ್ಯ, ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಕಾರ್ಯದರ್ಶಿ ಕೃಪಾ ಆಮರ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಬಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಖಂಡೆ ಆಸ್ಮಾ ಗಟ್ಟಿಮನೆ, ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ಕೆಮ್ಮಿಂಜೆ ವಲಯ ಅಧ್ಯಕ್ಷೆ ಮಾಲಾ ಸುಬ್ಬು ಸಿಂಗ್, ಕೆಪಿಸಿಸಿ ಸಂಯೋಜಕ ಚಂದ್ರಹಾಸ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ಅಂಕೋತ್ತಿಮಾರ್, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಸುಧಾ ಕುಂಜತ್ತಾಯ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್ ಶಕೂರ್ ಹಾಜಿ, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾಯಿರಾ ಝುಬೇರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ವಿಜಯಲಕ್ಷ್ಮೀ ಕೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀತಾ ಉದಯಶಂಕರ್ ಭಟ್, ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ, ಜಿಲ್ಲಾ ಪ್ರಚಾರ ಸಮಿತಿ ಸದಸ್ಯೆ ಕೃಷ್ಣಪ್ರಸಾದ್ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮಹಾಬಲ ರೈ ವಳತ್ತಡ್ಕ ಹಾಗೂ ಯಾಕೂಬ್ ಮುಲಾರ್, ಬ್ಲಾಕ್ ಕಾರ್ಯದರ್ಶಿ ರಾಮಚಂದ್ರ, ನಗರಸಭಾ ಸದಸ್ಯರಾದ ರಿಯಾಜ್, ಯೂಸುಫ್ ಡ್ರೀಮ್ಸ್, ಯಂಗ್ ಬ್ರಿಗೇಡ್ ಪದಾಧಿಕಾರಿಗಳಾದ ಶರೀಪ್ಫ್ ಬಲ್ನಾಡು, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಂತ್ ನಗರ, ಸಿನಾನ್ ಪರ್ಲಡ್ಕ, ಎನ್‌ಎಸ್‌ಯುಐ ಪುತ್ತೂರು ಬ್ಲಾಕ್ ಅಧ್ಯಕ್ಷ ಚಿರಾಗ್ ರೈ, ಬ್ಲಾಕ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಪರ್ಲಡ್ಕ ನಗರ ಕಾಂಗ್ರೆಸ್ ಪದಾದಿಕಾರಿಗಳಾದ ದಾಮೋದರ್ ಭಂಡಾರ‍್ಕರ್, ವಿಕ್ಟರ್ ಪಾಯಿಸ್, ರಶೀದ್ ಮುರ, ಮುಖೇಶ್ ಕೆಮ್ಮಿಂಜೆ, ಸುರೇಶ್ ಪೂಜಾರಿ, ಸುರೇಂದ್ರ ಎ, ಹಮೀದ್, ಜಮಾಲ್, ರಝಾಕ್ ಆರ್.ಪಿ ಪಡೀಲ್, ಕಾರ್ಯಕ್ರಮದ ಉಸ್ತುವಾರಿಗಳಾದ ರಫೀಕ್ ಎಂ.ಕೆ, ಅಬ್ದುಲ್ಲ ಕೆ, ರೊನಾಲ್ಡ್ ಮೊಂತೇರೊ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು.

ಪ್ರತಿ ಮನೆಗೆ ವರ್ಷಕ್ಕೆ ರೂ.55200 ಲಾಭ..
ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದರೆ ಈಗಾಗಲೇ ಪಕ್ಷ ಘೋಷಿಸಿದಂತೆ ಗೃಹಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ತಿಂಗಳು ಪ್ರತಿ ಮನೆಯ ಯಜಮಾನಿಗೆ ರೂ.2000 ಖಚಿತ(ಇದರಲ್ಲಿ ಗ್ಯಾಸ್ ಸಿಲಿಂಡರ್‌ಗೆ ರೂ.500, ಜಿಎಸ್‌ಟಿ ಪರಿಹಾರಕ್ಕೆ ರೂ.500, ಬೆಲೆಯೇರಿಕೆಯ ಪರಿಹಾರಕ್ಕೆ ರೂ.1000 ಒಳಗೊಂಡಿದೆ) ಮತ್ತು ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ನೀಡಲಾಗುತ್ತದೆ. ಮೋದಿಯವರ ಗ್ಯಾಸ್ ಬೆಲೆಯೇರಿಕೆ, ಅಗತ್ಯ ವಸ್ತುಗಳ ಬೆಲೆಯೇರಿಕೆ, ಪೆಟ್ರೋಲ್/ಡೀಸೆಲ್ ಬೆಲೆಯೇರಿಕೆಯ ‘ಅಚ್ಛೇದಿನ್’ನಿಂದ ಜನಸಾಮಾನ್ಯರು ರೋಸಿಹೋಗಿದ್ದು ಇನ್ನು ಮುಂದೆ ಕಾಂಗ್ರೆಸ್ ಸರಕಾರ ಪ್ರತಿ ಮನೆಗೆ ವರ್ಷಕ್ಕೆ ರೂ.55200 ಹಣಕಾಸಿನ ನೆರವು ನೀಡುವ ಮೂಲಕ ನಿಜಕ್ಕೂ ಕಾಂಗ್ರೆಸ್‌ನಿಂದ ಅಚ್ಛೇದಿನ್ ಆಗಮಿಸಲಿದೆ.
-ಡಾ|ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಶಾಸಕರು

ಅದೃಷ್ಟ ಲಕ್ಷ್ಮೀ ಡ್ರಾ..
ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ವತಿಯಿಂದ ಮಾ.10 ರಿಂದ 12ರ ವರೆಗೆ ಕಿಲ್ಲೆ ಮೈದಾನದಲ್ಲಿ ಏರ್ಪಡಿಸಿದ 32 ತಂಡಗಳ ಗ್ರಾಮ ಗ್ರಾಮಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ, ರಕ್ತದಾನ ಶಿಬಿರದ ಜೊತೆಗೆ ಮಹಿಳೆಯರಿಗೆ ಮಾತ್ರ ಏರ್ಪಡಿಸಲಾದ ಅರ್ಧ ಪವನ್ ಚಿನ್ನದ ಉಂಗುರ ಬಹುಮಾನವನ್ನೊಳಗೊಂಡ ‘ಅದೃಷ್ಟ ಲಕ್ಷ್ಮೀ’ ಕೂಪನ್ ಡ್ರಾದಲ್ಲಿ ಮೊಟ್ಟೆತ್ತಡ್ಕದ ಅಲೀಮಾ ಎಂಬ ಮಹಿಳೆಯು ವಿಜೇತರಾಗಿದ್ದು, ವಿಜೇತೆಗೆ ಬಹುಮಾನವನ್ನು ಹಸ್ತಾಂತರಿಸಲಾಯಿತು.

ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪಕ್ಷ ಘೋಷಿಸಿರುವ ಅಂಶಗಳು..

  • -ಉದ್ಯೋಗ, ಹೂಡಿಕೆ, ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೇಲ್ದರ್ಜೆಗೇರಿಸಿ ರೂ.2500 ಕೋಟಿ ವಾರ್ಷಿಕ ಬಜೆಟ್
  • -ಮಂಗಳೂರಿನಲ್ಲಿ ಐಟಿ ಮತ್ತು ಗಾರ್ಮೆಂಟ್ ಇಂಡಸ್ಟ್ರೀ ಪಾರ್ಕ್ ಸ್ಥಾಪನೆ ಜೊತೆಗೆ 1 ಲಕ್ಷ ಉದ್ಯೋಗ ಸೃಷ್ಟಿ
  • -ಪ್ರತಿ ಮೀನುಗಾರರಿಗೆ ತಲಾ ರೂ.10 ಲಕ್ಷ ಮೊತ್ತದ ವಿಮಾ ಯೋಜನೆ
  • -ಮೀನುಗಾರ ಮಹಿಳೆಯರಿಗೆ ರೂ.1ಲಕ್ಷ ತನಕ ಬಡ್ಡಿರಹಿತ ಸಾಲ
  • -ಮೀನುಗಾರಿಕೆ ದೋಣಿಗಳನ್ನು ಖರೀದಿಸಲು ಶೇ.25 ಸಬ್ಸಿಡಿಯೊಂದಿಗೆ 25 ಲಕ್ಷ ರೂ.ವರೆಗೆ ಸಾಲ
  • -ಡೀಸೆಲ್ ಮೇಲಿನ ಸಬ್ಸಿಡಿಯನ್ನು ಲೀ.ಗೆ ರೂ.10.70 ನಿಂದ ರೂ.25ಕ್ಕೆ ಹೆಚ್ಚಳ, ದಿನಕ್ಕೆ 300ಲೀ.ನಿಂದ 500ರೂ.ವರೆಗೆ ಸಾಲ
  • -ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ, ಬಂಟ್ಸ್ ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ ರೂ.250 ಕೋಟಿಯಂತೆ ಐದು ವರ್ಷಗಳಲ್ಲಿ ರೂ.1250 ಕೋಟಿ ಅನುದಾನ
  • -2013ರಲ್ಲಿ ಆರಂಭಿಸಿದ್ದ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗೆ ಮೀಸಲಿಟ್ಟಿದ್ದ ರೂ.3150 ಕೋಟಿ ಮೊತ್ತದ ಯೋಜನೆ ಮರು ಸ್ಥಾಪನೆ
  • -ಹಳದಿ ರೋಗದಿಂದ ಬಾಧಿತರಾಗಿರುವ ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ರೂ.50 ಕೋಟಿ ಮಂಜೂರು
  • -ಪ್ರತಿ ಗ್ರಾಮ ಪಂಚಾಯತಿನಲ್ಲಿ ಸ್ವಾಮಿ ವಿವೇಕಾನಂದ ಕೋಮು ಮತ್ತು ಸಾಮಾಜಿಕ ಸಾಮರಸ್ಯ ಸಮಿತಿ
  • -ರಾಜ್ಯದ ಎಲ್ಲಾ ಸೂಕ್ಷ್ಮ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ವಾರ್ಷಿಕ ರೂ.250 ಕೋಟಿ ಅಂದರೆ 5 ವರ್ಷಗಳಲ್ಲಿ ರೂ.1250 ಕೋಟಿ ಮೀಸಲಿಡುವುದು
  • -ವಂಚಿತ ಸಮುದಾಯಗಳಿಗೆ ಆದ್ಯತೆ ಮೇರೆಗೆ ಡಿಸಿ ಮನ್ನಾಲ್ಯಾಂಡ್ ವಿತರಿಸುವುದು.
  • -ಅಲ್ಪಸಂಖ್ಯಾತರ ಅಭಿವೃದ್ಧಿ ಅನುದಾನದೊಳಗೆ ಬ್ಯಾರಿ, ಕ್ರಿಶ್ಚಿಯನ್ ಮತ್ತು ಜೈನ ಸಮುದಾಯಗಳಿಗೆ ಅವರ ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯಗಳನ್ನು ಪರಿಗಣಿಸಿ ಪ್ರತ್ಯೇಕ ಕೋಟಾವನ್ನು ಒದಗಿಸಲು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುವುದು.

LEAVE A REPLY

Please enter your comment!
Please enter your name here