ಕಟ್‌ಕನ್ವರ್ಷನ್ ಸಮಸ್ಯೆಯ ನಡುವೆ ನಗರಯೋಜನಾ ಪ್ರಾಧಿಕಾರ ವ್ಯಾಪ್ತಿ ವಿಸ್ತರಣೆ

0

ಜನರ ಹಿತ ಕಾಯುವಲ್ಲಿ ಶಾಸಕ ಸಂಜೀವ ಮಠಂದೂರು ಸಂಪೂರ್ಣ ವಿಫಲ:ಎಚ್‌ ಮಹಮ್ಮದ್ ಆಲಿ


ಪುತ್ತೂರು: ಪುಡಾ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಕಟ್‌ಕನ್ವರ್ಷನ್ ನಿಯಮದಿಂದ ಜನ ಸಂಕಷ್ಟದಲ್ಲಿರುವುದರ ಮಧ್ಯೆ ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯನ್ನು ಗ್ರಾಮಗಳಿಗೂ ವಿಸ್ತರಣೆ ಮಾಡುವ ಮೂಲಕ ಇನ್ನಷ್ಟು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ, ಜನರ ಹಿತ ಕಾಯುವಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಮಹಮ್ಮದ್‌ ಆಲಿ ಆರೋಪಿಸಿದ್ದಾರೆ.


ಅವರು ಮಾ.17ರಂದು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಹಿಂದೆ ಪುತ್ತೂರು ನಗರಸಭಾ ವ್ಯಾಪ್ತಿಗೆ ಮಾತ್ರ ಪ್ರಾಧಿಕಾರದ ವ್ಯಾಪ್ತಿಯೂ ಸೀಮಿತವಾಗಿತ್ತು. ಪ್ರಾಧಿಕಾರದ ಬಡಾವಣೆ ನಿಯಮಾವಳಿ, ಕಟ್ ಕನ್ವರ್ಷನ್, ಏಕ ನಿವೇಶನ ಇನ್ನಿತರ ಕಾರಣದಿಂದಾಗಿ ನಗರ ಸಭಾ ವ್ಯಾಪ್ತಿಯ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 6ಸಾವಿರ ಅರ್ಜಿಗಳು ಏಕ ನಿವೇಶನ ಸಮಸ್ಯೆಯಿಂದ ವಿಲೇವಾರಿಯಾಗದೆ ಬಾಕಿಯಾಗಿದೆ. ಹಿಂದೆಲ್ಲಾ ಪಹಣಿ ಪತ್ರ ನೀಡಿ ನಿರ್ಮಾಣ ಕಾರ್ಯಗಳಿಗೆ ಅನುಮತಿ ಪಡೆಯಲು ಸಾಧ್ಯವಿತ್ತು. ಇದೀಗ ಅದಕ್ಕೆ ಅವಕಾಶಗಳಿಲ್ಲ. ಕರಾವಳಿ ಭಾಗಕ್ಕೆ ಮಾತ್ರ ಈ ಸಮಸ್ಯೆ ಬಾಧಿಸುತ್ತಿದೆ. ಶಾಸಕರಿಗೆ ಈ ಬಗ್ಗೆ ಗೊತ್ತಿದ್ದರೂ ಇದೀಗ ಮತ್ತೆ ಪ್ರಾಧಿಕಾರವನ್ನು ಈ ಹಿಂದೆ ನಗರ ಸಭೆಗೆ ವಿಸ್ತರಣೆಗೊಂಡಿದ್ದ ಕಬಕ, ಪಡ್ನೂರು, ಬನ್ನೂರು, ಚಿಕ್ಕಮುಡ್ನೂರು, ಕೆಮ್ಮಿಂಜೆ, ಆರ್ಯಾಪು ಮತ್ತು ಬಲ್ನಾಡು ಸೇರಿದಂತೆ ಬಂಟ್ವಾಳ ತಾಲೂಕಿನ ಕುಳ, ಇಡ್ಕಿದು, ನೆಟ್ಲ ಮುಡ್ನೂರು ಗ್ರಾಮಗಳಿಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶಿಸಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೂ ಕಟ್ ಕನ್ವರ್ಷನ್, ಏಕ ನಿವೇಶನ ಸಮಸ್ಯೆ ಉಂಟಾಗಲಿದೆ.
ಪುತ್ತೂರು ಶಾಸಕರ ಶಿಫಾರಸ್ಸಿನಂತೆ ಸರ್ಕಾರವು ಈ ಭಾಗವನ್ನು ಸೇರ್ಪಡೆಗೊಳಿಸಿದೆ. ಶಾಸಕರು ಜನರಿಗೆ ತೊಂದರೆ ನೀಡಲೆಂದೇ ಈ ಶಿಫಾರಸ್ಸು ಮಾಡಿದ್ದಾರೆ. ರಾಜ್ಯ ಸರ್ಕಾರ 2023 ಫೆಬ್ರವರಿ 4 ರಂದು ಈ ಆದೇಶ ನೀಡಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಸರ್ಕಾರವು ಈ ಆದೇಶವನ್ನು ತಕ್ಷಣ ರದ್ದು ಮಾಡಬೇಕು ಹಾಗೂ ನಗರಸಭಾ ವ್ಯಾಪ್ತಿಯಲ್ಲಿ 25 ಸೆಂಟ್ಸ್‌ಗಿಂತ ಕಡಿಮೆ ಜಮೀನು ಹೊಂದಿದವರಿಗೆ ಕಟ್ಟಡ ನಿರ್ಮಾಣಕ್ಕೆ ಕಟ್ ಕನ್ವರ್ಷನ್ ಮತ್ತು ಏಕ ನಿವೇಶನ ವ್ಯವಸ್ಥೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಶಾಸಕರು ಮನಸ್ಸು ಮಾಡಿದ್ದರೆ ಕಟ್ ಕನ್ವರ್ಷನ್ ನಿಯಮವನ್ನು ಸರಕಾರಕ್ಕೆ ಒತ್ತಾಯ ಮಾಡುವ ಮೂಲಕ ರದ್ದುಮಾಡಬಹುದಿತ್ತು ಆದರೆ ಜನರ ಹಿತ ಬಯಸದ ಶಾಸಕರು ಸಮಸ್ಯೆಯನ್ನು ಇನ್ನೂ ಹೆಚ್ಚಿನ ಮಂದಿಗೆ ಹರಡುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪುಡಾ ವ್ಯಾಪ್ತಿಗೊಳಪಡುವ ವ್ಯಾಪ್ತಿಗಳಲ್ಲಿ ಕಟ್ ಕನ್ವರ್ಷನ್ ಮಾಡಿದರೆ ಮನೆ ಕಟ್ಟಲು ಪುಡಾದಿಂದ ಪರವಾನಿಗೆ ದೊರೆಯುವುದೇ ಇಲ್ಲ. ಪರವಾನಿಗೆ ದೊರೆಯದೆ ಅನೇಕ ಮನೆಗಳ ಕಾಮಗಾರಿ ಅರ್ಧದಲ್ಲೇ ಇದೆ. ಕಟ್ ಕನ್ವರ್ಷನ್ ಸಮಸ್ಯೆ ಜನತೆಗೆ ಗೊತ್ತಾಗಬೇಕಾದರೆ ಮನೆ ಕಟ್ಟುವ ಕೆಲಸ ಆರಂಭಿಸಬೇಕು. ಈ ನಿಯಮಾವಳಿ ಜನವಿರೋಧಿಯಾಗಿದೆ ಸರಕಾರ ಕೂಡಲೇ ಅದನ್ನು ರದ್ದುಮಾಡುವ ಮೂಲಕ ಜನರನ್ನು ಸಮಸ್ಯೆಯಿಂದ ಪಾರು ಮಾಡಬೇಕು ಎಂದು ಆಲಿ ಅಗ್ರಹಿಸಿದರು.


ಸುದ್ಧಿಗೋಷ್ಟಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಮುಕೇಶ್ ಕೆಮ್ಮಿಂಜೆ, ದಿನೇಶ್ ಕಾಮತ್ ಸಾಮೆತಡ್ಕ ಮತ್ತು ಮಂಜುನಾಥ್ ಕೆಮ್ಮಾಯಿ ಇದ್ದರು.

LEAVE A REPLY

Please enter your comment!
Please enter your name here