ಪುತ್ತೂರು: ಬಡಗನ್ನೂರು ಗ್ರಾಮದ ನೂಚಿಲೋಡು ಶ್ರೀ ಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮಾ. 17 ರಂದು ಮಧ್ಯಾಹ್ನ ನಡೆಯಿತು.
ಆಶೀರ್ವಚನ ನೀಡಿ ಮಾತನಾಡಿದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ‘ಧರ್ಮ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂಬ ವಿಶ್ವಾಸ, ಮನಸ್ಸಿನ ಭಾವನೆ ಇದ್ದಾಗ ಮಾತ್ರ ನಮ್ಮೆಲ್ಲಾ ಕಾರ್ಯಗಳು ಸಿದ್ದಿಯಾಗುತ್ತದೆ. ಪೂರ್ವಜರು ತಂದಿರುವ ಆಚರಣೆ ಪದ್ದತಿಗಳನ್ನು ಅನುಷ್ಠಾನ ಮಾಡುವ ಸತ್ಕರ್ಮವನ್ನು ನಾವು ಮಾಡಬೇಕು. ನಮ್ಮ ಆಚರಣೆ, ಅನುಷ್ಠಾನಗಳು, ಧಾರ್ಮಿಕ ನಂಬಿಕೆಗಳು ನಮ್ಮ ಧರ್ಮವನ್ನು ವಿರೋಧಿಸಿದವರಿಗೆ ಯಶಸ್ಸು ಕಾಣಿಸಿಲ್ಲ. ಇಲ್ಲಿನ ಸಾನ್ನಿಧ್ಯದ ವೃದ್ಧಿ ಮಾಡಿರುವುದರಿಂದ ಸಮಸ್ತರಿಗೂ ಇದರ ಶುಭಫಲ ಪ್ರಾಪ್ತವಾಗಲಿ ಎಂದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ‘ಪ್ರಕೃತಿಯಲ್ಲಿ ಭಗವಂತನನ್ನು ಕಾಣುವ ಸಮಾಜ ನಮ್ಮದು. ಕಲೆ, ಭಜನೆಯಲ್ಲಿ ದೇವರನ್ನು ಆರಾಧಿಸುವ ಸಂಸ್ಕೃತಿ ನಮ್ಮದು. ದೇವರು, ದೈವಗಳ ನಂಬಿಕೆಯ ಆಧಾರದಲ್ಲಿ ಜೀವನ ಪದ್ದತಿ, ಸಹಬಾಳ್ವೆ ಇದೆ. ಸಮಾಜದ ಮೇಲು ಕೀಳನ್ನು ಹೋಗಲಾಡಿಸುವ ಸಂದೇಶವೂ ಭೂತಾರಾಧನೆಯಲ್ಲಿದೆ’ ಎಂದರು.
ಸನ್ಮಾನ
ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಬ್ರಹ್ಮಕಲಶೋತ್ವವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಹಾಗೂ ಕ್ಷೇತ್ರದ ಅಭಿವೃದ್ಧಿ ಯಲ್ಲಿ ತೊಡಗಿಸಿಕೊಂಡ ಸುಧಾಕರ ಶೆಟ್ಟಿ ಮಂಗಳಾದೇವಿ, ದೈವಜ್ಞ ನವನೀತಪ್ರಿಯ ಕೈಪಂಗಳ, ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ ರವರ ಪರವಾಗಿ ಶ್ರೀಧರ ಮೇಸ್ತ್ರಿ ಇವರುಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಯಜಮಾನರು ಶ್ರೀಮತಿ ವಿಶಾಲಾಕ್ಷಿ ಅಮ್ಮ ನೂಚಿಲೋಡು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದುಕೂಡ್ಲು ಶ್ರೀನಿವಾಸ ಭಟ್ ರವರು ‘ಮನೆತನದ ಅವಿನಾಭವ ಸಂಬಂಧ ಮುಂದುವರಿಯಲಿ. ಇಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಶ್ರೀ ದೈವ ಅನುಗ್ರಹಿಸಲಿ ಎಂದರು.
ಭಜನಾ ಸೇವೆ ನಡೆಸಿಕೊಟ್ಟ ಪೆರಿಗೇರಿಯ ಅಯ್ಯಪ್ಪ ಭಜನಾ ಮಂಡಳಿ, ಶ್ರೀನಿವಾಸ ಗೌಡ ಕನ್ನಯ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪುಟಾಣಿಗಳಾದ ಪೂರ್ವಿ, ಶಾನ್ವಿ ಹಾಗೂ ತನ್ವಿ ಪ್ರಾರ್ಥಿಸಿದರು. ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯ ಸಂಚಾಲಕ ಮಹದೇವ ಭಟ್ ಕೊಲ್ಯ ಸ್ವಾಗತಿಸಿ, ನಾಗರಾಜ ಭಟ್ ಕನ್ನಡ್ಕ ವಂದಿಸಿದರು.
ವಿನಯ ಭಟ್ ದಂಪತಿ ತಂತ್ರಿಗಳನ್ನು ಗೌರವಿಸಿದರು. ವಿನಯ ಕುಮಾರ್ ಮತ್ತು ಮಕ್ಕಳು ಅತಿಥಿಗಳನ್ನು ಗೌರವಿಸಿದರು. ಶಿವಶಂಕರ ಭಟ್ ಕನ್ನಡ್ಕ ಕಾರ್ಯಕ್ರಮ ನಿರೂಪಿಸಿದರು.
ಊರ ಪರವೂರ ಭಕ್ತಾಭಿಮಾನಿಗಳು, ನೂಚಿಲೋಡು ಕುಟುಂಬಿಕರು ಪಾಲ್ಗೊಂಡು ದೈವದ ಪ್ರಸಾದ ಸ್ವೀಕರಿಸಿದರು.
ಬೆಳಿಗ್ಗೆ ಗಂಟೆ 10.54 ರಿಂದ 11.40 ರ ಒಳಗಿನ ವೃಷಭ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಠೆ ಯು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ಮಧ್ಯಾಹ್ನ ಪ್ರಸಾದ ಭೋಜನ ನಡೆಯಿತು.
ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಶೇಷನ್ ನೇತೃತ್ವದಲ್ಲಿ ಅಲಂತಡ್ಕ ವನಶಾಸ್ತಾರ ಭಜನಾ ತಂಡದ ಸದಸ್ಯರಿಂದ ಕುಣಿತ ಭಜನೆ ,ರಾತ್ರಿ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ ಜರಗಿತು.