ದಶಕಗಳ ಬೇಡಿಕೆಗೆ ಸ್ಪಂದನೆ-ಗ್ರಾಮೀಣ ಭಾಗದಲ್ಲಿ ಸಿಗಲಿದೆ 24×7 ಆರೋಗ್ಯ ಸೇವೆ -ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ`ಸಮುದಾಯ ಆರೋಗ್ಯ ಕೇಂದ್ರ’ ವಾಗಿ ಮೇಲ್ದರ್ಜೆಗೆ

0

ಪುತ್ತೂರು: ಕರ್ನಾಟಕ ಮತ್ತು ಕೇರಳ ಗಡಿಭಾಗದ ಪಾಣಾಜೆ ಕೇಂದ್ರೀಕೃತವಾಗಿ ಗ್ರಾಮೀಣ ಭಾಗದ ಜನರ ಆರೋಗ್ಯ ಕ್ಷೇತ್ರದಲ್ಲಿನ ಅನೇಕ ವರ್ಷಗಳ ಸಮಸ್ಯೆ ದೂರವಾಗುವ ಕಾಲ ಸನ್ನಿಹಿತವಾಗಿದೆ. ಸಾರ್ವಜನಿಕರ ಅನೇಕ ವರ್ಷಗಳ ಕಣ್ಣೀರನ್ನು ರಾಜ್ಯ ಸರ್ಕಾರ ಒರೆಸುವ ಹಂತದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ರಾಜ್ಯದ 38 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮಾಡಲು ಆದೇಶ ಹೊರಡಿಸಲಾಗಿದೆ. ಇವುಗಳ ಪೈಕಿ ಸುಮಾರು 12.4 ಕೋಟಿ ರೂ. ವೆಚ್ಚದಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆಯಾಗುವಲ್ಲಿ ಶಾಸಕ ಸಂಜೀವ ಮಠಂದೂರುರವರ ಪ್ರಯತ್ನ ಸಫಲತೆ ಕಂಡಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರ ಕಾಮಗಾರಿಗಳು ಆರಂಭಗೊಳ್ಳಲಿವೆ.


ಸದ್ಯ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಓರ್ವ ನಿಯೋಜಿತ ವೈದ್ಯರಿದ್ದಾರೆ. ಸಣ್ಣ ಪುಟ್ಟ ರೋಗಗಳಿಗೆ ಅವರೇ ಚಿಕಿತ್ಸೆ ನೀಡುತ್ತಾರೆ. ಆದರೆ ಇಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸುತ್ತಾರೆ. ಮುಂದೆ ಇಂತಹ ಸಮಸ್ಯೆ ಎದುರಾಗಲ್ಲ. ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ವೈದ್ಯಾಧಿಕಾರಿ, ಅರಿವಳಿಕೆ ತಜ್ಞರು, ಸ್ತ್ರೀರೋಗ ತಜ್ಞರು, ದಂತ ವೈದ್ಯರು, ಮಕ್ಕಳ ತಜ್ಞರು ಮೊದಲಾದ ವೈದ್ಯರು ಸೇವೆಗೆ ಲಭ್ಯವಾಗಲಿದ್ದಾರೆ.


ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ, ಇರ್ದೆ, ಬಲ್ನಾಡು, ಸಾಜಾ, ಕೊಡಿಪ್ಪಾಡಿ, ಕಬಕ ಉಪಕೇಂದ್ರಗಳು ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ವ್ಯಾಪ್ತಿಗೆ ಬರುತ್ತವೆ. ಒಟ್ಟು 28 ಸಾವಿರ ಜನಸಂಖ್ಯೆ ಇರುವ ಈ ಪ್ರದೇಶಕ್ಕೆ 30 ಬೆಡ್‌ಗಳ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಸದ್ಯದಲ್ಲೇ ಕಾಮಗಾರಿ ನಡೆಯುವ ಸೂಚನೆ ಇದೆ.


12.40 ಕೋಟಿ ರೂ. ಅನುದಾನ:
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೀಗ 5 ಎಕರೆಯಷ್ಟು ಜಾಗವಿದೆ. ಆದ್ದರಿಂದ ಈ ಜಾಗ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಕಾಗುವಷ್ಟು ಇದೆ. ಅಗತ್ಯ ಇರುವುದು ಅನುದಾನ. ಹಾಗಾಗಿ 12.40 ಕೋಟಿ ರೂ. ಅನುದಾನ ಮಂಜೂರಾಗಿದೆ. ಇದರಲ್ಲಿ ಹೊಸ ಕಟ್ಟಡ ನಿರ್ಮಿಸಿ, ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಅದೇ ರೀತಿ ಉಳಿಸಿಕೊಳ್ಳಲಾಗುವುದು.
ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಇದರಲ್ಲಿ ಕೋಲ್ಡ್ ಸ್ಟೋರೇಜ್ ಮೋರ್ಚರಿ (ಶೀತಲೀಕರಣ ಶವಾಗಾರ), ಮೆಡಿಕಲ್ ಎಕ್ವಿಪ್‌ಮೆಂಟ್ಸ್ (ವೈದ್ಯಕೀಯ ಸಲಕರಣೆಗಳು), ಫರ್ನಿಚರ್ಸ್, ಮಾಡ್ಯೂಲರ್ ಓಟಿ (ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ) ಮೊದಲಾದ ಆಧುನಿಕ ವ್ಯವಸ್ಥೆಗಳು ಇರಲಿವೆ. ಈ ಕಟ್ಟಡದ ಸುತ್ತ ರಸ್ತೆ, ಸಿಸಿ ಕ್ಯಾಮರಾ, ಫೈಯರ್ ಫೈಟಿಂಗ್ ವರ್ಕ್ಸ್, ಮೆಡಿಕಲ್ ಆಕ್ಸಿಜನ್ ಲೈನ್ ಮೊದಲಾದ ವ್ಯವಸ್ಥೆಗಳು ಇರಲಿವೆ. ಪಾರ್ಕಿಂಗ್ ವ್ಯವಸ್ಥೆಯೂ ಇರಲಿದೆ.


ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ:
ಸರಕಾರಿ ವ್ಯವಸ್ಥೆಯಲ್ಲಿ ಪುತ್ತೂರು ತಾಲೂಕಿಗೇ ಪ್ರಥಮ ಬಾರಿಗೆ ಮಾಡ್ಯೂಲರ್ ಓಟಿಯನ್ನು ಪರಿಚಯಿಸಲಾಗುತ್ತಿದೆ. ಆಪರೇಷನ್ ಥಿಯೇಟರ್ ಅನ್ನು ಆಧುನಿಕಗೊಳಿಸಿರುವುದೇ ಇದರ ವಿಶೇಷತೆ. ಮಾಡ್ಯೂಲರ್ ಓಟಿಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸಲಾಗುವ ಯಂತ್ರಗಳು ಆಧುನಿಕಗೊಂಡಿದ್ದು, ವೈದ್ಯರ ಕೆಲಸ ಸುಲಭವಾಗಲಿದೆ. ರೋಗಿಗಳಿಗೆ ಸುಲಭವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು.

24 ಗಂಟೆ ವೈದ್ಯರು, ಸಿಬ್ಬಂದಿಗಳು:
ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರನ್ನು ಹೊರತುಪಡಿಸಿ 25 ಹುದ್ದೆಗಳು ಸೃಷ್ಟಿಯಾಗಲಿದೆ. ಪ್ರಸೂತಿ, ಮಕ್ಕಳ ತಜ್ಞರು, ಅರಿವಳಿಕೆ, ಆಡಳಿತ ವೈದ್ಯಾಧಿಕಾರಿ, ದಂತ ವೈದ್ಯರು ಹಾಗೂ ಆಯುಷ್ ಅಧಿಕಾರಿ ಇರಲಿದ್ದಾರೆ. ಉಳಿದಂತೆ 12 ಡಿ ಗ್ರೂಪ್ ನೌಕರರು, ಲ್ಯಾಬ್ ಟೆಕ್ನಿಷಿಯನ್, 6 ಸ್ಟಾಫ್ ನರ್ಸ್, 2 ಔಷಧ ವಿತರಕರು ಇರಲಿದ್ದಾರೆ.

ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಪೂರ್ಣಕಾಲಿಕ ವೈದ್ಯರಿಲ್ಲ. ಉಪಕರಣಗಳು ಕೆಟ್ಟುಹೋಗಿವೆ. ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸಿಬ್ಬಂದಿಗಳ ಕೊರತೆ ಇದೆ. ಇತ್ಯಾದಿ ಸಮಸ್ಯೆ, ಜನರ ಕೂಗು ಹಲವು ವರ್ಷಗಳಿಂದ ಇತ್ತು. ಪುತ್ತೂರು ಪೇಟೆಯ ಆಸ್ಪತ್ರೆ ಬಹುದೂರವಾಗಿರುವುದರಿಂದ ಸ್ಥಳೀಯ ಪ್ರಾಥಮಿಕ ಚಿಕಿತ್ಸೆಗಳಿಗೆ ಜನರಿಗೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಗ್ರಾಮಸಭೆ, ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಅನೇಕ ಬಾರಿ ನಿರ್ಣಯ ಬರೆದು ಸರಕಾರಕ್ಕೆ ಕಳುಹಿಸಲಾಗಿತ್ತು. ಕೊನೆಗೂ ಈ ಭಾಗದ ಜನರ ಆಶೋತ್ತರ ಈಡೇರಿಸುವಲ್ಲಿ ಶಾಸಕರ ಪ್ರಯತ್ನ ಫಲಗೂಡಿದೆ.

ಗ್ರಾಮೀಣ ಭಾಗದ ಬೇಡಿಕೆಯನ್ನು ಮನಗಂಡು ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಪ್ರಯೋಜನವಾದರೆ, ವೈದ್ಯರಿಗೆ ಬೇಕಾದ ಅವಶ್ಯಕ ಉಪಕರಣಗಳು ಇಲ್ಲಿರಲಿದೆ. ವೈದ್ಯರ ಸಂಖ್ಯೆಯೂ ಜಾಸ್ತಿಯಾಗಲಿದ್ದು, ದಿನದ 24 ಗಂಟೆಯೂ ಜನರ ಸೇವೆಗೆ ಲಭ್ಯವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈಗಾಗಲೇ 12.4 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆ.ಎಚ್.ಎಸ್.ಆರ್.ಡಿ. ಅನುಷ್ಠಾನ ಮಾಡಲಿದೆ.
–ಸಂಜೀವ ಮಠಂದೂರು, ಶಾಸಕರು, ಪುತ್ತೂರು

ಸಾಂಕ್ರಾಮಿಕ ರೋಗ ತಡೆಗೆ ಉಪಕಾರಿ
ಕೇರಳ – ಕರ್ನಾಟಕದ ಗಡಿಭಾಗ ಪಾಣಾಜೆ. ನಿಫಾ, ಕೋವಿಡ್ ಮೊದಲಾದ ಸಾಂಕ್ರಾಮಿಕ ರೋಗಗಳು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಿದ್ದು ಇಲ್ಲಿಂದ. ಹಾಗಾಗಿ, ಪಾಣಾಜೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಾದರೆ, ಕೇರಳ ಭಾಗದ ಜನರಿಗೆ ಪಾಣಾಜೆಯಲ್ಲೇ ಚಿಕಿತ್ಸೆ ನೀಡಬಹುದು. ಅವರು ತಾಲೂಕಿನ ಒಳಭಾಗಗಳಿಗೆ ಬರುವುದನ್ನು ತಪ್ಪಿಸಲು ಸಾಧ್ಯ. ಅಲ್ಲದೇ, ಸಮುದಾಯ ಆರೋಗ್ಯ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದರಿಂದ, ಜನರಿಗೆ ಯಾವುದೇ ಸಂದರ್ಭದಲ್ಲಾದರೂ ಚಿಕಿತ್ಸೆ ಪಡೆದುಕೊಳ್ಳಬಹುದು. ಬಹುಮುಖ್ಯವಾಗಿ, ಮಗು ಮರಣ ಹಾಗೂ ತಾಯಿ ಮರಣವನ್ನು ತಪ್ಪಿಸಲು ಸಾಧ್ಯವಿದೆ.
–ಡಾ. ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ, ಪುತ್ತೂರು

ಬಹಳ ಸಂತೋಷ ತಂದಿದೆ. ಪಾಣಾಜೆ ಗ್ರಾಮ ಕೇರಳ-ಕರ್ನಾಟಕ ಗಡಿ ಭಾಗವಾಗಿರುವುದರಿಂದ ಈ ಭಾಗದ ಎಂಟು ಗ್ರಾಮಗಳ ಜನತೆಯಲ್ಲದೇ ಸ್ವರ್ಗ, ವಾಣಿನಗರ, ಕಾಟುಕುಕ್ಕೆ ಭಾಗದ ಜನಗಳೂ ಇದೇ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಖಾಯಂ ವೈದ್ಯರು ಬೇಕೆಂಬುದು ಅದೆಷ್ಟೋ ವರ್ಷಗಳ ಹೋರಾಟವಾಗಿದೆ. ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕು ಮತ್ತು ಖಾಯಂ ವೈದ್ಯರ ನೇಮಕ ಆಗಬೇಕು ಎನ್ನುವುದೂ ಗ್ರಾಮಸ್ಥರ ಆಗ್ರಹವೂ ಆಗಿತ್ತು. ಶಾಸಕರಿಗೆ ಅಭಿನಂದನೆ.
–ಭಾರತೀ ಭಟ್ ಅಧ್ಯಕ್ಷರು, ಪಾಣಾಜೆ ಗ್ರಾ.ಪಂ.

ಒಂದು ಕಾಲದಲ್ಲಿ ಉತ್ತಮ ಆರೋಗ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಬೇಕೆಂಬ ದಶಕದ ಬೇಡಿಕೆಯನ್ನು ಈಡೇರಿಸುವಲ್ಲಿ ಶಾಸಕರ ಪ್ರಯತ್ನಕ್ಕೆ ನಮನಗಳು. ಬಡವರ ಕಣ್ಣೀರೊರೆಸುವ ಇದು ಅವಶ್ಯಕ ಮತ್ತು ಉತ್ತಮ ನಿರ್ಧಾರವಾಗಿದೆ.
-ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಕೆಎಂಎಫ್ ನಿರ್ದೇಶಕರು

LEAVE A REPLY

Please enter your comment!
Please enter your name here