ಪುತ್ತೂರು: ಬಿಹಾರದ ಪುಲ್ವಾರಿ ಶರೀಫ್‌ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸಿರುವ ಆರೋಪದಡಿ ಎನ್‌ಐಎ ಬಂಧಿಸಿರುವ ಐವರು ಕಳೆದ ಜುಲೈನಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರವರ ಹಂತಕರಿಗೂ ಹಣ ಸಂದಾಯ ಮಾಡಿರುವ ಅಂಶ ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಕಳೆದ ಜುಲೈ 26ರಂದು ರಾತ್ರಿ ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಹತ್ಯೆ ಮಾಡಲಾಗಿತ್ತು. ಹಂತಕರಿಗೆ ಹಣಕಾಸು ನೆರವು ನೀಡಿದ್ದವರಲ್ಲಿ ಫುಲ್ವಾರಿ ಪ್ರಕರಣದಲ್ಲಿ ಬಂಧಿತರಾಗಿರುವ ಪುತ್ತೂರು, ಬಂಟ್ವಾಳದ ಐವರ ಪಾತ್ರ ಇರುವುದು ತನಿಖೆಯ ವೇಳೆ ಕಂಡುಬಂದಿದೆ ಎನ್ನುವ ಅಂಶ ಮೂಲಗಳಿಂದ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಎನ್‌ಐಎ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆ.11ರಂದು ಬಂಧಿಸಲಾದ ಪ್ರಮುಖ ಮೂವರು ಆರೋಪಿಗಳ ಪೈಕಿ ಓರ್ವನಾಗಿರುವ ಅಂಕತ್ತಡ್ಕ ನಿವಾಸಿ ರಿಯಾಜ್ ಮನೆಯಲ್ಲಿದ್ದ ಮೊಬೈಲ್ ಪರಿಶೀಲನೆ ನಡೆಸಿದ ಸಂದರ್ಭ ಆತನ ಖಾತೆಗೆ ಹಣ ಸಂದಾಯ ಆಗಿರುವ ಅಂಶ ಕಂಡುಬಂದಿತ್ತು.
ಆರೋಪಿಯು ತನ್ನ ಬ್ಯಾಂಕ್ ಖಾತೆಗೆ ಇದೇ ಮೊಬೈಲ್ ನಂಬರ್ ಲಿಂಕ್ ಮಾಡಿದ್ದ. ಕೃತ್ಯ ಎಸಗಿದ ಅನಂತರ ಬೇರೆಬೇರೆ ಕಡೆಗಳಿಂದ ಈತನ ಖಾತೆಗೆ ಹಣ ಸಂದಾಯ ಆಗಿರುವುದು ಕೂಡ ಬೆಳಕಿಗೆ ಬಂದಿತ್ತು. ಹಣ ಜಮೆಯಾದ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಉಳಿದ ಆರೋಪಿಗಳಿಗೂ ಹಣ ಸಂದಾಯ ಆಗಿರುವ ಬಗ್ಗೆ ತನಿಖೆ ಮುಂದುವರಿಸಿದ್ದರು. ಈಗ ಫುಲ್ವಾರಿ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಪ್ರವೀಣ್ ಹಂತಕರಿಗೆ ನೆರವಾಗಿರಬಹುದು ಅನ್ನುವ ದೃಷ್ಟಿಯಲ್ಲಿ ಎನ್‌ಐಎ ನಡೆಸುತ್ತಿರುವ ತನಿಖೆಯಲ್ಲಿ ಪೂರಕ ಅಂಶಗಳು ದೊರೆತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಶಾಂತಿ ಸೃಷ್ಟಿಗೆ ಹಣಕಾಸು ನೆರವು: ಉಗ್ರ ಚಟುವಟಿಕೆಗೆ ಮಾತ್ರವಲ್ಲದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಗಲಭೆ, ಕೊಲೆ ಕೃತ್ಯದಲ್ಲಿ ತೊಡುಗುವವರಿಗೆ ಹವಾಲಾ ಜಾಲದ ಮೂಲಕ ಹಣ ಸಂದಾಯ ಮಾಡಲು ಜಾಲವೇ ಇದೆ ಅನ್ನುವುದು ಬಂಧಿತರ ತನಿಖೆಯಿಂದ ದೃಢಪಟ್ಟಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಪೂರ್ವದಲ್ಲೇ ಹಂತಕರಿಗೆ ಹಣ ಪಾವತಿಸಿ ನೆರವಾಗುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಜತೆಗೆ ಹತ್ಯೆಯ ಅನಂತರ ಜೈಲಿನಿಂದ ಬಿಡುಗಡೆಗೆ ಕಾನೂನು ಹೋರಾಟಕ್ಕೂ ಹಣಕಾಸು ವ್ಯವಸ್ಥೆ ಮಾಡಲಾಗಿತ್ತು. ಇದರ ಹಣದ ಮೂಲ ವಿದೇಶದಿಂದ ಆಗಿದ್ದು, ಸ್ಥಳೀಯ ಖಾತೆಗಳಿಗೆ ಹಣ ಸಂದಾಯವಾಗಿದೆ. ಮೂಲಗಳ ಪ್ರಕಾರ ಪ್ರವೀಣ್ ಹಂತಕರಿಗೆ ಬೇರೆಯವರ ಖಾತೆಗಳ ಮೂಲಕವೂ ಲಕ್ಷಾನುಗಟ್ಟಲೆ ರೂ. ಹಣ ಸಂದಾಯವಾಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಿಹಾರದ ಪಾಟ್ನಾ ಜಿಲ್ಲೆಯ ಪುಲ್ವಾರಿ ಶರೀಫ್‌ನಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮದ ವೇಳೆ ಬಾಂಬ್ ಸ್ಪೋಟಿಸಿ ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ ಆರೋಪಿಗಳಿಗೆ ಹಣಕಾಸಿನ ನೆರವು ಒದಗಿಸಿದ್ದ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದವರು ಬಂಟ್ವಾಳ ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಫಾಝ್, ನವಾಝ್ ಮತ್ತು ನೌಫಲ್ ಎಂಬವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ ವೇಳೆ ಈ ಮಾಹಿತಿ ಹೊರಬಿದ್ದಿದೆ ಎನ್ನಲಾಗಿದೆ.