ಕಟ್ಟತ್ತಾರು: ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು:ಚುನಾವಣಾ ಬಹಿಷ್ಕಾರ ಬ್ಯಾನರ್ ತೆರವು

0

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟತ್ತಾರುನಿಂದ ನಿಡ್ಯಾಣಕ್ಕೆ ತೆರಳುವ ಸುಮಾರು 1 ಕಿ.ಮೀ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಈ ಭಾಗದ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದರು. ಈ ಬಗ್ಗೆ ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ನಡೆದಿತ್ತು ಆದರೆ ಗ್ರಾಮಸ್ಥರು ನಮ್ಮ ಬೇಡಿಕೆ ಈಡೇರುವ ತನಕ ಬ್ಯಾನರ್ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕಳೆದ ಹಲವು ವರ್ಷಗಳಿಂದ ರಸ್ತೆ ಕಾಂಕ್ರೀಟ್ ಮಾಡಿಕೊಡಿ ಎಂದು ಮನವಿ ಮಾಡಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕೇವಲ ಭರವಸೆ ಮಾತ್ರ ಕೊಡುತ್ತಿದ್ದು ನಮ್ಮ ಬೇಡಿಕೆ ಈಡೇರಿಸಲಿಲ್ಲ, ಈ ರಸ್ತೆ ವ್ಯಾಪ್ತಿಯಲ್ಲಿ ಕೆದಂಬಾಡಿ, ಕೆಯ್ಯೂರು ಮತ್ತು ಅರಿಯಡ್ಕ ಗ್ರಾಮಕ್ಕೆ ಸೇರಿದ ಸುಮಾರು ಹಲವು ಮನೆಗಳಿವೆ ಆದ್ದರಿಂದ ರಸ್ತೆ ಕಾಂಕ್ರೀಟ್ ಅನ್ನು ಕಡೆಗಣಿಸಿರುವುದು ಸರಿಯಲ್ಲ ಆದ್ದರಿಂದ ನಾವು ಈ ಸಲ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾ.17 ರಂದು ಸ್ಥಳಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಭಿಯಂತರ ಭರತ್, ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಕೆಯ್ಯೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿಯವರು ಗ್ರಾಮಸ್ಥರಿಗೆ ಚುನಾವಣಾ ನೀತಿ ಸಂಹಿತೆಯ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಪಂ ಸದಸ್ಯ ಶರತ್ ಕುಮಾರ್ ಮಾಡಾವುರವರು ಗ್ರಾಮಸ್ಥರಲ್ಲಿ ಮಾತುಕತೆ ನಡೆಸಿ, ನೀವು ಚುನಾವಣಾ ಬಹಿಷ್ಕಾರ ಮಾಡುವುದು ಸರಿಯಲ್ಲ, ಮತ ಯಾರಿಗೆ ಬೇಕಾದರೂ ಹಾಕಿ ಅದು ನಿಮ್ಮ ಹಕ್ಕು ಈ ಬಗ್ಗೆ ನಾವು ಏನನ್ನೂ ಮಾತನಾಡುವುದಿಲ್ಲ, ಮುಂದಿನ ಸಲಕ್ಕೆ ಸಂಜೀವ ಮಠಂದೂರುರವರು ಶಾಸಕರಾಗಿ ಆಯ್ಕೆಯಾದರೆ ಖಂಡಿತವಾಗಿಯೂ ಮೊದಲ ಆದ್ಯತೆಯಾಗಿ ಕಟ್ಟತ್ತಾರು-ನಿಡ್ಯಾಣ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವ ಜವಾಬ್ದಾರಿ ನನ್ನದು ಎಂದರು. ಈ ಬಗ್ಗೆ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶರತ್ ಕುಮಾರ್‌ರವರು ಮುಂದಿನ ಸಲಕ್ಕೆ ಮೊದಲ ಆದ್ಯತೆ ಈ ರಸ್ತೆಗೆ ಕೊಡುವ ಎಂದು ತಿಳಿಸಿದರು. ಅದೇ ರೀತಿ ಈ ಭಾಗದ ಸದಸ್ಯ ವಿಠಲ ರೈ ಮಿತ್ತೋಡಿಯವರಿಗೂ ಮಾಹಿತಿ ತಿಳಿಸಿದರು. ಇದರಿಂದ ಸಮಾಧಾನಗೊಂಡ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಬ್ಯಾನರ್ ಅನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಈ ಭಾಗದ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮಸ್ಥರ ಬೇಡಿಕೆಗಳ ಬಗ್ಗೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಮುಂದಿನ ಸಲಕ್ಕೆ ಮೊದಲ ಆದ್ಯತೆಯಾಗಿ ಕಟ್ಟತ್ತಾರು-ನಿಡ್ಯಾಣ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವ ಬಗ್ಗೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವುದು. ಅಧಿಕಾರಿಗಳ ಮಾತಿಗೆ ಆದ್ಯತೆ ನೀಡಿ ಚುನಾವಣಾ ಬಹಿಷ್ಕಾರ ಬ್ಯಾನರ್ ತೆರವುಗೊಳಿಸಿದ ಗ್ರಾಮಸ್ಥರಿಗೆ ಧನ್ಯವಾದಗಳು.
ಶರತ್ ಕುಮಾರ್ ಮಾಡಾವು, ಸದಸ್ಯರು ಕೆಯ್ಯೂರು ಗ್ರಾಪಂ

ಈಗಾಗಲೇ ನಾವು ಈ ಭಾಗದ ಗ್ರಾಮಸ್ಥರಲ್ಲಿ ಮಾತುಕತೆ ನಡೆಸಿದ್ದೇವೆ. ತಾತ್ಕಾಲಿಕವಾಗಿ ಜಲ್ಲಿ ಹಾಕಿ ಸರಿ ಮಾಡಿ ಕೊಡುವ ಬಗ್ಗೆಯೂ ತಿಳಿಸಿದ್ದೇವೆ. ಖಂಡಿತವಾಗಿಯೂ ಮುಂದಿನ ಸಲಕ್ಕೆ ಮೊದಲ ಆದ್ಯತೆಯಾಗಿ ಈ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವ ಜವಾಬ್ದಾರಿ ನಮ್ಮದು ಆಗಿದೆ.
ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಇಂಜಿನಿಯರ್, ತಾಪಂ ಇಓರವರು ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದು ಅಲ್ಲದೆ ಇಂಜಿನಿಯರ್‌ರವರು ರಸ್ತೆ ಕಾಂಕ್ರೀಟ್ ಬಗ್ಗೆ ಎಸ್ಟಿಮೇಟ್ ಮಾಡಿ ರಿಪೋರ್ಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಪಿಡಿಓರವರನ್ನು ಕರೆಸಿ ಅವರ ಜೊತೆಯೂ ಮಾತುಕತೆ ನಡೆಸಿದ್ದಾರೆ. ಕೆಯ್ಯೂರು ಗ್ರಾಪಂ ಸದಸ್ಯ ಶರತ್ ಕುಮಾರ್ ಮಾಡಾವುರವರು ಮುಂದಿನ ಸಲಕ್ಕೆ ಖಂಡಿತವಾಗಿಯೂ ಈ ರಸ್ತೆಗೆ ಮೊದಲ ಆದ್ಯತೆಯಾಗಿ ಕಾಂಕ್ರೀಟ್ ಮಾಡಿಕೊಡುವ ಬಗ್ಗೆ ಆಶ್ವಾಸನೆ ನೀಡಿದರು. ಕಾಂಕ್ರೀಟ್‌ಗೆ ಮೊದಲ ಹಂತವಾಗಿ ರಸ್ತೆ ಚರಂಡಿ ಇತ್ಯಾದಿ ದುರಸ್ತಿ ಮಾಡಿಕೊಡುವ ಬಗ್ಗೆ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಚುನಾವಣಾ ಬಹಿಷ್ಕಾರ ಬ್ಯಾನರ್ ತೆರವುಗೊಳಿಸಿದ್ದೇವೆ. ಇದು ಸುಮಾರು 40 ವರ್ಷದ ಹಿಂದಿನ ಬೇಡಿಕೆ ಆಗಿದೆ. ನಮ್ಮ ಬೇಡಿಕೆ ಈಡೇರದೆ ಇದ್ದ ಕಾರಣ ಈ ವರ್ಷ ನಾವು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದು ಬ್ಯಾನರ್ ಅಳವಡಿಸಿದ್ದೆವು.
ದಿವಾಕರ ರೈ ಗೋಳ್ತಿಲ, ಗ್ರಾಮಸ್ಥರು

LEAVE A REPLY

Please enter your comment!
Please enter your name here