ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಕುಡಿಯುವ ನೀರನ್ನು ಪೋಲು, ದುರುಪಯೋಗ ಮಾಡಿದರೆ ಸಂಪರ್ಕ ಕಡಿತ

ಪುತ್ತೂರು: ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡು ಬಳಿಕ ನೀರನ್ನು ಕೃಷಿಗೆ ಬಳಸುವುದು, ವ್ಯರ್ಥವಾಗಿ ಪೋಲುಮಾಡುವುದು ಹಾಗೂ ಇತರ ಉದ್ದೇಶಗಳಿಗೆ ಬಳಸಿಕೊಂಡರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೊಡಿಪ್ಪಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪಿಡಿಓ ಶರೀಫ್ ತಿಳಿಸಿದರು.


ಸಭೆಯು ಮಾ.17ರಂದು ಅಧ್ಯಕ್ಷೆ ರೇಖಾ ಬಟ್ರುಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮಸ್ಥರಿಗೆ ಬೇಸಿಗೆಯಲ್ಲಿ ಸಮರ್ಪಕ‌ ನೀರು ಪೂರೈಕೆ ಮಾಡುವ ವಿಚಾರದಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಓ ಶರೀಫ್ ರವರು, ಬಹುತೇಕ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇನ್ನೂ ಮೂರು ತಿಂಗಳ ಕಾಲ ಜನರಿಗೆ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ನಿರ್ವಹಿಸಬೇಕಾದ ಜವಾಬ್ದಾರಿ ನಮ್ಮಮೇಲಿದೆ. ಪಂಚಾಯತ್ ನಿಂದ ನೀಡುವ ಸಂಪರ್ಕದಲ್ಲಿ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಬೇಕು. ಅದನ್ನು ಇತರ ಉದ್ದೇಶಗಳಿಗೆ ಬಳಸಬಾರದು. ಕುಡಿಯುವ ನೀರನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡುವುದು, ಕೃಷಿಗೆ ಬಳಸುವುದು ಅಥವಾ ವಿನಾ ಕಾರಣ ಪೋಲು ಮಾಡಿದರೆ ಅಂತವರ ‌ಮನೆಯ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಿದರು.


ಕಲ್ಲಂದಡ್ಕಕ್ಕೆ ಜಲಜೀವನ್ ಮಿಷನ್ ನಲ್ಲಿ ನೀರು;
ಕಲ್ಲಂದಡ್ಕದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಲಾಗಿದೆ. ಜಲಜೀವನ್ ಮಿಷನ್ ಯೋಜನೆಯ ಮೂಲಕ ಟ್ಯಾಂಕ್, ಪೈಪ್ ಲೈನ್ ಕಾಮಗಾರಿಗಳು ನಡೆಯಲಿದೆ ಎಂದು ಪಿಡಿಓ ತಿಳಿಸಿದರು.


ಕುಡಿಯುವ ನೀರಿಗೆ ಆದ್ಯತೆ:
ಇನ್ನುವ ಮೂರು ತಿಂಗಳ ಕಾಲ ಸುಡು ಬೇಸಿಗೆಯಿದ್ದು ಗ್ರಾಮದ ಜನತೆ ಸಮರ್ಪಕವಾಗಿ ನೀರು ಪೂರೈಸುವುದೇ ಪ್ರಾಮುಖ್ಯವಾಗಿದೆ. ರಸ್ತೆ, ಚರಂಡಿ ಕಾಮಗಾರಿಗಳಿಗಿಂತ ಪ್ರಮುಖವಾಗಿ ನೀರು ಸರಬರಾಜಿಗೆ ಆದ್ಯತೆ ನೀಡಬೇಕಾಗುತ್ತದೆ ಎಂದು ಪಿಡಿಓ ತಿಳಿಸಿದರು.

ಚುನಾವಣಾ ಬಹಿಷ್ಕಾರಕ್ಕೆ ಪಂಚಾಯತ್ ಹೊಣೆಯಲ್ಲ:
ಕುಡಿಯುವ ನೀರು, ರಸ್ತೆ ಸೇರಿದಂತೆ ಜನರ ಮೂಲಭೂತ ಸೌಲಭ್ಯಗಳ ಪೂರೈಸಲು ಪಂಚಾಯತ್ ನಿಂದ ಲಭ್ಯ ಅನುದಾನವನ್ನು ಬಳಸಿಕೊಂಡು ಪೂರೈಸಲು ಪ್ರಯತ್ನಿಸಲಾಗುತ್ತದೆ. ಜನರ ಬೇಡಿಕೆಗಳಿಗೆ ಪಂಚಾಯತ್ ನಿಂದ ಉತ್ತಮ ಸ್ಪಂದನೆ ನೀಡಲಾಗುತ್ತಿದೆ. ಆದರೂ ಉದ್ದೇಶ ಪೂರ್ವಕವಾಗಿ ಚುನಾವಣಾ ಸಂದರ್ಭದಲ್ಲಿ ಮಾತ್ರ ಬಹಿಷ್ಕಾರದ ಬ್ಯಾನರ್ ಗಳನ್ನು ಅಳವಡಿಸುತ್ತಾರೆ. ಇದಕ್ಕೆ ಪಂಚಾಯತ್ ಹೊಣೆಯಲ್ಲ ಎಂದು ಸದಸ್ಯ ಗಿರಿಧರ ಗೋಮುಖ ತಿಳಿಸಿದರು.


ರೂ.9.14 ಲಕ್ಷ ವಿದ್ಯುತ್ ಬಲ್ ಬಾಕಿ:
ಬೀದಿ ದೀಪ,‌ ನೀರಿನ‌ ಘಟಕಗಳ ಒಟ್ಟು ವಿದ್ಯುತ್ ಬಿಲ್ ರೂ.9,14, 455 ಮೆಸ್ಕಾಂಗೆ ಪಾವತಿಸಲು ಬಾಕಿಯಿದೆ. ಅಲ್ಲದೆ ಪಂಪ್ ಚಾಲಕರ ವೇತನ, ನಿರ್ವಹಣೆ ಹಾಗೂ ದುರಸ್ಥಿ ವೆಚ್ಚಗಳಿವೆ. ಈ ನಿಟ್ಟಿನಲ್ಲಿ ನೀರಿನ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾವತಿಸಬೇಕು. ಪಾವತಿಸದಿದ್ದರೆ ನೋಟೀಸ್ ನೀಡಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಪಿಡಿಓ ಶರೀಫ್ ತಿಳಿಸಿದರು.ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಸ್ಮಿತಾ ಹನಿಯೂರು, ಚಂದ್ರಾವತಿ, ನವೀನ್ ಪೂಜಾರಿ ಅರ್ಕ, ಗಿರೀಶ್ ಕೆ ನಂದನ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಶರೀಪ್ ಸ್ವಾಗತಿಸಿದರು. ಕಾರ್ಯದರ್ಶಿ ಭವಾನಿ ವಂದಿಸಿದರು.

LEAVE A REPLY

Please enter your comment!
Please enter your name here