ಪುತ್ತೂರಿಗೆ ಸಂಬಂಧಿಸಿ ನಿಮ್ಮ ಬೇಡಿಕೆಗಣುಗುಣವಾಗಿ ಬೇರೆಯೇ ಪ್ರಣಾಳಿಕೆ:ಬಿಜೆಪಿ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ, ಸಲಹಾ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಚುನಾವಣೆ ಸಂದರ್ಭ ಹಿಂದಿನ ಸಲ ಅಭಿಪ್ರಾಯ ಸಂಗ್ರಹ ಮಾಡಿದ್ದೆವು. ಅದರ ಆಧಾರದಲ್ಲಿ ಕಳೆದ 5 ವರ್ಷಗಳಲ್ಲಿ ನಾನು ಶಾಸಕನಾಗಿ ಮತ್ತು ಎರಡೂವರೆ ವರ್ಷದಲ್ಲಿ ನಗರಸಭೆಯಿಂದ ಏನೇನು ಭರವಸೆಯನ್ನು ಇಟ್ಟಿದ್ದಾರೋ, ಏನು ಬೇಡಿಕೆಯನ್ನು ಸಲ್ಲಿಸಿದ್ದಿರೋ ಅದರ ಅಧಾರದಲ್ಲಿ ಒಂದಷ್ಟು ಕೆಲಸ ಕಾರ್ಯ ಮಾಡಿದ್ದೇವೆ. ಶೇ.75 ರಷ್ಟು ಪ್ರಣಾಳಿಕೆಯ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ. ಮುಂದಿನ ಚುನಾವಣೆಯ ನಮ್ಮ ಪ್ರಣಾಳಿಕೆ, ನಾಗರಿಕರ ಪ್ರಣಾಳಿಕೆ ಆಗಬೇಕು. ಈ ನಿಟ್ಟಿನಲ್ಲಿ ಪುತ್ತೂರಿಗೆ ಸಂಬಂಧಿಸಿ ನಿಮ್ಮ ಬೇಡಿಕೆಗಣುಗುಣವಾಗಿ ಬೇರೆಯೇ ಪ್ರಣಾಳಿಕೆ ಮಾಡಲಾಗುವುದು. ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಕೆಲವೊಂದನ್ನು ಕಳುಹಿಸುತ್ತೇವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಬಿಜೆಪಿಯಿಂದ ಇಲ್ಲಿನ ಪುತ್ತೂರು ಕೋ ಓಪರೇಟಿವ್ ಸಭಾಂಗಣದಲ್ಲಿ ಮಾ.18ರಂದು ನಡೆದ ಮುಂದಿನ ಚುನಾವಣೆಯ ಹಿನ್ನೆಲೆಗೆ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಮತ್ತು ಸಲಹಾ ಸಭೆಯಲ್ಲಿ ಅವರು ನಾಗರಿಕರ ಸಲಹೆಗಳನ್ನು ಆಲಿಸಿ ಮಾತನಾಡಿದರು. ಮುಂದಿನ ಚುನಾವಣೆಯ ಪ್ರಣಾಳಿಕೆ ನಮ್ಮ ಪ್ರಣಾಳಿಕೆ ಆಗಬೇಕು. ನಾವು ಹೇಳಿದ ವಿಚಾರವೇ ಪ್ರಣಾಳಿಕೆಯಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಪ್ರಣಾಳಿಕೆಗಾಗಿ ನಾಗರಿಕರ ಅಭಿಪ್ರಾಯ ಸಂಗ್ರಹ ಮಾಡುವ ಸಂಗತಿ ಆಗಿದೆ. ಕರ್ನಾಟಕದ ಭೌಗೋಳಿಕ ಪ್ರದೇಶವನ್ನು ನೋಡಿಕೊಂಡು ಕರಾವಳಿಗೆ, ಬಯಲು ಸೀಮೆಗೆ ಮತ್ತು ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಪ್ರಣಾಳಿಕೆ ಮಾಡುವ ಕುರಿತು ಬಿಜೆಪಿ ನಿರ್ಧಾರ ಮಾಡಿದೆ. ಕರಾವಳಿ ಭಾಗದ ಇವತ್ತಿನ ಜ್ವಲಂತ ಸಮಸ್ಯೆಗಳನ್ನು ಮತ್ತು ಮುಂದಿನ 5 ವರ್ಷದಲ್ಲಿ ಈ ಭಾಗಕ್ಕೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದ ಅವರು ಪುತ್ತೂರಿಗೆ ಸಂಬಂಧಿಸಿ ಎಲ್ಲರ ಅಭಿಪ್ರಾಯದಂತೆ ಐಟಿ ಪಾರ್ಕ್ ಆಗಬೇಕು. ಅದಕ್ಕಾಗಿ ಉದ್ಯೋಗವಕಾಶ ಇಲ್ಲೇ ಆಗಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಕೇಂದ್ರ ಮಾಡಲು ಕೆಲವೊಂದು ಜಾಗ ನೋಡಲಾಗಿದೆ. ಆದರೆ ಬಹುತೇಕ ಕಡೆಯಲ್ಲಿ ಅರಣ್ಯ, ಕುಮ್ಕಿ, ಒತ್ತುವರಿ ಸಮಸ್ಯೆ ಕಂಡು ಬಂದಿದೆ. ಹಾಗಾಗಿ ಕೊಯಿಲದಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿರುವ 1ಸಾವಿರ ಎಕ್ರೆಯಲ್ಲಿ 500 ಎಕ್ರೆಯನ್ನು ಕೈಗಾರಿಕೆಗೆ ಕೊಡುವಂತೆ ಸರಕಾರಕ್ಕೆ ಪ್ರಸ್ತಾಪ ಮಾಡಲಾಗಿದೆ. ಆ ಮೂಲಕ ನಮ್ಮ ಯುವಕರಿಗೆ ಉದ್ಯೋಗ ಕೊಡಬಹುದು. ಇವತ್ತು ಪುತ್ತೂರಿನ ಸುತ್ತಮುತ್ತ ಸಣ್ಣ ಕೈಗಾರಿಕೆಗಳಿಗೆ ಸುಮಾರು 19 ಎಕ್ರೆ ಜಾಗವನ್ನು ಗುರುತಿಸಿದ್ದೇವೆ. ಇದರ ಜೊತೆಗೆ ಅಂತರ್ ಜಲ ವೃದ್ಧಿ ಮಾಡಲು ಸುಮಾರು 70ಕ್ಕಿಂತಲೂ ಮಿಕ್ಕಿ ಕಿಂಡಿ ಅಣೆಕಟ್ಟು ಮಾಡಿದ್ದೇವೆ. ನೇತ್ರಾವತಿಗೆ ದೊಡ್ಡ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಉಪ್ಪಿನಂಗಡಿಯ ಸಂಗಮ ಕೃಪಾಕ್ಕೆ ರೂ. 70 ಕೋಟಿಯ ಡಿಪಿಆರ್ ಆಗಿದೆ. ಬೆಳ್ಳಿಪ್ಪಾಡಿಯ ಕಟಾರದಲ್ಲಿ ರೂ. 140 ಕೋಟಿಯ ಇನ್ನೊಂದು ಕಿಂಡಿ ಅಣೆಕಟ್ಟಿಗೆ ಪ್ರಸ್ತಾವನೆ ಆಗಿದೆ. ಹೀಗೆ ಅಂತರ್ ಜಲಕ್ಕೂ ಒತ್ತು ಕೊಡುವ ಕೆಲಸ ಮಾಡಿದ್ದೇವೆ.

ಪುತ್ತೂರು ಜಿಲ್ಲೆಯಾಗುವಾಗ ಇಲ್ಲಿನ ವಾಹನ ದಟ್ಟನೆ ನಿಯಂತ್ರಿಸಲು ಈಗಾಗಲೇ ಇರುವ ರಸ್ತೆಯನ್ನು ಅಗಲೀಕರಣ, ಬೈಪಾಸ್ ರಸ್ತೆಯನ್ನು ಚತುಷ್ಪತ ರಸ್ತೆ, ಎಪಿಎಂಸಿ ರಸ್ತೆಯನ್ನು ಕೂಡಾ ಚತುಷ್ಪದ ರಸ್ತೆ, ವರ್ತುಲ ರಸ್ತೆಗೂ ಆದ್ಯತೆ ಇದೆ. ಒಂದು ವರ್ಷದಲ್ಲಿ ಪುತ್ತೂರಿಗೆ ಪ್ರತ್ಯೇಕ ಒಳಚರಂಡಿ ವ್ಯವಸ್ಥೆ ಆಗಲಿದೆ. ಕಳೆದ ಬಾರಿ ಸಮಗ್ರ ಕುಡಿಯುವ ನೀರಿನ ಭರವಸೆ ನೀಡಿದ್ದೇವು ಅದು ಇವತ್ತು ಅನುಷ್ಠಾನ ಆಗುತ್ತಾ ಇದೆ ಮುಂದಿನ 25 ವರ್ಷಕ್ಕೆ ಎಷ್ಟು ನೀರು ಬೇಕು ಅದಕ್ಕೆ ಈಗಲೇ ಸಿದ್ದತೆ ಮಾಡಲಾಗಿದೆ. ಸಿ.ಸಿ ಕ್ಯಾಮರ ಕಣ್ಗಾವಲು, ಬಸ್ ನಿಲ್ದಾಣ ಮೇಲ್ದದರ್ಜೆಗೆ ಏರಿಸುವ ಕೆಲಸಕ್ಕೆ ಸಂಬಂಧಿಸಿ ಈಗಾಗಲೇ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ಇಡುವ ಕೆಲಸ ಆಗಲಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ 5.70 ಎಕ್ರೆ ಜಾಗ ಆರ್.ಟಿ.ಸಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದು 300 ಬೆಡ್ ಆಸ್ಪತ್ರೆಯಾಗಬೇಕಾದರೆ ಯಾವುದೆ ಕೊರತೆ ಇರಬಾರದು ಎಂದು ಈ ಯೋಜನೆ ಮಾಡಿದ್ದೇವೆ. ಈಗಾಗಲೇ ನೀಲ ನಕಾಶೆ ತಯಾರಿಸಿ ರೂ. 240 ಕೋಟಿಯ ಪ್ರೋಜೆಕ್ಟ್ ಸಿದ್ದಗೊಂಡು ಕ್ಯಾಬಿನೆಟ್‌ಗೆ ಕಳುಹಿಸಲು ಸಿದ್ದತೆ ಆಗಿದೆ. ಅಲ್ಲಿ ಮಂಜೂರಾದರೆ 300 ಬೆಡ್‌ನ ಆಸ್ಪತ್ರೆ ಪುತ್ತೂರಿಗೆ ಲಭ್ಯವಾಗುತ್ತದೆ. ತುಳು ಭಾಷೆಯನ್ನು ರಾಜ್ಯ ಅಧೀಕೃತ ಭಾಷೆಯನ್ನಾಗಿ ಮಾಡಲು ನಾವು ವಿಧಾನಸಭೆಯಲ್ಲಿ ಮಾತನಾಡಿದ್ದೇವೆ ಎಂದ ಅವರು ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಪ್ರಾಯಳಿಗೆ ಉತ್ತರ ನೀಡಿದರು.


ಅಭಿಪ್ರಾಯಗಳು:
ಡಾಕ್ಟರ್‍ಸ್ ಫಾರಮ್ ಅಧ್ಯಕ್ಷತೆಯ ನೆಲೆಯಲ್ಲಿ ಡಾ. ಸುರೇಶ್ ಪುತ್ತೂರಾಯ ಅವರು ಮಾತನಾಡಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕೆಂದು ಈಗಲೂ ಹಿಂದೆಯೂ ಬೇಡಿಕೆಯಿತ್ತು. ಆದರೆ ಅದಕ್ಕು ಮುಂದೆ ಅದಕ್ಕೆ ಪೂರಕವಾಗಿ ಸುಸಜ್ಜಿತ ಆಸ್ಪತ್ರೆ ಬೇಕು. ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಬೇಕು ಎಂದರು. ಇದರ ಜೊತೆಗೆ ರಾಜಕೀಯ ಪಕ್ಷಗಳು ಉಚಿತ ಘೋಷಣೆಗಳನ್ನು ಮಾಡುವಾಗ ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣಕ್ಕೆ ಹೆಚ್ಚ ಒತ್ತು ಕೊಡುವುದು ಉತ್ತಮ ಮತ್ತು ತುಳುವಿಗೆ ಹೆಚ್ಚಿನ ಸ್ಥಾನ ಮಾನ ನೀಡಬೇಕೆಂದರು.


ಪುಡಾ ಸದಸ್ಯ ವಾಮನ್ ಪೈ ಅವರು ಮಾತನಾಡಿ ಪುತ್ತೂರಿಗೆ ಐದಾರು ಇಂಡಸ್ಟ್ರೀಯಲ್ ಏರಿಯ ಬೇಕೆಂದು ಹೇಳಿದರು. ದೇವಾ ಟ್ರೇಡರ್‍ಸ್‌ನ ಮಾಲಕ ಟಿ ರವೀಂದ್ರನ್ ಅವರು ಬ್ಯಾಂಕ್ ಡೆಪೊಸಿಟ್‌ಗೆ ಇನ್‌ಶ್ಯೂರೆನ್ಸ್ ಪ್ರಿಮಿಯಂ ಮಿನಿಮ್ ರೂ. 10 ಲಕ್ಷ ಮಾಡಬೇಕೆಂದರು. ಇದರ ಜೊತೆಗೆ ಸರಕಾರ ಈ ಹಿಂದೆ ಮಾಡಿದ ಪ್ರಣಾಳಿಕೆ ಎಷ್ಟು ಕಾರ್ಯಗತವಾಗಿದೆ ಎಂದು ಅವಲೋಕನ ಮಾಡಬೇಕೆಂದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಉಲ್ಲಾಸ್ ಪೈ ಅವರು ಮಾತನಾಡಿ ಉಚಿತ ಘೋಷಣೆಗಳು ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇದು ಅಪಾಯಕಾರಿ. ಉಚಿತ ವೈದ್ಯಕೀಯ ಶಿಬಿರಗಳಿಗೆ ಸರಕಾರ ಕೈ ಜೋಡಿಸಬೇಕು, ಅಕ್ಕಿಯ ಮೇಲಿನ ಜಿ.ಎಸ್‌ಟಿಯನ್ನು ರದ್ದು ಮಾಡಬೇಕು. ಬ್ಯಾಂಕ್‌ನಲ್ಲಿ ಶೈಕ್ಷಣಿಕ ಸಾಲಕ್ಕೆ ದಾಖಲಾತಿಗಳನ್ನು ಸಡೀಲಿಕರಣಗೊಳಿಸಬೇಕೆಂದರು.

ಬಳಕೆದಾರರ ವೇದಿಕೆ ಸಂಚಾಲಕ ದಿನೇಶ್ ಭಟ್ ಅವರು ಮಾತನಾಡಿ ಕಾರ್ಮಿಕರ ಭವನಕ್ಕೆ ಪುತ್ತೂರಿನಲ್ಲಿ ಜಮೀನು ನೀಡಬೇಕು ಮತ್ತು ಇಲಾಖೆಗೂ ಸ್ವಂತ ಕಚೇರಿ ಕಟ್ಟಡ ಒದಗಿಸಬೇಕು. ನಗರಸಭೆ ಎಲ್ಲಾ ಸೇವೆ ಆನ್‌ಲೈನ್ ಮೂಲಕ ಸಿಗಬೇಕೆಂದರು.

ಮೈತ್ರಿ ಎಲೆಕ್ಡ್ರಿಕಲ್ಸ್‌ನ ರವಿನಾರಾಯಣ ಭಟ್ ಅವರು ಮಾತನಾಡಿ ಬೈಪಾಸ್ ತರವೇ ವರ್ತುಲ ರಸ್ತೆ ಅಗತ್ಯವಿದೆ. ಸಾರಿಗೆ ವ್ಯವಸ್ಥೆ ನಗರದೊಳಗೆ ಬೇಕು.

ವಿಶ್ವಹಿಂದು ಪರಿಷತ್ ದ.ಕ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಮಾತನಾಡಿ ಜನ ಸಾಮಾನ್ಯರಿಗೆ ಇಂದಿಗೂ ಸರಕಾರದ ಯೋಜನೆ ಶೇ 100 ತಲುಪುತ್ತಿಲ್ಲ. ಅದನ್ನು ತಲುಪಿಸುವ ಕೆಲಸ ಆಗಬೇಕು. ಹಿಂದೂ ಅಮಾಯಕರ ಮೇಲಿನ ಸುಳ್ಳು ಕೇಸ್ ಹಾಕುವುದನ್ನು ನಿಲ್ಲಿಸಬೇಕು ಎಂದರು.

ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಅವರು ಮಾತನಾಡಿ ರೈತರ ಪ್ರಮುಖವಾದ ಬೆಳೆಗಳಿಗೆ ನಿಗದಿತ ಬೆಂಬಲ ಬೆಲೆ ನೀಡಬೇಕು. ಹಾಲಿನ ಪ್ರೋತ್ಸಾಹ ದರ ಹೆಚ್ಚಿಸಬೇಕು. ಅಂತರ್ ಜಲ ವೃದ್ಧಿಸಲು ಪ್ರತಿ ಗ್ರಾಮದಲ್ಲೂ ಮೂರ ಕೆರೆಗಳು ಇರಬೇಕು.

ಜೇಸಿ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಅವರು ಮಾತನಾಡಿ ಅಂತರ್‌ಜಲ ವೃದ್ಧಿಸಲು ನೀರಿಂಗಿಸುವಿಕೆ ಮಾಡಲು ಅಲ್ಲಲ್ಲಿ ಚೆಕ್‌ಡ್ಯಾಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪುತ್ತೂರನ್ನು ಬೂದು ಪ್ರದೇಶದ ಪಟ್ಟಿಯಿಂದ ತೆಗಿಸಬೇಕು. ಐಟಿ ಪಾರ್ಕ್ ಆಗಬೇಕೆಂದರು.

ಪಿಸಿ ಪೈ ಪೆಟ್ರೋಲ್ ಪಂಪ್‌ನ ಕೇಶವ ಪೈ ಅವರು ಮಾತನಾಡಿ ಪುತ್ತೂರಿನಲ್ಲಿ ಈ ಐದು ವರ್ಷದಲ್ಲಿ ಕೋಮುಗಲಭೆ ಆಗಿಲ್ಲ, ಇದನ್ನು ಮತದಾರರಿಗೆ ತಿಳಿಸುವ ಕೆಲಸ ಆಗಬೇಕು. ಸರಕಾರದಿಂದ ಸೌಲಭ್ಯ ಪಡೆದ ಫಲಾನುಭವಿಗಳನ್ನು ಕರೆಸಿ ಅವರಿಗೆ ಯಾವ ಸಮಸ್ಯೆ ಇದೆ ಎಂದು ವಿಚಾರಿಸಬೇಕು. ಡ್ರಗ್ಸ್ ಮಾಫಿಯ ತಡೆಗಟ್ಟಬೇಕು ಎಂದರು.

ಪತ್ರಕರ್ತ ಸಂಶುದ್ದೀನ್ ಅವರು ಮಾತನಾಡಿ ಶಾಸಕರು ಪತ್ರಿಕಾ ಭವನಕ್ಕೆ ಮೇಲ್ಚಾವಣಿ ಒದಗಿಸಿ ಕೊಟ್ಟಿದ್ದಾರೆ. ಅದೇ ರೀತಿ ನಮ್ಮಲ್ಲಿನ ಗ್ರಾಮಾಂತರ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಒದಗಿಸಿದರೆ ಉತ್ತಮ ಎಂದರು.

ಡಾ. ಶ್ರೀಕುಮಾರ್, ರಾಧಾಕೃಷ್ಣ ನಂದಿಲ, ಲಕ್ಷ್ಮೀ ಇಂಡಸ್ಟ್ರೀಸ್‌ನ ಭರತ್ ಪೈ ಹಲವಾರು ಸಲಹೆಗಳನ್ನು ಸಭೆಯ ಮುಂದಿಟ್ಟರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾದಾಕೃಷ್ಣ ರೈ, ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ಪ್ರಣಾಳಿಕೆ ಜಿಲ್ಲಾ ಸಹಸಂಚಾಲಕ ಅಕ್ಷಯ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರಿ ಬನ್ನೂರು ವಂದೆ ಮಾತರಂ ಹಾಡಿದರು. ನ್ಯಾಯವಾದಿ ಶಂಭು ಭಟ್ ಸ್ವಾಗತಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಸಮಿತಿಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣಾಳಿಕೆ ಸಮಿತಿ ವಿದ್ಯಾ ಆರ್ ಗೌರಿ ಸ್ವಾಗತಿಸಿದರು. ತಿಲಕ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here