ಧರ್ಮಗುರುಗಳು ಸಮಾಜವನ್ನು ಜೋಡಿಸುವ ಕೊಂಡಿಗಳಾಗಬೇಕು: ಕೋಡಿಂಬಾಡಿ ಅಶೋಕ್ ರೈ
ಪುತ್ತೂರು: ಧರ್ಮಗಳ ನಡುವೆ ವೈಮನಸ್ಸು, ಜಾತಿ ಸಂಘರ್ಷಗಳಿಂದ ನಾವು ಪಡೆಯುವಂತದ್ದು ಏನೂ ಇಲ್ಲ. ನಾವು ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕುವುದನ್ನು ರೂಢಿಸಿಕೊಳ್ಳಬೇಕು, ಧರ್ಮದ ಹೆಸರಲ್ಲಿ ಸಂಘರ್ಷ ನಡೆಯುತ್ತಿದ್ದರೆ ನಮ್ಮ ದೇಶ ಉದ್ದಾರವಾಗುವುದಾದರೂ ಹೇಗೆ? ಧರ್ಮಗುರುಗಳು ಸಮಾಜವನ್ನು ಜೋಡಿಸುವ ಕೊಂಡಿಗಳಾಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪಡುಮಲೆ ಜುಮಾ ಮಸ್ಜಿದ್ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ನಡೆಸಿಕೊಂಡು ಬರುವ ಆಂಡ್‌ನೇರ್ಚೆ ಮತ್ತು ಕೂಟು ಪ್ರಾರ್ಥನೆ ಇದರ ಸಮಾರೋಪ ಸಮಾರಂಭದಲ್ಲಿ ನಡೆದ ಸೌಹಾರ್ದ ಸಂಗಮದಲ್ಲಿ ಮಾತನಾಡಿದರು. ಸಮಾಜದಲ್ಲಿರುವ ಹಿಂದೂಗಳು, ಮುಸ್ಲಿಂರು, ಕ್ರೈಸ್ತರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕಿದೆ. ನಾವು ಕಷ್ಟ ಬಂದಾಗ ನೆರವಾಗುವವನೇ ನಮ್ಮ ಬಂಧುವಾಗಿದ್ದಾನೆ, ನಾವು ಇಗೋ ಬಿಟ್ಟುಬಿಡಬೇಕು. ಇಗೋ ಕಾರಣಕ್ಕೆ ಕೆಲವರು ಧರ್ಮದ ವಿಚಾರದಲ್ಲಿ ವ್ಯರ್ಥ ಸಂಘರ್ಷವನ್ನು ಮಾಡುತ್ತಿದ್ದಾರೆ ಇದರಿಂದ ಸಮಾಜದ ನೆಮ್ಮದಿ ಹಾಳಾಗುತ್ತದೆ ಎಂದು ಹೇಳಿದರು.ನಾವು ಗತ ಕಾಲದ ಪ್ರೀತಿ, ಸ್ನೇಹವನ್ನು ಮತ್ತೆ ಮರಳಿ ತರಬೇಕು, ಯಾವುದೇ ಬೇದಭಾವವಿಲ್ಲದೆ ನಾವು ಸಮಾಜದಲ್ಲಿ ಒಟ್ಟಾಗಿರಬೇಕು.ಧರ್ಮ- ಧರ್ಮಗಳ ನಡುವೆ ಪ್ರೀತಿ ಬೆಳೆಸುವ ಕೆಲಸ ಅಗತ್ಯವಾಗಿ ನಡೆಯಬೇಕಿದೆ.ಧರ್ಮ ಮುನ್ನಡೆಸುವ ಮಂದಿ ಸಮಾಜದಲ್ಲಿ ಕೊಂಡಿಗಳಂತೆ ಕೆಲಸ ಮಾಡಬೇಕು, ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಹೇಳಿದರು.
ನನ್ನ ಬಗ್ಗೆ ತಪ್ಪು ಕಲ್ಪನೆ ಇತ್ತು
ನಾನು ಬಿಜೆಪಿಯಲ್ಲಿ 20 ವರ್ಷ ಕೆಲಸ ಮಾಡಿದವ, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಕೆಲವು ಮುಸ್ಲಿಂ ಬಂಧುಗಳು ನನ್ನ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದರು. ನಾನು ಬಿಜೆಪಿಯಲ್ಲಿದ್ದಾಗ ಸುಮಾರು 2200 ಮಂದಿ ಮುಸ್ಲಿಂ ಕುಟುಂಬಗಳಿಗೆ ನೆರವು ನೀಡಿದ್ದೇನೆ. ಬಿಜೆಪಿಯಲ್ಲಿರುವಾಗಲೂ ನಾನು ಯಾರನ್ನೂ ದ್ವೇಷಿಸಿಲ್ಲ ಇನ್ನೂ ದ್ವೇಷಿಸಲಾರೆ. ನನ್ನ ಬಗ್ಗೆ ತಪ್ಪು ಕಲ್ಪನೆ ಬೇಡ. ನಾವು ಒಬ್ಬರನ್ನೊಬ್ಬರು ಪರಸ್ಪರ ಅರಿತರೆ ಎಲ್ಲ ಸಂಶಯಗಳೂ ನಿವಾರಣೆಯಾಗುತ್ತದೆ ಎಂದು ಉದ್ಯಮಿ ಅಶೋಕ್‌ಕುಮಾರ್ ರೈ ಹೇಳಿದರು.
ಮಸೀದಿಯ ಎರಡು ಕಿ ಮಿ ವ್ಯಾಪ್ತಿಯಲ್ಲಿ ಮುಸ್ಲಿಮರ ಮನೆ ಇಲ್ಲ
ಪಡುಮಲೆ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಪಡುಮಲೆ ಮಸೀದಿ ಸುಮಾರು 800 ವರ್ಷಗಳ ಐತಿಹ್ಯವನ್ನು ಹೊಂದಿದೆ. ಪಕ್ಕದಲ್ಲೇ ಕಿನ್ನಿಮಾನಿ ಪೂಮಾನಿ ದೈವಸ್ಥಾನವಿದೆ. ಹಿಂದೆ ಭತ್ತ ಕೃಷಿ ಮಾಡುತ್ತಿರುವ ಕಾಲದಲ್ಲಿ ಪ್ರಥಮ ಕೊಯ್ಲಿನ ವೇಳೆ ಭತ್ತದ ತೆನೆಯನ್ನು ತಂದು ಮಸೀದಿ ಅಂಗಳದಲ್ಲಿ ಇಟ್ಟು ಆ ಬಳಿಕ ಉಳಿದ ಭತ್ತ ಕಟಾವು ಮಾಡುವ ಪೃವೃತ್ತಿ, ನಂಬಿಕೆ ಇತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಪಡುಮಲೆ ಮಸೀದಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿನ ಕಾರ್ಯಕ್ರಮಕ್ಕೆ ಸ್ಥಳೀಯ ಹಿಂದೂ ಬಂಧುಗಳು ತಮ್ಮ ಕಾರ್ಯಕ್ರಮದಂತೆ ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿರುವುದು ಇಲ್ಲಿನ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಮಸೀದಿಯ ಎರಡೂವರೆ ಕಿ ಮಿ ವ್ಯಾಪ್ತಿಯಲ್ಲಿ ಒಂದೇ ಒಂದು ಮುಸ್ಲಿಂ ಮನೆಗಳಿಲ್ಲ, ಮಸೀದಿಯ ಸುತ್ತಲೂ ಹಿಂದೂ ಬಂಧುಗಳ ಮನೆಗಳಿರುವುದು ಇಲ್ಲಿನ ವಿಶೇಷತೆಯಾಗಿದೆ ಎಂದು ಹೇಳಿದರು.
ಭಾರತ ಎಂದೆಂದೂ ಭಾರತವೇ: ಎಂ ಬಿ ವಿಶ್ವನಾಥ ರೈ
ಭಾರತ ಎಂದೂ ಹಿಂದೂ ರಾಷ್ಟ್ರವಾಗಬಾರದು, ಮುಸ್ಲಿಂ ರಾಷ್ಟವಾಗಬಾರದು ಭಾರತ ಎಂದೆಂದೂ ಭಾರತವಾಗಿಯೇ ಇರಬೇಕು. ಇಲ್ಲಿ ಎಲ್ಲಾ ಸಮುದಾಯದವರು ಐಕ್ಯತೆಯಿಂದ ಬಾಳಿ ಬದುಕಬೇಕು. ವಿವಿಧತೆಯಲ್ಲಿ ಏಕತೆಯೇ ಭಾರತದ ಕಿರೀಟವಾಗಿದೆ. ನಾವು ಯಾವ ಧರ್ಮದವರನ್ನೂ ತೆಗಳಬಾರದು, ನಿಂದಿಸಬಾರದು. ನಾನೇ ಶ್ರೇಷ್ಠ ಎಂಬ ಅಹಂಬಾವನ್ನು ಬಿಟ್ಟು ಸಮಾಜದಲ್ಲಿ ಎಲ್ಲರೊಂದಿಗೂ ಸ್ನೇಹದಿಂದ ಬಾಳ್ವೆ ನಡೆಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರಿಶ್ ಮಸ್ಕರೇನಸ್ ಮಾತನಾಡಿ ನಾವು ಧರ್ಮದ , ಜಾತಿಯ ಹೆಸರಿನಲ್ಲಿ ಕಲಹವನ್ನು ಸೃಷ್ಟಿಸಬಾರದು. ಸೌಹಾರ್ದತೆಯಿಂದ ಬಾಳಬೇಕು. ಎಲ್ಲಾ ಧರ್ಮವನ್ನು ಗೌರವಿಸುವ ವ್ಯಕ್ತಿಗಳಾಗಬೇಕು. ಸದ್ಯ ದೇಶದಲ್ಲಿರುವ ಅಶಾಂತಿಯ ವಾತಾವರಣ ತಿಳಿಯಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಸಾಹಿತಿ ಕೆ ಪಿ ಸಂಜೀವ ರೈ ಬಡಗನ್ನೂರು, ಗುರುಪ್ರಸಾದ್ ರೈ ಕುದ್ಕಾಡಿ, ಹನೀಫ್ ಮಾಡಾವು, ಸಿದ್ದಿಕ್ ಸುಲ್ತಾನ್ ಕೂಡುರಸ್ತೆ, ಉದ್ಯಮಿ ಸುಧಾಕರ ಶೆಟ್ಟಿ, ಪಡುಮಲೆ ಕೋಟಿ ಚೆನ್ನಯ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್‌ಪೂಜಾರಿ, ಮೊದಲಾದವರು ಉಪಸ್ತಿತರಿದ್ದರು. ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು.
ಹಣಕಾಸಿನ ವ್ಯವಹಾರ ಕ್ರಮಬದ್ದವಾಗಿರಲಿ: ಇ ಪಿ ಅಬೂಬಕ್ಕರ್ ಖಾಸಿಮಿ
ಮುಖ್ಯ ಭಾಷಣ ಮಾಡಿದ ಇ ಪಿ ಅಬೂಬಕ್ಕರ್ ಅಲ್‌ಖಾಸಿಮಿ ಪತ್ತನಾಪುರಂ ಮಾತನಾಡಿ ನಾವು ದಿನ ನಿತ್ಯ ಮಾಡುವ ಹಣಕಾಸಿನ ವ್ಯವಹಾರ ಕ್ರಮಬದ್ದವಾಗಿರಬೇಕು. ಸಾಲ ಮಾಡಿದರೆ ಅದನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಬೇಕು. ಸಾಲ ಮಾಡಿ ಅದನ್ನು ಪಾವತಿಮಾಡದೇ ಇದ್ದಲ್ಲಿ ನಮ್ಮ ಪರಲೋಕ ಜೀವನ ನಷ್ಟದಲ್ಲಾಗಬಹುದು ಎಂದು ಎಚ್ಚರಿಕೆ ನೀಡಿದರು.
ನಾವು ಇನ್ನೊಬ್ಬರ ನಯಾ ಪೈಸೆ ಹಣವಾಗಲಿ, ಇನ್ನೊಬ್ಬರಿಗೆ ಸೇರಿದ ಯಾವುದೇ ವಸ್ತುವಾಗಲಿ ಅದು ನಮ್ಮ ಹೊಟ್ಟೆಗೆ ಸೇರಬಾರದು. ಇಸ್ಲಾಂ ಸಾಲವನ್ನು ಗೌರವದಿಂದ ಕಾಣುತ್ತದೆ. ಮರಣದ ಬಳಿಕ ನಮ್ಮ ಜೀವನ ಆರಂಭವಾಗುತ್ತದೆ ಆ ಜೀವನ ಉತ್ತಮವಾಗಿರಬೇಕಾದರೆ ನಾವು ಸಾಲಮುಕ್ತರಾಗಿ ಮರಣಹೊಂದಬೇಕಿದೆ. ಮುಂದಿನ ಕೆಲವೇ ದಿನದಲ್ಲಿ ಪವಿತ್ರ ರಂಝಾನ್ ತಿಂಗಳು ಆರಂಭವಾಗಲಿದ್ದು ಇದಕ್ಕಾಗಿ ಸರ್ವರೂ ಸಜ್ಜುಗೊಳ್ಳಬೇಕು. ಯಾರನ್ನೂ ದ್ವೇಷಿಸಬೇಡಿ, ಎಲ್ಲರಲ್ಲೂ ಒಳ್ಳೆಯತನದಿಂದ ಜೀವನ ನಡೆಸಬೇಕು ಎಂದು ಹೇಳಿದರು. ತಂದೆ , ತಾಯಿಯ ಸೇವೆಯನ್ನು ಮಾಡುವ ಮೂಲಕ ನಮ್ಮ ಜೀವನವನ್ನು ಪುನೀತಗೊಳಿಸಬೇಕು ಎಂದು ಹೇಳಿದರು. ಪಡುಮಲೆ ಜುಮಾ ಮಸ್ಜಿದ್ ಖತೀಬರಾದ ಶಂಸುದ್ದೀನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಜಮಾತ್ ಕಮಿಟಿ ಉಪಾಧ್ಯಕ್ಷರಾದ ಫಕ್ರುದ್ದೀನ್ ಹಾಜಿ, ಕೋಶಾಧಿಕಾರಿ ಅಬೂಬಕ್ಕರ್ ಹಾಜಿ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಅಲಿಹಾಜಿ ಪಿಲಿಪುಡೆ, ಮದ್ರಸ ಮೆನೆಜ್‌ಮೆಂಟ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಹಿರಾ, ಆದಂ ಹಾಜಿ ಗೋಲ್ಡ್ ಬಜಾರ್, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅಬೂಬಕ್ಕರ್ ಹಾಜಿ ಮಂಗಳ ಬೆಳ್ಳಾರೆ, ಈಶ್ವರಮಂಗಲ ಜುಮಾ ಮಸೀದಿ ಅಧ್ಯಕ್ಷರಾದ ಟಿ ಎ ಖಾದರ್ ಹಾಜಿ ಉದ್ಯಮಿ ಮುಹಮ್ಮದ್ ರಿಯಾಝ್ ಉಪಸ್ಥಿತರಿದ್ದರು.
ಜಮಾತ್ ಅಧ್ಯಕ್ಷರಾದ ಮಹಮ್ಮದ್ ಹಾಜಿ ಬಡಗನ್ನೂರು ಸ್ವಾಗತಿಸಿ ವಂದಿಸಿದರು. ಸಮಾರೋಪ ಸಮಾರಂಭದ ಪ್ರಯುಕ್ತ ಅನ್ನದಾನ ನಡೆಯಿತು. ಸಾವಿರಾರು ಮಂದಿ ಅನ್ನದಾನದಲ್ಲಿ ಭಾಗವಹಿಸಿದರು. ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಪ್ರದರ್ಶನ ನಡೆಯಿತು.