ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭರದಿಂದ ಸಾಗುತ್ತಿದೆ ಹತ್ತಾರು ಮಾಸ್ಟರ್ ಪ್ಲಾನ್ ಅಭಿವೃದ್ಧಿ ಕಾರ್ಯಗಳು

0

  • ಜಾತ್ರೆ ಮುಂದೆ ಕೆರೆಯ ಶಿಲಾ ಕಟ್ಟೆ ಕಾಮಗಾರಿ ಪೂರ್ಣ
  • ಮಾ.25ಕ್ಕೆ ಜಾತ್ರೆಗೆ ಸಾರ್ವಜನಿಕ ಭಕ್ತರ ಪೂರ್ವಭಾವಿ ಸಭೆ
  • ಅನ್ನದಾನ ಸೇವೆಗೆ ಭಕ್ತರಿಗೂ ಅವಕಾಶ
  • ಏ.9ಕ್ಕೆ ಹೊರೆಕಾಣಿಕೆ ಸಮರ್ಪಣೆ
  • 19.10 ಎಕ್ರೆ ಗೋ ಸಂವರ್ಧನ ಕೇಂದ್ರ
  • ಮೇತಿಂಗಳಲ್ಲಿ ಅನ್ನಪೂರ್ಣ ಛತ್ರ ಉದ್ಘಾಟನೆ
  • ಯುಗಾದಿ ಪಂಚಾಗ ಪಠಣ, ಕ್ಯಾಲೆಂಡರ್ ಬಿಡುಗಡೆ
  • ಒಳಂಗಾಣಕ್ಕೆ ನೂತನ ಚಪ್ಪರ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹತ್ತಾರು ಮಾಸ್ಟರ್ ಪ್ಲಾನ್ ಅಭಿವೃದ್ದಿ ಕಾರ್ಯಗಳು ನಿರಂತರ ನಡೆಯುತ್ತಿದ್ದು, ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಶಿಲಾ ಕಟ್ಟೆಯ ಕಾಮಗಾರಿ ಜಾತ್ರೆ ಮುಂದೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಅನ್ನಛತ್ರ ಮೇಲಂತಸ್ತು ನಿರ್ಮಾಣ, ಸಭಾಭವನದ ನವೀಕರಣ, ಆವರಣಗೋಡೆ, ದೇವಳದ ಹೊರಾಂಗಣ ಚರಂಡಿ ಅಭಿವೃದ್ಧಿ, ಇಂಟರ್‌ಲಾಕ್ ಅಳವಡಿಕೆ, ರಥ ಮಂದಿರ ನಿರ್ಮಾಣ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ದೇವಳದ ವ್ಯವಸ್ಥಾಪನಾ ಸಮಿತಿ ಕೈಗೆತ್ತಿಗೊಂಡಿದೆ.

ಪುತ್ತೂರು ಜಾತ್ರೆ ಸಹಿತ ದೇವಳದಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ 10 ದಿನದ ಜಾತ್ರೆ ಸಂಭ್ರಮ ಬ್ರಹ್ಮಕಲಶದ ಮಾದರಿಯಲ್ಲಿ ನಡೆಯಲಿದೆ. ಹತ್ತೂರಿನಲ್ಲಿ ನೆಲೆಸಿರುವ ಊರ ಪರವೂರಿನ ಭಕ್ತರು ಜಾತ್ರೆಯ ಸಂದರ್ಭ ಭಾಗವಹಿಸುವುದು ವಿಶೇಷ ಎಂದು ಅವರು ಹೇಳಿದರು.

ಮಾ.25ಕ್ಕೆ ಸಾರ್ವಜನಿಕ ಭಕ್ತರ ಪೂರ್ವ ಭಾವಿ ಸಭೆ:
ಜಾತ್ರೆಯ ಸಿದ್ದತೆಯ ನಿಟ್ಟಿನಲ್ಲಿ ಮಾ.25ಕ್ಕೆ ಸಾರ್ವಜನಿಕ ಭಕ್ತರ ಪೂರ್ವ ಭಾವಿ ಸಭೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ ದರ್ಬೆಯಿಂದ ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ನಡೆಯಲಿದೆ. ವಿಶೇಷವಾಗಿ ಜಾತ್ರೆಯ ಸಂದರ್ಭ 11 ದಿನ ಸಾಂಸ್ಕೃತಿಕ ಕಾರ್ಯಕ್ರಮ, 11 ದಿನ ಮಹಾರುದ್ರಯಾಗ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಅನ್ನ ಸಂತರ್ಪಣೆಗೆ ದಾನಿಗಳು ಅನ್ನದಾನ ಸೇವೆಗೆ ಅವಕಾಶ ಕಲ್ಪಿಸಲಾಗಿದೆ ಎಂದ ಕೇಶವಪ್ರಸಾದ್ ಮುಳಿಯ ಅವರು ಸ್ವಚ್ಛತೆ ಸಹಿತ ಹಲವಾರು ಕಾರ್ಯಗಳಿಗೆ ಜಾತ್ರೆಯ ಸಂದರ್ಭ ಸ್ವಯಂ ಸೇವಕರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಆದಷ್ಟು ತಮ್ಮ ತಮ್ಮ ಹೆಸರನ್ನು ದೇವಳಕ್ಕೆ ನೀಡಿ ಸಹಕಾರ ನೀಡಬೇಕು. ಮಮ ಪರಿವಾರದ ಮೂಲಕವು ಸದಸ್ಯರು ವಿವಿಧ ಸೇವಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಏ.9ಕ್ಕೆ ಹೊರೆಕಾಣಿಕೆ ಸಮರ್ಪಣೆ:
ಏ.9ಕ್ಕೆ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ ದರ್ಬೆಯಿಂದ ಮತ್ತು ಬೊಳುವಾರಿನಿಂದ ಹೊರೆಕಾಣಿಕೆ ಮೆರವಣಿಗೆ ದೇವಳಕ್ಕೆ ಆಗಮಿಸಲಿದೆ. ಇದರ ಜೊತೆಗೆ ಧಾರ್ಮಿಕ ಶ್ರದ್ದಾಕೇಂದ್ರಗಳಿಂದಲೂ ಪ್ರತ್ಯೇಕವಾಗಿ ಅದೇ ದಿನ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

19.10 ಎಕ್ರೆ ಗೋ ಸಂವರ್ಧನ ಕೇಂದ್ರ:
ದೇವಸ್ಥಾನಕ್ಕೆ ಗೋ ಸಂವರ್ಧನ ಕೇಂದ್ರ ಆಗಬೇಕೆಂಬ ಅಪೇಕ್ಷೆಯಂತೆ ಸಂಸದ ನಳಿನ್ ಕಮಾರ್ ಕಟೀಲ್ ಮತ್ತು ಶಾಸಕ ಸಂಜೀವ ಮಠಂದೂರು ಅವರ ಮಾರ್ಗದರ್ಶನ ಮತ್ತು ಕಾಳಜಿಯಿಂದ ದೇವಸ್ಥಾನಕ್ಕೆ ಕುರಿಯ ಗ್ರಾಮದ ನೈತ್ತಾಡಿ ಡಿಸಿಆರ್‌ಬಿ ಪಕ್ಕದಲ್ಲೇ ಸುಮಾರು 19.10 ಎಕ್ರೆ ಜಾಗವನ್ನು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಂಜೂರುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ದೇವಳದ ಅಡಳಿತ ಮಂಡಳಿ ಪರವಾಗಿ ಸಂಸದರಿಗೆ ಮತ್ತು ಶಾಸಕರಿಗೆ ಹಾಗು ಸಾಮಾಜಿಕ ಕಾರ್ಯಕರ್ತ ರಂಜಿತ್ ಜೈನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಾ.27ಕ್ಕೆ ಗೋ ಸಂವರ್ಧನ ಕೇಂದ್ರವನ್ನು ಹಸ್ತಾಂತರ ಕಾರ್ಯಕ್ರಮ ನಡೆಸಲಾಗುವುದು. ಬೆಳಿಗ್ಗೆ ಗೋ ಸಂವರ್ಧನ ಜಾಗದಲ್ಲೇ ಗಣಪತಿ ಹೋಮ ನಡೆದು ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಪುಷ್ಕರಣಿ ಅಭಿವೃದ್ಧಿ ಕೆಲಸ ಪ್ರಾರಂಭ:
ದೇವಳದ ಪುಷ್ಕರಣಿ ಅಭಿವೃದ್ಧಿಗೆ ನಗರಯೋಜನಾ ಪ್ರಾಧಿಕಾರದ ಮೂಲಕ ರೂ. 35 ಲಕ್ಷ ಅನುದಾನ ಮಂಜೂರಾಗಿದೆ. ಇದಕ್ಕೆ ಮತ್ತೂ ರೂ. 65ಲಕ್ಷ ಅನುದಾನವನ್ನು ಬಿಡುಗಡೆಗೊಳಿಸುವಲ್ಲಿ ಶಾಸಕರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಸಾಮಾಜಿಕ ಕಾರ್ಯಕರ್ತ ರಂಜಿತ್ ಜೈನ್ ತುಂಬಾ ಸಹಕಾರ ನೀಡಿದ್ದಾರೆ ಎಂದು ಹೇಳಿದ ಕೇಶವಪ್ರಸಾದ್ ಮುಳಿಯ ಅವರು ಈಗಾಗಲೇ ಕೆರೆಯಲ್ಲಿ ಶಿಲಾಮಯ ದೇವರ ಕಟ್ಟೆ ನಿರ್ಮಾಣ ಮಾಡಲಾಗುವುದು. ಅದಕ್ಕಾಗಿ ಕೆರೆಯ ನೀರನ್ನು ಕಾಮಗಾರಿ ನಡೆಸಲು ಅಡ್ಡಿಯಾಗದಂತೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹೊರ ತೆರೆಯಲಾಗುತ್ತಿದೆ. ಇದರ ಜೊತೆಗೆ ಕೆರೆಯಲ್ಲಿರುವ ಮತ್ಸ್ಯಗಳಿಗೆ ಹೊಸ ನೀರನ್ನು ಅವಶ್ಯಕತೆಗೆ ತಕ್ಕಂತೆ ನೀಡಲಾಗುತ್ತಿದೆ ಎಂದರು.

ಮೇ ತಿಂಗಳಲ್ಲಿ ಅನ್ನಪೂರ್ಣ ಛತ್ರ ಉದ್ಘಾಟನೆ:
ಈಗಾಗಲೇ ಅನ್ನಪೂರ್ಣ ಛತ್ರದ ಕಾಮಗಾರಿ ನಡೆಯುತ್ತಿದ್ದು, ಮೇ ತಿಂಗಳಲ್ಲಿ ಅದರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮನೆ ಮನೆಯಿಂದ ಮುಷ್ಟಿ ಅಕ್ಕಿಯನ್ನು ತಂದು ಅದರ ಮೂಲಕ ಅನ್ನಪ್ರಸಾದ ಸಹಿತ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಯುಗಾದಿ ಪಂಚಾಗ ಪಠಣ, ಕ್ಯಾಲೆಂಡರ್ ಬಿಡುಗಡೆ:
ಮಾ.22ರಂದು ಚೈತ್ರ ವೈಶಾಖ ಭಾರತೀಯ ಪರಂಪರೆಯ ರೀತಿಯಲ್ಲಿನ ಕ್ಯಾಲೆಂಡರ್ ಅನ್ನು ಮಾ.22ರಂದು ಯುಗಾದಿಯಂದು ಬಿಡುಗಡೆಗೊಳಿಸಲಾಗುವುದು. ಆನ್‌ಲೈನ್ ಮೂಲಕ ಇದರ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಕ್ಯಾಲೆಂಡರ್ ರಚಿಸಿದ ವಿನಾಯಕ ಭಟ್ ಗಾಳಿಮನೆ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೇವಳದ ಪ್ರಧಾನ ಅರ್ಚಕ ವೇ ಮೂ ವೆಸಂತ ಕೆದಿಲಾಯ ಅವರು ಯುಗಾದಿ ಪಂಚಾಗ ಪಠಣ ಮಾಡಲಿದ್ದಾರೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಮಾಸ್ಟರ್ ಪ್ಲಾನ್ ಕಾಮಗಾರಿಗಳು:
ದೇವಸ್ಥಾನದ ಸಮಗ್ರ ಅಭಿವೃದ್ಧಿಯಲ್ಲಿ ಮಾಸ್ಟರ್ ಪ್ಲಾನ್ ಕಾಮಗಾರಿ ನಡೆಸಲಾಗುತ್ತಿದೆ. ಅನ್ನಛತ್ರ ಮೇಲಸ್ತು ನಿರ್ಮಾಣಕ್ಕೆ ರೂ. 2 ಕೋಟಿ, ಸಭಾಭವನ ನವೀಕರಣಕ್ಕೆ ರೂ. 2 ಕೋಟಿ, ಆವರಣಗೋಡೆ ನಿರ್ಮಾಣಕ್ಕೆ ರೂ. 1 ಕೋಟಿ, ಪುಷ್ಕರಿಣಿ ಅಭಿವೃದ್ಧಿ ನವೀಕರಣಕ್ಕೆ ರೂ.1 ಕೋಟಿ, ದೇವಳದ ಹೊರಾಂಗಣ ಚರಂಡಿ ಅಭಿವೃದ್ಧಿ, ಇಂಟರ್‌ಲಾಕ ಅಳವಡಿಕೆಗೆ ರೂ.2 ಕೋಟಿ, ರಥ ಮಂದಿರ ನಿರ್ಮಾಣಕ್ಕೆ ರೂ.1 ಕೋಟಿ ಯೋಜನೆ ಮಾಡಲಾಗಿದೆ. ದೇಣಿಗೆ ನೀಡುವವರು ದೇವಳದ ಬ್ಯಾಂಕ್ ಖಾತೆಗೆ ಹಣ ನೀಡಬಹುದು. ಒಟ್ಟು ಮಾಸ್ಟರ್ ಪ್ಲಾನ್ ಯೋಜನೆಗೆ ಆರ್ಕಿಟೆಕ್ಟ್ ಆಗಿ ಅನೂಪ್ ನಾಯಕ್ ಅವರನ್ನು ನಿಯೋಜನೆ ಮಾಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

ಒಳಂಗಾಣಕ್ಕೆ ನೂತನ ಚಪ್ಪರ:
ದೇವಳದ ಒಳಾಂಗಣಕ್ಕೆ ಶಾಶ್ವತ ಒಳಾಂಗಣ ಚಪ್ಪರವನ್ನು ಮಾಡಲಾಗಿದೆ. ಅಷ್ಟಮಂಗಲ ಪ್ರಶ್ನೆಚಿಂತನೆಯಲ್ಲಿ ಅಪ್ಪಣೆ ಪಡೆದೇ ಈ ಯೋಜನೆ ಹಾಕಲಾಗಿದ್ದು, ಇಲ್ಲಿ ದೇವರ ಗರ್ಭಗುಡಿ ಮತ್ತು ಗೋಪುರದ ಛಾವಣಿಗೆ ಚಪ್ಪರ ತಾಗದ ಶೈಲಿಯಲ್ಲಿ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಸಾಂಪ್ರಾದಾಯಿಕ ಮಡಲಿನ ಚಪ್ಪರ ಬದಲಿಗೆ ಶೀಟ್ ಹೊದಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಕೇಶವಪ್ರಸಾದ್ ಮುಳಿಯ ತಿಳಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೀಣಾ ಬಿ.ಕೆ, ರಾಮದಾಸ್ ಗೌಡ, ಶೇಖರ್ ನಾರಾವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೆರೆಯ ಅಭಿವೃಧ್ದಿ ಕಾಮಗಾರಿ ವೀಕ್ಷಣೆಯನ್ನು ಮಾಡುವ ಸಂದರ್ಭ ಕಟ್ಟೆಯ ಶಿಲ್ಪಿ ಗುಣವಂತೇಶ್ವರ ಭಟ್ ಅವರು ವಿವಿಧ ಮಾಹಿತಿ ನೀಡಿದರು.

ಯೋಜನೆಯಿಂದ ದೇವಳಕ್ಕೆ ಆದಾಯ
ಕಳೆದ ಬಾರಿ ದೇವಳದ ಸಭಾಭವನದ ಮೇಲಂತಸ್ತಿನಲ್ಲಿ ವ್ಯಾಪಾರ ಮೇಳ ಮಾಡಿದ ಬಳಿಕ ಅದಕ್ಕೆ ಒಂದಷ್ಟು ಇತರ ಮಳಿಗೆಗಳು ಬಾಡಿಗೆ ನೆಲೆಯಲ್ಲಿ ಬಂದಿದ್ದರಿಂದ ಸುಮಾರು ರೂ. 2ಲಕ್ಷ ದೇವಳಕ್ಕೆ ಲಾಭವಾಗಿದೆ. ಅದೆ ರೀತಿ ದೇವಳದ ಗೋ ಶಾಲೆಯಿಂದ ಗೋವುಗಳ ಸ್ಲರಿಯನ್ನು ಶೇಖರಣೆ ಮಾಡಿ ಅದನ್ನು ಟ್ಯಾಂಕರ್ ಮೂಲಕ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತದೆ. ರೂ. 9ಸಾವಿರದ ಹಾಗೆ ಕೃಷಿಕರು ಪಡೆಯುತ್ತಿದ್ದಾರೆ. ಇದರ ಜೊತೆಗೆ ಸೀಯಾಳದ ಸೆಪ್ಪೆಯನ್ನು ಮಾರಾಟ ಮಾಡಲಾಗುತ್ತಿದೆ. ಇವೆಲ್ಲ ದೇವಳಕ್ಕೆ ಆದಾಯ ರೂಪದಲ್ಲಿ ಬರುತ್ತಿದೆ. ಇದರ ಜೊತೆಗೆ ತ್ಯಾಜ್ಯ ಘಟಕದ ನಿರ್ಮಾಣ ಹಂತದಲ್ಲಿದೆ. ಅದಾದ ಬಳಿಕ ದೇವಳದ ಪರಿಸದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಘಟಕದ ಮೂಲಕ ಗೊಬ್ಬರವನ್ನಾಗಿ ಮಾಡಲಾಗುವುದು ಎಂದು ಮುಳಿಯ ಕೇಶವಪ್ರಸಾದ್ ಹೇಳಿದರು.

ಪುತ್ತೂರು ಜಾತ್ರೆಗೆ ಗ್ರೂಪ್ ಇನ್ಶೂರೆನ್ಸ್
ಪುತ್ತೂರು ಜಾತ್ರೆಗೆ ಲಕ್ಷೋಪ ಲಕ್ಷ ಮಂದಿ ಭಕ್ತರು ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಭಕ್ತರ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯ ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಜಾತ್ರೆಗೆ ದೇವಳದ ಆಡಳಿತ ಮಂಡಳಿ ಗ್ರೂಪ್ ಇನ್ಶೂರೆನ್ಸ್ ಮಾಡುವ ಚಿಂತನೆ ಮಾಡಿದೆ. ಈಗಾಗಲೇ ಎರಡು ಮೂರು ಕಂಪೆನಿಗಳು ತಮ್ಮ ತಮ್ಮ ಗ್ರೂಪ್ ವಿಮಾ ವಿವರಗಳನ್ನು ನೀಡಿರುವುದಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here