ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

0

ಮಹಿಳೆಯರು ಜಾಗೃತವಾದರೆ ಸಮಾಜದ ಪರಿವರ್ತನೆ-ಸಂಜೀವ ಮಠಂದೂರು

ಪುತ್ತೂರು: ಜಾಗೃತ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಮಹಿಳೆಯರು ಜಾಗೃತರಾದಾಗ ಉತ್ತಮ ಕುಟುಂಬ ನಿರ್ವಹಣೆ, ನೆಮ್ಮದಿ, ಸಮೃದ್ದಿ ದೊರೆಯುತ್ತದೆ ಎಂಬ ಭಾವನೆಯಿದೆ. ಇದಕ್ಕಾಗಿಯೇ ಸರಕಾರದ ಸವಲತ್ತುಗಳನ್ನು ಮಹಿಳೆಯರಿಗೆ ನೀಡುತ್ತದೆ. ಮಹಿಳೆಯನ್ನು ಸಮಾಜಮುಖಿಯಾಗಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಸಿದರೆ ಈ ಸಮಾಜದ ಜಗತ್ತಿನ ಇತರ ಸಮಾಜಕ್ಕಿಂತ ಭಿನ್ನವಾಗಲಿದೆ. ಮಹಿಳೆಯರು ಜಾಗೃತರಾದರೆ ಸಮಾಜದ ಪರಿವರ್ತನೆ ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ವತಿಯಿಂದ ಮಾ.21ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಮಹಿಳೆಗೆ ಪೂಜನೀಯ ಸ್ಥಾನ ನೀಡಲಾಗಿದೆ. ರಾಜಪರಂಪರೆಯಿಂದ ಬಂದಿರುವ ಭಾರತದಲ್ಲಿ ಪ್ರಜಾಪ್ರಭುತ್ವದಲ್ಲಿಯೂ ವಿಶೇಷ ಸ್ಥಾನಮಾನ ನೀಡಲಾಗಿದೆ. ಒಂದು ದಿನ ನಡೆಸುವ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ಭಾವನಗೆಳು ವರ್ಷದ 365 ದಿನಗಳೂ ಮಹಿಳಾ ದಿನಾಚರಣೆಯ ಮಹತ್ವದ ಉದ್ದೇಶಗಳು ಅನುಷ್ಟಾನವಾಗಬೇಕು ಎಂದರು.

ತಳಮಟ್ಟದ ನೌಕರರ ಮೇಲೆ ಸರಕಾರ ಕರುಣೆ ತೋರಿದ್ದು ರಾಜ್ಯ ಸರಕಾರ ಈ ಸಾಲಿನ ಬಜೆಟ್‌ನಲ್ಲಿ ಅವರ ಸಂಭಾವನೆಯನ್ನು ಹೆಚ್ಚಿಸುವ ಕಾರ್ಯವಾಗಿದೆ. ಗ್ರಾಮದಲ್ಲಿ ಗ್ರಾಮ ಸಹಾಯಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಡುಗೆ ಸಹಾಯಕಿಯರ ಸಂಭಾವಣೆಯನ್ನು ಸರಕಾರ ಏರಿಕೆಮಾಡಿದೆ. ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ಕಡೆ ಸ್ವಂತ ನಿವೇಶನ ಹಾಗೂ ಕಟ್ಟಡಕ್ಕಾಗಿ ಅಧಿವೇಶನದಲ್ಲಿ ಸರಕಾರ ಗಮನ ಸೆಳೆಯುವ ಪ್ರಯತ್ನಮಾಡಲಾಗಿದೆ. ಮಕ್ಕಳಿಗೆ ಶುದ್ದ ಕುಡಿಯುವ ನೀರಿಗಾಗಿ ತಾಲೂಕಿನ 215 ಅಂಗನವಾಡಿ ಕೇಂದ್ರಗಳಿಗೆ ಆರ್ ಓ ಪ್ಲಾಂಟ್ ಒದಗಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ವೇದಾವತಿ ಅಧ್ಯಕ್ಷತೆ ವಹಿಸಿದ್ದರು. ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಜಿಲ್ಲಾಧ್ಯಕ್ಷೆ ಮಮತಾ, ಕಾನೂನು ಸಲಹೆಗಾರೆ ಹೀರಾ ಉದಯ್, ನೇತ್ರಾವತಿ ಸ್ತ್ರೀಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮೀನಾಕ್ಷಿ ಮಂಜುನಾಥ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಇಲಾಖೆ ಹಾಗೂ ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಮಟ್ಟದ ಕೆಳದಿ ಚೆನ್ನಮ್ಮ ಹೊಯ್ಸಳ ಪ್ರಶಸ್ತಿ ಪುರಸ್ಕೃತರಾದ ಅನ್ವಿತ್, ಧನ್ಯಶ್ರೀ ಎಚ್.ಆರ್, ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪು ರಾಜ್ಯ ಪ್ರಶಸ್ತಿ ಪಡೆದ ನೆಲ್ಯಾಡಿ ಕೊಲ್ಯೊಟ್ಟು ಬೈಲು ಸ್ತ್ರೀಶಕ್ತಿ ಗುಂಪಿನ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆ, ಸಾಮಾಜಿಕ ಸೇವಾ ಕಾರ್ಯಕರ್ತೆ ಹೇಮಶ್ರೀ, ಕೃಷಿ ಪ್ರಶಸ್ತಿ ಪುರಸ್ಕೃತ ಅನಿತಾ ಕೂವೆಂಜ, ಅತ್ಯುತ್ತಮ ಅಂಗನವಾಡಿ ಪ್ರಶಸ್ತಿ ಪಡೆದ ಕೋಡಿಂಬಾಳ ಪುಳಿಕುಕ್ಕು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸವಿತಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬಂದಿ ನಿವೃತ್ತ ಶಶಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅದೃಷ್ಠ ಮಹಿಳೆಗೆ ಬಹುಮಾನ ವಿತರಿಸಲಾಯಿತು.

ಗೀತಾ ದೋಂತಿಲ ಪ್ರಾರ್ಥಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಮಮತಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here