ಪುತ್ತೂರು: ರಾಷ್ಟ್ರೀಯ ರಾಜಕೀಯ ಪಕ್ಷಗಳ ಕಛೇರಿಗಳಿಗೆ ಭೇಟಿ ಮಾಡಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮಕ್ಕಳ ಬೇಡಿಕೆಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಟಾನಕ್ಕೆ ತರುವಂತೆ ಮತ್ತು ಮಕ್ಕಳ ಹಕ್ಕುಗಳ ಪರವಾದ ಚುನಾವಣಾ ಪ್ರಣಾಳಿಕೆಗಾಗಿ ಹಕ್ಕೊತ್ತಾಯ ಸಭೆಯು ಮಾ.22ರಂದು ಬೆಳಿಗ್ಗೆ ಗಂಟೆ 1೦ಕ್ಕೆ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ (ಸಿ.ಎ.ಸಿ.ಎಲ್-ಕೆ), ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) , ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ದಕ್ಷಿಣ ಕನ್ನಡ ಮತ್ತು ಎಸ್. ಡಿ.ಎಂ.ಸಿ ಸಮನ್ವಯ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಲಯನ್ಸ್ ಕ್ಲಬ್ ನಲ್ಲಿ ನಡೆಯಲಿದೆ.
ಮಕ್ಕಳಿಗೆ ಮೂಲಭೂತ ಸೌಕರ್ಯ ಮತ್ತು ಹಕ್ಕುಗಳಾದ ರಕ್ಷಣೆ, ಪೋಷಣೆ, ಆರೋಗ್ಯ, ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನು, ಕಾಯಿದೆ, ಪಾಲಿಸಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ರಾಜ್ಯದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಖಾತರಿ ಪಡಿಸುವುದರೊಂದಿಗೆ ಮಕ್ಕಳ ಸ್ನೇಹಿ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಪಕ್ಷಗಳು ಬದ್ಧರಾಗಬೇಕು ಮತ್ತು ಇದು ಪ್ರತಿಯೊಂದು ಪಕ್ಷದ ಹಾಗೂ ವ್ಯಕ್ತಿಯ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎನ್ನುವುದನ್ನು ತಿಳುವಳಿಕೆ ಮಾಡಿ ಕೊಡುವ ಪ್ರಯತ್ನದ ಕುರಿತು ಸಭೆಯು ನಡೆಯಲಿದೆ. ಸಿಎಸೆಲ್ಕೆ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಜಿಲ್ಲಾ ಸಂಚಾಲಕ ರೆನ್ನಿ ಡಿಸೋಜ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಜಿಲ್ಲೆಯ ಅಧ್ಯಕ್ಷೆ ಶ್ರೀಮತಿ ನಯನ ರೈ, ರಾಜ್ಯ ಎಸ್.ಡಿ.ಎಮ್.ಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಮೋಹಿದ್ದಿನ್ ಕುಟ್ಟಿ, ಎಸ್ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಇಸ್ಮಾಯಿಲ್ ಸಿಎಸಿಎಲ್ಕೆ ಸಂಯೋಜಕ ಸಿದ್ದಾಂತ್ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.