ಚುನಾವಣಾ ಅಖಾಡಕ್ಕೆ ಧುಮುಕಿದ ಸಂಘ ಪರಿವಾರ-ಬಿಜೆಪಿಯಿಂದ ದೂರ!

0

ಆರ್‌ಎಸ್‌ಎಸ್‌ನಿಂದ ಮನೆ ಮನೆಗಳಲ್ಲಿ ಲೋಕ ಸಂಪರ್ಕ ಅಭಿಯಾನ

✍️ಸಂತೋಷ್ ಕುಮಾರ್ ಶಾಂತಿನಗರ

ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಪರಿವಾರ ಸಂಘಟನೆಗಳು ಕರ್ನಾಟಕ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ನೇರವಾಗಿ ಧುಮುಕಿದೆ. ವಿಶೇಷ ಎಂದರೆ ಸಂಘ ಪರಿವಾರದ ಪ್ರಮುಖರು ಗುಪ್ತಗಾಮಿನಿಯಂತೆ ನಡೆಸುತ್ತಿರುವ ತಮ್ಮ ಕಾರ್ಯ ಚಟುವಟಿಕೆಯಿಂದ ಬಿಜೆಪಿಯನ್ನು ದೂರ ಇಟ್ಟಿದ್ದಾರೆ. ಲೋಕ ಸಂಪರ್ಕ ಅಭಿಯಾನದ ಹೆಸರಿನಲ್ಲಿ ಸಂಘ ಪರಿವಾರದ ಮುಖಂಡರಿಂದ ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯುವ ಈ ಕಾರ್ಯಾಚರಣೆಯಲ್ಲಿ ಬಿಜೆಪಿ ನಾಯಕರ ನಡವಳಿಕೆಯಿಂದ ಅಸಮಾಧಾನಿತರಾಗಿರುವವರನ್ನು ಸಮಾಧಾನಿಸುವ ಕಾರ್ಯ ನಡೆಯುತ್ತಿದೆ. ಲೋಕಸಂಪರ್ಕ ಅಭಿಯಾನದ ಕಾರ್ಯಕ್ರಮಗಳಿಗೆ ಸಂಸದರು, ಶಾಸಕರು ಸಹಿತ ಜನಪ್ರತಿನಿಧಿಗಳು, ಬಿಜೆಪಿಯಲ್ಲಿ ಜವಾಬ್ದಾರಿ ಹೊಂದಿರುವವರು ಆಹ್ವಾನಿತರಲ್ಲ. ಅವರು ಅಪೇಕ್ಷೆ ಪಟ್ಟರೆ ಅಭಿಯಾನಕ್ಕೆ ಬರಬಹುದೇ ಹೊರತು ಅವರಿಗೆ ವಿಶೇಷ ಆಹ್ವಾನ ನೀಡುವ ಕ್ರಮ ಇಲ್ಲ. ಬಿಜೆಪಿಯನ್ನು ಸಂಪೂರ್ಣವಾಗಿ ಹತೋಟಿಗೆ ತರುವುದು ಸಂಘ ಪರಿವಾರದ ಮಾತೃ ಸಂಸ್ಥೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉದ್ದೇಶವಾಗಿದೆ. ಆರ್‌ಎಸ್‌ಎಸ್‌ನ ಈ ಹೊಸ ಪ್ರಯೋಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದೆ. ಆರ್‌ಎಸ್‌ಎಸ್‌ನ ೧೦೦ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರನ್ನು ಒಗ್ಗೂಡಿಸಿಕೊಂಡು ಪರಸ್ಪರ ಸೌಹಾರ್ದತೆ ಮೂಡಿಸಿ ಪ್ರತೀ ಮನೆಗಳಲ್ಲಿಯೂ ರಾಷ್ಟ್ರೀಯ ಚಿಂತನೆ ಬೆಳೆಸುವುದು ಆರ್‌ಎಸ್‌ಎಸ್ ಯೋಜನೆಯಾಗಿದೆ. ಸದ್ದು ಇಲ್ಲದೆ ಮತ್ತು ಎಲ್ಲಿಯೂ ಸುದ್ದಿಯಾಗದೆ ಪರಿವಾರ ಸಂಘಟನೆಗಳು ವಿಶಿಷ್ಟ ಅಭಿಯಾನ ನಡೆಸುತ್ತಿದೆ. ಈ ಆಂದೋಲನ ಬಿಜೆಪಿಗೆ ಪರೋಕ್ಷವಾಗಿ ಬಲ ನೀಡುವುದು ಖಚಿತವಾಗಿದೆಯಾದರೂ ಎಲ್ಲವೂ ಬಿಜೆಪಿ ಅಲ್ಲ, ಹಿಂದು ಸಂಘಟನೆಗಳು ಇದ್ದರೆ ಮಾತ್ರ ಬಿಜೆಪಿಗೆ ಬಲ ಎಂದು ಸಂದೇಶ ಸಾರುವ ಉದ್ದೇಶ ಇದರ ಹಿಂದೆ ಇದೆ. ಲೋಕ ಸಂಪರ್ಕ ಅಭಿಯಾನ ಯಶಸ್ವಿಯಾಗಿ ನಡೆಯಲು ಸಂತಶಕ್ತಿ, ಸುಪ್ತಶಕ್ತಿ, ಸದ್ಭಾವ ಶಕ್ತಿ, ಮಾತೃಶಕ್ತಿ, ಯುವಶಕ್ತಿ ಮತ್ತು ಸಾಮಾಜಿಕ ಜಾಲತಾಣ ಶಕ್ತಿಯ ತಂಡ ರಚನೆ ಮಾಡಲಾಗಿದೆ.


ಆರ್‌ಎಸ್‌ಎಸ್ ಯೋಜನೆ-ಗ್ರಾಮ ಗ್ರಾಮಗಳಲ್ಲಿ ಅಭಿಯಾನ:
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದೊಂದಿಗೆ ಅದರ ಪರಿವಾರ ಸಂಘಟನೆಗಳು ಗ್ರಾಮ ಗ್ರಾಮಗಳಲ್ಲಿ ಅಭಿಯಾನ ನಡೆಸಲಿದೆ. ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳಾದ ವಿಶ್ವಹಿಂದೂ ಪರಿಷದ್, ರಾಷ್ಟ್ರೀಯ ಸೇವಿಕಾ ಸಮಿತಿ, ಬಿಎಂಎಸ್, ಬಜರಂಗದಳ, ಹಿಂದು ಜಾಗರಣ ವೇದಿಕೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಿತ ನಲವತ್ತಕ್ಕೂ ಅಧಿಕ ಸಂಘಟನೆಗಳು ಲೋಕ ಸಂಪರ್ಕ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದೆ. ವಿಶೇಷ ಎಂದರೆ ಬಿಜೆಪಿಯ ಜವಾಬ್ದಾರಿ ಹೊಂದಿರುವವರನ್ನು ಇದರಿಂದ ಹೊರಗಿಡಲಾಗಿದೆ. ಭಾರತೀಯ ಜನತಾ ಪಾರ್ಟಿಯ ಬೂತ್ ಸಮಿತಿ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಸಮಿತಿ ಇತ್ಯಾದಿಗಳಲ್ಲಿ ಜವಾಬ್ದಾರಿ ಹೊಂದಿರುವ ಯಾರನ್ನೂ ಸಂಘ ಪರಿವಾರದ ಅಭಿಯಾನದ ಬಳಗಕ್ಕೆ ಸೇರಿಸಿಕೊಂಡಿಲ್ಲ. ಬದಲಾಗಿ ಸಂಘ ಪರಿವಾರದ ಜವಾಬ್ದಾರಿ ಹೊಂದಿರುವವರು ಅಭಿಯಾನದ ಮುಂಚೂಣಿಯಲ್ಲಿದ್ದಾರೆ. ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಲೋಕ ಸಂಪರ್ಕ ಅಭಿಯಾನ ನಡೆಯಲಿದ್ದು ಚಟುವಟಿಕೆಯಿಂದ ದೂರವಾಗಿರುವ ಹಿರಿಯ ಕಾರ್ಯಕರ್ತರನ್ನು, ಹಿಂದುತ್ವಕ್ಕೆ ದುಡಿದು ತೆರೆಯ ಮರೆಗೆ ಸರಿದಿರುವವರನ್ನು ಒಟ್ಟಾಗಿ ಸೇರಿಸುವ ಕಾರ್ಯ ನಡೆಯಲಿದೆ.


ಕರ್ನಾಟಕ ಪ್ರಾಂತದ ಕಾರ್ಯಕ್ರಮ-ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆಗೆ ಸಿದ್ಧತೆ:
ಲೋಕಸಂಪರ್ಕ ಅಭಿಯಾನ ನಡೆಸುವ ಕಾರ್ಯಕ್ರಮ ಆರ್‌ಎಸ್‌ಎಸ್‌ನ ಕರ್ನಾಟಕ ಪ್ರಾಂತ ಮಟ್ಟದಲ್ಲಿ ನಡೆಯಲಿದೆ. ಉತ್ತರ ಪ್ರಾಂತ ಮತ್ತು ದಕ್ಷಿಣ ಪ್ರಾಂತದಲ್ಲಿ ಪ್ರತ್ಯೇಕವಾಗಿ ನಡೆಯಲಿರುವ ಈ ಅಭಿಯಾನದ ನೇತೃತ್ವವನ್ನು ಆರ್‌ಎಸ್‌ಎಸ್ ಕಾರ್ಯವಾಹರು ವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸಹಕಾರ್ಯವಾಹರ ಸಾರಥ್ಯದಲ್ಲಿ ಅಭಿಯಾನ ನಡೆಯಲಿದ್ದು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕುಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಅಸ್ತಿತ್ವಕ್ಕೆ ಬಂದು ಇದೀಗ ೯೮ ವರ್ಷವಾಗಿದೆ. ೨೦೨೫ರಲ್ಲಿ ಆರ್‌ಎಸ್‌ಎಸ್‌ನ ೧೦೦ನೇ ವರ್ಷಾಚರಣೆ ನಡೆಯಲಿದೆ. ಶತಮಾನೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇದರಲ್ಲಿ ಲೋಕ ಸಂಪರ್ಕ ಅಭಿಯಾನವೂ ಒಂದಾಗಿದೆ.


ಸಂಘ ಪರಿವಾರದಲ್ಲಿ ಬಿಜೆಪಿ ಇಲ್ಲ!:
ಸಂಘ ಪರಿವಾರ ಎಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಧೀನದಲ್ಲಿರುವ ಪರಿವಾರ ಸಂಘಟನೆಗಳಾಗಿದೆ. ಪರಿವಾರ ಸಂಘಟನೆಗಳಲ್ಲಿ ಧಾರ್ಮಿಕ ಕ್ಷೇತ್ರವನ್ನು ಪ್ರತಿನಿಧಿಸಲು ವಿಶ್ವಹಿಂದೂ ಪರಿಷದ್ ಇರುತ್ತದೆ. ಕಾರ್ಮಿಕರ ಹೋರಾಟಕ್ಕೆ ಬಿಎಂಎಸ್ ಇದೆ. ವಿದ್ಯಾರ್ಥಿ ಚಳುವಳಿಗಾಗಿ ಎಬಿವಿಪಿ ಇದೆ. ಮಹಿಳಾ ಸಂಘಟನೆಗೆ ರಾಷ್ಟ್ರೀಯ ಸೇವಿಕಾ ಸಮಿತಿ ಇದೆ. ಹೋರಾಟಕ್ಕೆ ಬಜರಂಗದಳ, ಹಿಂದು ಜಾಗರಣ ವೇದಿಕೆ, ದುರ್ಗಾವಾಹಿನಿ ಇತ್ಯಾದಿ ಸಂಘಟನೆಗಳಿದೆ. ಪರಿವಾರದಲ್ಲಿ ೪೦ಕ್ಕೂ ಅಧಿಕ ಸಂಘಟನೆಗಳು ಇದೆಯಾದರೂ ಇದರಲ್ಲಿ ಬಿಜೆಪಿ ಅಧಿಕೃತ ಸಂಘಟನೆಯಾಗಿಲ್ಲ. ಹಿಂದುತ್ವದ ಕಾರಣಕ್ಕಾಗಿ ಬಿಜೆಪಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಆರ್‌ಎಸ್‌ಎಸ್ ಮತ್ತು ಅದರ ಪರಿವಾರ ಸಂಘಟನೆಗಳು ಮಾಡುತ್ತದೆ ಹೊರತು ಬಿಜೆಪಿ ಸಂಘ ಪರಿವಾರದ ಅಧೀನದಲ್ಲಿ ಇರುವುದಿಲ್ಲ. ನೇರವಾಗಿ ಆರ್‌ಎಸ್‌ಎಸ್ ಬಿಜೆಪಿಯನ್ನು ನಿಯಂತ್ರಿಸುವುದಿಲ್ಲ. ಆದರೆ, ಸಂಘಟನಾತ್ಮಕವಾಗಿ ಈ ಸಂಘಟನೆಗಳು ಪರಸ್ಪರ ಬೆಸೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೊಳಗಿನ ಆಗು ಹೋಗುಗಳಲ್ಲಿ ಸಂಘ ಪರಿವಾರದ ಪ್ರಭಾವ ಇರುತ್ತದೆ. ನೇರವಾಗಿ ಚುನಾವಣಾ ವಿಚಾರದಲ್ಲಿ ಸಂಘ ಪರಿವಾರ ಕಾಣಿಸಿಕೊಳ್ಳುವುದಿಲ್ಲವಾದರೂ ೨೦೧೪ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿಸುವ ಉದ್ದೇಶದಿಂದ ಆರ್‌ಎಸ್‌ಎಸ್ ಮತ್ತು ಅದರ ಪರಿವಾರ ಸಂಘಟನೆಗಳು ಅಧಿಕೃತವಾಗಿ ಚುನಾವಣಾ ಕಣಕ್ಕೆ ಧುಮುಕಿತ್ತು. ವರಿಷ್ಠರು, ಪ್ರಚಾರಕರು, ವಿಸ್ತಾರಕರು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಪರ ಕಾರ್ಯ ನಿರ್ವಹಿಸಿದ್ದರು. ಇದು ಬಿಜೆಪಿಯ ಭರ್ಜರಿ ಗೆಲುವಿಗೆ ಕಾರಣವಾಗಿತ್ತು.


ಹಿಂದು, ಮುಸ್ಲಿಂ, ಕ್ರೈಸ್ತರನ್ನು ಒಗ್ಗೂಡಿಸುವುದೇ ಧ್ಯೇಯ:
ಪ್ರಬಲ ಹಿಂದುತ್ವದ ಪತಿಪಾದಕರಾಗಿ ಗುರುತಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೀಗ ತನ್ನ ೧೦೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಸಹಬಾಳ್ವೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸಲಿದೆ. ಆರ್‌ಎಸ್‌ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗ್ವತ್ ಅವರ ಪರಿಕಲ್ಪನೆಯೊಂದಿಗೆ ಸಂಘ ಮತ್ತು ಸಂಘದ ಪರಿವಾರ ಸಂಘಟನೆಯ ಮುಂಚೂಣಿ ನಾಯಕರು ಪರಸ್ಪರ ಸೌಹಾರ್ದತೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಹಿಂದು, ಮುಸ್ಲಿಂ, ಕ್ರೈಸ್ತ ಸಹಿತ ಎಲ್ಲಾ ಧರ್ಮೀಯರನ್ನು ಒಗ್ಗೂಡಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣ ಮಾಡುವುದು ಆರ್‌ಎಸ್‌ಎಸ್ ಉದ್ದೇಶವಾಗಿದೆ. ಗ್ರಾಮ ಗ್ರಾಮಗಳಲ್ಲಿ ರಾಷ್ಟ್ರೀಯತೆಯ ವಿಚಾರವನ್ನು ಬೆಳೆಸಬೇಕು ಮತ್ತು ಮುಸ್ಲಿಮರು, ಕ್ರೈಸ್ತರು ಸಹಿತ ಎಲ್ಲಾ ಧರ್ಮೀಯರ ಮನೆಗಳು ರಾಷ್ಟ್ರೀಯ ಚಿಂತನೆಯ ಮನೆಗಳಾಗಬೇಕು ಎಂಬುದು ಆರ್‌ಎಸ್‌ಎಸ್ ಆಶಯವಾಗಿದೆ. ಯಾವುದೇ ಧರ್ಮದವರು, ಯಾವುದೇ ಮನೆಯವರು ತಮಗೆ ಇಷ್ಟ ಬಂದ ಪಕ್ಷಗಳಿಗೆ ಮತ ಹಾಕಬಹುದು, ಇಂತಹದೇ ಪಕ್ಷ ಬೆಂಬಲಿಸಬೇಕು ಎಂಬ ಯಾವುದೇ ಷರತ್ತು ಇರುವುದಿಲ್ಲ. ಆದರೆ, ಪ್ರತೀ ಧರ್ಮದವರೂ ದೇಶಭಕ್ತಿ ಹೊಂದಿರುವವರಾಗಿರಬೇಕು, ರಾಷ್ಟ್ರೀಯ ಚಿಂತನೆ ಬೆಳೆದಿರುವವರಾಗಿರಬೇಕು ಎಂಬುದು ಆರ್‌ಎಸ್‌ಎಸ್ ಧ್ಯೇಯವಾಗಿದೆ.

ಆರ್‌ಎಸ್‌ಎಸ್ ನಾಯಕರ ಮಾರ್ಗದರ್ಶನ:

ಶಾಸಕರು, ಸಂಸದರ ಸಹಿತ ಬಿಜೆಪಿಯ ಇತರ ಜನಪ್ರತಿನಿಧಿಗಳಿಂದ ಅಥವಾ ಪಕ್ಷದ ನಾಯಕರ ನಡವಳಿಕೆಯಿಂದ ನೊಂದವರನ್ನು ಸಮಾಧಾನಿಸಿ ಸಂಘ ಪರಿವಾರದ ಚಟುವಟಿಕೆಯ ಒಳಗಡೆ ಮತ್ತೆ ಕರೆ ತರುವುದು ಲೋಕ ಸಂಪರ್ಕ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಜನಪ್ರತಿನಿಧಿಗಳಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವುದು, ಬಿಜೆಪಿಯ ಕೆಲವು ನಾಯಕರು ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ದೇವ ದುರ್ಲಭ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗುತ್ತಿರುವುದು, ಹಿಂದು ಸಂಘಟನೆಗಳನ್ನು ಬಿಜೆಪಿಯವರು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿರುವುದು, ಶಿಸ್ತಿಗೆ ಹೆಸರಾಗಿದ್ದ ಪಕ್ಷದಲ್ಲಿ ಅಶಿಸ್ತು ಹೆಚ್ಚಾಗುತ್ತಿರುವುದು, ಲಂಗು ಲಗಾಮು ಇಲ್ಲದ ಹೇಳಿಕೆ ನೀಡುತ್ತಿರುವುದು, ನಾವು ಮಾಡಿದ್ದೇ ಸರಿ ಎಂಬ ಧೋರಣೆ ಹೊಂದಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ದೂಷಿಸಿಕೊಳ್ಳುತ್ತಿರುವುದು ಇತ್ಯಾದಿ ಪ್ರವೃತ್ತಿಗಳನ್ನು ಆರ್‌ಎಸ್‌ಎಸ್ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪಕ್ಷದಲ್ಲಿ ಜವಾಬ್ದಾರಿ ಹೊಂದಿರುವವರನ್ನು ಕರೆಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ನೀಡಬೇಕು ಎಂದು ಆರ್‌ಎಸ್‌ಎಸ್ ನಾಯಕರು ಬಿಜೆಪಿ ಮುಖಂಡರಿಗೆ ಸೂಚನೆ ನೀಡುತ್ತಿದ್ದಾರೆ. ಈ ಮಧ್ಯೆ ಸಂಘ ಪರಿವಾರದ ನಾಯಕರೇ ಲೋಕ ಸಂಪರ್ಕ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಗೂ ಸ್ವಯಂಸೇವಕರನ್ನು ನೇಮಕ ಮಾಡಿದ್ದಾರೆ.

ಸಂತಶಕ್ತಿ, ಸುಪ್ತಶಕ್ತಿ,
ಸದ್ಭಾವ ಶಕ್ತಿ, ಮಾತೃಶಕ್ತಿ,
ಯುವಶಕ್ತಿ, ಸಾಮಾಜಿಕ ಜಾಲತಾಣ ಶಕ್ತಿಯ ತಂಡ ರಚನೆ

ಸಂಘ ಪರಿವಾರದ ನೇತೃತ್ವದಲ್ಲಿ ನಡೆಯುತ್ತಿರುವ ಲೋಕ ಸಂಪರ್ಕ ಅಭಿಯಾನಕ್ಕೆ ಆರು ವಿಭಾಗಗಳನ್ನು ರಚಿಸಲಾಗಿದೆ. ಸ್ವಾಮೀಜಿಗಳನ್ನು, ಸಾಧು ಸಂತರನ್ನು ನಿರ್ವಹಣೆ ಮಾಡಲು ಸಂತ ಶಕ್ತಿ ವಿಭಾಗ, ಸಂಘ ಮತ್ತು ಪಕ್ಷದ ಚಟುವಟಿಕೆಯಿಂದ ದೂರ ಇರುವವರನ್ನು ಮನವೊಲಿಸಲು ಸುಪ್ತಶಕ್ತಿ, ಜಾತಿ ಪ್ರಮುಖರನ್ನು ಸಂಪರ್ಕಿಸಲು ಸದ್ಭಾವ ಶಕ್ತಿ, ಮಹಿಳೆಯರನ್ನು ಸಂಘಟಿಸಲು ಮಾತೃಶಕ್ತಿ, ಯುವ ಸಮುದಾಯವನ್ನು ಸಂಪರ್ಕಿಸಲು ಯುವಶಕ್ತಿ ಮತ್ತು ತತ್ವ, ಸಿದ್ಧಾಂತ, ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸಲು ಸಾಮಾಜಿಕ ಜಾಲತಾಣಗಳ ಶಕ್ತಿ ಕಾರ್ಯ ನಿರ್ವಹಿಸುತ್ತಿದೆ. ಈ ಆರು ವಿಭಾಗಗಳಿಗೂ ಕಾರ್ಯಕರ್ತರನ್ನು ನೇಮಿಸಲಾಗಿದೆ. ಗ್ರಾಮ ಗ್ರಾಮಗಳ ಬೂತ್ ಮಟ್ಟದಿಂದ ತಾಲೂಕು ಮಟ್ಟದವರೆಗೆ ಈ ವಿಭಾಗಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ. ಈ ಆರು ವಿಭಾಗಗಳಲ್ಲಿ ಎಲ್ಲಿಯೂ ಬಿಜೆಪಿಯ ಜವಾಬ್ದಾರಿ ಹೊಂದಿದವರು ಇಲ್ಲ ಎಂಬುದು ಇದರ ವಿಶೇಷತೆಯಾಗಿದೆ.

ಪುತ್ತೂರಿನ ಸಭೆಯಲ್ಲಿ ಪ್ರಕಾಶ್ ಪಿ.ಯಸ್.,
ನಾ.ಸೀತರಾಮ ಭಾಗಿ: ೨೫೦ ಕಾರ್ಯಕರ್ತರ ಉಪಸ್ಥಿತಿ
ಮಾ.೨೧ರಂದು ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಘ ಪರಿವಾರದ ಆರು ಶಕ್ತಿ ವಿಭಾಗದ ಸಭೆ ನಡೆದಿದೆ. ಆರ್.ಎಸ್.ಎಸ್.ಜವಾಬ್ದಾರಿ ಹೊಂದಿರುವ ಪ್ರಕಾಶ್ ಪಿ.ಯಸ್. ಮತ್ತು ನಾ. ಸೀತರಾಮ ಮಾರ್ಗದರ್ಶನ ನೀಡಿದರು. ೨೫೦ಕ್ಕೂ ಅಧಿಕ ಸ್ವಯಂಸೇವಕರು ಉಪಸ್ಥಿತರಿದ್ದರು. ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ, ಯತೀಶ್ ಆರುವಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿಯ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು, ಜನಪ್ರತಿನಿಧಿಗಳು ಸಭೆಯಲ್ಲಿ ಇರಲಿಲ್ಲ.

LEAVE A REPLY

Please enter your comment!
Please enter your name here