ಕಡಬದಲ್ಲಿ 152 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ-ಕೊಯಿಲ ಪಶುವೈದ್ಯಕೀಯ ಕಾಲೇಜು, ಗೋಶಾಲೆ, ಕಡಬ ತಾ|ಆಡಳಿತ ಸೌಧ, ತಾ.ಪಂ.ಕಟ್ಟಡ ಉದ್ಘಾಟನೆ

0

ಅವಮಾನ ಸವಾಲುಗಳನ್ನು ಮೆಟ್ಟಿ ನಿಂತು ಹೊಣೆಗಾರಿಕೆಯಿಂದ ಸಾಧನೆ ಮಾಡಿದ್ದೇನೆ:ಸಚಿವ ಅಂಗಾರ
ಮೋದಿ ದೇಶದ ಚಿತ್ರಣವನ್ನೇ ಬದ ಲಾಯಿಸಿದ್ದಾರೆ -ಪ್ರತಾಪ್ ಸಿಂಹ ನಾಯಕ್
ಆಡಳಿತ ವ್ಯವಸ್ಥೆ ಜನರ ಬಳಿ ಸುತ್ತಬೇಕು -ಡಾ| ಕುಮಾರ್

ಕಡಬ:1994ರಿಂದ ಇಲ್ಲಿಯ ತನಕ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಸಮಸ್ಯೆಗಳ ಸವಾಲುಗಳು ಹಾಗೂ ಅವಮಾನಗಳನ್ನು ಎದುರಿಸಿ ಹೊಣೆಗಾರಿಕೆಯಿಂದ ಕ್ಷೇತ್ರದ ಅಭಿವೃದ್ಧಿ ಮಾಡಿ ಸಾಧಿಸಿದ್ದೇನೆ ಎಂದು ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.


ಒಟ್ಟು 152 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕಾಮಗಾರಿಗಳಾದ, ಕಡಬ ತಾಲೂಕು ಆಡಳಿತ ಸೌಧ, ಕಡಬ ತಾಲೂಕು ಪಂಚಾಯಿತಿ ಕಟ್ಟಡ, ಕೊಲ ಪಶು ವೈದ್ಯಕೀಯ ಕಾಲೇಜು ಕಟ್ಟಡ ಹಾಗೂ ಕೊಲ ಗೋಶಾಲೆಯನ್ನು ಅವರು ಲೋಕಾರ್ಪಣೆ ಮಾಡಿ ತಾಲೂಕು ಪಂಚಾಯಿತಿ ಕಟ್ಟಡದ ಬಳಿ ನಡೆದ ಸಭೆಯಲ್ಲಿ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತು ವಿತರಣೆ ನೆರವೇರಿಸಿ ಮಾತನಾಡಿದರು.

ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಅಳವಡಿಸಿ ಆಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.ನಾನು ಶಾಸಕನಾಗುವ ಸಂದರ್ಭದಲ್ಲಿ ಕ್ಷೇತ್ರದ ಎಲ್ಲಾ ರಸ್ತೆಗಳು ಹದಗೆಟ್ಟು ಹೋಗಿದ್ದವು.ಈಗ ಕ್ಷೇತ್ರದ ಎಲ್ಲಾ ಮುಖ್ಯ ರಸ್ತೆಗಳು ಅಭಿವೃದ್ಧಿಯಾಗಿವೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕ್ಷೇತ್ರದ ಹಳ್ಳಿಗಳ ರಸ್ತೆಗಳೂ ಕಾಂಕ್ರಿಟೀಕರಣಗೊಂಡು ಸುಸಜ್ಜಿತವಾಗಿವೆ, ಕ್ಷೇತ್ರದ ಬಹುತೇಕ ಮುಳುಗು ಸೇತುವೆಗಳಿಗೆ ಮುಕ್ತಿ ನೀಡಲಾಗಿದೆ.ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಲಾಗುತ್ತಿದೆ.ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನದಿಗಳಲ್ಲಿ, ತೋಡುಗಳಲ್ಲಿ ಅಣೆಕಟ್ಟೆಗಳನ್ನು ನಿರ್ಮಾಣ ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಕ್ಷೇತ್ರದ ವಿವಿಧೆಡೆ ಸಬ್‌ಸ್ಟೇಷನ್‌ಗಳನ್ನು ನಿರ್ಮಾಣ ಮಾಡಿ ವಿದ್ಯುತ್ ಸಮಸ್ಯೆ ನೀಗಿಸಲಾಗಿದೆ.ಆರೋಗ್ಯ, ಶಿಕ್ಷಣ, ವಸತಿ ಮುಂತಾದ ಮೂಲಭೂತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಲಾಗಿದೆ ಎಂದು ಹೇಳಿದ ಸಚಿವ ಅಂಗಾರ, ಕಡಬವನ್ನು ತಾಲೂಕು ಎಂದು ಘೋಷಣೆ ಮಾಡಿದ ಬಳಿಕ ಹಂತಹಂತವಾಗಿ ಅನುಷ್ಠಾನ ಮಾಡಲಾಗುತ್ತಿದೆ.ಜನರಿಗೆ ಒಂದೇ ಸೂರಿನಡಿ ಸರಕಾರಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತ ಸೌಧವನ್ನು ನಿರ್ಮಾಣ ಮಾಡಲಾಗಿದೆ, ನೂತನ ತಾಲೂಕು ಪಂಚಾಯಿತಿ ಕಟ್ಟಡವನ್ನು ನಿರ್ಮಾಣ ಮಾಡಿ ಲೋಕಾರ್ಪಣೆಯಾಗಿದೆ, ವಿಶೇಷವೆಂದರೆ ನೂತನವಾಗಿ ಘೋಷಣೆಯಾದ ತಾಲೂಕುಗಳಲ್ಲಿ ಕಡಬದಲ್ಲಿಯೇ ಪ್ರಥಮವಾಗಿ ಇಂತಹ ಯೋಜನೆಗಳು ಅನುಷ್ಠಾನವಾಗುತ್ತಿದೆ, ಕಡಬ ತಾಲೂಕಿಗೆ ಎಲ್ಲಾ ವ್ಯವಸ್ಥೆಗಳನ್ನು ಶೀಘ್ರದಲ್ಲಿ ಅನುಷ್ಠಾನ ಮಾಡಲು ಬದ್ದರಿzವೆ ಎಂದು ಹೇಳಿದರು.


ಮೋದಿ ದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ-ಪ್ರತಾಪ್ ಸಿಂಹ ನಾಯಕ್:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ದೇಶದಲ್ಲಿ ಸ್ವಾತಂತ್ಯ್ರ ಬಂದ ಬಳಿಕ ಕೇವಲ ಹದಿನಾಲ್ಕು ವರ್ಷ ಆಡಳಿತ ನಡೆಸಿದ ನರೇಂದ್ರ ಮೋದಿ ಸರಕಾರ ದೇಶದ ಚಿತ್ರಣವನ್ನೇ ಬದಲಿಸಿದೆ.ಇಡೀ ವಿಶ್ವವೇ ಭಾರತವನ್ನು ಒಪ್ಪಿಕೊಂಡು ಅಪ್ಪಿಕೊಂಡಿದೆ.ವಿಶ್ವದ ಮೂರನೇ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.ನಾವು ಇಂದು ಬದಲಾದ ಭಾರತವನ್ನು ನೋಡುತ್ತಿದ್ದೇವೆ,ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನದ ಮೇಲೆ ದೊಡ್ಡ ಮಟ್ಟದ ಒಳ್ಳೆಯ ಪರಿಣಾಮ ಬೀರಿದೆ, ದೇಶದ ಅಭಿವೃದ್ಧಿಯ ವೇಗಕ್ಕೆ ಕರ್ನಾಟಕದಲ್ಲಿ ಕೂಡಾ ಪ್ರಗತಿಯ ಸಾಥ್ ಸಿಗುತ್ತಿದೆ. ಸಚಿವ ಅಂಗಾರ ಅವರು ಯಾರು,ಏನೇ ಹೇಳಿದರೂ ತಮ್ಮ ಪಾಡಿಗೆ ಸದ್ದಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎನ್ನುವುದಕ್ಕೆ ಕಡಬದಲ್ಲಿ ಇಂದು ಲೊಕಾರ್ಪಣೆಯಾದ ಕೋಟ್ಯಾಂತರ ರೂಪಾಯಿಯ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದರು.


ಆಡಳಿತ ವ್ಯವಸ್ಥೆ ಜನರ ಬಳಿ ಸುತ್ತಬೇಕು-ಡಾ| ಕುಮಾರ್:
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ| ಕುಮಾರ್ ಮಾತನಾಡಿ ಸಾಮಾನ್ಯ ಜನ ಆಡಳಿತ ವ್ಯವಸ್ಥೆಯ ಸುತ್ತ ಸುತ್ತುವ ಬದಲು ಆಡಳಿತ ವ್ಯವಸ್ಥೆಯೇ ಜನರ ಸುತ್ತ ಸುತ್ತಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಚಿಂತನೆ ಮಾಡಿ ಅನುಷ್ಠಾನ ಮಾಡುತ್ತಿದೆ ಎಂದರು.

ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೀದರ್ ಇಲ್ಲಿನ ಕುಲಪತಿ ಡಾ|ಕೆ.ಸಿ.ವೀರಣ್ಣ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೆಶಕ ಡಾ| ಅರುಣ್ ಕುಮಾರ್ ಶೆಟ್ಟಿ ಎನ್ ಮಾತನಾಡಿ ಶುಭ ಹಾರೈಸಿದರು.ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಕರ್ನಾಟಕ ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯ ಕುಮಾರ್, ಪಂಚಾಯತ್‌ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತ್ ಬಿ.ಎಂ, ಸುಳ್ಯ ತಹಸೀಲ್ದಾರ್ ಮಂಜುನಾಥ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ| ರಂಗನಾಥ್, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಕೀರ ಮೂಲ್ಯ, ಕಡಬ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಹಾಗೂ ಮನೋಹರ ಕೆ.ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು.ಕಟ್ಟಡಗಳ ವಾಸ್ತುಶಿಲ್ಪಿ ಯೋಗೇಶ್ ಚಂದ್ರಾದರ್, ಕಟ್ಟಡ ನಿರ್ಮಾಣ ಕಾಮಗಾರಿ ನಿರ್ವಹಣೆ ಮಾಡಿದ ಪ್ರದೀಪ್ ಶೆಟ್ಟಿ, ಅಬ್ದುಲ್ ಆಸಿಫ್, ಮಂಜುನಾಥ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ವಂದಿಸಿದರು.ಪತ್ರಕರ್ತ ನಾಗರಾಜ್ ಎನ್.ಕೆ ಹಾಗೂ ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

151.55 ಕೋಟಿ ಅನುದಾನದ ಯೋಜನೆಗಳು
10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಲೂಕು ಆಡಳಿತ ಸೌಧ, 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಡಬ ತಾಲೂಕು ಪಂಚಾಯಿತಿ ಕಟ್ಟಡ, ಕೊಲದಲ್ಲಿ 136 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಮೊದಲನೇ ಹಂತದ ಕಟ್ಟಡ ಹಾಗೂ 1.5 ಕೋಟಿ ರೂ. ವೆಚ್ಚದಲ್ಲಿ ರಾಮಕುಂಜದಲ್ಲಿ ನಿರ್ಮಾಣಗೊಂಡಿರುವ ಕುಮಾರಧಾರ ಸರಕಾರಿ ಜಿಲ್ಲಾ ಗೋಶಾಲೆಯನ್ನು ಉದ್ಘಾಟಿಸಲಾಯಿತು.ಕಡಬ ತಾಲೂಕು ವ್ಯಾಪ್ತಿಯ ಸುಮಾರು 500 ಫಲಾನುಭವಿಗಳಿಗೆ ಅಕ್ರಮ ಸಕ್ರಮ ಮತ್ತು 94ಸಿ ಹಕ್ಕುಪತ್ರಗಳ ವಿತರಣೆ, ಅರ್ಹ ಫಲಾನುಭವಿಗಳಿಗೆ ಮೋಟಾರ್ ಚಾಲಿತ ಗಾಲಿಕುರ್ಚಿ, ವಿಕಲಚೇತನರಿಗೆ ಚತುಷ್ಚಕ್ರ ವಾಹನ, ಶಾಲೆಗಳಿಗೆ ಶುದ್ಧ ನೀರಿನ ಘಟಕ ಸೇರಿದಂತೆ ವಿವಿಧ ಇಲಾಖೆಗಳ ಸವಲತ್ತುಗಳನ್ನು ಸಮಾರಂಭದಲ್ಲಿ ವಿತರಿಸಲಾಯಿತು.

ಮುಂದೆಯೂ ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ
ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಮಾತನಾಡುತ್ತಾ, ಮುಂದೆ ಕೂಡಾ ನಮ್ಮದೇ ಸರಕಾರ ಎಂದು ಮೆಲುಧ್ವನಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಪ್ರವಾಸದಲ್ಲಿರುವುದರಿಂದ ಮುಖ್ಯಮಂತ್ರಿಯಾದಿಯಾಗಿ ಸಚಿವರುಗಳು ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.ಈ ಸರಕಾರದ ಕೊನೆಯ ಸಚಿವ ಸಂಪುಟ ಸಭೆ ಕೂಡಾ ಇವತ್ತು ಅಲ್ಲಿ ನಡೆಯುತ್ತಿದೆ.ಇದು ಕೊನೆಯ ಸಭೆ ಎಂದು ಹೇಳಲು ಸಾಧ್ಯವಿಲ್ಲ.ಮುಂದೆ ಕೂಡಾ ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ.ಆದರೆ ಅದನ್ನು ಇಲ್ಲಿ ಗಟ್ಟಿಯಾಗಿ ಹೇಳಲು ಸಾಧ್ಯವಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

LEAVE A REPLY

Please enter your comment!
Please enter your name here