ಪುತ್ತೂರಿನ ಅಭ್ಯರ್ಥಿ ಹೆಸರು 2ನೇ ಪಟ್ಟಿಯಲ್ಲಿ ಸಾಧ್ಯತೆ !
ಪುತ್ತೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಮಾ.೨೫ರಂದು ಬಿಡುಗಡೆಗೊಂಡಿದೆ. ದ.ಕ.ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ೫ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ. ಉಡುಪಿಯ ಕಾಪು ಕ್ಷೇತ್ರದಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೆಸರು ಅಂತಿಮಗೊಳಿಸಲಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಜಿ., ಬಂಟ್ವಾಳ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ, ಮಂಗಳೂರು ಕ್ಷೇತ್ರದಿಂದ ಯು.ಟಿ.ಖಾದರ್, ಬೆಳ್ತಂಗಡಿ ಕ್ಷೇತ್ರಕ್ಕೆ ರಕ್ಷಿತ್ ಶಿವರಾಮ್ ಹಾಗೂ ಮೂಡಬಿದಿರೆ ಕ್ಷೇತ್ರದಿಂದ ಮಿಥುನ್ ರೈಯವರ ಹೆಸರು ಅಂತಿಮಗೊಂಡಿದೆ.
ದ.ಕ. ಜಿಲ್ಲೆಯ ಉಳಿದ ಮೂರು ಕ್ಷೇತ್ರಗಳಾದ ಪುತ್ತೂರು, ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರಕ್ಕೆ ವಿನಯಕುಮಾರ್ ಸೊರಕೆ ಹೆಸರು ಅಂತಿಮಗೊಂಡಿದೆ.
ಸುಳ್ಯಕ್ಕೆ ಕೃಷ್ಣಪ್ಪ:
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಸುಳ್ಯ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಹೊಸ ಅಭ್ಯರ್ಥಿ ಘೋಷಿಸಲಾಗಿದೆ. ಕಳೆದ ನಾಲ್ಕು ಅವಧಿಯಲ್ಲಿ ಸ್ಪರ್ಧಿಸಿದ್ದ ಡಾ.ರಘು ಬದಲಿಗೆ ಈ ಬಾರಿ ಕೆಪಿಸಿಸಿ ಸಂಯೋಜಕರಾಗಿರುವ ಜಿ.ಕೃಷ್ಣಪ್ಪ ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಮೂಲತಃ ಸಕಲೇಶಪುರದ ಕೆರೋಡಿಯವರಾದ ಜಿ.ಕೃಷ್ಣಪ್ಪ ಅವರು ಪ್ರಸ್ತುತ ಕಡಬ ತಾಲೂಕಿನ ರಾಮಕುಂಜದಲ್ಲಿ ನೆಲೆಸಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಮೂಲಕ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕೃಷ್ಣಪ್ಪ ಎಂ.ಎಸ್ಸಿ, ಎಂ.ಎ ಪದವೀಧರರು. ಕಾಲೇಜುನಲ್ಲಿರುವಾಗಲೇ ಎನ್‌ಎಸ್‌ಯುಐನಲ್ಲಿ ಸಕ್ರೀಯರಾಗಿದ್ದ ಕೃಷ್ಣಪ್ಪ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ ಸದಸ್ಯರು, ಕೆಪಿಸಿಸಿ ಸಂಯೋಜಕರು ಆಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಜಿ.ಕೃಷ್ಣಪ್ಪ ಕಳೆದ ೪ ವರ್ಷಗಳಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರಾಗಿದ್ದಾರೆ.
ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಮೂಲದವರಾಗಿರುವ ಮಾಜಿ ಸಚಿವ ಬಿ.ರಮಾನಾಥ ರೈಯವರು 9ನೇ ಬಾರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಮೂಲತ: ಕಡಬ ನಿವಾಸಿಯಾಗಿರುವ ಮಾಜಿ ಸಚಿವ ಯು.ಟಿ.ಖಾದರ್ ಮಂಗಳೂರು ಕ್ಷೇತ್ರದಿಂದ ಮತ್ತೆಸ್ಪರ್ಧೆ ಮಾಡಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಿತ್ ಶಿವರಾಂರವರು ಬೆಳ್ತಂಗಡಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕಳೆದ ಲೋಕಸಭಾ ಚುನಾವಣೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಿಥುನ್ ರೈಯವರು ಮೂಡಿಬಿದ್ರೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಸರ್ವೆ ಗ್ರಾಮದ ಸೊರಕೆ ನಿವಾಸಿಯಾಗಿರುವ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾ.೨೪ರಂದು ಕಾಂಗ್ರೆಸ್ ೧೨೪ ಕ್ಷೇತ್ರಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಪುತ್ತೂರಿನ ಅಭ್ಯರ್ಥಿ ಹೆಸರು 2ನೇ ಪಟ್ಟಿಯಲ್ಲಿ ಸಾಧ್ಯತೆ-ಐವರು ರೇಸ್‌ನಲ್ಲಿ