5 ವರ್ಷದಲ್ಲಿ ರೈಲ್ವೇಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ಆಗಿದೆ- ಸಂಜೀವ ಮಠಂದೂರು
ಬಹಳ ಹಿಂದಿನ ಕನಸು ನನಸಾಗಿದೆ – ಚನಿಲ ತಿಮ್ಮಪ್ಪ ಶೆಟ್ಟಿ
ದೂರ ದೃಷ್ಟಿಯ ಅಭಿವೃದ್ಧಿ ಕಾಮಗಾರಿ ಅನುಷ್ಠಾನವಾಗುತ್ತಿದೆ – ಕೆ.ಜೀವಂಧರ್ ಜೈನ್
8 ದಿವಸದೊಳಗೆ ಡಾಮರೀಕರಣ – ದಿನೇಶ್ ಮೆದು
ಪುತ್ತೂರು: ಬಹು ಕಾಲದ ಬೇಡಿಕೆಯಾಗಿರುವ ಅರುಣಾ ಚಿತ್ರಮಂದಿರದ ಬಳಿಯಿಂದ ಎಪಿಎಂಸಿ ಮೂಲಕ ಉಪ್ಪಿನಂಗಡಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಎಪಿಎಂಸಿ ಬಳಿಯ ರೈಲ್ವೇ ಅಂಡರ್ ಪಾಸ್‌ನ ಲೋಕಾರ್ಪಣೆ ಕಾರ್ಯಕ್ರಮ ಮಾ.26ರಂದು ನಡೆಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಅಂಡರ್ ಪಾಸ್ ಬಳಿ ಉದ್ಘಾಟಿಸಿದರು.
5 ವರ್ಷದಲ್ಲಿ ರೈಲ್ವೇಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ಆಗಿದೆ
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಇವತ್ತು ನಮ್ಮ ಸರಕಾರ ಶರವೇಗದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವುದಲ್ಲದೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಎಪಿಎಂಸಿ ಅಂಡರ್ ಪಾಸ್ ಸಾಕ್ಷಿಯಾಗಿದೆ. ಸಾವಿರಾರು ವಾಹನ ಓಡಾಟದ ಈ ರಸ್ತೆಯಲ್ಲಿ ಸಮಸ್ಯೆ ಉಂಟಾಗುತ್ತಿತ್ತು. ತುರ್ತು ಸೇವೆಗೆ ಸಂಬಂಧಿಸಿ ಆಸ್ಪತ್ರೆಗೆ ಹೋಗುವಲ್ಲೂ ಸಮಸ್ಯೆ ಆಗುತ್ತಿತ್ತು. ಇವತ್ತು ಅಂಡರ್ ಪಾಸ್ ಮೂಲಕ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿದೆ. ಶಿರಾಡಿಗಾಟ್ ಹತ್ತುವಾಗ ರೈಲಿಗೆ ಡಬಲ್ ಇಂಜಿನ್ ಬೇಕು. ಅದೇ ರೀತಿ ಸಮಗ್ರ ಅಭಿವೃದ್ಧಿ ಕಾರ್ಯಗಳಾಗಲು ಡಬಲ್ ಇಂಜಿನ್ ಸರಕಾರ ಬೇಕಾಯಿತು ಎಂದರು. ಸುಮಾರು 40 ವರ್ಷದಿಂದ ಇಲ್ಲಿ ರೈಲು ಸಂಪರ್ಕವಿತ್ತು. ಆಗ ಮೀಟರ್‌ಗೇಜ್, ಬಳಿಕ ಬ್ರಾಡ್‌ಗೇಜ್ ಪ್ರಸ್ತುತ ವಿದ್ಯುತ್ ರೈಲಿನ ಕಾಮಗಾರಿಯೂ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪುತ್ತೂರು ರೈಲ್ವೇ ಸ್ಟೇಷನ್ ಗ್ರೂಡ್ಸ್ ರೈಲಿನ ತಂಗುದಾಣವು ಆಗಲಿದೆ. ರೈಲ್ವೇ, ಹೈವೆಯಲ್ಲಿ ಯಾವ ರೀತಿಯ ಸುಧಾರಣೆಗಳಾಗುತ್ತಿದೆಯೋ ಅದೇ ರೀತಿಯಲ್ಲಿ ಗ್ರಾಮೀಣ ಭಾಗದ ಸಡಕ್ ರಸ್ತೆಗಳು ಅಭಿವೃದ್ಧಿಯಾಗುತ್ತಿದೆ. ಇದು ಇವತ್ತು ನರೇಂದ್ರ ಮೋದಿಯವರ ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ಕೊಡುಗೆಯಾಗಿದೆ. ನಮ್ಮ ಸರಕಾರ ಅಗತ್ಯಕ್ಕೆ ಅನುಗುಣವಾಗಿ ಏನೆನು ಮೂಲಭೂತ ಸೌಕರ್ಯ ಬೇಕಾಗಿದೆಯೋ ಅದನ್ನು ಮಾಡುತ್ತಿದೆ. ಇಂತಹ ಅಭಿವೃದ್ದಿ ಕಾರ್ಯಕ್ರಮಗಳು ಮುಂದಿನ 25 ವರ್ಷಕ್ಕೆ ಜಗತ್ತು ಭಾರತ ರಾಷ್ಟ್ರೋತ್ಥಾನದ ಮೂಲಕ ಅಭಿವೃದ್ಧಿಯ ಸಂಕೇತ ಕಾಣಲಿದೆ. ಹಾರಾಡಿಯಿಂದ ರೈಲ್ವೇ ಸ್ಟೇಷನ್‌ಗೆ ಬರುವ ರಸ್ತೆ ಸುಮಾರು 22 ವರ್ಷಗಳಿಂದ ರೈಲ್ವೇ ಇಲಾಖೆಯಿಂದ ಅನುಮತಿ ಡಾಮರೀಕರಣ ಮಾಡಲು ಆಗಿಲ್ಲ. ಆದರೆ ಅದನ್ನು ಕೂಡ ನಮ್ಮ ಸರಕಾರ ಇವತ್ತು ರೂ. 1 ಕೋಟಿಯಲ್ಲಿ ಕಾಂಕ್ರೀಟಿಕರಣ ಆಗಿ ವಾರದೊಳಗೆ ಲೋಕಾರ್ಪಣೆ ಮಾಡಲಿದ್ದೇವೆ. ಅದೇ ರೀತಿ ನಗರದೊಳಗೆ ಒಂದಷ್ಟು ಲಿಂಕ್ ರಸ್ತೆಗಳಿಗೆ ಆದ್ಯತೆ ನೀಡಿದ್ದು, ಎಪಿಎಂಸಿ ರಸ್ತೆ ಲಿಂಕ್ ಮಾಡಲು ದೇವಿಬೆಟ್ಟಕ್ಕಾಗಿ ರೈಲ್ವೇ ನಿಲ್ದಾಣ ಸಂಪರ್ಕದ ರಸ್ತೆಗೆ ಇಲಾಖೆಯೊಂದಿಗೆ ಇನ್ನೊಂದು ಬೇಡಿಕೆ ಇದೆ. ಮುಂದಿನ ದಿನದಲ್ಲಿ ಅದನ್ನು ಕಂಡಿತಾ ಮಾಡಲಿದ್ದೇವೆ. ರೈಲ್ವೇ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸವನ್ನು 5 ವರ್ಷದಲ್ಲಿ ಪುತ್ತೂರು ವಿದಾನಸಭಾ ಕ್ಷೇತ್ರದಲ್ಲಿ ಆಗಿದೆ ಎಂದರು.
ಗೂಡ್ಸ್ ರೈಲು ತಂಗುದಾಣ
ಕಬಕ ಪುತ್ತೂರು ರೈಲ್ವೇ ನಿಲ್ದಾಣ ಆದರ್ಶ ನಿಲ್ದಾಣವಾಗಿ ಬದಲಾಗಿದೆ. ಅದರ ಜತೆಗೆ ರೈಲ್ವೇ ಸಂಪರ್ಕ ರಸ್ತೆಗಳು ಅಭಿವೃದ್ಧಿಗೊಂಡಿದೆ. ಮುಂದಿನ ದಿನಗಳಲ್ಲಿ ಪುತ್ತೂರು ರೈಲ್ವೇ ನಿಲ್ದಾಣ ಗೂಡ್ಸ್ ರೈಲು ತಂಗುದಾಣವಾಗಲಿದೆ ಎಂದ ಶಾಸಕ ಮಠಂದೂರು ಅವರು, ಪುತ್ತೂರಿನ ರೈಲ್ವೇ ಸಂಬಂಧಿತ ಅಭಿವೃದ್ಧಿ ಕೆಲಸಗಳಿಗೆ ಸಂಸದ ನಳಿನ್ ಕುಮಾರ್ ಕಟೀಲು ಕೊಡುಗೆ ಅಪಾರ. ಅದರಂತೆ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಹಾಗೂ ತಂಡದ ಪಾತ್ರವು ಉಲ್ಲೇಖನೀಯ ಎಂದರು.
ಬಹಳ ಹಿಂದಿನ ಕನಸು ನನಸಾಗಿದೆ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಎಪಿಎಂಸಿ ರಸ್ತೆಯ ಅಂಡರ್‌ಪಾಸ್ ನಿರ್ಮಾಣ ಬಹಳ ಹಿಂದಿನ ಕನಸು. ಈ ಕಾಮಗಾರಿ ಅನುಷ್ಠಾನದಿಂದ ಕಡಬ, ಉಪ್ಪಿನಂಗಡಿಯಿಂದ ಬರುವ ರೈತರು, ವ್ಯಾಪಾರಿಗಳು, ಆಸ್ಪತ್ರೆಗೆ ಬರುವವರಿಗೆ ಅನುಕೂಲವಾಗಿದೆ ಎಂದರು.
ದೂರ ದೃಷ್ಟಿಯ ಅಭಿವೃದ್ಧಿ ಕಾಮಗಾರಿ ಅನುಷ್ಠಾನವಾಗುತ್ತಿದೆ:
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಪ್ರಧಾನಿ ಮೋದಿ ಅವರು ಹಲವು ವರ್ಷಗಳಿಂದ ಅಚ್ಛೇ ದಿನ ಬರುತ್ತದೆ ಎಂದಿದ್ದರು. ಅದರಂತೆ ಪುತ್ತೂರು ನಗರಸಭೆಗೆ ಇಂದು ಅಚ್ಛೇ ದಿನ್ ಎಂದ ಅವರು, ಬಹಳ ಸಮಸ್ಯೆ ಎದುರಿಸಿದ ಸೇತುವೆ ಇದು. ಇಂದು ಪರಿಹಾರ ಸಿಕ್ಕಿದೆ. ಶಾಸಕ, ಸಂಸದರ ಮುತುವರ್ಜಿಯಿಂದ ಕಾಮಗಾರಿ ನಡೆದಿದೆ ಎಂದ ಅವರು ಮುಂದಿನ 25 ವರ್ಷದ ದೂರ ದೃಷ್ಟಿಯನ್ನು ಇರಿಸಿಕೊಂಡು ಅಭಿವೃದ್ಧಿ ಕಾಮಗಾರಿ ಅನುಷ್ಠಾನಿಸಲಾಗುತ್ತಿದೆ ಎಂದರು.
8 ದಿವಸದೊಳಗೆ ಡಾಮರೀಕರಣ:
ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರೈಲ್ವೇ ಅಂಡರ್ ಪಾಸ್ ಕುರಿತು ಎಪಿಎಂಸಿ ಅವಧಿಯಲ್ಲಿ ಅನೇಕ ಸಭೆಯಲ್ಲಿ ಪ್ರಸ್ತಾಪ ಆಗಾಗೆ ಆಗುತ್ತಿತ್ತು. ಇದಕ್ಕೆ ಸರಿಯಾಗಿ ಜನರ ಸಮಸ್ಯೆಯು ಇತ್ತು. ಈ ನಿಟ್ಟಿನಲ್ಲಿ ಶಾಸಕರು ಮತ್ತು ಸಂಸದರ ಮುತುವರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದದ ಮೂಲಸೌಕರ್ಯ ಇಲಾಖೆಯಿಂದ ಅನುದಾನ ಮಂಜೂರುಗೊಂಡು ನಾಲ್ಕು ತಿಂಗಳ ಹಿಂದೆ ಶಂಕುಸ್ಥಾಪನೆ ಮಾಡಿದ್ದೆವು. ಆಗ ಇದು ಆಗ್ತಾದ ಹೋಗ್ತದಾ ಎಂಬ ಮಾತಿಗೆ ಅಂಕುಶ ಹಾಕಿ ಉದ್ಘಾಟನೆಯೂ ಮಾಡಿ ಆಗಿದೆ. ಈ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಖಾಸಗಿ ಜಾಗದ ಸಮಸ್ಯೆ ಇತ್ತು. ಅದಕ್ಕೂ ಪರಿಹಾರ ಕೊಡುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಮಾತುಕತೆ ನಡೆಸಲಾಗಿದೆ. ವಾಹನಗಳ ಓಟಾಡದಿಂದ ರಸ್ತೆ ಗಟ್ಟಿಯಾಗಬೇಕು ಎಂಬ ನಿಟ್ಟಿನಲ್ಲಿ ರೈಲ್ವೇ ಇಲಾಖೆಯಿಂದ ಅವಕಾಶ ನೀಡಿದೆ. ಹಾಗಾಗಿ ಉದ್ಘಾಟನೆ ಮಾಡಲಾಗಿದೆ. ಮುಂದೆ 8 ದಿವಸದೊಳಗೆ ಡಾಮರೀಕರಣ ನಡೆಯಲಿದೆ ಎಂದರು.
ಸನ್ಮಾನ:
ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಯೋಜನೆ ಸಾಕಾರಗೊಳ್ಳುವಲ್ಲಿ ದಿನೇಶ್ ಮೆದು ಅವರ ಪಾತ್ರ ಮಹತ್ವದ್ದು ಎಂದು ಶಾಸಕ ಸಂಜೀವ ಮಠಂದೂರು ಅವರು ದಿನೇಶ್ ಮೆದು ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರ ಮೈಸೂರು ರೆಡ್ಡಿ ಮತ್ತು ಉತ್ತಮ ಕಾಮಗಾರಿಯನ್ನು ನಡೆಸಿದ ರೈಲ್ವೇ ಸೀನಿಯರ್ ಸೆಕ್ಷನ್ ಇಂಜಿನಿಯರ್ ಕೆ.ಪಿ.ನಾಯ್ಡು ಮತ್ತು ಇಂಜಿನಿಯರ್ ಶಿಲ್ಪಾ ಅವರನ್ನು ಗೌರವಿಸಲಾಯಿತು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಎನ್ ಎಸ್ ಮಂಜುನಾಥ್, ಸದಸ್ಯರಾದ ಬಾಲಕೃಷ್ಣ ಬಾಣಜಾಲು, ತೀರ್ಥಾನಂದ ದುಗ್ಗಳ, ಪುಲಸ್ತ್ಯ ರೈ, ತ್ರಿವೇಣಿ ಪೆರ್ವೋಡಿ, ಕೊರಗಪ್ಪ, ನಾಮನಿರ್ದೇಶಿತ ಸದಸ್ಯೆ ಮೋಹನಾಂಗಿ ಅತಿಥಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮೀ ಅಶೋಕ್ ಶೆಣೈ, ನಗರಸಭೆ ಸದಸ್ಯ ಪ್ರೇಮ್ ಕುಮಾರ್ ಉಪಸ್ಥಿತರಿದ್ದರು. ಶಿವಾನಿ ಮತ್ತು ಸಮಿತ ಪ್ರಾರ್ಥಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿ, ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು ವಂದಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಎಪಿಂಸಿ ಮಾಜಿ ಸದಸ್ಯರುಗಳು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಚತುಷ್ಪಥ ರಸ್ತೆಗೆ ರೂ. 2ಕೋಟಿಗೆ ಎಸ್ಟಿಮೇಟ್
ಎಪಿಎಂಸಿ ರಸ್ತೆ ಇವತ್ತು ದ್ವಿಪಥ ರಸ್ತೆಯಾಗಿದೆ. ಈ ಭಾಗದಲ್ಲಿ ಅತೀ ಹೆಚ್ಚು ವಾಹನ ದಟ್ಟಣೆ, ವ್ಯವಾಹರ ಇರುವ ಹಿನ್ನೆಲೆಯಲ್ಲಿ ಇದನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಯೋಜನೆ ಇದೆ. ಅರುಣಾ ಚಿತ್ರಮಂದಿರದಿಂದ ಆದರ್ಶ ಆಸ್ಪತ್ರೆಯಾಗಿ ಉಪ್ಪಿನಂಗಡಿ ಸಂಪರ್ಕಿಸುವ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ. ರೈಲ್ವೇ ಅಂಡರ್ ಪಾಸ್‌ನಲ್ಲೂ ಚತುಷ್ಪತ ರಸ್ತೆ ಮಾಡಲು ಖಾಸಗಿ ಜಾಗವನ್ನು ಕಾನೂನು ಬದ್ದವಾಗಿ ತೆಗೆದು ಕೊಂಡು ಚತುಷ್ಪತ ರಸ್ತೆಯನ್ನು ಪೂರ್ಣ ಮಾಡಿ ಉಳಿಕೆಯ ರಸ್ತೆಯನ್ನು ಸಹಕಾರಿ ಮತ್ತು ಕೃಷಿ ಮಾರುಕಟ್ಟೆ ಸಚಿವರಿಂದ ಪ್ಲಾನ್ ಎಸ್ಟಿಮೇಷನ್ ಮಾಡಿ ರೂ. 2 ಕೋಟಿ ಅನುದಾನವನ್ನು ಈ ರಸ್ತೆಗೆ ಇಡಲಾಗಿದೆ.
ಸಂಜೀವ ಮಠಂದೂರು ಶಾಸಕರು ಪುತ್ತೂರು
ದಿನೇಶ್ ಮೆದುರವರು ನಕ್ಷತ್ರಿಕರಂತೆ ನನ್ನ ಬೆನ್ನು ಬಿಡಲಿಲ್ಲ
ನಾನು ಶಾಸಕನಾದ ಬಳಿಕ ದಿನೇಶ್ ಮೆದು ಅವರು ಒಬ್ಬ ನಕ್ಷತ್ರಿಕನಂತೆ ನನ್ನ ಬೆನ್ನು ಬಿಡಲಿಲ್ಲ. ಅದಕ್ಕೂ ಮೊದಲು ಎಪಿಎಂಸಿ ಅಧ್ಯಕ್ಷರಾಗಿದ್ದ ಬೂಡಿಯಾರ್ ರಾಧಾಕೃಷ್ಣ ರೈ ಅವರು ಅಂಡರ್ ಪಾಸ್‌ಗೆ ನಿರ್ಣಯ ಕೈಗೊಂಡಿದ್ದರು. ಆದರೆ ದಿನೇಶ್ ಮೆದು ಅವರು ನನ್ನ ಹಿಂದೆಯೇ ಬಂದು ರೈಲ್ವೇ ಅಧಿಕಾರಿಗಳು ಸರಕಾರದ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿಸಿದ್ದಾರೆ. ದೆಹಲಿಯಲ್ಲಿ ರೈಲ್ವೇ ಸಚಿವರಲ್ಲಿ ಚರ್ಚಿಸಲಾಯಿತು. ಬಳಿಕ ಮೂಲಭೂತ ಸೌಲಭ್ಯ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೆಟರಿಯಲ್ಲಿ, ರೈಲ್ವೇ ಮತ್ತು ಮೂಲಭೂತ ಸೌಕರ್ಯ ಇಲಾಖೆಗೆ ಕೊಂಡಿಯಾಗಿರುವ ಎಚ್‌ಎಮ್‌ಆರ್‌ಡಿ ಇಲಾಖೆಯಲ್ಲಿ ಚರ್ಚಿಸಿದ್ದು, ಹೀಗೆ ಒಟ್ಟು ಅದರ ಹಿಂದೆ ಎಷ್ಟು ಭಾರಿ ಹೋಗಿದ್ದೇವೆ ಎಂಬುದನ್ನು ಬಹುಶಃ ದಿನೇಶ್ ಮೆದು ಅವರೇ ಹೇಳಬೇಕು. ಒಂದು ಇಚ್ಚಾಶಕ್ತಿ ಇದ್ದಾಗ ಕಂಡಿತಾ ಏನು ಬೇಕಾದರೂ ಸಾಧಿಸಬಹುದು ಎಂದು ದಿನೇಶ್ ಮೆದು ಮಾದರಿಯಾಗಿದ್ದಾರೆ.
ಸಂಜೀವ ಮಠಂದೂರು, ಶಾಸಕರು ಪುತ್ತೂರು