ಉಪ್ಪಿನಂಗಡಿ: ಉಬಾರ್ ಡೋನರ್‍ಸ್ ವತಿಯಿಂದ ರಂಝಾನ್ ಕಿಟ್ ವಿತರಣೆ

0

ಉಪ್ಪಿನಂಗಡಿ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ಸಹಕರಿಸುವುದು, ಅನಾಥರಿಗೆ, ಅಸಹಾಯಕರಿಗೆ ಹೊಟ್ಟೆಗೆ, ಬಟ್ಟೆಗೆ ಸಹಾಯ ಮಾಡುವುದು, ಅವರ ಸಂಕಷ್ಟದಲ್ಲಿ ಭಾಗಿಯಾಗುವುದು ಅಲ್ಲಾಹು ಮೆಚ್ಚುವ ಸೇವೆಯಾಗಿದೆ. ಇದೊಂದು ಪುಣ್ಯದಾಯಕ ಕೆಲಸ ಎಂದು ಕೆಮ್ಮಾರ ಸಂಶುಲ್ ಉಲಮಾ ಶರೀಅತ್ ಕಾಲೇಜಿನ ಸಂಚಾಲಕ ಎಸ್.ಬಿ. ಮಹಮ್ಮದ್ ದಾರಿಮಿ ಹೇಳಿದರು.


ಅವರು ಉಪ್ಪಿನಂಗಡಿಯಲ್ಲಿ ಉಬಾರ್ ಡೋನರ್‍ಸ್ ಹೆಲ್ಪ್‌ಲೈನ್ ವತಿಯಿಂದ ರಂಝಾನ್ ಕಿಟ್ ವಿತರಣೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳೆದ ಎಂಟು ವರ್ಷಗಳಿಂದ ಈ ನಿರಂತರವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವಕರು ಕೋವಿಡ್ ಸಂದರ್ಭದಲ್ಲಿ ಆಹಾರದ ಕಿಟ್ ನೀಡಿದ್ದು, ಪ್ರವಾಹ ಪೀಡಿತ ಸಂದರ್ಭದಲ್ಲಿ ಸಹಕಾರ, ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಈ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಯುವಕರಲ್ಲಿ ಮಾನವೀಯತೆಯ ಪ್ರತಿಬಿಂಬವನ್ನು ಕಾಣುತ್ತಿದ್ದೇವೆ. ಈ ಯುವಕರ ಸೇವೆ, ಸಂದೇಶ ಇತರೆಡೆಗೆ ಮಾದರಿ ಆಗಲಿ ಎಂದರು.


ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ಮಾತನಾಡಿ ಬಡತನ, ಸಂಕಷ್ಟದಲ್ಲಿ ಬದುಕುತ್ತಿರುವವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದು ಉತ್ತಮ ಸೇವೆಯಾಗಿದ್ದು, ಅಲ್ಲಾಹು ಇಷ್ಟ ಪಡುವ ಕೆಲಸವಾಗಿದ್ದು, ಇಲ್ಲಿನ ಯುವಕರ ಈ ಸೇವೆ ಇತರೇ ಕಡೆಗಳಿಗೆ ಮಾದರಿ ಆಗಲಿ ಎಂದರು.


ಉಬಾರ್ ಡೋನರ್‍ಸ್ ಹೆಲ್ಪ್‌ಲೈನ್ ಸಂಸ್ಥೆಯ ಸಂಚಾಲಕ ಶಬ್ಬೀರ್ ಕೆಂಪಿ ಮಾತನಾಡಿ ಉಪ್ಪಿನಂಗಡಿ ಪರಿಸರದ ಉದ್ಯಮಿ ದಾನಿಗಳ ಸಹಾಯ ಪಡೆದುಕೊಂಡು ಕಳೆದ 8 ವರ್ಷಗಳಿಂದ ಈ ಸಂಸ್ಥೆಯ ಮೂಲಕ ಬಡ ಕುಡುಂಬಗಳಿಗೆ ಸಹಾಯ ಮಾಡುತ್ತಿದ್ದು, ಕಳೆದ 3 ವರ್ಷದ ಹಿಂದೆ ಕೋವಿಡ್, ಲಾಕ್‌ಡೌನ್ ಸಂದರ್ಭದಲ್ಲಿ 5 ಹಂತದಲ್ಲಿ ಆಹಾರ ಕಿಟ್ ನೀಡಲಾಗಿತ್ತು. ಇದೀಗ ಉಪ್ಪಿನಂಗಡಿ, ಕರಾಯ, ಕುಪ್ಪೆಟ್ಟಿ, ಶಾಂತಿನಗರ, ಮಠ, ಬೆದ್ರೋಡಿ, ಗೋಳಿತೊಟ್ಟು, ಪೆರಿಯಡ್ಕ, ಕೊಲ, ಗಂಡಿಬಾಗಿಲು, ಆತೂರು ಮೊದಲಾದ ಕಡೆಯಲ್ಲಿನ ಸುಮಾರು 200 ಅರ್ಹ ಕುಟುಂಬವನ್ನು ಗುರುತಿಸಿ, ಒಂದು ಕುಟುಂಬಕ್ಕೆ 1 ತಿಂಗಳಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.


ಕಾರ್‍ಯಕ್ರಮದಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಪ್ರಧಾನ ಕಾರ್‍ಯದರ್ಶಿ ಶುಕ್ರಿಯಾ ಶುಕೂರ್ ಹಾಜಿ, ಖಜಾಂಚಿ ಮುಸ್ತಫಾ, ಇಸ್ಮಾಯಿಲ್ ತಂಙಳ್, ಸಿದ್ದಿಕ್ ಕೆಂಪಿ, ಉಬಾರ್ ಡೋನರ್‍ಸ್ ಎಡ್ಮಿನ್‌ಗಳಾದ ಇಬ್ರಾಹಿಂ ಆಚಿ ಕೆಂಪಿ, ಯು.ಟಿ. ತೌಸೀಫ್, ಮುನೀರ್ ಎನ್ಮಾಡಿ, ಶುಕೂರ್ ಮೇದರಬೆಟ್ಟು, ಜಮಾಲು ಕೆಂಪಿ, ಶಬೀರ್ ನಂದಾವರ, ಅನಸ್ದಿಲ್ದಾರ್, ರಿಯಾಝ್ ಇಂಡಿಯನ್, ಸದಸ್ಯರುಗಳಾದ ಫೌಝರ್ ಯು.ಟಿ., ಇರ್ಷಾದ್ ಯು.ಟಿ., ಅಶ್ರಫ್ ಡಿಸೈನ್, ಮುಸ್ತಫಾ ಕೊಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here