`ಯುವಕರಿಗೆ ಉದ್ಯೋಗ ಕೊಡಿಸಿ,ಕಾರ್ಯಕರ್ತರಿಗೆ ಸರಕಾರಿ ಕಾಮಗಾರಿ ಗುತ್ತಿಗೆ ಕೊಡಿಸಿ’-ಬಿಜೆಪಿ ಯುವ ಮೋರ್ಚಾದ ಯುವ ಜಾಥಾದಲ್ಲಿ ಡಾ.ಎಂ.ಕೆ.ಪ್ರಸಾದ್ ಕರೆ

0

ಪುತ್ತೂರು:ಪಕ್ಷಕ್ಕಾಗಿ ದುಡಿಯುವ ನಮ್ಮ ಯುವಕರು ಸ್ವಂತ ಕಾಲಮೇಲೆ ನಿಲ್ಲಬೇಕು.ಅವರಿಗೆ ಉದ್ಯೋಗ ಕೊಡಿಸಬೇಕು ಮತ್ತು ವಿವಿಧ ಕಾಮಗಾರಿಗಳ ಗುತ್ತಿಗೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡಿಸಬೇಕು ಎಂದು ಆದರ್ಶ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ಆಗ್ರಹಿಸಿದ್ದಾರೆ.


ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾದ ಬೈಕ್ ರ್‍ಯಾಲಿ (ಯುವ ಜಾಥಾ)ಯಲ್ಲಿ ಕಲ್ಲೇಗದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಶಾಸಕರಾದ ಸಂಜೀವ ಮಠಂದೂರು ಕೋಟಿ ಕೋಟಿ ಅನುದಾನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ.ಮುಂದಿನ ದಿನವೂ ಅವರು ಇನ್ನಷ್ಟು ಅನುದಾನ ತರುವಂತಾಗಬೇಕು.ಹಾಗಾಗಿ ಯುವ ತರುಣರ ತಂಡ ಸಕ್ರಿಯವಾಗಿರಬೇಕು.ನಮ್ಮಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ, ಜಾಗರಣ ವೇದಿಕೆ ಇವೆಲ್ಲ ಸೇರಿದರೆ ದೇಶ ಶಕ್ತಿಶಾಲಿಯಾಗುವುದರಲ್ಲಿ ಸಂಶಯವಿಲ್ಲ.ಇವತ್ತು ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಯಾವ ಗ್ಯಾರೆಂಟಿಗಾಗಿ?.ಇಷ್ಟರ ತನಕ ಅವರದ್ದು ಯಾವುದಾದರೂ ಗ್ಯಾರೆಂಟಿ ಆಗಿದಾ ಎಂದು ಪ್ರಶ್ನಿಸಿದ ಡಾ.ಪ್ರಸಾದ್ ಅವರು, ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‌ನ್ನು ಒಲೆಗೆ ಹಾಕಿ.ನಮ್ಮ ದೇಶದ ಸೈನಿಕರನ್ನು ನಂಬದೆ ಪಾಕಿಸ್ತಾನ, ಚೀನಾದವರನ್ನು ನಂಬುವ ಕಾಂಗ್ರೆಸ್ ನಮಗೆ ಬೇಡ.ಇಂತವರಿಗೆ ಓಟು ಹಾಕಬಾರದು.ನಮ್ಮ ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುತ್ತಾರೆ.ಆದರೆ ನಮ್ಮ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಆಗಬೇಕು ಮತ್ತು ನಮ್ಮ ಕಾರ್ಯಕರ್ತರಿಗೆ ಸರಕಾರದ ಕಾಮಗಾರಿಯ ಗುತ್ತಿಗೆ ಕೊಡಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಅವರಲ್ಲಿ ಹೇಳಿದರು.


ಹಿಂದುಗಳ ಭಾವನೆಗೆ ಪೂರಕವಾಗಿ ಸರಕಾರದ ನಿರ್ಧಾರ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಇವತ್ತು ಬುಲ್ಲೆಟ್‌ನ ಸದ್ದು ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೆಟ್‌ಗೆ ಉತ್ತರವಾಗಿರಲಿ ಎಂದು ಹೇಳಿ, ಹಿಂದುಗಳ ಭಾವನೆಗೆ ಪೂರಕವಾಗಿ ಸರಕಾರ ನಿರ್ಧಾರ ಕೈಗೊಳ್ಳುತ್ತಿದೆ.ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಉದ್ಯೋಗಾವಕಾಶಗಳ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ.ಆದರೆ ನಮ್ಮ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಿಲ್ಲ.ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಇಂಡಸ್ಟ್ರಿಯಲ್ ಏರಿಯಾಕ್ಕೆ 100 ಎಕ್ರೆ ಜಮೀನು ಕಾದಿರಿಸಿದೆ. ಮುಂದಿನ ದಿನ ನಮ್ಮ ಸರಕಾರ ಉದ್ಯೋಗ ಕೊಡಿಸುವ ಕೆಲಸವನ್ನೂ ಮಾಡುತ್ತದೆ ಎಂದರು.


ಬಿಜೆಪಿ ಗ್ರಾಮಾಂತರ ಮಂಡಲ ಯುವ ಮೋರ್ಚಾದ ಅಧ್ಯಕ್ಷ ನವೀನ್ ಪಡ್ನೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ಸಹಜ್ ರೈ ಬಳಜ್ಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ರ್‍ಯಾಲಿಯ ಮೂಲಕ ಕಮಲವನ್ನು ಅರಳಿಸುವ ಶಪಥವನ್ನು ಯುವ ಕಾರ್ಯಕರ್ತರು ಮಾಡಿದ್ದಾರೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುರುದತ್ ನಾಯಕ್, ಯುವ ಮೋರ್ಚಾ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುದರ್ಶನ್, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಜಿಲ್ಲಾ ಕಾರ್ಯದರ್ಶಿ ಯತೀಶ್ ಬೆಳ್ತಂಗಡಿ, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ಪ್ರವೀಣ್, ಅಭೀಶ್, ನಿತೀಶ್ ಕಲ್ಲೇಗ, ಗಗನ್, ಮಧುಕರ್, ರತನ್, ನಿತೇಶ್, ಚರಣ್, ಕಾರ್ತಿಕ್ ಮೂಡಾಯುರು, ಧನಂಜಯ, ಪ್ರೀತಂ, ಸಚಿನ್ ಶೆಟ್ಟಿ, ದಯಾ ತೆಂಕಿಲ ಅತಿಥಿಗಳನ್ನು ಗೌರವಿಸಿದರು.ನಗರಸಭಾ ಸದಸ್ಯ ಗೌರಿ ಬನ್ನೂರು ವಂದೇ ಮಾತರಂ ಹಾಡಿದರು.ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಕುಂಬ್ರ, ವಿಟ್ಲದಿಂದ ಏಕಕಾಲದಲ್ಲಿ ಜಾಥಾ
ಕುಂಬ್ರ ಮತ್ತು ವಿಟ್ಲ ಭಾಗದಿಂದ ಏಕಕಾಲದಲ್ಲಿ ಆರಂಭಗೊಂಡ ಬೈಕ್ ರ್‍ಯಾಲಿ ಸಂಜೆ ವೇಳೆ ಕಲ್ಲೇಗದಲ್ಲಿ ಸಮಾವೇಶಗೊಂಡಿತು.ಕುಂಬ್ರದಿಂದ ಹೊರಟ ಬೈಕ್ ರ್‍ಯಾಲಿ ದರ್ಬೆ ಅಶ್ವಿನಿ ಸರ್ಕಲ್‌ನಲ್ಲಿ ಸೇರಿತು. ಅಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಪುಷ್ಪಾರ್ಚನೆ ಮಾಡಿದರು.ಶಾಸಕರು ಮತ್ತು ಪ್ರಮುಖರು ಬಣ್ಣದ ಬೆಲೂನುಗಳನ್ನು ಹಾರಿಸುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು. ಕುಂಬ್ರ, ವಿಟ್ಲ, ಉಪ್ಪಿನಂಗಡಿ, ಕೋಡಿಂಬಾಡಿ, ನೆಟ್ಟಣಿಗೆಮುಡ್ನೂರು ಕಡೆಯಿಂದ ಒಟ್ಟು ಸುಮಾರು 1200 ದ್ವಿಚಕ್ರ ವಾಹನಗಳು ಜಾಥಾದಲ್ಲಿ ಪಾಲ್ಗೊಂಡಿತ್ತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಾವೇಶಕ್ಕೆ ಪುತ್ತೂರಿನಲ್ಲಿ ಈ ಹಿಂದೆ ನಡೆದ ಬ್ಯೆಕ್ ರ್‍ಯಾಲಿಯಲ್ಲಿ ದಿ.ಪ್ರವೀಣ್ ನೆಟ್ಟಾರು ಭಾಗವಹಿಸಿದ್ದರು.ಅವರು ಮಳೆಯಲ್ಲಿ ನೆನೆದುಕೊಂಡು ಬೈಕ್ ಚಲಾಯಿಸಿ ಪುತ್ತೂರಿನಿಂದ ಬಿ.ಸಿ.ರೋಡ್ ತನಕ ಬಂದಿದ್ದರು.ಅವರ ನೆನಪಿಗೋಸ್ಕರ ಸಮಾವೇಶದ ಸಭಾ ವೇದಿಕೆಯಲ್ಲಿ ದಿ.ಪ್ರವೀಣ್ ನೆಟ್ಟಾರು ಅವರ ಭಾವ ಚಿತ್ರವನ್ನು ಅಳವಡಿಸಲಾಗಿತ್ತು.

LEAVE A REPLY

Please enter your comment!
Please enter your name here