ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಿಂದ ಅನಧಿಕೃತವಾಗಿ ಮರಳು ದಂಧೆ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪಂಚಾಯತ್ ಮೂಲಕ ಸಾರ್ವಜನಿಕರಿಗೆ ಸ್ವಂತ ಮನೆ ಕಟ್ಟಲು ಅಥವಾ ಸ್ವ ಉದ್ಯೋಗ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ಮೂಲಕ ಭ್ರಷ್ಟಾಚಾರ ಮತ್ತು ರೌಡಿಸಂ ತಡೆಗಟ್ಟಬಹುದು. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರು ಗುಂಡ್ಯದಿಂದ ನದಿಯ ಪಾತ್ರದ ಉದ್ದಕ್ಕೂ ಪರಿಶೀಲನೆ ನಡೆಸುವಂತೆ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಗುಂಡ್ಯ ಹೊಳೆ, ಕುಮಾರಧಾರ, ನೇತ್ರಾವತಿ ನದಿ ಮತ್ತು ಪಶ್ಚಿಮ ಘಟ್ಟದಿಂದ ಬರುವ ಎಲ್ಲಾ ಉಪನದಿಗಳಲ್ಲಿ ಅನಧಿಕೃ ಮರಳುಗಾರಿಕೆ ನಡೆಯುತ್ತಿದೆ. ಇದನ್ನು ನಿಲ್ಲಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳು ಸಿಗುವ ಹಾಗೆ ಮಾಡುವಂತೆ ಅವರು ಒತ್ತಾಯಿಸಿದರು. ಈಗಾಗಲೇ ಮರಳು ದಂಧೆಯಲ್ಲಿ ಅಧಿಕೃತ ಮರಳು ಯಾರ್ಡ್ ಕೇವಲ ಬೆರಳೆಣಿಕೆಯಷ್ಟಿದೆ. ಉಳಿದೆಲ್ಲವು ಅನಧಿಕೃತ ಯಾರ್ಡ್‌ಗಳು. ಈ ಕುರಿತು ದೂರು ನೀಡಲು ಹೋದರೆ ಅಧಿಕಾರಿಗಳು ಕೂಡಾ ದಂಧೆಯೊಂದಿಗೆ ಇನ್ವಾಲ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಮರಳು ದಂಧೆ ಹಿಡಿಯುವಲ್ಲಿ ಕಾರ್ಯಪಡೆ ಮಾಡಬೇಕು. ಇದರ ಜೊತೆಗೆ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ಒಂದು ದಿನ ಸಮಯ ಮಾಡಿ ಗುಂಡ್ಯದಿಂದ ನದಿಯ ಪಾತ್ರದ ಉದ್ದಕ್ಕೂ ಪರಿಶೀಲನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಶೇಖರ್ ಉಪಸ್ಥಿತರಿದ್ದರು.