ವಿಧಾನಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ ; ಚುನಾವಣಾ ಕಾರ್ಯ ಜವಾಬ್ದಾರಿಯುತವಾಗಿ ನಿರ್ವಹಿಸಲು ಡಾ. ಕುಮಾರ್ ಸಲಹೆ

0

ಮಂಗಳೂರು: ಚುನಾವಣಾ ಕಾರ್ಯದಲ್ಲಿ ಭಾವನಾತ್ಮಕತೆಗೆ ಅವಕಾಶವಿಲ್ಲ, ಜವಾಬ್ದಾರಿಯ ಕೆಲಸಕ್ಕೆ ಮಾತ್ರ ಆದ್ಯತೆ, ಆದ ಕಾರಣ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವುದೇ ಹೆಮ್ಮೆಯ ವಿಚಾರ ಎಂದು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ಅವರು ಮಾ.30ರಂದು ದ.ಕ.ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಚುನಾವಣೆಯ ಪೂರ್ವಸಿದ್ದತೆಗಳ ಬಗ್ಗೆ ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಸಾಕಷ್ಟು ಚುನಾವಣಾ ಕಾರ್ಯ ನಿರ್ವಹಿಸಿದ್ದರೂ, ಸಾಕಷ್ಟು ಅನುಭವವಿದ್ದರೂ ಸಹ ಪ್ರತಿಯೊಂದು ಚುನಾವಣೆಯು ಹೊಸತಾಗಿರುತ್ತದೆ, ಅಲ್ಲಿ ಸಾಕಷ್ಟು ಹೊಸ ಸಂಗತಿಗಳಿರುತ್ತವೆ, ಚುನಾವಣಾ ಆಯೋಗದಿಂದ ಬರುವ ನಿರ್ದೇಶನಗಳು, ಕೆಲವೊಂದು ಘಟನೆಗಳು ವಿಭಿನ್ನವಾಗಿರುತ್ತದೆ ಅದನ್ನು ಅರಿತು ಮುಂದಿನ 45 ದಿನದೊಳಗೆ ವಾರಿಯರ್ ರೀತಿ ಕೆಲಸ ಮಾಡಬೇಕು. ಆತಂಕ, ಭಯ ರಹಿತವಾಗಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಪ್ರತಿಯೊಬ್ಬರೂ ಸಜ್ಜಾಗಬೇಕು ಎಂದವರು ತಿಳಿಸಿದರು. ಚುನಾವಣಾ ಕಾರ್ಯದಲ್ಲಿ ಜ್ಞಾನವೇ ಆಯುಧ. ಆದ ಕಾರಣ ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಚೆನ್ನಾಗಿ ಓದಿಕೊಳ್ಳಬೇಕು ಹಾಗೂ ಆ ರೀತಿ ಕಾರ್ಯನಿರ್ವಹಿಸಬೇಕು. ಅದರಂತೆ ಚುನಾವಣೆ ಘೋಷಣೆಯಾದ 24, 48, 72 ಗಂಟೆಗಳಲ್ಲಿ ಚುನಾವಣಾ ಅಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಅದರಂತೆ ಪ್ರತಿಯೊಬ್ಬರು ಆಯಾ ತಾಸುಗಳ ಗಡುವನ್ನು ಕಾಯದೆಯೇ ಕೂಡಲೇ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here