ದ.ಕ. ಜಿಲ್ಲೆಯಲ್ಲಿ 17,58,647 ಮತದಾರರು: ಡಿಸಿ ರವಿಕುಮಾರ್

0

ಮಂಗಳೂರು: ಕೇಂದ್ರ ಚುನಾವಣಾ ಆಯೋಗವು 2023ರ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾ ಪಟ್ಟಿಯನ್ನು ಬುಧವಾರ ಪ್ರಕಟಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮೇ 15ರ ತನಕ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಮಾ.29ರ ತನಕದ ದಾಖಲೆಯಂತೆ 17,58,647 ಮತದಾರರಿದ್ದಾರೆ. ಈ ಪೈಕಿ ಪುರುಷರು 8,60,396, ಮಹಿಳೆಯರು 8,98,176, ತೃತೀಯ ಲಿಂಗಿ 75 ಮತದಾರರಿದ್ದಾರೆ. ಬೆಳ್ತಂಗಡಿ 2,25,273, ಮೂಡಬಿದ್ರೆ 2,02,593, ಮಂಗಳೂರು ನಗರ ಉತ್ತರ 2,46,350, ಮಂಗಳೂರು ನಗರ ದಕ್ಷಿಣ 2,42,407, ಮಂಗಳೂರು 2,02,015, ಬಂಟ್ವಾಳ 2,24,815, ಪುತ್ತೂರು 2,10,522 ಮತ್ತು ಸುಳ್ಯದಲ್ಲಿ 2,04,672 ಮತದಾರರಿದ್ದಾರೆ.

ಯುವ ಮತದಾರರು: 18-19 ಹರೆಯದ ಒಟ್ಟು 33,577 ಮತದಾರರಿದ್ದಾರೆ. ಯುವ ಮತದಾರರು ಬೆಳ್ತಂಗಡಿಯಲ್ಲಿ 4,180, ಮೂಡಬಿದ್ರೆ 3,612, ಮಂಗಳೂರು ನಗರ ಉತ್ತರ 4,455, ಮಂಗಳೂರು ನಗರ ದಕ್ಷಿಣ 3,462, ಮಂಗಳೂರು 4,509, ಬಂಟ್ವಾಳ 4,715, ಪುತ್ತೂರು 4,412 ಮತ್ತು ಸುಳ್ಯದಲ್ಲಿ 4,232 ಇದ್ದಾರೆ.

ಜಿಲ್ಲೆಯಲ್ಲಿ 531 ಶತಾಯುಷಿಗಳು: ಜಿಲ್ಲೆಯಲ್ಲಿ 80ಕ್ಕಿಂತ ಮೇಲ್ಪಟ್ಟ 46,927 ಮತದಾರರಿದ್ದಾರೆ. ಈ ಪೈಕಿ 80ಕ್ಕಿಂತ ಮೇಲ್ಪಟ್ಟ 38,294, 90ಕ್ಕಿಂತ ಮೇಲ್ಪಟ್ಟ 8,102, 100ಕ್ಕಿಂತ ಮೇಲ್ಪಟ್ಟ 531ಮತದಾರರು ಮತದಾನದ ಹಕ್ಕನ್ನು ಹೊಂದಿದ್ದಾರೆ. ವಿಕಲಚೇತನ ಮತದಾರರು 14,007 ಮಂದಿ ಇದ್ದಾರೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಮತಗಟ್ಟೆಗಳ ವಿವರ: ದ.ಕ.ಜಿಲ್ಲೆಯಲ್ಲಿ 1,860 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಬೆಳ್ತಂಗಡಿ 241, ಮೂಡಬಿದ್ರೆ 221, ಮಂಗಳೂರು ನಗರ ಉತ್ತರ 244, ಮಂಗಳೂರು ನಗರ ದಕ್ಷಿಣ 244, ಮಂಗಳೂರು 210, ಬಂಟ್ವಾಳ 249, ಪುತ್ತೂರು 220 ಮತ್ತು ಸುಳ್ಯದಲ್ಲಿ 231 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

100 ಮಾದರಿ ಮತಗಟ್ಟೆ: ಜಿಲ್ಲೆಯಲ್ಲಿ 100 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು, ಇದರಲ್ಲಿ ಯಕ್ಷಗಾನ 11, ಕಂಬಳ 11, ಬ್ಲೂವೇವ್ 8, ಹೆರಿಟೇಜ್ 8, ಗೋ ಗ್ರೀನ್ 8, ಎಥಿನಿಕ್3, ಪಿಡಬ್ಲ್ಯೂಡಿ 3, ಯುವ 8, ಸಖಿ 40 ಮತಗಟ್ಟೆಗಳಿವೆ.

ಕಂಟ್ರೋಲ್ ರೂಮ್: ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಇದರ ದೂರವಾಣಿ ನಂಬ್ರ: 195 ಲೋ ಫ್ರೀ ನಂಬರ್. ಈ ಕಂಟ್ರೋಲ್ ರೂಮ್ ದಿನದ 24 ಗಂಟೆಯೂ ಕಾರ್ಯ ನಿರ್ವಹಣೆ ಮಾಡಲಿದೆ. ಚುನಾವಣೆಗೆ ಸಂಬಂಧಿಸಿದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದಲ್ಲಿ ಈ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬಹುದು ಹಾಗೂ ಚುನಾವಣೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಪಡೆಯಬಹುದು ಎಂದು ಹೇಳಿದರು.

ಸಿ-ವಿಜಿಲ್ ಮೊಬೈಲ್ ಆ್ಯಪ್: ಈ ಬಾರಿ ಸಾರ್ವಜನಿಕರು ಚುನಾವಣಾ ಸಂಬಂಧಿತ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ಸಿ-ವಿಜಿಲ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮೂಲಕ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಫೋಟೋ ಹಾಗೂ ವಿಡಿಯೋಗಳ ಮುಖಾಂತರ ದೂರುಗಳನ್ನು ದಾಖಲಿಸಬಹುದಾಗಿದೆ. 80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನ (ಪಿಡಬ್ಲ್ಯೂಡಿ) ಮತದಾರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅಗತ್ಯ ವರ್ಗಗಳಿಗೆ ಅಂಚೆ ಮತ ಪತ್ರ ಸೌಲಭ್ಯ ಒದಗಿಸುವ ಸಂಬಂಧ ನೋಡಲ್ ಅಧಿಕಾರಿಯನ್ನಾಗಿ ಅಪರ ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಜಿಲ್ಲಾಮಟ್ಟದ 11 ನೋಡೆಲ್ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದರು.

10 ಲಕ್ಷ ರೂ.ವಶ: 50,000 ರೂ.ಗಿಂತ ಹೆಚ್ಚಿನ ಹಣವನ್ನು ಕೊಂಡೊಯ್ಯುವಾಗ, ನಗದಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳ ಅಗತ್ಯವಿದೆ. ತಪಾಸಣೆಗೆ 27 ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 10 ಅಂತರ್ ರಾಜ್ಯ, 8 ಅಂತರ್ ಜಿಲ್ಲಾ ಮತ್ತು 9 ಸ್ಥಳೀಯ ಚೆಕ್ ಪೋಸ್ಟ್ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಚುನಾವಣಾ ಪೂರ್ವ ತಪಾಸಣೆ ವೇಳೆ 10 ಲಕ್ಷ ರೂ., 200 ಲೀಟರ್ ಮದ್ಯ ಮತ್ತು 65 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸಿಇಒ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಪೊಲೀಸ್ ಆಯಕ್ತರಾದ ಕುಲದೀಪ್ ಕುಮಾರ್ ಆರ್ ಜೈನ್, ಜಿಲ್ಲಾ ಎಸ್ಪಿ ಡಾ.ವಿಕ್ರಮ ಅಮಟೆ ಉಪಸ್ಥಿತರಿದ್ದರು.

ಧಾರ್ಮಿಕ ಆಚರಣೆಗೆ ನಿರ್ಬಂಧವಿಲ್ಲ
ಭೂತ ಕೋಲ, ಯಕ್ಷಗಾನ, ಯಾವುದೇ ಧರ್ಮದ ಧಾರ್ಮಿಕ ಆಚರಣೆಗಳಿಗೆ ಮಾದರಿ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಕಾರ್ಯಕ್ರಮಗಳ ಬಗ್ಗೆ ಬ್ಯಾನರ್, ಬಂಟಿಂಗ್ಸ್ ಹಾಕಬೇಕಾದರೆ ಸ್ಥಳೀಯ ಚುನಾವಣಾಧಿಕಾರಿ ಅನುಮತಿ ಪಡೆಯಬೇಕಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಅಥವಾ ಮುಖಂಡರ ಪ್ರಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. 10 ದಿನಗಳ ಒಳಗಾಗಿ ಶಸ್ತ್ರಾಸ್ತ್ರ ಅಥವಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು. ಪ್ರಚೋದನಕಾರಿ ಪೋಸ್ಟ್ಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸುವ ಪ್ರಯತ್ನಗಳನ್ನು ಮಾಡಬಹುದಾದ್ದರಿಂದ ನಾವು ಸಾಮಾಜಿಕ ಮಾಧ್ಯಮವನ್ನು ಸಹ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದರು.

LEAVE A REPLY

Please enter your comment!
Please enter your name here