ಅಭ್ಯರ್ಥಿ ಆಯ್ಕೆಗೆ ಬಿಜೆಪಿಯಿಂದ ವಿನೂತನ ಕ್ರಮ : ಆಂತರಿಕ ಮತದಾನದ ಮೂಲಕ ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹ

0

ಆಕಾಂಕ್ಷಿಗಳಿಂದ ಫೋನ್‌ ಕಾಲ್:

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಹೆಸರು ಮುಂಚೂಣಿಯಲ್ಲಿದ್ದರೂ ಕಿಶೋರ್ ಬೊಟ್ಯಾಡಿ, ವಿದ್ಯಾ ಆರ್ ಗೌರಿ, ಪಿ.ಜಿ.ಜಗನ್ನಿವಾಸ ರಾವ್ ಅವರ ಹೆಸರೂ ಕೇಳಿ ಬರುತ್ತಿದೆ.ಈ ನಿಟ್ಟಿನಲ್ಲಿ ಕಿಶೋರ್ ಬೊಟ್ಯಾಡಿ ಮತ್ತು ವಿದ್ಯಾ ಗೌರಿಯವರು ಕೆಲ ಮತದಾರರಿಗೆ ಫೋನ್ ಕಾಲ್ ಮಾಡಿ ಬೆಂಬಲ ಕೋರಿರುವುದಾಗಿ ತಿಳಿದು ಬಂದಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರ ಸಹಿತ 121 ಮಂದಿಗೆ ಮತದಾನಕ್ಕೆ ಅವಕಾಶ
102 ಮಂದಿ ಭಾಗಿ
ಅಭಿಪ್ರಾಯದ ಲಕೋಟೆ ರಾಜ್ಯ ಕೋರ್ ಕಮಿಟಿಗೆ
ಅಭ್ಯರ್ಥಿಗಳ ಆಯ್ಕೆಗೆ 4 ಹಂತಗಳ ಪ್ರಕ್ರಿಯೆ

ಪುತ್ತೂರು: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೂ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ವೇಳಾಪಟ್ಟಿಯೂ ಪ್ರಕಟವಾಗಿದೆ.ಚುನಾವಣೆಗೆ ಸಂಬಂಧಿಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ಬಿಡುಗಡೆಗೊಳಿಸಿದೆಯಾದರೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ.ಈ ಬಾರಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ವಿನೂತನ ಕ್ರಮ ಜಾರಿಗೊಳಿಸಿದ್ದು ಪುತ್ತೂರು, ಸುಳ್ಯ, ಬಂಟ್ವಾಳ ಸೇರಿದಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಆಂತರಿಕ ಅಭಿಪ್ರಾಯ ಸಂಗ್ರಹಣೆಗಾಗಿ ಮಾ.31ರಂದು ಮತದಾನ ನಡೆದಿದೆ.
ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಮಂಗಳೂರುನಲ್ಲಿರುವ ಆರ್‌ಎಸ್‌ಎಸ್ ಸಂಘನಿಕೇತನದಲ್ಲಿ ಮತದಾನ ನಡೆದಿದೆ.ಶಾಸಕರು, ಪಕ್ಷದ ಮಂಡಲಗಳ ಅಧ್ಯಕ್ಷರ ಸಹಿತ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 121 ಮಂದಿ ಮತದಾನದ ಅರ್ಹತೆ ಪಡೆದಿದ್ದು ಇವರಲ್ಲಿ 102 ಮಂದಿ ಮತಚಲಾಯಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಬಿಜೆಪಿ ಕೋರ್ ಕಮಿಟಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರು, ಮಂಡಲದಲ್ಲಿರುವ ಜಿಲ್ಲೆ, ರಾಜ್ಯ ಪದಾಧಿಕಾರಿಗಳು, ವಿವಿಧ ಪ್ರಕೋಷ್ಠಗಳ ಅಧ್ಯಕ್ಷರು, ಯುವ, ರೈತ,ಮಹಿಳಾ,ಹಿಂದುಳಿದ ವರ್ಗಗಳ,ಎಸ್ಸಿ,ಎಸ್ಟಿ,ಅಲ್ಪಸಂಖ್ಯಾತ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಕ್ಷೇತ್ರದ 54 ಶಕ್ತಿ ಕೇಂದ್ರಗಳ ಸಂಚಾಲಕರು ಮತ್ತು ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷ, ಉಪಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು,ಚುನಾವಣಾ ಪ್ರಭಾರಿ, ವಿಸ್ತಾರಕರು, ಕಳೆದ ಐದು ವರ್ಷಗಳ ಅವಽಯ ಜಿ.ಪಂ.,ತಾ.ಪಂ.ಮಾಜಿ ಅಧ್ಯಕ್ಷರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 121 ಮಂದಿ ಬಿಜೆಪಿ ಪ್ರಮುಖರು ಮತದಾನದ ಮೂಲಕ ಪಕ್ಷದ ಅಭ್ಯರ್ಥಿಯ ಹೆಸರು ಸೂಚಿಸಲು ಅವಕಾಶ ಪಡೆದಿದ್ದು ಈ ಪೈಕಿ 102 ಮಂದಿ ಮತದಾನದಲ್ಲಿ ಭಾಗವಹಿಸಿದ್ದರು.

ಹೀಗಿತ್ತು ಮತದಾನ:

ಮತಪತ್ರಗಳ ಮಾದರಿಯಲ್ಲಿರುವ ಪತ್ರವನ್ನು ಪ್ರತಿ ಮತದಾರನಿಗೆ ಅಭಿಪ್ರಾಯ ನಮೂದಿಸಲು ನೀಡಲಾಗಿತ್ತು.ಪತ್ರದ ಮೇಲ್ಭಾಗದಲ್ಲಿ ಎರಡೂ ಬದಿಯಲ್ಲಿ ಪಕ್ಷದ ಚಿಹ್ನೆ, ಮಧ್ಯದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ-2023 ಎಂದು ಶೀರ್ಷಿಕೆಯಿತ್ತು.ನಂತರ 1,2,3 ನಂಬ್ರ ನೀಡಲಾಗಿದ್ದು ಅಭ್ಯರ್ಥಿಗೆ ಸಂಬಂಧಿಸಿ ಪ್ರತಿ ಮತದಾರನಿಗೆ ಮೂವರ ಹೆಸರು ಬರೆಯಲು ಅವಕಾಶವಿದೆ.ಆದರೆ ಅಭಿಪ್ರಾಯ ಸಂಗ್ರಹ ಪತ್ರದಲ್ಲಿ ಯಾವುದೇ ಅಭ್ಯರ್ಥಿಯ ಹೆಸರು ಮೊದಲೇ ಮುದ್ರಿತವಾಗಿರುವುದಿಲ್ಲ.ಮತದಾರ ತಾನು ಬಯಸುವ ಯಾರ ಹೆಸರನ್ನೂ ಬರೆಯಬಹುದು ಇಲ್ಲವೇ ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ತನ್ನ ಅಭಿಪ್ರಾಯವನ್ನು ಬರೆಯಬಹುದು.ಪತ್ರದ ಕೆಳಬದಿಯಲ್ಲಿ ಮತದಾರನ ಹೆಸರು ಮತ್ತು ಫೋನ್ ನಂಬ್ರವನ್ನು ಕಡ್ಡಾಯವಾಗಿ ಬರೆಯಬೇಕು.ಹೆಸರು ಮತ್ತು ಮೊಬೈಲ್ ಸಂಖ್ಯೆ ಬರೆಯದವರ ಮತ ಪತ್ರವನ್ನು ತಿರಸ್ಕಾರ ಮಾಡಲಾಗುತ್ತದೆ.

ಜಿಲ್ಲೆಯ 8 ಕ್ಷೇತ್ರಗಳಿಗೆ ಸಂಬಂಧಿಸಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆದಿದೆ.ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಶಾಸಕ ಅರುಣ್ ಕುಮಾರ್ ಮೂಡಬಿದ್ರೆ ಮತ್ತು ಹಾಸನದ ಶಾಸಕ ಪ್ರೀತಂ ಗೌಡ ಅವರು ಮತದಾನ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದರು.ಒಂದೊಂದು ಜಿಲ್ಲೆಗೆ ಸಚಿವರು ಹಾಗೂ ಮಾಜಿ ಸಚಿವರನ್ನು ಒಳಗೊಂಡ ಹಿರಿಯ ನಾಯಕರ ನೇತೃತ್ವದ ಸಮಿತಿಗಳನ್ನು ರಚಿಸಲಾಗಿತ್ತು.ಸಮಿತಿಗಳ ನಾಯಕರು ಜಿಲ್ಲಾ ವ್ಯಾಪ್ತಿಯ ಒಂದೊಂದು ವಿಧಾನಸಭಾ ಕ್ಷೇತ್ರದ ಮುಖಂಡರ ಪ್ರತ್ಯೇಕ ಸಭೆ ನಡೆಸಿ, ಮತದಾನ ಪ್ರಕ್ರಿಯೆ ಸುಗಮವಾಗುವಂತೆ ನೋಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮತ ಪೆಟ್ಟಿಗೆಯಿಂದ ಅಭಿಪ್ರಾಯ ದಾಖಲಿಕರಣ:

ಈ ಆಂತರಿಕ ಮತದಾನದ ಬಳಿಕ ಏ.1 ಮತ್ತು 2ರಂದು ಎರಡು ದಿನ ಎಲ್ಲ ಜಿಲ್ಲಾ ಘಟಕಗಳ ಕೋರ್ ಕಮಿಟಿಗಳ ಸದಸ್ಯರು ಬೆಂಗಳೂರಿಗೆ ತೆರಳಿ ರಾಜ್ಯ ಘಟಕದ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭ್ಯರ್ಥಿಗಳ ಕುರಿತು ತಮ್ಮ ಅಭಿಪ್ರಾಯ ದಾಖಲಿಸಲಿದ್ದಾರೆ.ಬಳಿಕ ಎರಡು ದಿನ ಬೆಂಗಳೂರಿನಲ್ಲಿ ರಾಜ್ಯ ಕೋರ್ ಕಮಿಟಿ ಅಭ್ಯರ್ಥಿಗಳ ಬಗ್ಗೆ ಜಿಲ್ಲಾ ಕೋರ್ ಕಮಿಟಿ ಸದಸ್ಯರೊಂದಿಗೆ ಚರ್ಚೆ ನಡೆಸಲಿದೆ.ಅಂತಿಮವಾಗಿ ರಾಜ್ಯ ಪ್ರಮುಖರಿಗೆ ಅಭಿಪ್ರಾಯ ಸಲ್ಲಿಕೆಯಾಗಿ ಎ.4ರ ಬಳಿಕ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದೆ.ಹೀಗೆ ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here