ವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಬೃಹತ್ ಪಾಣಿಪೀಠ ಬೆಳಕಿಗೆ
ಪುತ್ತೂರು:ಪುನರ್‌ನಿರ್ಮಾಣದ ವೇಳೆ ಹಲವು ವಿಸ್ಮಯಗಳಿಗೆ ಕಾರಣವಾದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಕೆಳಭಾಗದ ವರುಣ ದೇವರ ವಿಗ್ರಹದ ಬಳಿ ಭೂಗರ್ಭದಲ್ಲಿ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಮಣ್ಣಿನೊಂದಿಗೆ ಅಂಟಿಕೊಂಡಿರುವುದು ಬೆಳಕಿಗೆ ಬಂದ ಮೂರೇ ದಿನದೊಳಗೆ ವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಇನ್ನೊಂದು ದೊಡ್ಡದಾದ ಪಾಣಿಪೀಠ ಬೆಳಕಿಗೆ ಬಂದಿದೆ.
ದೇವಳದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಪುನರ್ ನಿರ್ಮಾಣದ ಕೆಲಸ ಕಾರ್ಯ ನಡೆಯುತ್ತಿದ್ದು, ಸಂಪೂರ್ಣ ಶಿಲಾಮಯ ಕಟ್ಟೆಯನ್ನಾಗಿ ಮಾಡುವ ಸಂದರ್ಭ ಮಾ.27ರಂದು ಬೆಳಿಗ್ಗೆ ಕೆರೆಯ ಮಧ್ಯ ಭಾಗದ ಕಟ್ಟೆಯ ಸುತ್ತ ಕಾಫರ್ ಡ್ರಾಜ್ ಮಾಡಿ ಒಳಗಿನ ನೀರನ್ನು ಹೊರತೆಗೆದಾಗ ವರುಣ ದೇವರ ವಿಗ್ರಹ ಬೆಳಕಿಗೆ ಬಂದಿತ್ತು.ಅದಾದ ಬಳಿಕ ವರುಣ ದೇವರ ವಿಗ್ರಹದ ಕೆಳಗಡೆ ಪಾಣಿಪೀಠ ಬೆಳಕಿಗೆ ಬಂದಿತ್ತು.ರಾತ್ರಿ ಕಟ್ಟೆಯ ನಾಲ್ಕು ಸ್ಥಂಭಗಳನ್ನು ತೆರವು ಮಾಡಿ ಶಿಲಾಮಯ ಸ್ಥಂಭಗಳನ್ನು ಇಡಲು ಆಳವಾದ ಗುಂಡಿಯನ್ನು ತೋಡುವಾಗ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಬೆಳಕಿಗೆ ಬಂದಿತ್ತು.ಇದೀಗ ಮಾ.31ರಂದು ಶ್ರೀ ವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಇನ್ನೊಂದು ದೊಡ್ಡದಾದ ಪಾಣಿಪೀಠ ಇರುವುದು ಬೆಳಕಿಗೆ ಬಂದಿದೆ.ಇದರ ಜೊತೆ ಎದುರು ತಾಮ್ರದ ಸಣ್ಣ ಕರಡಿಗೆಯೂ ಪತ್ತೆಯಾಗಿದೆ.ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲೂ ದೇವಳದ ಒಳಾಂಗಣದಲ್ಲಿ ಶಿಲಾ ಶಾಸನಗಳು, ಕೆತ್ತನೆ ಶಿಲ್ಪಗಳು, ಗರ್ಭಗುಡಿಯಲ್ಲಿ ಪ್ರಭಾವಳಿ, ರಾಜರ ಕಾಲದ ನಾಣ್ಯಗಳು ಪತ್ತೆಯಾಗಿದ್ದವು. ಇದೀಗ ಪುಷ್ಕರಣಿಯ ಭೂಗರ್ಭದಲ್ಲಿ ಅಗೆದಷ್ಟು ಹೊಸ ಹೊಸ ವಿಸ್ಮಯಗಳು ಬೆಳಕಿಗೆ ಬರುತ್ತಿದೆ. ಕಟ್ಟೆ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಶಿಲ್ಪಿ ಗುಣವಂತೇಶ್ವರ ಭಟ್, ಇಂಜಿನಿಯರ್ ರಘುರಾಮ ಭಟ್ ಮತ್ತು ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಪಾಣಿಪೀಠ ಗೋಚರ ಆಗುತ್ತಿದ್ದಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದರು.ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ದೇವಳದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ, ಹರೀಶ್ ಭಟ್, ಉದಯಕೃಷ್ಣ ಭಟ್ ಅವರು ಸ್ಥಳಕ್ಕೆ ಅಗಮಿಸಿ ಪರಿಶೀಲಿಸಿದರು.ಈ ಸಂದರ್ಭ ವಿದ್ಯಾ ಆರ್. ಗೌರಿ, ಗೌರಿ ಬನ್ನೂರು, ಜಯಶ್ರೀ ಎಸ್ ಶೆಟ್ಟಿ, ಅರ್ಪಣಾ, ಅಶೋಕ್ ಸಂಪ್ಯ, ರತ್ನಾಕರ ನಾಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪ್ರತಿ ದಿವಸವೂ ಕುತೂಹಲಕಾರಿ ವಿಚಾರ ಬೆಳಕಿಗೆ
ಊರಿನಲ್ಲಿ ಬರಗಾಲ ಬಂದಿದ್ದರೂ ಮಹಾಲಿಂಗೇಶ್ವರ ದೇವರ ಪುಷ್ಕರಣಿಯಲ್ಲಿ ಮಾತ್ರ ನೀರಿತ್ತು ಎಂದು ಬ್ರಿಟೀಷರು ಉಲ್ಲೇಖ ಮಾಡಿರುವ ದಾಖಲೆ ಇದೆ.ಅಂತಹ ಸಂದರ್ಭದಲ್ಲಿ ಈ ಪುಷ್ಕರಣಿಯಲ್ಲಿರುವ ವರುಣ ದೇವರ ಪಾಣಿಪೀಠದ ಕೆಳಗೆ ಇನ್ನೊಂದು ಬೃಹತ್ ಪಾಣಿಪೀಠ ಗೋಚರ ಅಗಿದೆ.ಪ್ರತಿ ದಿವಸವೂ ಕುತೂಹಲಕಾರಿ ವಿಚಾರ ಇಲ್ಲಿ ಬೆಳಕಿಗೆ ಬರುತ್ತಿದೆ.ವರುಣ ದೇವರು ಪುತ್ತೂರು, ಹತ್ತೂರಿಗೆ ಕಾಲಕಾಲಕ್ಕೆ ಮಳೆ ಕರುಣಿಸುವ ಮೂಲಕ ಅನುಗ್ರಹ ಕರುಣಿಸುತ್ತಾರೆ.ವರುಣನ ಪೂಜೆಗೆ ದೇವರು ಅನುಗ್ರಹ ಕರುಣಿಸಲಿದ್ದಾರೆ.ಪುಷ್ಕರಣಿಯಲ್ಲಿ ತುರ್ತಾಗಿ ಕೆಲಸ ಆಗಬೇಕಾಗಿತ್ತು.ಇದಕ್ಕೆ ಪೂರಕವಾಗಿ ಶಿಲ್ಪಿ ಗುಣವಂತೇಶ್ವರ ಭಟ್ ಮತ್ತು ಇಂಜಿನಿಯರ್ ರಘುರಾಮ್ ಭಟ್ ಅವರ ಜಂಟಿ ಕಾರ್ಯದಲ್ಲಿ ಪುಷ್ಕರಣಿಯ ಕೆಲಸ ಉತ್ತಮ ರೀತಿಯಲ್ಲಿ ನಡೆಯುತ್ತಿದೆ.
ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
12ನೇ ಶತಮಾನದಲ್ಲಿ ಮಹಾಲಿಂಗೇಶ್ವರ ದೇವರ ಪುಷ್ಕರಣಿ ರಚನೆಯಾಗಿದೆ ಎಂದು ಇತಿಹಾಸ ಹೇಳುತ್ತಿದೆ.ಅದರಂತೆ ಅದರ ಕಟ್ಟೆಯ ಪುನರ್‌ನಿರ್ಮಾಣ ಕಾರ್ಯ ನಡೆಯುತ್ತಿದೆ.ಈ ಸಂದರ್ಭ ಆರಂಭದಲ್ಲಿ ವರುಣ ದೇವರ ವಿಗ್ರಹ, ಪಾಣಿಪೀಠ ಗೋಚರ ಆಗಿತ್ತು.ಬಳಿಕ ನೀಲಿ, ಬಿಳಿ ಮಿಶ್ರಿತ ಹುಡಿ ಬೆಳಕಿಗೆ ಬಂದಿತ್ತು.ಇದೀಗ ಒಂದು ಪಾಣಿಪೀಠದ ಅಡಿಯಲ್ಲಿ ಮತ್ತೊಂದು ದೊಡ್ಡ ಶಿಲಾಮಯ ಪಾಣಿಪೀಠ ಇರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಪುನರ್ ನಿರ್ಮಾಣದ ಸಂದರ್ಭದಲ್ಲೂ ಇಂತಹ ಅನೇಕ ವಿಶೇಷ ವಸ್ತುಗಳ ಬೆಳಕಿಗೆ ಬಂದಿತ್ತು. ಇವೆಲ್ಲ ಈ ದೇವಸ್ಥಾನ ಅತೀ ಪುರಾತನವಾದದ್ದು ಎಂದು ಹೇಳುತ್ತಿದೆ-
ಪಿ.ಜಿ.ಜಗನ್ನಿವಾಸ ರಾವ್,
ವಾಸ್ತು ಇಂಜಿನಿಯರ್ ಮಹಾಲಿಂಗೇಶ್ವರ ದೇವಸ್ಥಾನ