





ಉಪ್ಪಿನಂಗಡಿ: ಸಮಾಜದ ಒಗ್ಗಟ್ಟನ್ನು ಮುರಿಯಲು ನಡೆಸುವ ಷಡ್ಯಂತ್ರವನ್ನು ಎದುರಿಸಿ ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ. ತುಳುನಾಡಿನಲ್ಲಿ ನೆಲೆ ನಿಂತ ದೈವ ದೇವರುಗಳ ಕೃಪೆಯಿಂದ ಸಮಾಜ ಕಳಂಕ ರಹಿತವಾಗಿ ಏಕೀ ಭಾವದಿಂದ ಒಗ್ಗೂಡುವ ಕಾಲ ಸನ್ನಿಹಿತವಾಗಿದೆ ಎಂದು ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಸಾಧ್ವಿ ಮಾತಾನಂದಮಯೀ ತಿಳಿಸಿದರು.


ಉಪ್ಪಿನಂಗಡಿಯ ಕಜೆಕ್ಕಾರಿನಲ್ಲಿ ಆದಿ ದ್ರಾವಿಡರ ಕುಲದೈವಗಳಾದ ಸತ್ಯ ಸಾರಾಮಣಿ, ಅಲೇರಾ ಪಂಜುರ್ಲಿ, ಒರಿಮಣಿ ಗುಳಿಗ ದೈವಗಳ ದೈವ ಸ್ಥಾನಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದ ಅವರು ಬಳಿಕ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.





ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಮಾತನಾಡಿ, ಮಾಡುವ ಕರ್ಮಾನುಸಾರ ವರ್ಣಾಶ್ರಮದ ಪರಂಪರೆ ಇದ್ದ ಹಿಂದೂ ಸಮಾಜದಲ್ಲಿ ಕೆಲ ಮಂದಿ ಸ್ವಾರ್ಥ ಸಾಧನೆಗಾಗಿ ಜಾತೀಯ ವಿಷ ಬೀಜವನ್ನು ಬಿತ್ತಿದರು. ಅದರ ಕಹಿಯನ್ನು ಇಡೀ ದೇಶ ಅನುಭವಿಸುವಂತಾಗಿದೆ ಎಂದರು.
ವೇದಿಕೆಯಲ್ಲಿ ಸಾಮರಸ್ಯ ಗತಿ ವಿಧಿ ವಿಭಾಗದ ರವೀಂದ್ರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಶಾಂತಿನಗರ ಶ್ರೀ ಮಹಾವಿಷ್ಣು ದೇವಾಲಯದ ಆಡಳಿತ ಮೊಕ್ತೇಸರ ಯು.ಜಿ. ರಾಧಾ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ದರ್ಬೆ, ಪದಾಳ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಶಂಕರ್ ಭಟ್, ಕಜೆಕ್ಕಾರು ಬೀಡಿನ ಪ್ರವೀಣ್ ಕುಮಾರ್ ಕಾರ್ಯಕ್ರಮದಲ್ಲಿ ಪ್ರಮುಖರಾದ ಹರಿರಾಮಚಂದ್ರ, ಜಯಂತ ಪೊರೋಳಿ, ಜಗನ್ನಿವಾಸ್ ರಾವ್, ಸುಧಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಶರತ್ ಕೋಟೆ, ಯು.ಕೆ. ರೋಹಿತಾಕ್ಷ, ಮತ್ತಿತರ ಪ್ರಮುಖರು ಭಾಗವಹಿಸಿದ್ದರು.








