ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಪೂರ್ವಾನುಮತಿ ಕಡ್ಡಾಯ
ಅಭ್ಯರ್ಥಿಗಳು ಧಾರ್ಮಿಕ ಕೇಂದ್ರಗಳಲ್ಲಿ ಮತಯಾಚಿಸುವಂತಿಲ್ಲ
ಮಾನಹಾನಿಗೆ ಕ್ರಿಮಿನಲ್ ಕೇಸ್
ಪೇಯ್ಡ್ ಸುದ್ದಿಗಳ ಬಗ್ಗೆ ನಿಗಾ
ಮಾಧ್ಯಮಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು
ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಪೋಸ್ಟ್ ಮಾಡಿದವರೇ ಹೊಣೆ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಿದರೆ ಕ್ರಮ
ಚೆಕ್ ಪೋಸ್ಟ್‌ಗಳಲ್ಲಿ ಬಿಗು ತಪಾಸಣೆ
ಮಂಗಳೂರು: ಚುನಾವಣಾ ನೀತಿಸಂಹಿತೆ ಪಾಲನೆ ಜತೆಗೆ ಉಲ್ಲಂಘನೆ ಬಗ್ಗೆ ಆಯಾ ಅಸೆಂಬ್ಲಿ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಸಹಕಾರ ನೀಡುವಂತೆ ದ.ಕ.ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಹೇಳಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಧ್ಯಮಗಳೂ ಪಾಲಿಸಬೇಕಾದ ಮಾದರಿ ನೀತಿಸಂಹಿತೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ಮಾಧ್ಯಮಗಳಲ್ಲಿ ಸುದ್ದಿಯಾಗುವ ರಾಜಕೀಯ ವರದಿಗಳನ್ನು ಪ್ರತಿದಿನ ಎಂಸಿಎಂಸಿ(ಮೀಡಿಯಾ ಸರ್ಟಿಫಿಕೇಷನ್ ಮೊನಿಟರಿಂಗ್ ಸೆಲ್) ಪರಿಶೀಲನೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಪೂರ್ವಾನುಮತಿ ಕಡ್ಡಾಯ:
ಮುದ್ರಣ ಮಾಧ್ಯಮ, ಪ್ರಚಾರ ಸಭೆ, ಸಮಾರಂಭ, ಚಾನೆಲ್‌ಗಳಲ್ಲಿ ಮತ ಯಾಚನೆ ಮಾಡಿದರೆ ಅದನ್ನು ಅಭ್ಯರ್ಥಿ ವೆಚ್ಚಕ್ಕೆ ಸೇರಿಸಲಾಗುವುದು. ಚುನಾವಣಾ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.ಅಲ್ಲದೆ ಚುನಾವಣೆ ಉದ್ದೇಶದ ಸಭೆ, ಸಮಾರಂಭಗಳ ಖರ್ಚುವೆಚ್ಚಗಳ ಎಲ್ಲ ಲೆಕ್ಕಾಚಾರಗಳನ್ನು ಸಲ್ಲಿಸಬೇಕಾಗುತ್ತದೆ ಎಂದರು.
ಮಾನಹಾನಿಗೆ ಕ್ರಿಮಿನಲ್ ಕೇಸ್:
ಚುನಾವಣೆ ಪ್ರಚಾರ, ಚಾನೆಲ್‌ಗಳ ಚರ್ಚೆ ಅಥವಾ ಮಾಧ್ಯಮಗಳಲ್ಲಿ ವ್ಯಕ್ತಿ ಚಾರಿತ್ರ್ಯ ಹನನ ಇಲ್ಲವೇ ಅವಹೇಳನ ಮಾಡಲು ಯಾರಿಗೂ ಅವಕಾಶ ಇಲ್ಲ.ಅಂತಹ ಪ್ರಕರಣ ಕಂಡುಬಂದರೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎಚ್ಚರಿಸಿದರು.
ಅಭ್ಯರ್ಥಿಗಳು ಧಾರ್ಮಿಕ ಕೇಂದ್ರಗಳಲ್ಲಿ ಮತಯಾಚಿಸುವಂತಿಲ್ಲ:
ಪೂರ್ವಾನುಮತಿ ಪಡೆದು ನಡೆಸುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಇಲ್ಲ.ಅದೇ ರೀತಿ ರಾಜಕೀಯ ರಹಿತ ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್,
ಬಂಟಿಂಗ್ಸ್‌ನ್ನು ಅನುಮತಿ ಪಡೆದೇ ಅಳವಡಿಸಬೇಕು.ಅಭ್ಯರ್ಥಿಗಳು ಭಕ್ತರಾಗಿ ಬಂದುಹೋಗುವುದರಲ್ಲಿ ತಪ್ಪಿಲ್ಲ.ಆದರೆ ಧಾರ್ಮಿಕ ಕೇಂದ್ರಗಳಲ್ಲಿ ಮತ ಯಾಚಿಸುವಂತಿಲ್ಲ, ಮತ ಯಾಚಿಸಿದರೆ ಅದರ ಖರ್ಚುವೆಚ್ಚವನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೆ ಅಡ್ಮಿನ್ ಹೊಣೆಯಲ್ಲ:
ಫೇಸ್‌ಬುಕ್, ವಾಟ್ಸ್‌ಆಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮತ ಯಾಚನೆ ನಡೆಸುವಂತಿಲ್ಲ.ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ನಿಂದನೆ, ಮತ ಯಾಚನೆ ಕಂಡುಬಂದರೆ ಅದನ್ನು ಪೋಸ್ಟ್ ಮಾಡಿದವರೇ ಹೊಣೆಯಾಗುತ್ತಾರೆಯೇ ವಿನಃ ಆಡ್ಮಿನ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಿದರೆ ಕ್ರಮ:
ಯಕ್ಷಗಾನವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಮಾತನಾಡಿದರೆ ಸಂಘಟಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ರವಿ ಕುಮಾರ್ ಎಂ.ಆರ್.ಹೇಳಿದರು.
ಮಾಧ್ಯಮಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು:
ಮುದ್ರಣ, ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮದ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇರಿಸಿದೆ.ದಿನದ ೨೪ ಗಂಟೆಯೂ ಪ್ರಚಾರವಾಗುವ ಸಾಧನಗಳ ಪರಿಶೀಲನೆ
ನಡೆಸಲಾಗುತ್ತದೆ.ಆದ್ದರಿಂದ ಜವಾಬ್ದಾರಿ ಹಾಗೂ ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಒಳಿತು.ಸಂದೇಹಗಳನ್ನು ಚುನಾವಣಾ ಅಧಿಕಾರಿಗಳಿಂದ ಪರಿಹರಿಸಿಕೊಳ್ಳಬಹುದು ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದರು.
ಪೇಯ್ಡ್ ಸುದ್ದಿಗಳ ಬಗ್ಗೆ ನಿಗಾ:
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್ ಮಾತನಾಡಿ, ಜಾಹೀರಾತು ಮುದ್ರಿಸುವ ಮೊದಲು ಪೂರ್ವಾನುಮತಿ ಪಡೆಯಬೇಕು.ಅನಧಿಕೃತವಾಗಿ ಮುದ್ರಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ ಸೆಕ್ಷನ್ ೧೨೧ಎ ಅನ್ವಯ ಕೇಸು ದಾಖಲಿಸಲಾಗುವುದು.ಸ್ಥಳೀಯ ಚಾನೆಲ್‌ಗಳಲ್ಲೂ ಅನುಮತಿ ಪಡೆಯದೆ ಚುನಾವಣಾ ಪ್ರಚಾರ ನಡೆಸುವಂತಿಲ್ಲ.ಪೇಯ್ಡ್ ಸುದ್ದಿಗಳ ಬಗ್ಗೆಯೂ ತೀವ್ರ ನಿಗಾ ಇರಿಸಲಿದ್ದು, ಯಾವುದು ಪೇಯ್ಡ್ ಸುದ್ದಿ ಎಂಬುದನ್ನು ಎಂಸಿಎಂಸಿ ನಿರ್ಧರಿಸಲಿದೆ ಎಂದರು.
ಚೆಕ್ ಪೋಸ್ಟ್‌ಗಳಲ್ಲಿ ಬಿಗು ತಪಾಸಣೆ:
ಕೇರಳದಿಂದ ದ.ಕ.ಜಿಲ್ಲೆ ಪ್ರವೇಶಿಸುವ ಪುತ್ತೂರು, ಸುಳ್ಯ, ಬಂಟ್ವಾಳ ಹಾಗೂ ಮಂಗಳೂರಿನ ಗಡಿ ಭಾಗಗಳಲ್ಲಿ ಒಟ್ಟು ೧೦ ಚೆಕ್ ಪೋಸ್ಟ್‌ಗಳನ್ನು
ಅಳವಡಿಸಲಾಗಿದೆ.ಪ್ರಮುಖವಾಗಿ ನಾಲ್ಕು ಚೆಕ್‌ಪೋಸ್ಟ್‌ಗಳಲ್ಲಿ ನಿತ್ಯವೂ ಅಂತರ್ರಾಜ್ಯ ವಾಹನ ಸಂಚಾರ ಇದ್ದು, ಅಲ್ಲಿ ಪೊಲೀಸ್, ಅಬಕಾರಿ, ಅರಣ್ಯ ಹಾಗೂ ಕಂದಾಯ ಸಿಬ್ಬಂದಿ
ತಂಡವನ್ನು ತಪಾಸಣೆಗೆ ನಿಯೋಜಿಸಲಾಗಿದೆ.ಕೇರಳದಲ್ಲಿ ಮದ್ಯ ನಿಷೇಧ ಆಗಿರುವುದರಿಂದ ಅಲ್ಲಿಂದ ಇಲ್ಲಿಗೆ ಲಿಕ್ಕರ್ ಸಾಗಾಟದ ಪ್ರಮೇಯ ಇಲ್ಲ.ಕಳೆದ ೨೫ ದಿನಗಳಿಂದ ಹಣ ಸಾಗಾಟವೇ ಮೊದಲಾದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ತಿಳಿಸಿದರು.
ವಿಸಿಲ್ ಆಪ್‌ನಲ್ಲಿ ದೂರು:
ಚುನಾವಣೆ ಸಂಬಂಧಿತ ಯಾವುದೇ ದೂರುಗಳಿದ್ದರೆ ವಿಸಿಲ್ ಆಪ್ ಮೂಲಕ ಸಲ್ಲಿಸಬಹುದು ಇಲ್ಲವೇ ಜಿಲ್ಲಾಧಿಕಾರಿ ಕಂಟ್ರೋಲ್ ರೂಂ ನಂಬರ್ ೧೯೫೦ಕ್ಕೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ರೂ.50 ಸಾವಿರಕ್ಕಿಂತ ಜಾಸ್ತಿ ನಗದಿಗೆ ದಾಖಲೆ ಬೇಕು
ರೂ.50 ಸಾವಿರಕ್ಕಿಂತ ಜಾಸ್ತಿ ನಗದು ಹೊಂದಿರಬೇಕಾದರೆ ಅದಕ್ಕೆ ಸೂಕ್ತ ದಾಖಲೆ ಇರಬೇಕು.ಇಲ್ಲದಿದ್ದರೆ ಫ್ಲೈಯಿಂಗ್ ಸ್ಕ್ವಾಡ್ ತಂಡ ನಗದು ವಶಪಡಿಸುವ ಅಧಿಕಾರ ಹೊಂದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರವಿ ಕುಮಾರ್ ಹೇಳಿದರು.10 ಲಕ್ಷ ರೂ.ಹಾಗೂ ಅದಕ್ಕಿಂತ ಜಾಸ್ತಿ ಮೊತ್ತ ಖಾತೆಗೆ ಜಮೆ ಅಥವಾ ವರ್ಗಾವಣೆಯಾಗಿದ್ದಲ್ಲಿ ಅದರ ಪರಿಶೀಲನೆ ನಡೆಸಲಾಗುತ್ತದೆ.ಆನ್‌ಲೈನ್ ಪಾವತಿ ವಿಧಾನದಲ್ಲೂ ಇದೇ ರೀತಿ ಪರಿಶೀಲನೆ ನಡೆಸಲಾಗುತ್ತದೆ.ದಿನನಿತ್ಯದ ಹಣ ವರ್ಗಾವಣೆಯಲ್ಲಿ ಮಿತಿಗಿಂತ ಜಾಸ್ತಿ ಇರುವ ವಹಿವಾಟಿನ ಪ್ರತಿಯೊಂದು ವಿವರವನ್ನು ನೀಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಖರ್ಚಿನ ಮಿತಿ 40 ಲಕ್ಷ ರೂ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ 40 ಲಕ್ಷ ರೂ.ಮಿತಿವರೆಗೆ ಅಸೆಂಬ್ಲಿ ಚುನಾವಣೆಯಲ್ಲಿ ವೆಚ್ಚ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಹೇಳಿದರು.