ಪುತ್ತೂರಿನಲ್ಲಿ ಜಿ ಎಲ್ ವನ್ ಮಾಲ್ ಲೋಕಾರ್ಪಣೆ-ಲೋಕಾರ್ಪಣೆ ದಿನವೇ ಗ್ರಾಹಕರಿಂದ ತುಂಬಿ ತುಳುಕಿದ ಮಾಲ್

0

ಜಿ ಎಲ್ ವನ್ ನಂಬರ್ ವನ್ ಆಗಿಯೇ ಉಳಿಯುತ್ತದೆ-ಎಡನೀರು ಶ್ರೀ
ಪುತ್ತೂರಿನಲ್ಲಿ ನೆನಪು ನೀಡುವ ಸಂಸ್ಥೆಯಾಗಿ ಮೂಡಿದೆ -ಡಿ.ಹರ್ಷೇಂದ್ರ ಕುಮಾರ್
ಪೈಪೋಟಿಯಲ್ಲಿ ಮಾತ್ರವಲ್ಲ ಕ್ವಾಲಿಟಿಯಲ್ಲೂ ನಂಬರ್ ವನ್-ಡಾ.ಪ್ರಭಾಕರ ಭಟ್ ಕಲ್ಲಡ್ಕ
ವ್ಯವಹಾರದಲ್ಲಿ ಹೊಸತನಕ್ಕೆ ಯಶಸ್ಸು ಸಿಗುತ್ತದೆ-ಸತ್ಯಶಂಕರ್
ಜಿಎಲ್ ಎಂಬುದು ಬ್ರ್ಯಾಂಡೆಡ್ ನೇಮ್-ಜಾನ್ ಕುಟಿನ್ಹಾ
ನಾವು ಸಣ್ಣ ಊರಿಗೆ ಬಂದಿದ್ದೇವೆ – ಆನಂದ್ ಪೈ
ಮಾಲ್ ಮೂಲಕ ಹಲವಾರು ಮಂದಿಗೆ ಉದ್ಯೋಗ ಸಿಕ್ಕಿದೆ-ಎಲ್.ಟಿ ಅಬ್ದುಲ್ ರಝಾಕ್
ಊರಿಗೆ ಬೇಕಾದ ಹಾಗೆ ಮಾಲ್ ಪ್ಲ್ಯಾನ್ ಮಾಡಿದ್ದೇವೆ-ಜಿ.ಎಲ್.ಬಲರಾಮ ಅಚಾರ್ಯ

ಪುತ್ತೂರು:ಜಿಲ್ಲಾ ಕೇಂದ್ರದ ಕನಸಿಗೆ ಪೂರಕವೆಂಬಂತೆ ಪ್ರತಿಷ್ಠಿತ ಜಿ ಎಲ್ ಸಮೂಹ ಸಂಸ್ಥೆಗಳಿಂದ ಪುತ್ತೂರುಗೆ ಬಹುದೊಡ್ಡ ಕೊಡುಗೆಯಾಗಿರುವ ಜಿ ಎಲ್ ವನ್ ಮಾಲ್ ಏಪ್ರಿಲ್ 2ರ ಸಂಜೆ ಲೋಕಾರ್ಪಣೆಗೊಂಡಿತು.ಲೋಕಾರ್ಪಣೆ ದಿನವೇ ಮಾಲ್ ಗ್ರಾಹಕರಿಂದ ತುಂಬಿ ತುಳುಕಿತ್ತು.

ಆರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಜಿ ಎಲ್ ವನ್ ಮಾಲ್‌ನ ಲೋಗೋ ಅನಾವರಣ ಮಾಡಿದರು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರು ಮಾಲ್ ಅನ್ನು ಲೋಕಾರ್ಪಣೆ ಮಾಡಿದರು.ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಮಾಲ್‌ನ ಒಳಗಡೆ ದೀಪಪ್ರಜ್ವಲನೆ ಮಾಡಿದರು.


ಜಿ ಎಲ್ ವನ್ ನಂಬರ್ ವನ್ ಆಗಿಯೇ ಉಳಿಯುತ್ತದೆ:
ಜಿಎಲ್ ವನ್ ಮಾಲ್‌ನಲ್ಲಿ ದೀಪ ಪ್ರಜ್ವಲನೆಮಾಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.ಮಾಲ್‌ಗಳು ದಶಕಗಳಿಂದಲೇ ಹುಟ್ಟಿದೆ.ಇದನ್ನು ಸಂಸ್ಕೃತಿ ಅನ್ನುವುದಕ್ಕಿಂತ ಉತ್ತಮ ಪರಿಕಲ್ಪನೆ ಅನ್ನುವುದು ಉತ್ತಮ.ಅದರಲ್ಲಿ ನಮ್ಮದೇ ಸಂಸ್ಕೃತಿಯನ್ನು ಒಳಗೊಂಡಾಗ ಅದು ಉತ್ತಮ ಸಂಸ್ಕೃತಿ ಪಸರಿಸಲು ಕಾರಣವಾಗುತ್ತದೆ. ಆ ಅರ್ಥದಲ್ಲಿ ಇವತ್ತು ಜಿಎಲ್ ವನ್ ಮಾಲ್ ವಾಣಿಜ್ಯ ಸಂಕೀರ್ಣ ಪುತ್ತೂರಿನಲ್ಲಿ ಪ್ರಥಮವಾಗಿ ಲೋಕಾರ್ಪಣೆಗೊಂಡಿದೆ.ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಆಕರ್ಷಿಸಲಿ ಜನರಿಗೆ ಹೆಚ್ಚಿನ ಉಪಯೋಗಕ್ಕೆ ಬರಲಿ ಎಂದು ಹಾರೈಸಿದರಲ್ಲದೆ ಜಿಎಲ್ ವನ್ ಮಾಲ್ ಪುತ್ತೂರಿನಲ್ಲಿ ನಂಬರ್ ವನ್ ಆಗಿಯೇ ಉಳಿಯುತ್ತದೆ ಮತ್ತು ಪುತ್ತೂರಿಗೆ ಅದು ನಂಬರ್ ವನ್ ಆಗಿಯೇ ಮೂಡಿ ಬಂದಿದೆ.ಆರೋಗ್ಯಕರ ಸ್ಪರ್ಧೆ ಯಾವತ್ತೂ ಇಂತಹ ಸಂಸ್ಥೆಗಳಲ್ಲಿ ಇರುವುದು ಉತ್ತಮ.ಬಲರಾಮರು ಅವರ ಬಲವನ್ನು ಛಲವಾಗಿ ಮಾರ್ಪಡಿಸಿಕೊಂಡು ಇವತ್ತು ಛಲರಾಮರೂ ಆಗಿದ್ದಾರೆ ಎಂದು ಹೇಳಿ ಸ್ವಾಮೀಜಿ ಶುಭಹಾರೈಸಿದರು.


ಪುತ್ತೂರಿನಲ್ಲಿ ನೆನಪು ನೀಡುವ ಸಂಸ್ಥೆಯಾಗಿ ಮೂಡಿದೆ:
ಜಿಎಲ್ ವನ್ ಮಾಲ್ ಅನ್ನು ಲೋಕಾರ್ಪಣೆ ಮಾಡಿದ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅವರು ಮಾತನಾಡಿ 1982ನೇ ಇಸವಿ ನಂತರ ನನಗೂ ಪುತ್ತೂರಿಗೂ ಬಹಳ ಹತ್ತಿರ ಸಂಬಂಧ.ಯಾಕೆಂದರೆ ಪ್ರತಿ ವರ್ಷ ಎ.16 ಮತ್ತು 17ಕ್ಕೆ ನಮ್ಮ ಟೆಂಟಿನ ಆಟ ಇಲ್ಲಿ ನಡೆಯುತ್ತಿತ್ತು.ಆಗ ನೋಡಿದ ಪುತ್ತೂರಿಗೂ ಈಗ ನೋಡುತ್ತಿರುವ ಪುತ್ತೂರಿಗೆ ಸಾಕಷ್ಟು ಬದಲಾವಣೆ ಆಗಿ ಬೆಳೆದಿದೆ.ಪುತ್ತೂರಿನ ವ್ಯಾಪಾರಸ್ಥರು ಮತ್ತು ವ್ಯವಹಾರಸ್ಥರು ಊರನ್ನು ಬಹಳ ಸೌಹಾರ್ದತೆಯಿಂದ ಬೆಳೆಸಿದ್ದಾರೆ.1992ರಲ್ಲಿ ಪುತ್ತೂರಿನಲ್ಲಿ ಮಂಜುಶ್ರೀ ಕಾಂಪ್ಲೆಕ್ಸ್‌ನ್ನು ಮಾಡಿದ್ದೆವು.ಪುತ್ತೂರು ಬಹಳ ಪೊಟೆನ್ಷಿಯಲ್ ಇದ್ದ ಜಾಗ.ಅದನ್ನು ಸರಿಯಾಗಿ ಬಲರಾಮ ಆಚಾರ್ಯ ಮತ್ತು ಅವರ ಮಕ್ಕಳು ಬಂಡವಾಳ ಹಾಕಿ ಪುತ್ತೂರಿನಲ್ಲಿ ನೆನಪು ನೀಡುವ ಜಾಗ ಆಗಬೇಕೆಂದು ಸಂಸ್ಥೆ ಕಟ್ಟಿದ್ದಾರೆ.ಮಾಲ್ ವಿನ್ಯಾಸ ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿ ಶುಭಹಾರೈಸಿದರು.


ಪೈಪೋಟಿಯಲ್ಲಿ ಮಾತ್ರವಲ್ಲ ಕ್ವಾಲಿಟಿಯಲ್ಲೂ ನಂಬರ್ ವನ್ :
ಜಿಎಲ್ ವನ್ ಮಾಲ್‌ನ ಲೋಗೋ ಅನಾವರಣಗೊಳಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ ಜಿಎಲ್ ವನ್ ಅಂದರೆ ಯಾರದ್ದೋ ಜೊತೆ ಪೈಪೋಟಿ ಅಲ್ಲ.ಈ ವಿಚಾರದಲ್ಲಿ ಬಲರಾಮ ಆಚಾರ್ಯರ ಮೇಲೆ ನನಗೆ ತುಂಬಾ ಗೌರವ ಬಂದಿದೆ.ಯಾಕೆಂದರೆ ವಿನೀತ ಭಾವನೆಯಿಂದ ಆ ಮಾತನ್ನು ಅವರು ಹೇಳಿದ್ದಾರೆ.ನಮ್ಮ ಮನಸ್ಸಿನಲ್ಲಿ ಅನೇಕ ವರ್ಷದಿಂದ ನೀವು ನಂಬರ್ ವನ್. ಮುಂದೂ ನಂಬರ್ ವನ್. ನೀವು ಪೈಪೋಟಿಯಲ್ಲಿ ಮಾತ್ರವಲ್ಲ ಕ್ವಾಲಿಟಿಯಲ್ಲೂ ನಂಬರ್ ವನ್.ಅದನ್ನೇ ಉಳಿಸಿಕೊಂಡು ಬಂದಿದ್ದೀರಿ.ಜನ ನಿಮ್ಮಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದರು.ಮಾಲ್‌ನ ಕಲ್ಪನೆ ವಿದೇಶದಿಂದ ಬಂದಿರುವುದು. ಸ್ವದೇಶಕ್ಕೆ ಬಂದಾಗ ಮಹಾನಗರ, ನಗರಗಳಿಗೆ ಬಂದು ಈಗ ಪುಟ್ಟ ನಗರಕ್ಕೂ ಬಂದಿದೆ.ಇದೊಂದು ಆಲ್ ಇನ್ ವನ್ ಮಾದರಿಯಲ್ಲಿ ತಲೆ ಎತ್ತಿದೆ.ಪರಿವರ್ತನೆ ಯುಗದ ನಿಯಮ. ಪ್ರಗತಿಯತ್ತ ಹೋಗುವುದು ಮುಖ್ಯ. ಜಗತ್ತಿನ ಎಲ್ಲಾ ಸಂಗತಿಗಳನ್ನು ಸ್ವೀಕಾರ ಮಾಡಿಕೊಂಡು ನಮ್ಮತನವನ್ನು ಇಟ್ಟುಕೊಂಡು ನಾವು ಮುಂದಕ್ಕೆ ಹೋಗಬೇಕಾಗಿದೆ.ಗ್ರಾಹಕರನ್ನು ದೇವರಂತೆ ಕಂಡಾಗ ವ್ಯವಹಾರದಲ್ಲಿ ಯಶಸ್ವಿಯಾಗಲು ಸಾಧ್ಯ.ಈ ಪರಂಪರೆ ಉಳಿಸಬೇಕು. ಅದನ್ನು ಜಿ.ಎಲ್.ಆಚಾರ್ಯ ಕುಟುಂಬಸ್ಥರು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿ ಡಾ.ಪ್ರಭಾಕರ ಭಟ್ ಶುಭಹಾರೈಸಿದರು.


ವ್ಯವಹಾರದಲ್ಲಿ ಹೊಸತನಕ್ಕೆ ಯಶಸ್ಸು ಸಿಗುತ್ತದೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಂದು ಸಮೂಹ ಸಂಸ್ಥೆಗಳ ಮಾಲಕ ಸತ್ಯಶಂಕರ್ ಅವರು ಮಾತನಾಡಿ ಉತ್ಪನ್ನದ ಗುಣಮಟ್ಟ, ಸೇವೆ ಉದ್ದಿಮೆಯ ಯಶಸ್ಸಿಗೆ ಕಾರಣವಾಗುತ್ತದೆ. ವ್ಯವಹಾರದಲ್ಲಿ ಹೊಸತನವನ್ನು ದಿನೇದಿನೇ ಅಳವಡಿಸಿಕೊಂಡಾಗ ಅಂತಿಮವಾಗಿ ಯಶಸ್ಸು ಸಿಗುತ್ತದೆ.ಇದಕ್ಕೆ ಉತ್ತಮ ಉದಾಹರಣೆಯಾಗಿ ಜಿ.ಎಲ್. ಸಮೂಹ ಸಂಸ್ಥೆ.ಪುತ್ತೂರಿನಲ್ಲಿ ಪ್ರಥಮವಾಗಿ ಜಿ.ಎಲ್.ಕಾಂಪ್ಲೆಕ್ಸ್ ಮಾಡಿ ಎಲ್ಲವೂ ಒಂದೇ ಸೂರಿನಡಿಯಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಿದ್ದರು. ಇವತ್ತು ಜಿಎಲ್ ವನ್ ಮಾಲ್ ಕೂಡಾ ಪುತ್ತೂರಿಗೆ ಪ್ರಥಮ.ಬಲರಾಮ ಆಚಾರ್ಯರವರು ರಿಸ್ಕ್ ತೆಗೆದುಕೊಳ್ಳುವುದರಲ್ಲಿ ನಂಬರ್ ವನ್.ಇವತ್ತು ಇಂತಹ ಮಾಲ್ ಯಶಸ್ವಿಯಾದರೆ ಇನ್ನು 10 ವರ್ಷದಲ್ಲಿ 50 ಮಾಲ್ ಬರಲಿದೆ.ಜಿಎಲ್ ವನ್ ಮಾಲ್ ರಾಜ್ಯ, ದೇಶಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು.


ಜಿಎಲ್ ಎಂಬುದು ಬ್ರ್ಯಾಂಡೆಡ್ ನೇಮ್:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಅವರು ಮಾತನಾಡಿ ವ್ಯಾಪಾರ ಮಾಡುವುದು ಲಾಭಕ್ಕಾಗಿ.ಲಾಭದ ವ್ಯವಹಾರದಲ್ಲಿ ಸೇವೆಯೂ ಇರುತ್ತದೆ.ಅದನ್ನು ಜನರು ನೋಡಬೇಕು.ಇವತ್ತು ಜಿಎಲ್ ಎಂಬುದು ಬ್ರ್ಯಾಂಡೆಡ್ ನೇಮ್ ಆಗಿದೆ.ಅದಕ್ಕೆ ಕಾರಣ ಅವರ ಸೇವೆ. ಅವರು ಇವತ್ತು ನಂಬರ್ ವನ್ ಮಾಡಿದ್ದಲ್ಲ. ನಂಬರ್ ವನ್ ಆಗಿದ್ದಾರೆ.ಕಾಂಪ್ಲೆಕ್ಸ್ ಮಾಡಿದ್ದು ಅವರೇ, ಪುತ್ತೂರುನಲ್ಲಿ ಈಗ ಮಾಲ್ ಮಾಡುವುದರಲ್ಲೂ ನಂಬರ್ ವನ್ ಅವರೇ ಆಗಿದ್ದಾರೆ ಎಂದರು.


ನಾವು ಸಣ್ಣ ಊರಿಗೆ ಬಂದಿದ್ದೇವೆ:
ಭಾರತ್ ಮಲ್ಟಿ ಫಿಲಮ್ಸ್‌ನ ಅಧ್ಯಕ್ಷ ಆನಂದ್ ಪೈ ಅವರು ಮಾತನಾಡಿ ಭಾರತ್ ಸಂಸ್ಥೆ ಪುತ್ತೂರಿನ ಜಿಎಲ್ ವನ್ ಮಾಲ್‌ನಲ್ಲಿ ಇರುವುದು ನಮಗೂ ಹೆಮ್ಮೆ.ಎಲ್ಲರೂ ದೊಡ್ಡ ದೊಡ್ಡ ನಗರದ ಕಡೆ ಹೋಗುತ್ತಾರೆ. ಆದರೆ ನಾವು ಸಣ್ಣ ಊರಿಗೆ ಬಂದಿದ್ದೇವೆ ಎಂದರು.


ಮಾಲ್ ಮೂಲಕ ಹಲವಾರು ಮಂದಿಗೆ ಉದ್ಯೋಗ ಸಿಕ್ಕಿದೆ:
ಅನ್ಸಾರುದ್ದಿನ್ ಜಮಾ ಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಅವರು ಮಾತನಾಡಿ ಹೊಸ ಹೊಸ ಯೋಜನೆಗಳನ್ನು ಪುತ್ತೂರಿಗೆ ಕೊಡುವುದರಲ್ಲಿ ಜಿ.ಎಲ್.ಆಚಾರ್ಯ ಸಂಸ್ಥೆ ಮುಂದಿದೆ.ಅವರು ಕೇವಲ ಲಾಭದ ಉದ್ದೇಶದಿಂದ ಯಾವ ಕೆಲಸವನ್ನೂ ಮಾಡಿಲ್ಲ. ಇವತ್ತು ಜಿಎಲ್ ವನ್ ಮಾಲ್‌ನಿಂದಾಗಿ ಹಲವಾರು ಮಂದಿಗೆ ಉದ್ಯೋಗ ಸಿಕ್ಕಿದೆ.ಇದಕ್ಕೆ ಕಾರಣ ಜಿ.ಎಲ್.ಸಮೂಹ ಸಂಸ್ಥೆ ಎಂದರು.


ಊರಿಗೆ ಬೇಕಾದ ಹಾಗೆ ಮಾಲ್ ಪ್ಲ್ಯಾನ್ ಮಾಡಿದ್ದೇವೆ:
ಜಿ.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಇವತ್ತು ಜಿಎಲ್ ವನ್ ಮಾಲ್ ಮುಕ್ಕಾಲು ವಾಸಿ ತೆರೆದುಕೊಂಡಿದೆ.ಇಂತಹ ಸಂಸ್ಥೆ ಆರಂಭಿಸಲು ನಾಲ್ಕು ವರ್ಷದ ಹಿಂದೆ ಪ್ರಾರಂಭ ಮಾಡಿದ್ದೆವು.ಆದರೆ ಕೆಲಸ ಮಾಡುತ್ತಾ ಬಂದಾಗ ಕೊರೋನಾ ಮಹಾಮಾರಿ ತಟ್ಟಿತ್ತು.ಅದರ ಸೈಡ್ ಇಫೆಕ್ಟ್ ಆಗುವುದು ಮಾಲ್‌ಗಳಿಗೆ. ಆ ಸಂದರ್ಭ ನೆನೆಸಲೂ ಸಾಧ್ಯವಿಲ್ಲ.ಎರಡು ಫ್ರೋರ್ ಆಗಲೇ ಬಂದಾಗಿತ್ತು.ಈ ರೀತಿಯ ಅನಿಶ್ಚಿತತೆಯನ್ನು ಕಳೆದು ಇವತ್ತು ಎಲ್ಲಾ ಕಾರ್ಯ ಸುಗಮವಾಗಿ ನಡೆಯುತ್ತಿದೆ.ನಗರ ಬೆಳೆಯಲು ಮೂಲಭೂತ ಸೌಕರ್ಯ ಹೆಚ್ಚಾಗಬೇಕು.ಅದರಲ್ಲಿ ಪುಟ್ಟ ಭಾಗ ಮಾಲ್ ಇವತ್ತು ನಿಂತಿದೆ.ಈ ಮಾಲ್ ಕಲ್ಚರ್ ಅಲ್ಲ ಕಾನ್ಸೆಪ್ಟ್.ಇಲ್ಲಿ ಫುಡ್ ಕೋರ್ಟ್. ಥಿಯೇಟರ್, ಮಕ್ಕಳ ಗೇಮ್ಸ್, ಡ್ರೆಸ್‌ಗಳು ಸಹಿತ ಎಲ್ಲವನ್ನೂ ಒಳಗೊಂಡಿದೆ.ನಮ್ಮ ಊರಿಗೆ ಬೇಕಾದ ಹಾಗೆ ಈ ಮಾಲ್ ಪ್ಲ್ಯಾನ್ ಮಾಡಿದ್ದೇವೆ ಎಂದರು.ನಾವು ನಂಬರ್ ವನ್ ಆಗುವ ಉದ್ದೇಶ ಇಲ್ಲ.ಒಳ್ಳೆಯ ಹೆಸರಿಗಾಗಿ ವನ್ ಇಟ್ಟಿದ್ದೇವೆ.ಇದರ ಜೊತೆಗೆ ಕೆಲವೊಂದು ನೀತಿ ನಿಯಮಗಳು ಸರಳೀಕರಣ ಆದರೆ ವ್ಯವಹಾರಕ್ಕೆ ಉತ್ತಮ. ಸರಕಾರ ವೇಗ ವರ್ಧಕವಾಗಿ ಕೆಲಸ ಮಾಡಬೇಕೆಂದವರು ಹೇಳಿದರು.


ಮಾಲ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದವರಿಗೆ ಗೌರವಾರ್ಪಣೆ:
ಜಿಎಲ್ ವನ್ ಮಾಲ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಹಲವರನ್ನು ಗೌರವಿಸಲಾಯಿತು.ಸಿವಿಲ್ ಕಾಮಗಾರಿಯಲ್ಲಿ ಎಮ್.ಎಮ್ ಕನ್‌ಸ್ಟ್ರಕ್ಷನ್‌ನ ಮಹಾಬಲ ಎಮ್, ಮಾರೂರ್ ಅಲ್ಯುಮಿನಿಯಂನ ಶಶಿಧರ್ ಪೈ ಮಾರಾರ್, ಹವಾನಿಯಂತ್ರಿತ ಕೆಲಸ ನಿರ್ವಹಿಸಿದ ಶ್ರೀನಿಧಿ ಎಂಟರ್‌ಪ್ರೈಸಸ್‌ನ ಸಂದೀಪ್, ಎಲೆಕ್ಟ್ರಿಕ್ ಗುತ್ತಿಗೆದಾರ ನಿತಿನ್, ಎಲೆಕ್ಟ್ರಿಕ್ ಪ್ಯಾನಲ್ ವರ್ಕ್ ನಿರ್ವಹಿಸಿದ ಕರಾವಳಿ ಸ್ವಿಚ್ ಗೇರ್ ಸಂದೀಪ್ ಭಂಡಾರಿ, ಅಗ್ನಿ ದುರಂತ ಸುರಕ್ಷತಾ ಕ್ರಮ ವಹಿಸಿದ ಸೂರಜ್ ರೈ, ಜನರೇಟರ್ ಸಪ್ಲೈ ಮಾಡಿದ ಮಾರೂರ್ ಇಂಜಿನಿಯರಿಂಗ್‌ನ ಅಜಿತ್ ಪೈ, ಎಮ್.ಎಸ್ ಫ್ಯಾಬ್ರಿಕೇಷನ್‌ನ ಅಜಿತ್ ಕಾಮತ್, ಫ್ರೋರಿಂಗ್ ಕಾಮಗಾರಿ ಗಣೇಶ್ ಟ್ರೇಡರ್‍ಸ್‌ನ ವಾಮನ್ ಪೈ, ಕಬ್ಬಿಣದ ಸಾಮಾಗ್ರಿ ವಿತರಿಸಿದ ಕುಡ್ಗಿ ಎಂಟರ್‌ಪ್ರೈಸಸ್‌ನ ವಿಶ್ವಾಸ್ ಶೆಣೈ, ಸ್ಟೈನ್‌ಲೆಸ್ ಸ್ಟೀಲ್ ಪ್ರೇಮನಾಥ್, ಪೈಂಟಿಂಗ್ ಜೀತನ್, ಪೈಂಟ್ ವಿತರಣೆ ಮಾಡಿದ ಪ್ರಶಾಂತ್ ಶೆಣೈ, ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣ ಮಾಡಿದ ದುರ್ಗಾ ಏಜೆನ್ಸಿಸ್‌ನ ರಾಜೇಶ್, ಲೈಟಿಂಗ್ ವ್ಯವಸ್ಥೆ ಮಾಡಿದ ಸೌತ್ ಕೆನರಾ ಸಂಸ್ಥೆಯ ಪಶುಪತಿ ಶರ್ಮ,ಪ್ಲಂಬಿಂಗ್‌ನ ಸುರೇಶ್, ಇಲೆಕ್ಟ್ರಿಕಲ್‌ನ ಶಶಿಧರ್, ಫ್ರೋರಿಂಗ್ ಕೆಲಸದ ಯೋಗನಾಥ್, 2 ಪಿ.ಕೆ ಎಮ್ ಆರ್ಕಿಟೆಕ್ಟ್‌ನ ಮೋನಿಕಾ ಕಾಮತ್, ಮಾರ್ಗದರ್ಶಕರಾದ ಸುರೇಶ್ ಪೈ ಅವರನ್ನು ಗೌರವಿಸಲಾಯಿತು.

ಜಿ.ಎಲ್.ಬಲರಾಮ ಆಚಾರ್ಯ ಅವರ ಪತ್ನಿ ರಾಜಿ ಬಲರಾಮ ಆಚಾರ್ಯ, ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ನಿರ್ದೇಶಕ ಸುಧನ್ವ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿ.ಎಲ್.ಸಮೂಹ ಸಂಸ್ಥೆ ನಿರ್ದೇಶಕ ಲಕ್ಷ್ಮೀಕಾಂತ್ ಆಚಾರ್ಯ ವಂದಿಸಿದರು. ಪವಿತ್ರಾರೂಪೇಶ್ ಶೇಟ್ ಪ್ರಾರ್ಥಿಸಿದರು.ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.ವೇದಾ ಲಕ್ಷ್ಮೀಕಾಂತ್ ಆಚಾರ್ಯ, ಮೇಘನಾ ಸುಧನ್ವ ಆಚಾರ್ಯ, ನಂದಿತಾ ಸಹಿತ ಜಿ.ಎಲ್.ಕುಟುಂಬ ಮತ್ತು ಸಂಸ್ಥೆಯ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಮ್ಯೂಸಿಕ್ ಪರ್ಬ: ಸಭಾ ಕಾರ್ಯಕ್ರಮದ ಬಳಿಕ ಚಲನ ಚಿತ್ರ ನಟ ನಟಿಯರು ಮತ್ತು ವಿವಿಧ ಆಕರ್ಷಣೆಯ ಸಂಗೀತ ಮತ್ತು ನೃತ್ಯಗಳನ್ನೊಳಗೊಂಡ `ಮ್ಯೂಸಿಕ್ ಪರ್ಬ’ ಕಾರ್ಯಕ್ರಮ ನಡೆಯಿತು.ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಹೀಗಿದೆ ಜಿಎಲ್ ವನ್ ಮಾಲ್
ಮ್ಯಾಕ್ಸ್, ಈಸಿ ಬಯ್ ನಂತಹ ಮಲ್ಟಿ ಬ್ರಾಂಡೆಡ್ ಕಂಪೆನಿಗಳನ್ನು ಪರಿಚಯಿಸಿದ ಜಿಎಲ್ ವನ್ ಮಾಲ್‌ನ ಒಟ್ಟು ವಿಸ್ತೀರ್ಣ 1 ಲಕ್ಷ ಚದರ ಅಡಿ.ಒಟ್ಟು 2 ಅಂತಸ್ತಿನ ಕಟ್ಟಡ ಇದೀಗ ಸಿದ್ಧವಾಗಿದೆ.ಮುಂದೆ ೩ನೇ ಅಂತಸ್ತು ಕೂಡ ವ್ಯವಹಾರಕ್ಕೆ ತೆರೆದುಕೊಳ್ಳಲಿದೆ.ಇದರಲ್ಲಿ ಬೇಸ್ ಮೆಂಟ್‌ನಲ್ಲಿ ಪಾರ್ಕಿಂಗ್.ಕೆಳ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ಶಾಪಿಂಗ್ ಮ್ಯಾಕ್ಸ್, ಈಸಿ ಬಯ್, ವೈಟ್‌ಟ್ಯಾಗ್ ಮೆಟ್ರೋ, ವಾಕ್ ವೇ, ಮಲ್ಟಿ ಬ್ರಾಂಡ್ ವಾಚ್ ಶೋ ರೂಂ, ಬ್ಯಾಗ್ ಶೋ ರೂಂ ಇತ್ಯಾದಿ ಮಳಿಗೆಗಳು ಇರಲಿದೆ.೨ನೇ ಅಂತಸ್ತಿನಲ್ಲಿ ಭಾರತ್ ಸಿನೇಮಾಸ್ ಥಿಯೇಟರ್, ಮಕ್ಕಳ ಗೇಮಿಂಗ್ ಸೆಂಟರ್, ಫುಡ್ ಕೋರ್ಟ್ ಇತ್ಯಾದಿ ಇರಲಿದೆ.ಮುಂದೆ ೩ನೇ ಅಂತಸ್ತು ಕೂಡ ವ್ಯವಹಾರಕ್ಕೆ ತೆರೆದುಕೊಳ್ಳಲಿದ್ದು, ಇಲ್ಲಿಗೆ ಕೆಲ ಕಚೇರಿಗಳು ಬರಲಿವೆ.

ಸುಸಜ್ಜಿತ ಪಾರ್ಕಿಂಗ್
ಪುತ್ತೂರು ಪೇಟೆಯಲ್ಲಿ ಪಾರ್ಕಿಂಗ್ ಬಹುದೊಡ್ಡ ತಲೆನೋವು. ಆದರೆ ಜಿಎಲ್ ವನ್ ಮಾಲ್ ಒಳಗಡೆ ಪ್ರವೇಶಿಸಿದರೆ, ಪಾರ್ಕಿಂಗ್ ಸಮಸ್ಯೆಯೇ ಎದುರಾಗದು.ಇದಕ್ಕೆ ಕಾರಣ ಇಲ್ಲಿನ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ.ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.ಗ್ರಾಹಕರ ದೃಷ್ಟಿಕೋನದಿಂದ ಇದು ಬಹು ಅನುಕೂಲವೂ ಹೌದು.

LEAVE A REPLY

Please enter your comment!
Please enter your name here