ಬಾರ್ಲ: ಜೀರ್ಣೋದ್ಧಾರಗೊಳ್ಳುತ್ತಿದೆ ಗ್ರಾಮದೈವ ಶಿರಾಡಿ, ಪರಿವಾರ ದೈವಗಳ ಧರ್ಮಚಾವಡಿ

0

ಉಪ್ಪಿನಂಗಡಿ: ತುಳುನಾಡಿನಲ್ಲಿ ಹಲವು ವಿಭಿನ್ನ ಸಂಸ್ಕೃತಿಗಳ ಆಚರಣೆಯಿದೆ. ಇದರಲ್ಲಿ ದೈವಾರಾಧನೆಯೂ ಒಂದು. ತುಳುನಾಡಿನ ಜನತೆಗೆ ದೈವರಾಧನೆ, ದೈವಗಳ ಮೇಲೆ ಅಪಾರ ನಂಬಿಕೆ, ಭಕ್ತಿಯೂ ಇದೆ. ಇದರ ಪ್ರತೀಕವಾಗಿಯೇ ತುಳುನಾಡಿನೆಲ್ಲೆಡೆ ಪುರಾತನ ದೈವಸ್ಥಾನಗಳು ಜೀರ್ಣೋದ್ದಾರಗೊಳ್ಳುತ್ತಿವೆ. ಇದರಿಂದ ಭಕ್ತರ ಮನೋಭಿಷ್ಠೆಗಳೂ ಈಡೇರುತ್ತಿವೆ. ಇದಕ್ಕೆಲ್ಲಾ ನಿದರ್ಶನವೆಂಬಂತೆ ಪುತ್ತೂರು ತಾಲೂಕಿನ ಹಿರೇಬಂಡಾಡಿ ಮತ್ತು ಉಪ್ಪಿನಂಗಡಿ ಕಸಬ ಗ್ರಾಮದ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶವಾದ ಬಾರ್ಲ ಎಂಬಲ್ಲಿ ಪ್ರಕೃತಿಯ ಮಡಿಲಲ್ಲಿ, ಮನೋಹರ, ಪ್ರಶಾಂತವಾದ ಪರಿಸರದಲ್ಲಿ ನೆಲೆ ನಿಂತಿರುವ ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ದಾರ ಕೆಲಸಗಳು ಭರದಿಂದ ನಡೆಯುತ್ತಿದ್ದು ಅಂತಿಮ ಹಂತದಲ್ಲಿದೆ. ದೈವಸ್ಥಾನವೂ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.


ಬಾರ್ಲ ಎಂಬಲ್ಲಿರುವ ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳು ಈ ಭಾಗದ ಗ್ರಾಮಸ್ಥರ ಆರಾಧ್ಯ ದೈವವಾಗಿದೆ. ಇಲ್ಲಿನ ದೈವಗಳ ಮುಂದೆ ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವೇದಿಸಿಕೊಂಡು ಭಕ್ತಿಯಿಂದ ಪ್ರಾರ್ಥಿಸಿದಲ್ಲಿ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಅಪಾರ ನಂಬಿಕೆ ಇದೆ. ಈ ರೀತಿಯಾಗಿ ಶ್ರೀ ದೈವಗಳ ಮೂಲಕ ಪರಿಹಾರ ಕಂಡುಕೊಂಡ ಅನೇಕ ದೃಷ್ಟಾಂತಗಳೂ ಇವೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೈವಸ್ಥಾನವು ಶಿಥಿಲವಸ್ಥೆಯಲ್ಲಿದ್ದಾಗ ಗ್ರಾಮಸ್ಥರಿಗೆ ಸಂಕಷ್ಟವೂ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ದೈವಜ್ಞರ ಮೂಲಕ ಸ್ಥಳದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿದರು.

ಆದಷ್ಟು ಬೇಗನೆ ದೈವ ಚಾವಡಿ ಮತ್ತು ಗುಡಿ ಹಾಗೂ ಉಳಿದೆಲ್ಲಾ ದೈವಗಳ ಕಟ್ಟೆ ನಿರ್ಮಿಸಿ ಆರಾಧಿಸಬೇಕೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂತು. ಅಲ್ಲದೇ ಈ ದೈವಸ್ಥಾನವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿತವಾಗಿರುವುದರಿಂದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಯವರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅನುಗ್ರಹ ಅತೀ ಮುಖ್ಯ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿತ್ತು. ಅದರಂತೆ ಉಪ್ಪಿನಂಗಡಿ ಹಾಗೂ ಹಿರೇಬಂಡಾಡಿ ಗ್ರಾಮಗಳಿಗೆ ಸಂಬಂಧಿಸಿದ ಧರ್ಮದೈವಗಳ ಚಾವಡಿಯ ಪುನರ್‌ನಿರ್ಮಾಣದ ಕೆಲಸವನ್ನು ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ಆರಂಭಿಸಲಾಗಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ವಿವಿಧ ಧೋಷ ಪರಿಹಾರ ಕಾರ್ಯವನ್ನು ಮುಗಿಸಿ ಅನುಜ್ಞಾ ಕಲಶದೊಂದಿಗೆ ದೈವಸ್ಥಾನದ ದೋಷಗಳನ್ನು ನಿವೃತ್ತಿ ಮಾಡಲಾಗಿದೆ. ದೈವಸ್ಥಾನದ ಪುನ: ನಿರ್ಮಾಣದ ಈ ಮಹತ್ಕಾರ್ಯದಲ್ಲಿ ಊರ ಪರವೂರ ಭಕ್ತರ ತನು-ಮನ-ಧನದ ಸಹಾಯ ಯಾಚಿಸಲಾಗಿದೆ. ಧನ ಸಹಾಯ ನೀಡುವವರು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿರುವ ಖಾತೆ ಸಂಖ್ಯೆ -‘16051’ಗೆ ಜಮಾ ಮಾಡಬಹುದಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಮನವಿ ಮಾಡಿದೆ.

LEAVE A REPLY

Please enter your comment!
Please enter your name here