ಮಂಗಳೂರು: ಪತ್ರಕರ್ತ ಪಿ.ಬಿ.ಹರೀಶ್ ರೈ ಬರೆದ ರಾಜಕೀಯದ ಐತಿಹಾಸಿಕ ಮಾಹಿತಿಗಳನ್ನೊಳಗೊಂಡ ‘ಮತಪೆಟ್ಟಿಗೆ’ ಕೃತಿ ಬುಧವಾರ ಮಂಗಳೂರು ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು.
ಜಿ.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಕೃತಿ ಬಿಡುಗಡೆಗೊಳಿಸಿ, ದ.ಕ. ಜಿಲ್ಲೆಯ ರಾಜಕಾರಣದ ಸಂಪೂರ್ಣ ಮಾಹಿತಿ ಒಳಗೊಂಡ ಮತಪೆಟ್ಟಿಗೆ ರಾಜಕೀಯ ವಿದ್ಯಾರ್ಥಿಗಳಿಗೆ ಹಾಗೂ ಪತ್ರಕರ್ತರಿಗೆ ಉಪಯುಕ್ತವಾಗಿದೆ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿ ಜಿಲ್ಲೆಯ ರಾಜಕೀಯ ಜೀವನದ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಲು ಈ ಕೃತಿ ನೆರವಾಗಲಿದೆ ಎಂದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರಿಂದ ರಾಜಕೀಯ ಬದಲಾವಣೆ ಸಾಧ್ಯವಿದ್ದು, ಗುಣಮಟ್ಟದ ರಾಜಕೀಯ ವ್ಯವಸ್ಥೆ ನಿರ್ಮಾಣಕ್ಕೆ ಶ್ರಮಿಸಬೇಕು. ಇಂತಹ ಇನ್ನಷ್ಟು ಕೃತಿಗಳು ಹೊರಬರಬೇಕು ಎಂದು ಆಶಿಸಿದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, ಹರೀಶ್ ರೈಗಳು ಅಧ್ಯಯನಶೀಲ ಬರಹಗಾರರಾಗಿದ್ದು, ರಾಜಕೀಯ ರಂಗದ ಬಗ್ಗೆ ಉತ್ತಮ ಮಾಹಿತಿ ಹೊಂದಿದ್ದಾರೆ. ರಾಜಕೀಯ ರಂಗದ ಏಕೈಕ ಕೃತಿ ಇದಾಗಿದ್ದು, ಇಂತಹ ಕೃತಿಗಳು ವಿವಿಧ ಹಂತಗಳಲ್ಲಿ ಪ್ರಕಟವಾಗಬೇಕು ಎಂದರು. ಕೃತಿಕಾರ ಪಿ.ಬಿ.ಹರೀಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ನನ್ನ ಮೊದಲ ಕೃತಿ ‘ರಾಜನೋಟ’ದ ಪರಿಷ್ಕೃತ ಆವೃತ್ತಿ ಇದಾಗಿದೆ. ಕರಾವಳಿ ರಾಜಕೀಯದ ಚಿತ್ರಣವನ್ನೂ ಇದರಲ್ಲಿ ನೀಡಲಾಗಿದ್ದು, ಸಮಗ್ರ ಕೃತಿಯಾಗಿ ಹೊರತರುವಲ್ಲಿ ಎಲ್ಲರ ಸಹಕಾರ ದೊರಕಿದೆ ಎಂದರು.
ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅತಿಥಿಗಳಾಗಿದ್ದರು. ಪತ್ರಕರ್ತ ಬಿ.ಎನ್.ಪುಷ್ಪರಾಜ್ ಕಾರ‍್ಯಕ್ರಮ ನಿರೂಪಿಸಿದರು. ಆಕೃತಿ ಪ್ರಕಾಶನದ ಪ್ರಕಾಶಕ ಕಲ್ಲೂರು ನಾಗೇಶ್ ವಂದಿಸಿದರು.