ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತದಿಂದ ಎಸ್ಸಿ/ಎಸ್ಟಿ ನೌಕರರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಿಗುವ ಮೀಸಲಾತಿಯನ್ನು ದುರುಪಯೋಗ ಮಾಡುತ್ತಿದ್ದಾರೆ. ನಮಗಾದ ಅನ್ಯಾಯದ ಕುರಿತು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಈ ವಿಚಾರವಾಗಿ ನಮ್ಮಲ್ಲಿ ಎಲ್ಲಾ ದಾಖಲೆ ಇದೆ. ಆದರೆ ಕುಲಪತಿಗಳು ನಮ್ಮ ಸಂಘಟನೆಯ ಕುರಿತು ಸುಳ್ಳು ಹೇಳಿಕೆ ನೀಡಿರುವ ವಿರುದ್ಧ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಂಗಳೂರು ವಿವಿಯಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ಅವ್ಯವಹಾರಗಳ ಬಗ್ಗೆ ಸಮಿತಿಯ ವತಿಯಿಂದ ಈ ಹಿಂದೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದೆವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಲಪತಿಗಳಾದ ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು ಸಂಘಟನೆಯವರ ಸಂಬಂಧಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಘಟನೆಯು ವಿವಿಯ ಬಗ್ಗೆ ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯು ಸಂಪೂರ್ಣ ಸುಳ್ಳಿನಿಂದ ಕೂಡಿದೆ. ನಮ್ಮ ಹೋರಾಟ ಏನಿದ್ದರೂ ವಿವಿಯ ನೊಂದ ನೌಕರರ ಮತ್ತು ವಿದ್ಯಾರ್ಥಿಗಳ ಪರವಾಗಿದೆ. ನ್ಯಾಯ ಸಿಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಪತ್ರಿಕಾಗೋಷ್ಠಿ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಸದಸ್ಯರಾದ ಗಂಗಾಧರ ನಾಯ್ಕ, ಅಶೋಕ್ ಬೊಳ್ಳಾಡಿ, ಕೃಷ್ಣಪ್ಪ ನಾಯ್ಕ ಮತ್ತು ರತ್ನಾವತಿ ಉಪಸ್ಥಿತರಿದ್ದರು.