ನಿಂತಿಕಲ್ಲು: ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ 4ನೇ ಶಾಖೆ ಉದ್ಘಾಟನೆ

0
  • ಸಹಕಾರ ಕ್ಷೇತ್ರದಲ್ಲಿ ’ಬಂಟಸಿರಿ’ ವೇಗವಾಗಿ ಅಭಿವೃದ್ಧಿ ಹೊಂದಲಿ-ಜೈರಾಜ್ ರೈ
  • ಧ್ರುವ ತಾರೆಯಾಗಿ ಬೆಳಗಲಿ- ಶಶಿಕುಮಾರ್ ರೈ ಬಾಲ್ಯೊಟ್ಟು
  • ಸಂಸ್ಥೆ ಇನ್ನೂ ಎತ್ತರಕ್ಕೆ ಏರಲಿ-ಸೀತಾರಾಮ ರೈ
  • ಗ್ರಾಹಕರಿಗೆ ಉತ್ತಮ ಸೇವೆ- ಜಗನ್ನಾಥ ರೈ
  • ಇನ್ನಷ್ಟು ಶಾಖೆಗಳು ತೆರೆಯಲಿ- ಚನಿಲ

ಪುತ್ತೂರು: ದರ್ಬೆ ಶ್ರೀರಾಮ ಸೌಧದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ 4ನೇ ಶಾಖೆ ಸುಳ್ಯ ತಾಲೂಕಿನ ನಿಂತಿಕಲ್ಲುನಲ್ಲಿರುವ ’ಸಾಧನ ಸಹಕಾರ ಸೌಧ’ದಲ್ಲಿ ಎ.6ರಂದು ಉದ್ಘಾಟನೆಗೊಂಡಿತು.

ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜೈರಾಜ್ ಬಿ. ರೈಯವರು ನೂತನ ನಿಂತಿಕಲ್ಲು ಶಾಖೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಯು ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯು ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಸೇವೆಯನ್ನು ನೀಡಿದಾಗ ಮಾತ್ರ ಗ್ರಾಹಕರು ಸಂಸ್ಥೆಯ ಮೇಲೆ ಅಭಿಮಾನ ಹೊಂದುತ್ತಾರೆ ಮತ್ತು ಸದಾ ನಮ್ಮ ಕೈಹಿಡಿಯುತ್ತಾರೆ. ದ.ಕ.ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳು ಉತ್ತಮವಾದ ರೀತಿಯಲ್ಲಿ ಬೆಳೆದು ನಿಂತಿದೆ ಎಂಬುದಕ್ಕೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪ್ರಗತಿಯ ನೋಟವೇ ಸಾಕ್ಷಿಯಾಗಿದೆ. ಒಳ್ಳೆಯ ಆಡಳಿತ, ಚತುರು ಸಿಬ್ಬಂದಿಗಳು ಇದ್ದಾಗ ಸಂಸ್ಥೆ ಉನ್ನತವಾದ ಸ್ಥಾನ ಪಡೆಯುತ್ತದೆ. 10 ವರ್ಷದ ಹಿಂದೆ ಆರಂಭಗೊಂಡ ಬಂಟಸಿರಿ ಸಹಕಾರ ಸಂಸ್ಥೆಯು ಸಹಕಾರ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ, ಸಂಸ್ಥೆಯು ಇನ್ನಷ್ಟೂ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು.

ಧ್ರುವ ತಾರೆಯಾಗಿ ಬೆಳಗಲಿ- ಶಶಿಕುಮಾರ್ ರೈ ಬಾಲ್ಯೊಟ್ಟು: ಭದ್ರತಾ ಖಜಾನೆ ಉದ್ಘಾಟಿಸಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರೂ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರೂ ಆದ ಶಶಿಕುಮಾರ್‌ರೈ ಬಾಲ್ಯೊಟ್ಟುರವರು ಮಾತನಾಡಿ, ಬಂಟಸಿರಿ ಸಂಸ್ಥೆಯು ಸಹಕಾರ ಕ್ಷೇತ್ರದ ಧ್ರುವ ತಾರೆಯಾಗಿ ಬೆಳಗಲಿ. ನಿಂತಿಕಲ್ಲು ಪರಿಸರದ ಎಲ್ಲಾ ಸಹಕಾರ ಬಂಧುಗಳು ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ಕಾರಣ ಈ ಪರಿಸರದಲ್ಲಿ ಸಹಕಾರ ಸಂಸ್ಥೆಗಳಿಗೆ ಉಜ್ವಲವಾದ ಭವಿಷ್ಯ ಇದೆ ಎಂದು ಹೇಳಿದರು.

ಸಂತೋಷವಾಗಿದೆ- ಸೀತಾರಾಮ ರೈ: ಬಂಟಸಿರಿ ಸಂಸ್ಥೆಯ ಸನ್ಮಾನ ಸ್ವೀಕರಿಸಿದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ, 2013ರಲ್ಲಿ ಬಂಟಸಿರಿ ಸಹಕಾರ ಸಂಸ್ಥೆ ಆರಂಭವಾದಾಗ ಅದರ ಅಧ್ಯಕ್ಷ ಜಗನ್ನಾಥ ರೈ ಮಾದೋಡಿಯವರಿಗೆ ನಾನು ಪೂರ್ಣ ರೀತಿಯಲ್ಲಿ ಸಹಕಾರ ನೀಡಿದ್ದೇನೆ ಎಂದು ಹೇಳಿದರು. ಈಗ ಬಂಟಸಿರಿ ಸಂಸ್ಥೆಯು ದಶಮಾನೋತ್ಸವದ ಸನಿಹದಲ್ಲಿ ಇದ್ದು, ಸಂಸ್ಥೆಯು ಮುಂದೆಯೂ ಉನ್ನತವಾದ ಗೌರವವನ್ನು ಪಡೆಯಲಿ. ಬಂಟಸಿರಿ ಸಂಸ್ಥೆಯ ಸನ್ಮಾನವನ್ನು ಸ್ವೀಕರಿಸಲು ಅತ್ಯಂತ ಸಂತೋಷವಾಗಿದೆ ಎಂದು ಹೇಳಿದರು.

ಉತ್ತಮವಾದ ಸೇವೆ- ಜಗನ್ನಾಥ ರೈ: ಅಧ್ಯಕ್ಷತೆ ವಹಿಸಿದ್ದ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್. ಜಗನ್ನಾಥ ರೈ ಮಾದೋಡಿಯವರು ಮಾತನಾಡಿ, ಬಂಟಸಿರಿ ಸಂಸ್ಥೆಯು ಉತ್ತಮವಾದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವನ್ನು ಹೊಂದಿದೆ. ಉತ್ತಮವಾದ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ಲಾಭಾಂಶದಲ್ಲಿ ಶೇ.13ರಷ್ಟು ಡಿವಿಡೆಂಡ್‌ನ್ನು ಸದಸ್ಯರಿಗೆ ನೀಡಿದ್ದೇವೆ. ಜೊತೆಗೆ ಎಲ್ಲಾ ಸಮುದಾಯದ ಬಡ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಇನ್ನಷ್ಟು ಶಾಖೆಗಳು ತೆರೆಯಲಿ- ಚನಿಲ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಬಂಟಸಿರಿ ಸಹಕಾರ ಸಂಸ್ಥೆಯ ನಿರ್ದೇಶಕರೂ ಆಗಿರುವ ಚನಿಲ ತಿಮ್ಮಪ್ಪ ಶೆಟ್ಟಿಯವರನ್ನು ಬಂಟಸಿರಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಚನಿಲ ತಿಮ್ಮಪ್ಪ ಶೆಟ್ಟಿಯವರು, ಬಂಟಸಿರಿ ಸಂಸ್ಥೆಯು ಉನ್ನತವಾದ ಸ್ಥಾನವನ್ನು ಪಡೆಯುವ ಮೂಲಕ, ಇನ್ನಷ್ಟು ಶಾಖೆಗಳನ್ನು ತೆರೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಠೇವಣಿ ಪತ್ರ ಬಿಡುಗಡೆಗೊಳಿಸಿದ ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಗೌಡ ಎಚ್, ಸಹಕಾರಿ ಧುರೀಣ ರಮೇಶ್ ಕೋಟೆ, ಸುಳ್ಯ ತಾ.ಪಂ.ಮಾಜಿ ಸದಸ್ಯ ಗಪೂರ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಗಣಕ ಯಂತ್ರ ಉದ್ಘಾಟನೆಗೈದ ಸಹಕಾರಿ ಮುಂದಾಳು ಶ್ರೀಧರ್ ರೈ ಮಾದೋಡಿ, ಬಂಟಸಿರಿ ಸಂಸ್ಥೆಯ ನಿರ್ದೇಶಕರಾದ ದಯಾನಂದ ರೈ ಮನವಳಿಕೆಗುತ್ತು, ಬೂಡಿಯಾರ್ ರಾಧಾಕೃಷ್ಣ ರೈ, ವಸಂತ ಕುಮಾರ್ ರೈ ದುಗ್ಗಳ, ಸಂಜೀವ ಆಳ್ವ ಹಾರಾಡಿ, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ವಿದ್ಯಾಪ್ರಸಾದ್ ಆಳ್ವ ಆಳ್ವರಮನೆ ಉಪ್ಪಳಿಗೆ, ಅನಿತಾ ಹೇಮನಾಥ್ ಶೆಟ್ಟಿ ಕಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶರಾದ ಜೈರಾಜ್ ಭಂಡಾರಿ ನೊಣಾಲು, ಪುರಂದರ ರೈ ಮಿತ್ರಂಪಾಡಿಯವರು ಸನ್ಮಾನ ಪತ್ರ ವಾಚಿಸಿದರು.

ಗ್ರಾಹಕರಿಗೆ ಸಕಾಲದಲ್ಲಿ ಸಾಲ- ಜಯರಾಮ ರೈ: ನಿರ್ದೇಶಕ ಜಯರಾಮ ರೈ ನುಳಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿ, ಬಂಟಸಿರಿ ಸಂಸ್ಥೆಯು 2013ರಲ್ಲಿ ಆರಂಭಗೊಂಡಿದ್ದು ಪ್ರಸ್ತುತ ದಶಮಾನೋತ್ಸವ ಸಂಭ್ರಮದಲ್ಲಿ ಇದೆ. ಸಂಘವನ್ನು ನಿವೃತ್ತ ಡಿವೈಎಸ್‌ಪಿ ಎನ್. ಜಗನ್ನಾಥ ರೈ ಮಾದೋಡಿಯವರ ನೇತೃತ್ವದಲ್ಲಿ ಆರಂಭ ಮಾಡಲಾಗಿದ್ದು, ಠೇವಣಿದಾರರಿಗೆ ಆಕರ್ಷಕ ಬಡ್ಡಿ, ಗ್ರಾಹಕರಿಗೆ ಸಕಾಲದಲ್ಲಿ ಸಾಲ ನೀಡುತ್ತಿದ್ದೇವೆ ಎಂದರು.

ಉಪಾಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಸ್ವಾಗತಿಸಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸತೀಶ್ ರೈ ನಡುಬೈಲು ವಂದಿಸಿದರು. ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಆಡಳತಾಧಿಕಾರಿ ವಸಂತ ರೈ ಕಾರ್ಕಳ ಕಾರ‍್ಯಕ್ರಮ ನಿರೂಪಿಸಿದರು. ನಿಂತಿಕಲ್ಲು ಶಾಖೆಯ ಮೇನೇಜರ್ ಪ್ರೀತಮ್ ಶೆಟ್ಟಿ, ಸಿಬ್ಬಂದಿಗಳಾದ ವಿಮರ್ಶಾ ರೈ, ಪ್ರಣೀತಾ ರೈ, ಪುತ್ತೂರು ಪ್ರಧಾನ ಕಚೇರಿಯ ಸಹಾಯಕ ಮೇನೇಜರ್ ಪ್ರೇಮ ರೈ, ಈಶ್ವರಮಂಗಲ ಶಾಖೆಯ ಮ್ಯಾನೇಜರ್ ಸುಮಂತ್ ರೈ, ಆಲಂಕಾರು ಶಾಖೆಯ ತೇಜಸ್ ರೈ ಕಾರ‍್ಯಕ್ರಮದಲ್ಲಿ ಸಹಕರಿಸಿದರು.

ಸಹಕಾರ ತತ್ವದಲ್ಲಿ ಸಾಗುತ್ತಿದ್ದೇವೆ

ನಾವು ಬಂಟಸಿರಿ ಸಂಸ್ಥೆಯನ್ನು ಸಹಕಾರ ತತ್ವದ ಆಡಿಯಲ್ಲಿ ಮುನ್ನಡೆಸುತ್ತಿದ್ದೇವೆ. ಈಗಾಗಲೇ 4 ಶಾಖೆಗಳನ್ನು ಹೊಂದಿದ್ದು, ಮುಂದೆಯೂ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಉತ್ತಮವಾದ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸತೀಶ್ ರೈ ನಡುಬೈಲುರವರ ದಕ್ಷ ಕರ್ತವ್ಯ ನಿರ್ವಹಣೆ ಹಾಗೂ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಸಂಸ್ಥೆಯು ಪ್ರಗತಿ ಪಥದಲ್ಲಿ ನಡೆಯುತ್ತಿದೆ.

-ಜಗನ್ನಾಥ ರೈ ಮಾದೋಡಿ
ಅಧ್ಯಕ್ಷರು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ

ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಅಭಿವೃದ್ಧಿ

ಬಂಟಸಿರಿ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ರೈ ಮಾದೋಡಿಯವರ ಪೂರ್ಣ ಸಹಕಾರದಿಂದ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗಿದೆ ಮತ್ತು ಆಡಳಿತ ಮಂಡಳಿ ಹಾಗೂ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಸಂಸ್ಥೆಯು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯುವ ಇರಾದೆ ಇದೆ. ಎಲ್ಲಾ ಶಾಖೆಗಳ ಗ್ರಾಹಕರಿಗೆ ಸೇವೆಯನ್ನು ಕ್ಲಪ್ತ ಸಮಯದಲ್ಲಿ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇವೆ.

ಸತೀಶ್ ರೈ ನಡುಬೈಲು ಮುಖ್ಯಕಾರ್ಯನಿರ್ವಹಣಾಧಿಕಾರಿ
ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ

LEAVE A REPLY

Please enter your comment!
Please enter your name here