ಪುತ್ತೂರು: ವಿಶ್ವದಾದ್ಯಂತ ಕ್ರೈಸ್ತರು ಆಚರಿಸುತ್ತಿರುವ ‘ಗುಡ್ ಫ್ರೈಡೇ’ಯ ಮುನ್ನಾ ದಿನವಾದ ಎ.6 ರಂದು ‘ಪವಿತ್ರ ಗುರುವಾರ’ವನ್ನು ಆಯಾ ಚರ್ಚ್‌ಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪವಿತ್ರ ಗುರುವಾರವೆಂದರೆ ಧಾರ್ಮಿಕ ಮತ್ತು ಮಾನವೀಯತೆಯ ಭಾಷೆಯಲ್ಲಿ ಇದೊಂದು ಪ್ರೀತಿಯ ದಿನ. ‘ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು’ ಎಂಬ ಪ್ರಭು ಕ್ರಿಸ್ತರ ಆಜ್ಞೆ ಪ್ರಾಯೋಗಿಕವಾಗಿ ಇಂದಿನ ಸಂಸ್ಕಾರ ವಿಧಿಗಳಲ್ಲಿ ವ್ಯಕ್ತವಾಗುವ ದಿನ. ಯೇಸು ಕ್ರಿಸ್ತರು ಶಿಲುಬೆಗೇರುವ ಮೊದಲು ತನ್ನ 12 ಮಂದಿ ಶಿಷ್ಯರೊಂದಿಗೆ ಕುಳಿತು ಕೊನೆಯ ಭೋಜನ ಮಾಡಿದ ದಿನದ ನೆನಪಿನಲ್ಲಿ ನಡೆಯುವ ಆಚರಣೆಯಾಗಿದೆ. ಅಲ್ಲದೆ ಕೊನೆಯ ಭೋಜನದಲ್ಲಿ ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ಪರಸ್ಪರ ಹಂಚಿಕೊಂಡು ತಿಂದು, ಇದನ್ನು ತನ್ನ ಮರಣಾ ನಂತರವೂ ಮುಂದುವರೆಸುವಂತೆ ಆದೇಶಿಸಿದ್ದರು. ಇದರೊಂದಿಗೆ ಸೇವೆಯ ಪ್ರತೀಕವಾಗಿ ತನ್ನ ಶಿಷ್ಯರ ಪಾದಸ್ನಾನ ಮಾಡುತ್ತಾ ಮಾನವತೆಯ ಸರಳತೆಯ ಪಾಠವನ್ನು ಅವರಿಗೆ ಬೋಧಿಸಿದ್ದರು. ಸಮಾಜದಲ್ಲಿ ಒಂದಲ್ಲಾ ಒಂದು ಅಧಿಕಾರವನ್ನು ಹೊಂದಿರುವ ನಾವೆಲ್ಲರೂ ಪ್ರಭು ಕ್ರಿಸ್ತರಿಂದ ಪಡೆದ ಅಧಿಕಾರದ ಸದುಪಯೋಗದೊಂದಿಗೆ ದುರುಪಯೋಗಗಳನ್ನು ಧ್ಯಾನಿಸುವ ದಿನವಾಗಿದ್ದು ಯೇಸುಕ್ರಿಸ್ತರು ಮಾನವತೆಯ ಸರಳತೆಯ ಪಾಠವನ್ನು ಬೋಧಿಸಿರುತ್ತಾರೆ.
ಅದರಂತೆ ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ವಂ|ಅಶೋಕ್ ರಾಯನ್ ಕ್ರಾಸ್ತಾ, ವಂ|ಸ್ಟ್ಯಾನಿ ಪಿಂಟೋ, ಬೆಳ್ಳಾರೆ ಚರ್ಚ್‌ನಲ್ಲಿ ಧರ್ಮಗುರು ವಂ|ಆಂಟನಿ ಪ್ರಕಾಶ್ ಮೊಂತೇರೋ, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ಹಿರಿಯ ಧರ್ಮಗುರು ವಂ|ಆಲೋನ್ಸ್ ಮೊರಾಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋ, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ವಲೇರಿಯನ್ -ಂಕ್, ವಂ|ಡೆನ್ಜಿಲ್ ಲೋಬೊ ಸಹಿತ ಇತರ ಚರ್ಚ್‌ಗಳಲ್ಲಿ ಧರ್ಮಗುರುಗಳು ಬಲಿಪೂಜೆಯನ್ನು ನೆರವೇರಿಸಿದರು.
ಆಯಾ ಚರ್ಚ್‌ನಲ್ಲಿ ವಿಶೇಷ ಪೂಜೆಯೊಂದಿಗೆ ಧರ್ಮಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆದರು. ಆಯಾ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಚರ್ಚ್ ಪಾಲನಾ ಸಮಿತಿ, ಧರ್ಮಭಗಿನಿಯರು, ಸ್ಯಾಕ್ರಿಸ್ಟಿಯನ್, ಗುರಿಕಾರರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಲಿಪೂಜೆಯಲ್ಲಿ ಪಾಲ್ಗೊಂಡರು.
12 ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆಯುವಿಕೆ..
ಅಧಿಕಾರಿಗಳಿಗೆ ಕೊಡಲಿ ಪೆಟ್ಟು ಕೊಡುವ ಕ್ರಿಸ್ತ ಅಧಿಕಾರದ ಅರ್ಥ ‘ಸ್ವಾರ್ಥ ರಹಿತ ಸೇವೆ’ ಎಂದು ಸಾರುವ ದಿನವಿದು. ಈ ನೆನಪಿಗಾಗಿ ಪವಿತ್ರ ಗುರುವಾರದಂದು ಆಯಾ ಚರ್ಚ್‌ಗಳಲ್ಲಿ ವಿಶೇಷ ಪೂಜೆಯೊಂದಿಗೆ ಧರ್ಮಗುರುಗಳು 12 ಮಂದಿ ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆಯುತ್ತಾರೆ. ಅದರಂತೆ ಪುರುಷರು, ಮಹಿಳೆಯರು, ಧರ್ಮಭಗಿನಿಯರು, ವಯಸ್ಕರು, ಆರೋಗ್ಯವಂತ ಸಾಮಾನ್ಯ ವ್ಯಕ್ತಿಗಳು, ಯುವಜನರ ಪಾದಗಳನ್ನು ಆಯಾ ಚರ್ಚ್‌ಗಳಲ್ಲಿ ಧರ್ಮಗುರುಗಳು ತೊಳೆಯಲಾಗುತ್ತದೆ. ಪವಿತ್ರ ಗುರುವಾರದ ನಂತರ ಭಾನುವಾರ ನಡೆಯುವ ಈಸ್ಟರ್ ಸಂಡೇವರೆಗೆ ಮೂರು ದಿನಗಳಲ್ಲಿ ಯೇಸುವಿನ ಕೊನೆಯ ಭೋಜನ, ಶಿಲುಬೆಗೇರುವಿಕೆ ಮತ್ತು ಪುನರುತ್ಥಾನದ ದಿನಗಳನ್ನಾಗಿ ಆಚರಿಸಲಾಗುತ್ತದೆ.