ಕ್ರೈಸ್ತ ಬಾಂಧವರಿಂದ ಚರ್ಚ್ ಗಳಲ್ಲಿ ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ ಆಚರಣೆ

0

ಶಿಲುಬೆಯ ಹಾದಿಯ ಸ್ಮರಣೆ…
ಕಲ್ವಾರಿ ಬೆಟ್ಟದ ಮೇಲೆ ಪ್ರಭು ಕ್ರಿಸ್ತರು ಮನುಕುಲದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ದಿನವನ್ನು ಶುಭ ಶುಕ್ರವಾರವನ್ನಾಗಿ ಆಚರಿಸಲಾಗುತ್ತದೆ. ಆ ದಿನದಂದು ಜಗತ್ತಿನಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಇರುವುದಿಲ್ಲ. ಆದರೆ ಅರ್ಥವತ್ತಾದ ಆರಾಧನೆ ಮತ್ತು ಪ್ರಾರ್ಥನೆಗಳು ಶುಕ್ರವಾರ ಬೆಳಿಗ್ಗೆಯಿಂದಲೇ ಆಯಾ ಚರ್ಚ್ ಗಳಲ್ಲಿ ನಡೆಯುತ್ತದೆ. ಆಯಾ ಚರ್ಚ್ ಗಳಲ್ಲಿ ಏಸು ಕ್ರಿಸ್ತರನ್ನು ಶಿಲುಬೆಗೆ ಏರಿಸುವ ಮುನ್ನ ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿಯನ್ನು ಸ್ಮರಿಸುವ ವೇ ಆಫ್ ದಿ ಕ್ರಾಸ್‌(ಶಿಲುಬೆಯ ಹಾದಿ)ವನ್ನಾಗಿ ಆಚರಿಸಲಾಗುತ್ತದೆ.

ಪುತ್ತೂರು:ಎ.7 ರಂದು ಪ್ರಭು ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್‌ ಫ್ರೈಡೇ(ಶುಭ ಶುಕ್ರವಾರ) ದಿನವನ್ನು ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪುತ್ತೂರು ತಾಲೂಕಿನ ಚರ್ಚ್ಗಳಲ್ಲಿಯೂ ಗುಡ್‌ ಫ್ರೈಡೇ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಅದರಂತೆ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್, ಮರೀಲಿನ ಸೆಕ್ರೇಡ್ ಹಾರ್ಟ್ ಚರ್ಚ್, ಬನ್ನೂರಿನ ಸಂತ ಅಂತೋನಿ ಚರ್ಚ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ, ಬೆಳ್ಳಾರೆ ಚರ್ಚ್ ಸಹಿತಿ ಇನ್ನಿತರ ಚರ್ಚ್ ಗಳಲ್ಲಿ ಗುಡ್‌ ಫ್ರೈಡೇ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಆಯಾ ಚರ್ಚ್‌ ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಚರ್ಚ್ ಪಾಲನಾ ಸಮಿತಿ ಸದಸ್ಯರು, ಸ್ಯಾಕ್ರಿಸ್ಟಿಯನ್, ಗುರಿಕಾರರು, ಧರ್ಮಭಗಿನಿಯರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿಽವಿಧಾನಗಳಲ್ಲಿ ಪಾಲ್ಗೊಂಡರು.

ಮಾಯಿದೆ ದೇವುಸ್ ಚರ್ಚ್ನಲ್ಲಿ ಗುಡ್‌ ಫ್ರೈಡೇ ದಿನದ ಅಂಗವಾಗಿ ಯೇಸುಕ್ರಿಸ್ತರ ಪೂಜ್ಯ ಶರೀರದೊಂದಿಗೆ ಕ್ರೈಸ್ತ ವಿಶ್ವಾಸಿ ಭಕ್ತರು ಚರ್ಚ್-ಕೋರ್ಟ್ರೋಡ್-ಎಂ.ಟಿರೋಡ್ ಮುಖೇನ ಯೇಸುಕ್ರಿಸ್ತರ ಸ್ಮರಣಾ ಮೆರವಣಿಗೆಯನ್ನು ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಬನ್ನೂರು ಚರ್ಚ್ನಲ್ಲಿ ಚರ್ಚ್ನಿಂದ ಆನೆಮಜಲು ಕೋರ್ಟ್ ಮುಖೇನ ಸಾಗಿ ಪುನಹ ಚರ್ಚ್ಗೆ ಆಗಮಿಸುವ ಹಾದಿಯಲ್ಲಿ ಯೇಸುಕ್ರಿಸ್ತರ ಶಿಲುಬೆಯ ಹಾದಿಯ 14 ಸ್ಥಳಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಾಯಿದೆ ದೇವುಸ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ ಸೋಜ, ವಂ|‌ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ಬನ್ನೂರು ಚರ್ಚ್ ನಲ್ಲಿ ವಂ|ಬಾಲ್ತಜಾರ್ ಪಿಂಟೋ, ಹಿರಿಯ ಧರ್ಮಗುರು ವಂ|ಆಲ್ಪೋನ್ಸ್ ಮೊರಾಸ್, ಮರೀಲು ಚರ್ಚ್ ನಲ್ಲಿ ವಂ|ವಲೇರಿಯನ್ ಫ್ರ್ಯಾಂಕ್, ವಂ|ಡೆನ್ಜಿಲ್ ಲೋಬೊ, ಉಪ್ಪಿನಂಗಡಿ ಚರ್ಚ್‌ ನ ಲ್ಲಿ ವಂ|ಅಬೆಲ್ ಲೋಬೊ ನೇತೃತ್ವದಲ್ಲಿ ನಡೆಯಿತು.

ಶಿಲುಬೆಯ ಮೇಲೆ ಯೇಸುಕ್ರಿಸ್ತರು ಪ್ರಾಣ ಬಿಟ್ಟ ದಿನ ಇಡೀ ವಿಶ್ವಕ್ಕೆ ಬೇಸರದ ದಿನ(ಕಪ್ಪು ದಿನ)ವಾಗಿ ಪರಿಣಮಿಸಿದರೂ, ತನ್ನನ್ನು ತಾನು ಸಮರ್ಪಿಸಿಕೊಂಡು ಜನರಲ್ಲಿ ಪರಸ್ಪರ ಸೌಹಾರ್ದತೆ, ಮಾನವೀಯತೆ, ಪ್ರೀತಿ, ಕ್ಷಮಾಪಣಾ ಗುಣವನ್ನು ಬೋಽಸಿದ್ದು ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಯೇಸುಕ್ರಿಸ್ತರ ಶಿಲುಬೆಯು ನಮ್ಮಲ್ಲಿ ಹೊಸ ಜೀವನ, ಸಾಂತ್ವನವುಳ್ಳ, ಸಮಾಧಾನದ ಪ್ರತೀಕವಾಗಿದೆ ಮಾತ್ರವಲ್ಲದೆ ಕುಟುಂಬದ ಪಾವಿತ್ರ‍್ಯತೆಯನ್ನು ಹೆಚ್ಚಿಸುತ್ತದೆ. ಯೇಸುಕ್ರಿಸ್ತರು ಸಾವಿಗೆ ಶರಣಾಗಲಿಲ್ಲ. ಸಾವನ್ನು ಲೆಕ್ಕಿಸದೆ ತಾವು ನಂಬಿದ ಮೌಲ್ಯಗಳಿಗಾಗಿ ನಿಂತರು. ಆತನ ಹಿಂಬಾಲಕರಾದ ನಾವು ಸಹ ನಿಲ್ಲಬೇಕಾದ್ದು ಅವರ ಮೌಲ್ಯಗಳಿಗಾಗಿ, ಸಾಗಬೇಕಾದ್ದು ಅವರದೇ ಗುರಿಯತ್ತ. ಶಿಲುಬೆಯ ಮೇಲೆ ಪ್ರಾಣ ಬಿಟ್ಟ ಪ್ರಭು ಯೇಸುಕ್ರಿಸ್ತರು ನಮ್ಮಲ್ಲಿ ಪರಸ್ಪರ ಕ್ಷಮೆ, ಬೆಳಕು ಚೆಲ್ಲುವ ಮತ್ತು ಅರ್ಪಣಾ ಭಾವದ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ ಯೇಸುಕ್ರಿಸ್ತರ ಶಿಲುಬೆಯ ಮುಖಾಂತರದ ಪ್ರಾಣ ತ್ಯಾಗ ಮನುಜನ ಪಾಪ ಪರಿಹಾರಕ್ಕಾಗಿದೆ ಎಂಬುದು ಗುಡ್‌ ಫ್ರೈಡೇ ದಿನದ ಸಂದೇಶವಾಗಿದೆ.

LEAVE A REPLY

Please enter your comment!
Please enter your name here